‘ಬಾಳೆ ದಿಂಡನ್ನು ತ್ಯಾಜ್ಯ ಎಂದು ಬಿಸಾಡದೆ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹಲವು ಸಾಧ್ಯತೆಗಳನ್ನು ತೆರೆದಿಡುವ ಪ್ರಯತ್ನ ಮಾಡಿದೆ ಗುಜರಾತ್‌ನ ನವಸಾರಿ ಕೃಷಿ ವಿಶ್ವವಿದ್ಯಾಲಯ. ಅವರ ಈ ಸಂಶೋಧನೆಗಳು ಇಲ್ಲಿನ ಕೃಷಿಕರಿಗೂ ನೆರವಾಗಬಹುದು...
ಬಾಳೆ ದಿಂಡು ತ್ಯಾಜ್ಯವಲ್ಲ, ಅದಿಲ್ಲಿ ಕಲ್ಪವೃಕ್ಷ. ಬಾಳೆ ದಿಂಡನ್ನು ಹಿಂಡಿದಾಗ ಸಿಗುವ ನಾರಿಲ್ಲಿ ಕರಕುಶಲ ವಸ್ತುವಾಗಿ ರೂಪುಗೊಳ್ಳುತ್ತದೆ, ಕಾಗದವಾಗುತ್ತದೆ, ಬಟ್ಟೆ ತಯಾರಿಕೆಯಲ್ಲೂ ಸ್ಥಾನ ಗಿಟ್ಟಿಸಿ, ಅವುಗಳಿಗೆ ಬಣ್ಣ ಹಾಕುವಾಗ ಅಂಟಿನಂತೆ ಬಳಕೆಯಾಗುತ್ತದೆ. ದಿಂಡಿನ ಚರಟದಿಂದ ದಪ್ಪನೆಯ ಕಾಗದ, ರಟ್ಟಿನ ಹಲಗೆ ತಯಾರಾಗುತ್ತದೆ. ಮೀನು ಆಹಾರ, ಎರೆಗೊಬ್ಬರವಾಗಿಯೂ ಮಾರ್ಪಡುತ್ತದೆ. ದಿಂಡನ್ನು ಹಿಂಡುವಾಗ ಸಿಗುವ ರಸ ಒಳ್ಳೆ ದ್ರವ ಗೊಬ್ಬರವಾಗಿ ತರಕಾರಿಗಳನ್ನು ಸಮೃದ್ಧಗೊಳಿಸುತ್ತದೆ. ದಿಂಡಿನ ಮಧ್ಯದಲ್ಲಿರುವ ಬೆಳ್ಳಗಿನ ತಿರುಳಿನಿಂದ ಸಿಹಿಸಿಹಿ ಕ್ಯಾಂಡಿ, ಉಪ್ಪಿನಕಾಯಿ ಅಥವಾ ‘ರೆಡಿ ಟು ಸರ್ವ್’ ಜ್ಯೂಸ್ ಸಿದ್ಧಗೊಳ್ಳುತ್ತದೆ!
ಇವೆಲ್ಲ ದಕ್ಷಿಣ ಗುಜರಾತಿನ ಒಂದು ಜಿಲ್ಲಾ ಕೇಂದ್ರವಾಗಿರುವ ನವಸಾರಿಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಚಮತ್ಕಾರಗಳು. ‘ಈ ಉತ್ಪನ್ನಗಳಿಂದಲೇ ವಾರ್ಷಿಕ ಎಂಟ್ಹತ್ತು ಲಕ್ಷ ರೂಪಾಯಿಗಳವರೆಗೂ ಆದಾಯ ಗಳಿಸುತ್ತಿದ್ದೇವೆ’ ಎನ್ನುತ್ತಾರೆ ದಿಂಡಿನ ಮೌಲ್ಯವರ್ಧಿತ ಉತ್ಪಾದನೆಗಳ ಮೇಲ್ವಿಚಾರಕ ಹಾಗೂ ವಿಜ್ಞಾನಿ ಡಾ. ಚಿರಾಗ್ ದೇಸಾಯಿ. ‘ಇಲ್ಲಿ ಶೇ 70ರಷ್ಟು ರೈತರು ಬಾಳೆ ದಿಂಡನ್ನು ಎಸೆಯುತ್ತಾರೆ ಅಥವಾ ಸುಡುತ್ತಾರೆ. ಇದನ್ನೇ ಬಳಸಿಕೊಂಡರೆ ರೈತರಿಗೆ ಹೆಚ್ಚುವರಿ ಆದಾಯ ತರಬಹುದು ಎಂಬ ಕಾರಣದಿಂದ ‘ರಾಷ್ಟ್ರೀಯ ಕೃಷಿ ಸಂಶೋಧನಾ ಯೋಜನೆ’ ಅಡಿ ಸಂಶೋಧನೆ ಕೈಗೊಂಡು ಇವುಗಳನ್ನೆಲ್ಲ ಕಂಡುಹಿಡಿಯಲಾಗಿದೆ’ ಎನ್ನುತ್ತಾರೆ ಯೋಜನೆ ನೇತೃತ್ವ ವಹಿಸಿರುವ ಪ್ರಧಾನ ವಿಜ್ಞಾನಿ ಡಾ. ಆರ್ ಜಿ ಪಾಟೀಲ್.
ದಿಂಡಿನಿಂದ ನಾರು
ನೈಸರ್ಗಿಕ ನಾರುಗಳಲ್ಲಿ ಬಾಳೆ ನಾರು ಅತಿ ಗಟ್ಟಿ. ಆದರೆ, ಗೊನೆ ಕಡಿದ 48 ಗಂಟೆಗಳೊಳಗೆ ಇದನ್ನು ಪ್ರತ್ಯೇಕಿಸಬೇಕು. ದಿಂಡನ್ನು ಎಳೆಎಳೆಯಾಗಿ ಸಿಪ್ಪೆ ಬಿಡಿಸಿ ಯಂತ್ರಕ್ಕೆ ಉಣಿಸಿದಾಗ ಬಾಳೆಯ ನಾರು ಸಿಗುತ್ತದೆ. ದಿಂಡಿನ ರಸ ಮತ್ತು ಚರಟ ಬೇರೆ ಬೇರೆಯಾಗಿ ಹೊರಬರುತ್ತದೆ. ಎರಡು ದಿನ ನಾರನ್ನು ಒಣಗಿಸಿ ಒಂದಿನಿತೂ ತೇವವಿಲ್ಲದ ಹಾಗೆ ಮಾಡಿ ಶೇಖರಿಸಿಡುತ್ತಾರೆ. ದಿಂಡಿನ ಮೂಲ ತೂಕದ ಶೇ1.5 ರಷ್ಟು ನಾರು ಸಿಗುತ್ತದೆ.
ಈ ನಾರು ತೆಗೆಯುವ ಯಂತ್ರವನ್ನು ಮುಂಬೈ ಮತ್ತು ಕೊಯಮತ್ತೂರಿನ ಹಲವು ಕಂಪೆನಿಗಳು ನಿರ್ಮಿಸುತ್ತಿವೆ. ದಿನದಲ್ಲಿ 30 ಕ್ವಿಂಟಾಲ್ ಬಾಳೆ ದಿಂಡಿನಿಂದ 45 ಕಿಲೊ ನಾರು ಪಡೆಯಬಹುದು. ವಿದ್ಯುತ್ತಿನ ಹಂಗಿಲ್ಲದೆ ಸಾಧಾರಣ ಎಂಜಿನ್ ಅಥವಾ ‘ಪವರ್ ಟಿಲ್ಲರ್’ ಸಹಾಯದಿಂದಲೂ ನಡೆಯುವಂತೆ ಮಾಡಿದೆ. ಹಾಗಾಗಿ ಹೊಲಗಳಲ್ಲೇ ನಾರು ಉತ್ಪತ್ತಿ ಸಾಧ್ಯವಾಗಿದೆ.
ವಿಶ್ವವಿದ್ಯಾಲಯದ ಪ್ರಾತ್ಯಕ್ಷಿಕೆಗಾಗಿ ಇಂತಹ ಹಲವಾರು ಯಂತ್ರಗಳನ್ನು ಉಚಿತವಾಗಿ ರೈತರಿಗೆ ಹಂಚಿದೆ. ಇದರಿಂದಾಗಿ ಹೊಸ ತಂತ್ರಜ್ಞಾನ ಬಳಕೆಗೆ ಪ್ರೋತ್ಸಾಹವೂ ದೊರೆತಂತಾಗಿದೆ. ರೈತರಿಂದ ನಾರನ್ನು ಕಿಲೋಗೆ 85 ರಿಂದ 100 ರೂಪಾಯಿಗಳಂತೆ ವಿಶ್ವವಿದ್ಯಾಲಯವೇ ಕೊಂಡುಕೊಳ್ಳುತ್ತದೆ. ರೈತರು ನಾರಿನ ಉತ್ಪಾದನೆಯಿಂದಲೇ ಹೆಕ್ಟೇರಿಗೆ ₨ 18 ರಿಂದ 20 ಸಾವಿರ ಲಾಭ ಗಳಿಸುತ್ತಾರೆ.
ಕಾಡು ಕಡಿಯದೇ ಕಾಗದ
ಬಾಳೆ ದಿಂಡು ಸಂಸ್ಕರಿಸುವಾಗ ಸಿಗುವ ಘನತ್ಯಾಜ್ಯದ ಪಲ್ಪ್ ಮಾಡಿ ಬೇರೆ ಕಚ್ಚಾವಸ್ತು ಸೇರಿಸಿ ಕಾಗದ ತಯಾರಿಸಬಹುದು. ವಿಶ್ವವಿದ್ಯಾಲಯದ ಎಲ್ಲಾ ಕೇಂದ್ರಗಳಿಗೂ ಫೈಲ್ ಕವರು, ನೋಟ್‌ಪ್ಯಾಡ್ ಮುಂತಾದ ಹಾರ್ಡ್‌ಬೋರ್ಡ್ ಉತ್ಪನ್ನಗಳನ್ನು ಈ ಘಟಕವೇ ಪೂರೈಸುತ್ತಿದೆ. ಇದು ಕಾಡು ಕಡಿಯದೆ ಮಾಡಿದ ಪರಿಸ್ನೇಹಿ ಕಾಗದ. ಉತ್ಪಾದನಾ ವೆಚ್ಚವೂ ಹೆಚ್ಚಿಲ್ಲ!. ಬಾಳೆ ರಸದೊಂದಿಗೆ ಹತ್ತು ಬಗೆಯ ಜೈವಿಕ ವಸ್ತುಗಳನ್ನು ಬಳಸಿ ಅತ್ಯುತ್ತಮ ದ್ರವ ಗೊಬ್ಬರ ‘ಎನ್ರಿಚ್ಡ್ ಸ್ಯಾಪ್’ ಅನ್ನು ವಿಶ್ವವಿದ್ಯಾಲಯ ಸಿದ್ಧಪಡಿಸಿದೆ. ಇದರ ತಯಾರಿಕಾ ವಿಧಾನಕ್ಕೆ ಅಂತರರಾಷ್ಟ್ರೀಯ ಪೇಟೆಂಟ್ ಸಿಕ್ಕಿದೆ.
ಬಾಳೆರಸ ಸೋಂಕಿದರೆ ಬಟ್ಟೆಯಲ್ಲಿ ಕಲೆ ಉಳಿಯುತ್ತದಲ್ಲವೇ? ಇದೇ ಗುಣ ಇಲ್ಲಿ ಪ್ರಯೋಜನಕ್ಕೆ ಬಂದಿದೆ. ಬಟ್ಟೆಗೆ ಬಣ್ಣ ಹಾಕುವ ಉದ್ಯಮದಲ್ಲಿ ಬಣ್ಣಕಚ್ಚಲು ‘ಟ್ಯಾನಿನ್’ ಬಳಸುತ್ತಾರೆ. ಇದೀಗ ನೈಸರ್ಗಿಕ ಬಣ್ಣದೊಂದಿಗೆ ಅಂಟಿನಂತೇ ಬಳಸಲು ಬಾಳೆರಸ ಉತ್ತಮ ಪರ್ಯಾಯವಾಗಿದೆ.
ಕ್ಯಾಂಡಿ, ಉಪ್ಪಿನಕಾಯಿ...
ಬಾಳೆ ದಿಂಡಿನ ತಿರುಳನ್ನು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಸುತ್ತೇವೆ. ಆದರೆ ಇಲ್ಲಿ, ಇದರಿಂದ ವಿಧ ವಿಧದ ಕ್ಯಾಂಡಿ, ಉಪ್ಪಿನಕಾಯಿ ಮಾಡಲಾಗುತ್ತಿದೆ. ವಿಟಮಿನ್ ಮತ್ತು ಕಬ್ಬಿಣ ಪೋಷಕಾಂಶಯುಕ್ತ, ನಾರಿನ ಅಂಶವಿರುವ ಆರೋಗ್ಯಕರ ಈ ಕ್ಯಾಂಡಿಯನ್ನು ಗುಜರಾತ್ ಸರ್ಕಾರ ಶಾಲಾ ಮಕ್ಕಳ ಮಧ್ಯಾಹ್ನದ ಭೋಜನದಲ್ಲಿ ಸೇರಿಸಿಕೊಳ್ಳಲು ಯೋಚಿಸಿದೆ. ಹಲವು ರೋಗಗಳಿಗೆ ಔಷಧಿಯಂತಿರುವ ಬಾಳೆ ದಿಂಡಿನ ತಿರುಳಿನ ‘ರೆಡಿ ಟು ಸರ್ವ್’ ಜ್ಯೂಸಿಗೆ ಬೇಡಿಕೆಯಿದೆ. ಬಾಳೆ ನಾರನ್ನು ತಯಾರಿಸುವಾಗ ಸಿಗುವ ಚರಟ ಬಳಸಿ ಎರೆಗೊಬ್ಬರ, ಮೀನು ಆಹಾರ ಉತ್ಪಾದಿಸಲಾಗುತ್ತಿದೆ. ಇವಕ್ಕೆ ಸಾಕಷ್ಟು ಮನ್ನಣೆಯೂ ಸಿಕ್ಕಿದೆ.
ನಾರಿನಿಂದ ಕರೆನ್ಸಿ ಬಾಳೆ ನಾರಿನಿಂದ ಬಾಂಡ್ ಪೇಪರ್, ಕರೆನ್ಸಿ ನೋಟು ಮತ್ತು ಚೆಕ್ ಪುಸ್ತಕಗಳಿಗೆ ಬೇಕಾದ ಅತ್ಯುತ್ತಮ ಕಾಗದವನ್ನೂ ತಯಾರಿಸಬಹುದು. ನೈಸರ್ಗಿಕ ನಾರುಗಳಲ್ಲೇ ಗಟ್ಟಿಯದಾದ ಇದರ ಕಾಗದ ನೂರಾರು ವರ್ಷ ಬಾಳಬಲ್ಲದು. ಇದು ಮೂರು ಸಾವಿರ ಮಡಿಕೆ ಮಾಡುವಷ್ಟು ಗಟ್ಟಿ ಇರುತ್ತದೆ. ಕರೆನ್ಸಿ ನೋಟು ತಯಾರಿಸಲು ಇದು ಅತ್ಯಂತ ಸೂಕ್ತ ಅನ್ನುತ್ತಾರೆ ವಿಜ್ಞಾನಿ ಡಾ. ಕೊಳಂಬೆ. |
ಗುಜರಾತಿನ ಕಲ್ಪವೃಕ್ಷ
ವಡೋದರಾ ಸಮೀಪದ ಲಕ್ಷ್ಮಣ್‌ಭಾಯ್ ಸೋಲಂಕಿ ಬಾಳೆದಿಂಡು ಕಲ್ಪವೃಕ್ಷದಂತೆ ಎನ್ನುತ್ತಾರೆ. ಇವರು ಎಲೆಯನ್ನು ಗೊಬ್ಬರಕ್ಕೆ, ಕಂದುಗಳನ್ನು ಟಿಶ್ಯೂ ಕಲ್ಚರ್ ಕಂಪೆನಿಗಳಿಗೆ, ದಿಂಡನ್ನು ನಾರಿಗೆ, ಘನ ತ್ಯಾಜ್ಯವನ್ನು ಎರೆಗೊಬ್ಬರಕ್ಕೆ ಬಳಸುತ್ತಾರೆ. ಗೊಬ್ಬರಕ್ಕೆ ಟ್ರ್ರೈಕೋಡರ್ಮಾ, ಅಝಟೋಬ್ಯಾಕ್ಟರ್ ಮುಂತಾದ ಉಪಕಾರೀ ಸೂಕ್ಷ್ಮಜೀವಿಗಳನ್ನು ಸೇರಿಸುತ್ತಾರೆ.
‘ಬಾಳೆ ದಿಂಡಿನ ರಸವೆಂದರೆ ರಂಜಕ, ಪೊಟ್ಯಾಶ್, ಕಬ್ಬಿಣ ಮತ್ತು ಸೂಕ್ಷ್ಮ ಪೋಷಕಾಂಶಗಳ ಆಗರ. ಅದನ್ನು ಗೊಬ್ಬರವಾಗಿ ಬಳಸುತ್ತೇವೆ. ಇದರಿಂದ ರಸಗೊಬ್ಬರದ ಖರ್ಚು ಉಳಿತಾಯವಾಗಿದೆ. ಮಣ್ಣಿನ ಫಲವತ್ತತೆಯೂ ಹೆಚ್ಚಿದೆ’ ಎನ್ನುತ್ತಾರೆ ಖೇಡ್ ಜಿಲ್ಲೆಯ ಕೇತನ್‌ಭಾಯ್. ಇವರು ಬಾದಿ ರಸವನ್ನು ‘ಜೀವಾಮೃತ’ ಮಾದರಿಯಲ್ಲೇ ತಯಾರಿಸಿ, ಕೊಳೆಸಿ ಬಳಸುತ್ತಾರೆ.
ಆಂತರಿಕ ಆಪತ್ತು
‘ಬಾಳೆ ಬೆಳೆಗೆ ಬಳಸುವ ಕೀಟನಾಶಕಗಳು ಈ ಉತ್ಪನ್ನಗಳ ಮೇಲೆ ದುಷ್ಪರಿಣಾಮ ಬೀರಲಾರವೆ’ ಎಂಬ ಪ್ರಶ್ನೆ ಸಹಜ. ‘ಗುಜರಾತಿನಲ್ಲಿ ಬಾಳೆಗೆ ರೋಗಗಳು ಅಪರೂಪ. ಅತೀ ಕಡಿಮೆ ಕೀಟನಾಶಕ ಬಳಕೆಯಾಗುವ ಹಣ್ಣು ಇದು. ಕೆಲವರು ಮಣ್ಣಿಗೆ ಮಿಶ್ರಣ ಮಾಡುವ ಫ಼ುರಾಡಾನ್ ಕೆಲವೇ ದಿನಗಳಲ್ಲಿ ಮಣ್ಣಿನಲ್ಲಿ ಜೀರ್ಣವಾಗುತ್ತದೆ. ಇನ್ನಿತರ ಕೀಟನಾಶಕದ ಬಳಕೆ ತೀರಾ ಕಡಿಮೆ. ಹಾಗಾಗಿ ಬಾಳೆ ದಿಂಡಿನಲ್ಲಿ ವಿಷಕಾರಿ ಅಂಶ ಸೇರುವ ಸಾಧ್ಯತೆ ಕಡಿಮೆ’ ಎನ್ನುತ್ತಾರೆ ಡಾ. ಪಾಟಿಲ. ಸಂಪರ್ಕಕ್ಕೆ ಡಾ. ಚಿರಾಗ ದೇಸಾಯಿ 09825092971.
ಮುಂದಿನವಾರ: ಕರ್ನಾಟಕದಲ್ಲಿ ಬಾಳೆಪಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.