ADVERTISEMENT

ಅಲ್ಪ ಭೂಮಿ ಅಧಿಕ ಲಾಭ

ವಡ್ಡನಹಳ್ಳಿ ಬೊಜ್ಯನಾಯ್ಕ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಅಮೃತ ಭೂಮಿ 21

ಹೆಜ್ಜೆ ಹೆಜ್ಜೆಗೂ ಮೈದುಂಬಿ ನಿಂತ ಏಲಕ್ಕಿ ಬಾಳೆ, ಹಿಪ್ಪು ನೇರಳೆ ಸೊಪ್ಪು, ಕೊತ್ತಂಬರಿ, ಪಾಲಾಕ್, ಮೆಂತ್ಯ, ಸಬ್ಬಕ್ಕಿ ಸೊಪ್ಪು, ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ... ಅಬ್ಬಬ್ಬಾ ಎಂದು ಇನ್ನೂ ಮುನ್ನಡೆದರೆ ಇನ್ನೊಂದು ಮಗ್ಗುಲಲ್ಲಿ ಹಲಸು, ನೆಲ್ಲಿಕಾಯಿ...

ಅಬ್ಬಾ...! `ಇಷ್ಟೆಲ್ಲ ಬೆಳೆಯೇ' ಎಂದು ಮೂಗಿನ ಮೇಲೆ ಬೆರಳಿಡುವ ಸ್ಥಿತಿ. ಇಂಥ ಸಮೃದ್ಧ ಬೆಳೆ ಬೆಳೆಸಿರುವ ಕೀರ್ತಿ ಸಲ್ಲುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ದಾಸರಹಳ್ಳಿ ಗ್ರಾಮದ ಕೃಷಿಕ ಶ್ರಿನಿವಾಸ್ ಅವರಿಗೆ. ಇನ್ನೂ ಒಂದು ಅಚ್ಚರಿ ಏನು ಗೊತ್ತೆ? ಇವರು ಇಷ್ಟೆಲ್ಲ ಬೆಳೆ ಬೆಳೆದದ್ದು ಕೇವಲ ಎರಡು ಎಕರೆ ಜಮೀನಿನಲ್ಲಿ!

`ಇದು ನೈಸರ್ಗಿಕ ಕೃಷಿಯ ಕಮಾಲ್' ಎನ್ನುತ್ತಾರೆ ಶ್ರೀನಿವಾಸ. ನೈಸರ್ಗಿಕ ಪದ್ಧತಿಯಲ್ಲಿ ಐದು ವರ್ಷಗಳಿಂದ ಬೆಳೆ ಬೆಳೆಯುತ್ತಿರುವ ತಾವು ಇದುವರೆಗೂ ನಷ್ಟ ಅನುಭವಿಸಿಯೇ ಇಲ್ಲ. ರಾಸಾಯನಿಕ ಮುಕ್ತವಾಗಿರುವ ತಮ್ಮ ಬೆಳೆಗಳಿಗೆ ಲಾಭವೂ ಅಧಿಕ ಎನ್ನುವುದು ಅವರ ಸಂತಸದ ನುಡಿ.

ಎಲೆಗಳೇ ಗೊಬ್ಬರ
`ಹೊಲದಲ್ಲಿನ ಗಿಡ ಮರದ ಎಲೆಗಳು ಉದುರಿ ಅಲ್ಲೇ ಕೊಳೆಯುತ್ತವೆ. ಪಕ್ಕದಲ್ಲೇ ಇರುವ ಮಾವು, ಹೊಂಗೆ ಮರದ ತರಗೆಲೆಯನ್ನು ಸಾವಯವ ಗೊಬ್ಬರದ ರೂಪದಲ್ಲಿ ಬಳಸಲಾಗುತ್ತದೆ. ಇದರ ಜೊತೆಗೆ ಕೊಟ್ಟಿಗೆ ಗೊಬ್ಬರ ಸೇರಿ ಉತ್ತಮ ಗುಣಮಟ್ಟದ ಗೊಬ್ಬರ ಉತ್ಪಾದನೆಯಾಗುತ್ತದೆ. ನೀರಿನ ತೊಟ್ಟಿಯೊಂದನ್ನು ನಿರ್ಮಿಸಲಾಗಿದೆ.

ನಿತ್ಯ ಶೇಖರಣೆಗೊಂಡ ನಾಟಿ ಹಸುಗಳ ಗಂಜಲವನ್ನು ವಿದ್ಯುತ್ ಮೋಟಾರ್ ಮೂಲಕ ನೀರಿನ ತೊಟ್ಟಿಗೆ ಪೂರೈಕೆ ಮಾಡಿ ಜೀವಾಮೃತದ ಮಿಶ್ರಣದೊಂದಿಗೆ ಕಾಲುವೆಗಳ ಮೂಲಕ ಮಣ್ಣಿಗೆ ಸೇರಿಸುತ್ತಿದ್ದೇನೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತಿದೆ. ಸೊಪ್ಪು ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ನಿರಂತರ ಬೆಳೆಯುವುದರಿಂದ ಪ್ರತಿ ದಿನ ಒಂದಲ್ಲ ಒಂದು ಫಸಲು ಕಟಾವು ಮಾಡಲೇಬೇಕು. ಗುಂಟೆ ಲೆಕ್ಕದಲ್ಲಿ ಮಡಿಯನ್ನಾಗಿ ವಿಂಗಡಿಸಿ ಹಂತ ಹಂತವಾಗಿ ವಿವಿಧ ತರಕಾರಿ ಬೆಳೆಯ ದಿನಗಳನ್ನಾಧರಿಸಿ ಬಿತ್ತುವುದರಿಂದ ಪ್ರತಿ ದಿನ ಸೊಪ್ಪು ಇತರೆ ತರಕಾರಿ ಮಾರುಕಟ್ಟೆ ನೋಡಲು ಸಾಧ್ಯ' ಎನ್ನುತ್ತಾರೆ ಶ್ರೀನಿವಾಸ್.

`ಬೇವು, ಹೊಂಗೆ, ಲಕ್ಕಿ ಗಿಡದ ಸೊಪ್ಪು, ಮೆಣಸಿನಕಾಯಿ, ದೇಸಿ ಬೆಳ್ಳುಳ್ಳಿ ರುಬ್ಬಿ ನಾಟಿ ಹಸುವಿನ ಗಂಜಲ ಸೇರಿಸಿ ಬೇಯಿಸಿ ನಂತರ ಆರಿಸಿ ಸಿಂಪರಣೆ ಮಾಡಿದರೆ ಕೀಟ ಬಾಧೆ ಇರುವುದಿಲ್ಲ. ನಾಟಿ ಹಸುವಿನ ಹುಳಿ ಮಜ್ಜಿಗೆ ಸಿಂಪರಣೆ ಮಾಡಿದರೆ ಬೆಳೆಗಳಿಗೆ ರೋಗ ಹತ್ತಿರ ಸುಳಿಯುವುದಿಲ್ಲ' ಎನ್ನುವುದು ಅವರ ಅನುಭವದ ಮಾತು.

600 ಏಲಕ್ಕಿ ಬಾಳೆ ಗಿಡ ಬೆಳೆದು ಬೆಳೆಗಾಗಿ ಮಾಡಿದ್ದ ಸಾಲ ತೀರಿಸಿಕೊಂಡಿದ್ದಾರೆ ಶ್ರೀನಿವಾಸ್. `ಬಾಳೆಗೆ ಅಂತರದಲ್ಲಿ ಸಿಹಿ ಕುಂಬಳ, ತೊಗರಿ ಬೆಳದಿದ್ದೇನೆ. ರೇಷ್ಮೆ 125 ಮೊಟ್ಟೆಗೆ 113 ಕೆ.ಜಿ ಗೂಡು ಉತ್ಪಾದನೆಯಾಗಿದೆ.

ಸೊಪ್ಪು ಬೆಳೆ ಹೊರತುಪಡಿಸಿ ಬೇರೆ ಎಲ್ಲಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡಿದ್ದೇನೆ. ರಾಸಾಯನಿಕ ಗೊಬ್ಬರ ಭೂಮಿಗೆ ಹಾಕಿದ್ದರ ಪರಿಣಾಮ ಬೆಳೆ ನೆಲಕಚ್ಚುತ್ತಿರಲಿಲ್ಲ. ಈಗ ಭೂಮಿ ನೈಸರ್ಗಿಕ ಕೃಷಿಗೆ ಒಗ್ಗಿದೆ. ಸಹೋದರ ರಮೇಶ್ ಸೇರಿದಂತೆ ಕುಟುಂಬ ಎಲ್ಲಾ ಸದಸ್ಯರು ಇದರಲ್ಲೇ ತೊಡಗಿಸಿಕೊಂಡಿರುವುದರಿಂದ ಖರ್ಚು ಕಡಿಮೆ. ಮನೆಗೂ ತರಕಾರಿ, ಸೊಪ್ಪು ಎಲ್ಲಾ ಇಲ್ಲಿಯದ್ದೇ. ಮಾರಾಟ ಸಮಸ್ಯೆ ಇಲ್ಲ. `ಜನೋದಯ ಸಂಸ್ಥೆ' ಮನೆ ಬಳಿ ಬಂದು ಖರೀದಿಸುತ್ತದೆ.

ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನೀಡಿ ಖರೀದಿಸಿ ಸ್ಥಳದಲ್ಲಿಯೇ ಹಣ ನೀಡುವುದರಿಂದ ಸಮಯವೂ ಉಳಿತಾಯ. ನೀರಿನ ಕಡಿಮೆ ಬಳಕೆ ಜೊತೆಗೆ ತಿಂಗಳು ಕಳೆದರೂ ಭೂಮಿಯಲ್ಲಿನ ತೇವಾಂಶ ಹೋಗುವುದಿಲ್ಲ. ಉಳುಮೆಗೂ ಅಷ್ಟೇ; ಮೃದುವಾಗಿ ಮಣ್ಣು ಸಹಕರಿಸುತ್ತದೆ' ಎಂಬುದು ಅವರ ಸಂತಸದ ನುಡಿ. ಶ್ರಿಲಂಕಾ, ಆಂಧ್ರಪ್ರದೇಶ, ಬಾಂಗ್ಲಾದೇಶ, ತಮಿಳುನಾಡು ಸೇರಿದಂತೆ ಹಲವು ಭಾಗಗಳ ತಜ್ಞರು ಮತ್ತು ರೈತರ ತಂಡ ಇಲ್ಲಿಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT