ADVERTISEMENT

ಎಲ್ಲಿದೆ ಕಡುಬಿನ ಜೋಳ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2012, 19:30 IST
Last Updated 5 ಮಾರ್ಚ್ 2012, 19:30 IST

ಜೋಳದ ಕಣ, ರಾಶಿ ಭರದಿಂದ ಸಾಗಿದೆ. ಉತ್ತರ ಕರ್ನಾಟಕದ ಕಪ್ಪು (ಎರಿ) ನೆಲದ ಬಹುತೇಕ ಹೊಲಗಳಲ್ಲಿ ಎಲ್ಲಿ ನೋಡಿದರೂ ಜೋಳ ಕೊಯ್ಯುವ ಸುಗ್ಗಿ. ಕೆಲ ಕಡೆ ರಾಶಿಯೂ ಮುಕ್ತಾಯಗೊಂಡಿದೆ. ಆದರೆ ಜೋಳದ ವಿಶಿಷ್ಟ ತಳಿಗಳಲ್ಲೊಂದಾದ  `ಕಡುಬಿನ ಜೋಳ~ ಮಾಯವಾಗುತ್ತಿರುವುದು ಬಹುತೇಕರನ್ನು ಚಿಂತೆಗೀಡುಮಾಡಿದೆ.

ಕಡುಬಿನ ಜೋಳ ವಿಶಿಷ್ಟ ಸಿರಿಧಾನ್ಯಗಳಲ್ಲೊಂದು. ಬಿಳಿ ಜೋಳದ ಜೊತೆ ಜೊತೆಗೆ ನಾಲ್ಕಾರು ಸಾಲುಗಳಲ್ಲಿ ಇದನ್ನು ಬಿತ್ತನೆ ಮಾಡುವುದು ಹಿಂದಿನಿಂದ ಬಂದ ಪದ್ಧತಿ. ಅದಕ್ಕಾಗಿ ಬಿಳಿ ಜೋಳದ ಜೊತೆಗೆ ಹತ್ತಾರು ಸೇರುಗಳಷ್ಟು ಈ ಜೋಳ ರಾಶಿ ಮಾಡಿ ಸಂಗ್ರಹಿಸುತ್ತಾರೆ.

 ಆದರೆ ಇತ್ತೀಚಿನ ವರ್ಷಗಳಲ್ಲಿ ಜೋಳ ಬೆಳೆಯುವವರೇ ಕಡಿಮೆಯಾಗಿದ್ದಾರೆ. ಅದರಲ್ಲೂ ಈ ಕಡುಬಿನ ಜೋಳ ರೈತರ ಹೊಲಗಳಿಂದ ಮಾಯವಾಗುತ್ತಿದೆಯೇನೊ ಎಂಬಂತೆ ಭಾಸವಾಗುತ್ತಿದೆ.

ಬಿಳಿ ಜೋಳದ ಮಾದರಿಯಲ್ಲಿ ಇದರಲ್ಲೂ ಕಡುಗೆಂಪು ಬಣ್ಣದ ಕಾಳುಗಳು ಒತ್ತೊತ್ತಾಗಿ ಬೆಳೆದಿರುತ್ತವೆ. ಹೀಗಾಗಿ ಇದನ್ನು ಕೆಂಪು ಜೋಳ  ಎಂತಲೂ ಕರೆಯುತ್ತಾರೆ. ತಮ್ಮ ಈ ಬಣ್ಣದಿಂದಾಗಿ ಬಿಳಿಜೋಳದ ಹೊಲಕ್ಕೆ ಕೆಂಪು ಬೊಟ್ಟು ಇಟ್ಟಂತೆ ಕಾಣುತ್ತವೆ.

ಇದು ಆರೋಗ್ಯ ದೃಷ್ಟಿಯಿಂದ ಉತ್ತಮ  ಪೋಷಕಾಂಶಗಳನ್ನು ಒಳಗೊಂಡಿದೆ. ದೇಹಕ್ಕೆ ಗಟ್ಟಿತನ ನೀಡುವ ಈ ಜೋಳವನ್ನು ಹಿಟ್ಟು  ಮಾಡಿ, ಗುಂಡಗೆ ಬಿಲ್ಲೆಗಳನ್ನು ತೀಡಿ, ಕುದಿಸಿ  ಬೆಲ್ಲದ ಬೇಳೆಯೊಂದಿಗೆ ಚಪ್ಪರಿಸಿದರೆ ಅದರ ಸ್ವಾದವೇ ಬೇರೆ.
 
ಈ ಕಾರಣಕ್ಕಾಗಿಯೇ  `ಕಡುಬಿನ ಜೋಳ~  ಎಂದು ಇದು ಹೆಸರಾಗಿದ್ದು, ಗರ್ಭಿಣಿಯರು, ಅಶಕ್ತರು, ಮಕ್ಕಳು, ಬಾಣಂತಿಯರಿಗೆ ಉತ್ತಮ ಆಹಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.