ADVERTISEMENT

ಅಯ್ಯೋ ದೇವ್ರೆ, ಹೀಗಾದ್ರೆ ಹೇಗೆ...?

ನಾಗೇಶ ಕಾರ್ಯ
Published 21 ಜನವರಿ 2013, 19:59 IST
Last Updated 21 ಜನವರಿ 2013, 19:59 IST
ರೈತರ ಪಾಲಿಗೆ ಹೊರೆಯಾದ ಹುಲ್ಲು
ರೈತರ ಪಾಲಿಗೆ ಹೊರೆಯಾದ ಹುಲ್ಲು   

ಸಂಕ್ರಾಂತಿ ಮುಗಿದು ವಾರವಾಯ್ತು. ಸುಗ್ಗಿಯ ಸಂಭ್ರಮ ಸಂಕ್ರಾಂತಿ. ಆದರೆ ಈ ಹಳ್ಳಿಯಲ್ಲಿ ಸುಗ್ಗಿಯೂ ಇಲ್ಲ, ಸಂಕ್ರಾಂತಿಯೂ ಇಲ್ಲ. ಇಲ್ಲಿಯ ಜನರಿಗೆ ಅದರ ಸುಳಿವೂ ಇರಲಿಲ್ಲ. ಅವರ ಬಾಯಲ್ಲಿ ಬರುತ್ತಿರುವುದು ಒಂದೇ ಮಾತು. `ರೀ ಯಜಮಾನ್ರೇ ಹುಲ್ಲಿನ ರೇಟ್ ಹೆಚ್ಚಾತಾ...?'
ಹೌದು. ಇದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಾರ್ಯ ಗ್ರಾಮದ ರೈತರ ಸ್ಥಿತಿ.

ಹುಲ್ಲಿನ ದರ ಒಂದು ಕಂತೆಗೆ 30 ರೂ. ಇಷ್ಟು ದುಬಾರಿ ಬೆಲೆ ತೆತ್ತು ಹಸುಗಳನ್ನು ಸಾಕುವುದು ಇಲ್ಲಿಯ ರೈತರಿಗೆ ನುಂಗಲಾರದ ತುತ್ತಾಗಿದೆ. `ಅಬ್ಬಾ ಹೀಗಾದ್ರೆ ದನಕರುಗಳನ್ನ ಸಾಕೋದಾದ್ರು ಹೇಗೆ? ಮಾರೋದೊಂದೆ ದಾರಿ' ಎನ್ನುತ್ತಿದ್ದಾರೆ ರೈತರು. ಇದು ಕೇವಲ ಕಾರ್ಯ ಗ್ರಾಮಸ್ಥರ ನೋವಿನ ನುಡಿಗಳಲ್ಲ. ಸುತ್ತಮುತ್ತಲಿನ ಹಳ್ಳಿಗಳ ಪಾಡೂ ಇದೆ. ಹಿಂದೆಂದೂ ಇರದಷ್ಟು ದರ ಈ ಬಾರಿ ಕುಸಿದಿದೆ. ಈ ಬೆಲೆಯಲ್ಲಿ ಹುಲ್ಲನ್ನು ಕೊಂಡು ದನಕರುಗಳನ್ನ ಸಾಕೋದಾದ್ರು ಹೇಗೆ? ಎಂಬ ಚಿಂತೆಯಲ್ಲಿ ಬಡ ರೈತರು ಮುಳುಗಿದ್ದಾರೆ. ಕಳೆದ ಬಾರಿ 15ರೂ ಇದ್ದ ಹುಲ್ಲಿನ ಬೆಲೆ ಈ ಬಾರಿ ದುಪ್ಪಟ್ಟು ಆಗಿದೆ.

ಇನ್ನೇನು ಬೇಸಿಗೆ ಬಂದೇ ಬಿಡುತ್ತದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ. ಹಳ್ಳಿಗಾಡಿನ ಜನರ ಜೀವನಾಡಿಗಳಾದ ದನಕರುಗಳ ಮೇವಿಗೂ ಬರ. ಗದ್ದೆಯ ಬಯಲುಗಳಲ್ಲಿ ಸರಿಯಾದ ಮೇವು ಸಿಗದೆ ದನಕರುಗಳು ಅಡ್ಡಾಡುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಬೇಸಿಗೆ ಬರುವುದಕ್ಕಿಂತ ಮುಂಚಿತವಾಗಿ ರೈತರು ಹುಲ್ಲಿನ ಸಂಗ್ರಹಣೆಯ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಈ ಬಾರಿ ಹುಲ್ಲಿಗೆ ಬೇಡಿಕೆ ಹೆಚ್ಚಾಗಿ ಬಡರೈತರು ಪರಿತಪಿಸುವಂತಾಗಿದೆ. `ನಮ್ ಹೊಟ್ಟೆ ಪಾಡು ಹೇಗೊ ನಡೆಯುತ್ತೆ ಆದ್ರೆ, ಕೃಷಿಯ ಬೆನ್ನೆಲುಬಾಗಿರುವ ನಮ್ ದನಕರುಗಳ ಗತಿ ಏನ್ ಸ್ವಾಮಿ?' ಎಂದು ಪ್ರತಿಯೊಬ್ಬರು ಹೇಳುತ್ತಿದ್ದಾರೆ.

ತಮ್ಮ ಹಸಿವನ್ನು ಮರೆತು ಜಾನುವಾರುಗಳ ಹುಲ್ಲಿನ ಸಂಗ್ರಹಣೆಯ ಬಗ್ಗೆ ರೈತರಿಗೆ ಚಿಂತೆಯಾಗಿದೆ. ಬಹಳಷ್ಟು ಮಂದಿ ಹಸು ಸಾಕಲಾಗದೆ  ಕಡಿಮೆ ಬೆಲೆಗೆ ಅವುಗಳನ್ನು ಮಾರುತ್ತಿದ್ದಾರೆ. ಕೊಳ್ಳುವವರು ಮುಂದೆ ಬರದಿದ್ದಾಗ ಒಲ್ಲದ ಮನಸ್ಸಿನಿಂದಲೆ ಕಸಾಯಿಖಾನೆಗೆ ಅಟ್ಟುತ್ತಿದ್ದಾರೆ. `ಹಿಂದೆಂದೂ ಸಹ ನಮ್ಮ ಊರಲ್ಲಿ ಇಂತಹ ಸ್ಥಿತಿ ಬಂದಿರಲಿಲ್ಲ' ಎಂದು ಕಣ್ಣೀರು ಹಾಕುತ್ತಿದ್ದಾರೆ ಇಲ್ಲಿಯ ರೈತಾಪಿ ವರ್ಗ.

ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಈ ಸಮಸ್ಯೆ ಉಂಟಾಗಿದೆ. ಮಳೆಯ ಕೊರತೆಯಿಂದಾಗಿ ಈ ಬಾರಿ ಬತ್ತದ ಕೃಷಿಯನ್ನೇ ಕೈಗೊಂಡಿಲ್ಲ. ಇದರ ಪರಿಣಾಮವಾಗಿ ಹುಲ್ಲಿನ ಬೇಡಿಕೆ ಹೆಚ್ಚಿದೆ.

ಇಲ್ಲಿನ ಬಹಳಷ್ಟು ರೈತರು ಎಚ್.ಡಿ.ಕೋಟೆ ತಾಲ್ಲೂಕಿನ ನುಗು ಜಲಾಶಯದ ನೀರನ್ನೇ ನಂಬಿ ಜೀವನ ಸಾಗಿಸುತ್ತಿರುವುದು. ಈ ಬಾರಿ ನೀರಿನ ಕೊರತೆಯಿಂದ  ಬತ್ತದ ಕೃಷಿ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ರಾಗಿ ಬೆಳೆಗೆಂದು ಕಟ್ಟು ನೀರನ್ನು ಹರಿಸಿದರು. ಇದರಿಂದ ಬೆರಳೆಣಿಕೆಯಷ್ಟು ರೈತರು ರಾಗಿ ಬೆಳೆದರು. ಈ ಹಿಂದೆ ರಾಗಿ ಕಟಾವಿನ ನಂತರ ರಾಗಿಕಡ್ಡಿ (ಹುಲ್ಲು) ಕೇಳುವವರೇ ಇರಲಿಲ್ಲ. ಆದ್ರೆ ಈ ಬಾರಿ ಬತ್ತದ ಹುಲ್ಲಿನ ಕೊರತೆಯಿಂದ ರಾಗಿಕಡ್ಡಿಗೆ ಬೇಡಿಕೆ ಹೆಚ್ಚಾಗಿದೆ. ರಾಗಿ ಬೆಳೆದವರ ಮನೆ ಬಾಗಿಲಿಗೆ ಹೋಗಿ ` ನಿಮ್ ರಾಗಿಕಡ್ಡಿ ಕೊಡ್ತಿರಾ' ಎಂದು ಕೇಳುವ ಸ್ಥಿತಿ ಬಂದಿದೆ.

ಒಂದು ಎಕರೆ ರಾಗಿಕಡ್ಡಿಗೆ 3ಸಾವಿರದಿಂದ 3.5 ಸಾವಿರ ಹಣ ಕೊಟ್ಟು ಖರೀದಿಸುತ್ತಿದ್ದಾರೆ. ದೂರದ ಊರುಗಳಿಂದ ರಾಗಿ ಹುಲ್ಲಿಗೆ ಬಂದು ಬರಿಗೈಯಲ್ಲಿ ಹಿಂದಿರುಗುತ್ತಿದ್ದಾರೆ. ಹಣವಂತರಿಗೆ ಇಂತಹ ಸ್ಥಿತಿ ಬಂದರೆ ಇನ್ನು ಬಡರೈತರ ಪಾಡು ಏನು?

ಇದೇ ಸ್ಥಿತಿ ಮುಂದುವರಿದರೆ ಹೇಗಪ್ಪಾ ದೇವ್ರೆ? ಎಂಬ ಚಿಂತೆಯಲ್ಲಿ ಇಲ್ಲಿನ ಬಡರೈತರು ಮುಳುಗಿದ್ದಾರೆ. ರಾಜಕೀಯ ಕಿತ್ತಾಟದ ನಡುವೆ ತಮ್ಮ ಗೋಳು ಸರ್ಕಾರ ಕೇಳುವುದೇ ಎಂಬ ಆತಂಕ ರೈತರದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.