ಉತ್ತರ ಕರ್ನಾಟಕದಲ್ಲಿ ಕಣ್ಣು ಹಾಯಿಸಿದ ಹಳ್ಳಿಗಳಲ್ಲೆಲ್ಲ ಹಿಂಗಾರಿ ಜೋಳದ ಕೊಯಿಲು ಸುಗ್ಗಿ, ಒಕ್ಕಲು ಸುಗ್ಗಿ, ರಾಶಿ ಪೂಜೆಯಂತಹ ಸಡಗರ ಸಂಭ್ರಮ ದೃಶ್ಯಗಳು ಕಂಡು ಬರಬೇಕಾದ ದಿನಗಳಿವು. ಆದರೆ ಈಗಿನ ಅಲ್ಲಿನ ವಾಸ್ತವ ಚಿತ್ರಣವೇ ಬೇರೆ.
ಅದೊಂದು ಕಾಲವಿತ್ತು. ಉತ್ತುವ ಸುಗ್ಗಿ, ಬಿತ್ತುವ ಸುಗ್ಗಿ, ಕೊಯಿಲು ಸುಗ್ಗಿ, ಒಕ್ಕುವ ಸುಗ್ಗಿ ಹೀಗೆ ಎಲ್ಲ ಸುಗ್ಗಿ ಸಡಗರ ಸಂಭ್ರಮ ಆಚರಣೆಗಳು ಮಣ್ಣಿನ ಮಕ್ಕಳ ಮನರಂಜನಾ ಕೇಂದ್ರಗಳೇ ಆಗಿದ್ದವು ಎಂದು ಹಳೆ ಕಾಲದ ರೈತರು ನೆನಪಿಸಿಕೊಳ್ಳುತ್ತಾರೆ. ಆ ಸ್ವಾರಸ್ಯಗಳನ್ನು ಕೇಳುವುದೇ ಒಂದು ಮೋಜು.
ಅಂದೆಲ್ಲ ಕೃಷಿ ಕೆಲಸಗಳಲ್ಲೆಲ್ಲಾ ನಮ್ಮ ಹಿರಿಯರು ಮೈಮುರಿದು ಬೆವರು ಸುರಿಸಿ ದುಡಿಯುತ್ತಿದ್ದರು. ಈಗ ಹಾಗಲ್ಲ. ಉತ್ತಲೊಂದು ಯಂತ್ರ, ಬಿತ್ತಲೊಂದು ತಂತ್ರ, ಒಕ್ಕಲೊಂದು ಮಂತ್ರ. ಎಲ್ಲಾ ಕಡೆ ಯಂತ್ರಾಸುರನ ಬಳಕೆ. ಶ್ರಮಿಕರ ಸಹಜೀವನ, ಸಂಘಟನಾ ಬದುಕು ಎಲ್ಲವೂ ಯಂತ್ರದ ಅಬ್ಬರದಲ್ಲಿ ಹೇಳ ಹೆಸರಿಲ್ಲದೆ ಹೋಗಿವೆ.
ಹಾವೇರಿ ತಾಲೂಕಿನ ಚೆನ್ನೂರು ಗ್ರಾಮದ ಬಸವಣ್ಣೆಪ್ಪ ಗೌರಿಮನಿ 70-75ರ ಕೃಷಿ ಋಷಿ. ಹಿರಿಯರ ಕಾಲದ ಆಚರಣೆಯನ್ನೂ ಮೇಳೈಸಿಕೊಂಡು ಆಧುನಿಕ ತಾಳಕ್ಕೂ ಹೆಜ್ಜೆ ಹಾಕುವ ಜಾಯಮಾನ ಗೌರಿಮನಿಯವರಿಗೆ ಗೊತ್ತು.
ಈ ವರ್ಷ ಹಿಂಗಾರಿ ಜೋಳದ ಸುಗ್ಗಿ ನಶಿಸಿ ಹೋಗುವಷ್ಟರ ಮಟ್ಟಿಗೆ ಬೆಳೆ ಕೈಕೊಟ್ಟಿದೆ. ನೂರಾರು ಕ್ವಿಂಟಲ್ ಬೆಳೆಯುತ್ತಿದ್ದವರು ಹತ್ತಾರು ಕ್ವಿಂಟಲ್, ಹತ್ತಾರು ಕ್ವಿಂಟಲ್ ಬೆಳೆಗಾರರು ಕಿಲೋ, ಪಡಿ, ಗಿದ್ನ ಲೆಕ್ಕದಲ್ಲಿ ಜೋಳ ಬೆಳೆದಿದ್ದಾರೆ.
ಸುಗ್ಗಿ ಸಂಪ್ರದಾಯದ ಮಾತಂತೂ ಕೇಳುವಂತೆಯೇ ಇಲ್ಲ. ಜೋಳದ ರಾಶಿ ಪೂಜೆ, ಸುಗ್ಗಿ ಹಬ್ಬ ಎಲ್ಲಾದರೂ ಸಿಗಬಹುದೆಂದು ಹುಡುಕಿ ಹುಡುಕಿ ಸುಸ್ತಾದಾಗ ಗೌರಿಮನಿಯವರ ಹೊಲದ ಕಣದಲ್ಲಿ ಸಂಭ್ರಮ ಕಾಣಿಸಿಕೊಂಡಿದ್ದೇ ಸ್ವರ್ಗ ಸಿಕ್ಕಂತಾಗಿತ್ತು.
`ಕಮತ (ವ್ಯವಸಾಯ) ಬಾಳ್ ಕಷ್ಟ ಆಗ್ಯಾದ್ರಿ. ಆಳು ಹೋಳು ಸಿಗ್ಲಾರದಂಗ್ ಆಗಿ ಕಮತ ಉಳಸ್ಕೊಳ್ಳೋದ ದೊಡ್ಡದಾಗೇತಿ. ಮಳೀನೂ ಸರಿತಂಗ ಆಗಿಲ್ಲ. ನೀರ್ ಬಿಟ್ವಿದ್ವಿ ಅಂತ ಹೇಳಿ 40-50 ಚೀಲ ಜ್ವಾಳ ಆಗ್ಯಾವು. ಹಿರಿಯರ್ ಹಾಕೀದ್ ಸಂಪ್ರದಾಯ.
ಕರ್ಮಂಟ ಹಾಕಿ ರಾಶಿ ಪೂಜೆ ಪುನಸ್ಕಾರ ಮಾಡಿ ಕಣದೊಳಗ ಊಟ, ಉಪಚಾರ ವ್ಯವಸ್ಥೆ ನಡಸ್ಕೊಂಡು ಹೊಂಟೀವಿ~ ಎಂದು ಗೌರಿಮನಿಯವರು ವಿವರಿಸುವಾಗ ಮುಖದಲ್ಲಿ ನಿರಾಶೆ ತುಂಬಿತ್ತು. ಅಕ್ಕೂರಿನ ಈರಬಸಪ್ಪಜ್ಜ ತೋಟಗೇರ 80 ರ ಇಳಿವಯಸ್ಸಿನ ಯಜಮಾನ. ಜೋಳದ ಸುಗ್ಗಿ ಕುರಿತು ಕೇಳಿದಾಗ ಮೈ ಕೈ ಸೆಟಿಸಿ ಅಜ್ಜ ಅನನ್ಯ ಅನುಭವಗಳನ್ನೆಲ್ಲಾ ಜಾಲಾಡಿದ್ದು ಮಾರ್ಮಿಕವಾಗಿತ್ತು.
`ಅಯ್ಯೋ ಎನ್ ಹೇಳ್ತಿ ತಮ್ಮೋ. ಆಗಿನ್ ಮಂದಿನೂ ಇಲ್ಲ, ಆಗಿನ್ ಊಟಾನೂ ಇಲ್ಲ. ಮಳೀ, ಬೆಳಿ, ಬೀಜ, ಬಿಗಡಿ, ಪದ್ಧತಿ, ನೇಮ, ನಿತ್ಯ... ಅಷ್ಟೂ ಮೂಲ್ಗುಂಪು. ನಮ್ ಕಾಲ್ಕ ದೊಡ್ಡ್ ಜೋಳ ಅಂತ ಇತ್ತು. ಬಂಗಾರ‌್ದ ಬಣ್ಣ. ಅಲ್ಸಂದಿ ಕಾಳ್‌ನಷ್ಟು ದಪ್ಪ. ಗೌರಿ ಹುಣ್ವಿ ಆಸ್ ಪಾಸ್ ಅಂದ್ರ ಹಿರೇಪುಷ್ಯಾನ್ ಮಳಿಗೆ ಬಿತ್ತದ್ವಿ. ನಾಕ್ ನಾಕೂವರಿ ತಿಂಗ್ಳಿಗೆ ಕೊಯ್ತಿದ್ವಿ. ಎಕ್ರೆಕ್ಕ 8-10 ಚೀಲ ಕಾಳು. ಸೊಪ್ಪೀನಂತು ಹೇರಿ ಹೇರಿ ಧಮ್ಮು ಹತ್ಬಕು. ಸೊಪ್ಪಿ ಕೆಡೂವ್ (ಕಟಾವ್ ಮಾಡುವುದು) ಬೇಕು ಅಂದ್ರ ಬಂಡಿಗುಡ್ಗೋಲ್ (ದೊಡ್ಡ ಕುಡಗೋಲು) ಬೇಕಾಗಿದ್ವು.
ಸೊಪ್ಪಿ ಕೆಡಿವಿ ತೆನಿ ಕೊಯ್ಕ್‌ಂಡು ಅಲ್ಲೆೀ ಹೊಲದಾಗ್ ನಾಕ್ ದಿನಾ ಒಣ್ಗಿಸಿ ಇಕ್ಲ (ಸಣ್ಣಬಣವಿ) ಹಾಕ್ತಿದ್ವಿ. ಮುಂದ ಬರೀ ಒಕ್ಲು ಸುಗ್ಗಿ. ಅದರ್ ವರ್ಣನಾ ಅಂತೂ ಎನ್ ಹೇಳಿದ್ರೂ ಕಮ್ಮಿ. ಬಾಯಿ ಮಾತ್ನಿಂದ ಹೇಳೀದ್ರ ಈಗಿನ ಮಂದಿಗೆ ತಿಳ್ಯಾಂಗಿಲ್ಲ. ಇದು ಮುಂಗಾರಿ ಜ್ವಾಳದ ಕತಿ. ಅದು ಎಲ್ಲಿ ಹೋತ ಹೋಗೆ ಬಿಡ್ತು.
ಮುಂಗಾರಿ ಜ್ವಾಳ ಮೂಲ್ಗುಂಪು ಆದ್ ಮ್ಯೋಲೆ ಹಿಂಗಾರಿ ಬಿಳಿ ಜ್ವಾಳ, ಮಾಲ್ದಂಡಿ, ಬಿಜಾಪೂರ ಜ್ವಾಳ ಅಂತ ಬಂತು. ಅದೂ ಹತ್ತಿಪ್ಪತ್ತು ವರ್ಷ ನಡೀತು. ಈಗ ಅದೂ ಇಲ್ಲ. ಈಗಂತು ಸುಗ್ಗಿ ಸುಡ್ಗಾಡ ಕಂಡಾವು~ ಎಂದು ಹೇಳಿದ ಅಜ್ಜ ತಲೆ ಮೇಲೆ ಕೈ ಹೊತ್ತು ನಿಟ್ಟುಸಿರು ಬಿಡುತ್ತಾ ಐದು ನಿಮಿಷ ಮೌನಕ್ಕೆ ಶರಣಾಗಿದ್ದರು.
ಸುಂಕದ ಬುತ್ತಿ
`ಒಬ್ರು ಜ್ವಾಳಾ ಒಕ್ಲ ಮಾಡ್ಬೇಕು ಅಂದ್ರ ಓಣ್ಯಾಗಿನ ಮಂದೆಲ್ಲಾ ಸೇರ‌್ತಿದ್ವಿ. ಕಣದ ತುಂಬ ತೆನಿ ಹಾಕ್ತಿದ್ವಿ. ಓಣ್ಯಾಗಿನ ಎಲ್ಲಾ ಎತ್ತು ಕೂಡ್ಸಿ ರೂಲ್ ಕಟ್ಟಿ ಬೆಳ್ತಾನ ಕಲ್ಲು ಹೊಡೀತಿದ್ವಿ (ತೆನೆಯಿಂದ ಕಾಳು ಬೇರ್ಪಡಿಸಲು). ಕಂಕಿ (ಕಾಳು ತೆಗೆದ ತೆನೆ) ತಗೂದು ಸುಂಕದ್ ರಾಶಿ ಅಗೋತ್ಲೆ ರಾಸಿಗೆ ಸುಂಕದ ಕಿಚಡೀನ ನೈವೇದ್ಯಕ್ಕ ಆಗ್ಬೇಕು. ಸುಂಕದ್ ಬುತ್ತಿ ಮಾಡೋ ಹಕ್ಕೀಕತ್ ಕೇಳಿಲ್ಲಿ~.
ಸುಂಕದ್ ರಾಸ್ಯಾಗಿನ ಜ್ವಾಳಾ ತಗೊಂಡು ಸ್ವಚ್ಛ ಮಾಡ್ತಿದ್ವಿ. ಜ್ವಾಳಕ್ಕ ನೀರ್ ಹಚ್ಚಿ ಕುಟ್ಬೇಕು. ಮರ‌್ದಾಗ ಹಾಕಿ ಚಪ್ಪೀರ‌್ಸಿ ತೌಡ್ ತಗೂದ್ ಹಣ್ಣಂಗ ಕುದಸ್ಬಕು. ಅದುಕ್ಕ ಹಾಲು, ಮೊಸರು, ಉಳ್ಳಾಗಡ್ಡಿ ಹಾಕ್ಕಂಡ್ ಉಂಡ್ರ ಏನ್ ಹೇಳ್ಬಕು ಅದರ ಗಮ್ಮತ್ತು ಹೊಗ್ಪಾ ನೀನು~.
ಕಣದೊಳಗ ಒಷ್ಟೂರು ಸೇರಿ ಉಣ್ತಿದ್ವಿ. ಆ ಮಜ್ಯಾನ ಬ್ಯಾರೆ. ಸುಂಕದ್ ರಾಶಿಗೆ ಸುಂಕದ್ ಬುತ್ತಿ ನೈವಿದ್ಯ ಆಗ್ಲಿಲ್ಲ ಅಂದ್ರ ಸುಂಕ್ದವ್ಗ ಸಮಾದಾನ ಇಲ್ಲ. ರಾಶಿ ಕಟ್ಟುವಾಗ, ತೆನಿ ತಗೀವಾಗ, ಕಲ್ಲು ಹೊಡೀವಾಗ ಪಾಳ್ಯ ಪ್ರಕಾರ ಹಂತಿ ಹಾಡು, ತತ್ವದ್ ಪದ, ದಾಸರ ಪದ. ಬಾಯ್ಗೆ ಪುರ‌್ಸೊತ್ತ ಇಲ್ದಾಂಗ ಎಲ್ಲಾ ಕೆಲೂಸ ಮುಗೀಯುತನ ಹಾಡ್ತಿದ್ವಿ. ಬ್ಯಾಸ್ರ ಅನ್ನೂದ ಇರ‌್ತಿರ‌್ಲಿಲ್ಲ. ಕಣ ಹಬ್ಬ ಯಾಕರ ಮುಗೀತು ಅಂತಿದ್ವಿ~. ಅಜ್ಜ ಅನುಭವದ ಬುತ್ತಿ ಬಿಚ್ಚಿದಾಗ ಸುಂಕದ ಕಿಚಡಿ ಉಂಡಂತೆ ಬಾಯಲ್ಲಿ ನೀರೂರಿತ್ತು.
ರಾಶಿ ಕಟ್ಟಿದ ಮೇಲೆ ತೂರುವ ಕೆಲಸ. ಕೆಲಸ ಸಲೀಸಾಗಿ ಸಾಗಲಿ ಎಂದು ಹುಲ್ಗೋ ಹುಲ್ಗೊ... ಎಂದು ಗಾಳಿ ದೇವರನ್ನು ಆಹ್ವಾನಿಸುತ್ತಿದ್ದ ಪರಿಯೂ ಮನೋಲ್ಲಾಸಕ. ತೂರುವ ಕೆಲಸ ಆರಂಭವಾಗದ ಹೊರತು ಕಣದಲ್ಲಿ ನಾರಿಯರಿಗೆ ಪ್ರವೇಶ ನಿಶಿದ್ಧ.
ಅಪ್ಪಿ ತಪ್ಪಿ ಮಹಿಳೆಯರ ಆಗಮನ ಆಯಿತೆಂದರೆ ಬೇಡ ಆ ಬೆಡಗಿಯರ ಫಜೀತಿ. ಅವರ ತುಸು ತಲೆ ಜುಟ್ಟನ್ನೇ ಕತ್ತರಿಸಿ ರಾಶಿ ಪೂಜೆಗೆ ಅರ್ಪಿಸಬೇಕಿತ್ತಂತೆ ಅನ್ನುವುದನ್ನು ಕೇಳಿದರೆ ನಗು ನಿಲ್ಲುವುದೇ ಇಲ್ಲ.
ತೂರುವ ಕೆಲಸ ಮುಗಿದು ರಾಶಿ ಬಿತ್ತೆಂದರೆ ರಾಶಿ ಪೂಜೆ ಸಡಗರ. ಊರು, ಓಣಿ ಮಂದಿಗೆಲ್ಲ ಗೆಣಸು, ಹುಗ್ಗಿ, ಹೋಳಿಗೆ ಊಟದ ಔತಣ ಕೂಟ ಕಣದಲ್ಲಿ. ಕಣದಲ್ಲಿ ಕಂಗೊಳಿಸುವ ಧಾನ್ಯದ ರಾಶಿಗೆ ಎಲ್ಲಿಲ್ಲದ ಅಲಂಕಾರ.
ತೆನೆಯಿಂದ ಜೋಳ ತೆಗೆದು ಉಳಿದ ಕಂಕಿಯನ್ನೇ ಸುಟ್ಟು ತೆಗೆದ ಬೂದಿಯಿಂದ ಆನೆಗಾತ್ರದ ರಾಶಿ ಮೇಲೆ ಈಶ್ವರ, ಬಸವಣ್ಣ, ಏಣಿ, ಗೋರೆ, ಕುಂಟೆ, ರಂಟೆ, ನೇಗಿಲ, ಜಂತುಗುಂಟಿ ಇತ್ಯಾದಿ ಆರಾಧ್ಯ ದೇವರ, ಕೃಷಿ ಉಪಕರಣಗಳ ಚಿತ್ತಾರ. ಅದಕ್ಕೆಂದೇ ಕುಶಲಕರ್ಮಿಗಳ ಬಳಕೆ ಮಾಡಲಾಗುತ್ತಿತ್ತೆಂದು ಗೌರಿಮನಿ ವಿವರಿಸುತ್ತಾರೆ.
ದೃಷ್ಟಿ ಬೀಳಬಾರದೆಂದು ಚಿಕ್ಕ ಮಕ್ಕಳ ಗಲ್ಲದ ಮೇಲೆ ಕಣ್ಣಿನ ಕೆಳಗೆ ಕಾಡಿಗೆ ಹಚ್ಚುವುದಿಲ್ಲವೇ! ಪುಟ್ಟ ಮಕ್ಕಳ ಕಾಲಿಗೆ ಕಂಬಳಿ ತುಂಡು ಕಟ್ಟುತ್ತಾರಲ್ಲ. ಹಾಗೆಯೇ ಮುತ್ತಿನಂತಹ ಜೋಳದ ರಾಶಿಗೆ ದೃಷ್ಟಿ ಬೀಳಬಾರದೆಂದು, ಕಣ್ಣಾಸರೆ ಆಗಬಾರದೆಂದು ಕರ್ಮಂಟ ಹಾಕುವ ಪದ್ಧತಿ ರೂಢಿಯಲ್ಲಿದ್ದ ಬಗ್ಗೆ ಹಿರಿಯರು ವಿವರಣೆ ನೀಡುತ್ತಾರೆ. ಆಗಿನ ಹಿರಿಯರಿಗೆ ಅದು ಬರಿ ಜೋಳದ ರಾಶಿಯಾಗಿದ್ದಿಲ್ಲ. ಮುತ್ತಿನ ರಾಶಿಗೆ ಸಮ ಎಂದು ನಂಬಿದ್ದ ಜನ ಅವರು.
ರಾಶಿ ಪೂಜೆ ಸಡಗರದ ನಂತರ ಕಾಳನ್ನು ಸಾಗಿಸಿ ಹಗೇವಿಗೆ ಹಾಕುವ ಪರಿಯೂ ರಂಜನೀಯ. ಎತ್ತಿಗೆ ಜೋಲ, ಕೊಂಬಿಗೆ ಕೊಡಣನ, ಕೊರಳಿಗೆ ಗೆಜ್ಜೆ ಕಾಲಿಗೆ ಕಂಬಳಿ ಕಟ್ಟಿ ಅಲಂಕಾರ ಮಾಡಿದ ಚಕ್ಕಡಿಗೂ ತಳಿರು ತೋರಣಗಳಿಂದ ಸಿಂಗರಿಸಿ ಗುಡಾರ ಕಟ್ಟಿ ಧಾನ್ಯ ಹಗೇವಿಗೆ ಹಾಕಿ ಮುಚ್ಚಿದರೆಂದರೆ ಎರಡು ವರ್ಷ ಕಾಲ ಇಟ್ಟರೂ ಕಾಳು ಕೆಡುವ ಭಯವೇ ಇದ್ದಿಲ್ಲವಂತೆ!
ಹಗೇವು ತೆಗೆದು 4-6 ದಿನ ಬಿಸಿಲಿಗೆ ಬಿಟ್ಟು ಜಳ ಆಡಿಸಿ ಎಲ್ಲ ಕ್ರಿಮಿ ಕೀಡೆಗಳಿಂದ ಶುದ್ಧಿಕರಿಸುವ ತಂತ್ರ. ಹಗೇವಿನ ತಳಕ್ಕೆ 1/2 ಅಡಿ ಸುಂಕ ಅದರ ಮೇಲೆ 1/2 ಅಡಿ ಜರುಗಿನ ಬೆಡ್. ಧಾನ್ಯ ಮಣ್ಣಿಗೆ ತಾಗಬಾರದೆಂದು, ತೇವಾಂಶ ಬಡಿಯಬಾರದೆಂದು ಜೋಳದ ದಂಟಿನಿಂದಲೇ ನಿರ್ಮಿಸಿದ ಅರುಸಣಗಿಯ ರಕ್ಷಾಕವಚ, ಹಗೇವಿನ ಒಡಲಿನ ಸುತ್ತಲೂ ಹೆಣೆಯುತ್ತಿದ್ದ ಪದ್ಧತಿ ಹಿರಿಯರ ವೈಚಾರಿಕತೆಯ ಪ್ರತೀಕವೆನ್ನಬಹುದು.
ಬದಲಾದ ಕಾಲ
ಕಾಲ ಈಗ ತುಂಬಾ ಬದಲಾಗಿದೆ. ಭಕ್ತಿ ಭಾವದ ಆ ಸಂಭ್ರಮಗಳೆಲ್ಲಾ ಧೂಳಿಪಟ. ಒಕ್ಕಲು ಕೆಲಸವೆಲ್ಲಾ ಈಗ ಬೀದಿಗೆ ಬಂದಿದೆ. ಬಸ್ಸು ಲಾರಿ ಓಡಾಡುವ ರಸ್ತೆಗಳೇ ಕಣಗಳಾಗಿವೆ. ಒಕ್ಕಲು ಕೆಲಸದಲ್ಲಿ ಹುಗ್ಗಿ, ಹೋಳಿಗೆ, ಜೋಳದ ಬುತ್ತಿ ಉಂಡು ಸಂಭ್ರಮಿಸುತ್ತಿದ್ದ ಕಾಲದ ಬದಲಾಗಿ ಯಂತ್ರಾಸುರನ ಹೊಟ್ಟೆಗೆ ತೆನೆ ತುರುಕುತ್ತಾ ಇಂದಿನ ಯುವಕರು ಬಾಯಿಗೆ ಗುಟ್ಕಾ, ಸ್ಟಾರ್‌ಮೆತ್ತಿಕೊಂಡು ಮೊಬೈಲ್ ಭಾಷೆಯ ಸಾಂಗ್ ಕೇಳುತ್ತಾ ಮಜಾ ಮಾಡುತ್ತಾರೆ.
ಇದು ಹಿರಿಯರಿಗಂತೂ ಅಸಹ್ಯ, ಅಪಥ್ಯ.ಇನ್ನು ಧಾನ್ಯ ಸಂಗ್ರಹಿಸಲು ಹಿರಿಯರು ಬಳಸುತ್ತಿದ್ದ ಹಗೇವು ಈಗ ಹೂಳು ತುಂಬಿವೆ. ಹಾಗೆ ನೋಡಿದರೆ ಅವುಗಳ ಅಗತ್ಯತೆಯೂ ಈಗಿನ ಮಂದಿಗಿಲ್ಲ ಅನಿಸುತ್ತದೆ. ಒಕ್ಕಲಾದ ಧಾನ್ಯವನ್ನು ಮನೆಗೂ ಸಾಗಿಸದೇ ಮನೆ ಬಳಕೆಗೂ ಇಟ್ಟುಕೊಳ್ಳದೇ ಕಣದಲ್ಲೆೀ ಮಾರಾಟ ಮಾಡಿ ಬಂದ ಹಣವನ್ನು ಅಲ್ಲೆೀ ಸಾಲಗಾರರಿಗೇ ಹಂಚಿ ಮನೆಗೆ ಬರುವ ಪದ್ಧತಿ ಈಗ ಸಾಮಾನ್ಯವಾಗಿದೆ.
ದಿನಂಪ್ರತಿ ಬಳಕೆಗೆ ಧಾನ್ಯ ಸಂಗ್ರಹಿಸಲು 3-4 ಚೀಲ ಸಾಮರ್ಥ್ಯದ ಮಣ್ಣಿನ ಮಾನಿಗೆಗಳೂ ಈಗ ಮಂಗಮಾಯ. ಮಣ್ಣಿನ ಬದಲು ಭತ್ತದ ಹುಲ್ಲಿನಿಂದಲೇ ಮಾನಿಗೆಯಂತೆಯೇ ನಿರ್ಮಿಸುತ್ತಿದ್ದ ಗಳಿಗೆಗಳು ಇದ್ದವೆಂದು ನಮ್ಮ ತಂದೆ ಹೇಳುತ್ತಿದ್ದರು. ಈಗ ಗಳಿಗೆಗಳೂ ಗುಳುಂ. ಮಾನಿಗೆಗಳೂ ಮಾಯ.
ಈ ಸಂಗ್ರಾಹಕಗಳೆಲ್ಲ ಈಗಿನ ಫ್ರೀಜ್‌ಗೇನೂ ಕಮ್ಮಿ ಇಲ್ಲ. ನೈಸರ್ಗಿಕ ವಸ್ತುಗಳಿಂದಲೇ ನಿರ್ಮಿತವಾಗುತ್ತಿದ್ದ ಈ ಸಾಧನಗಳಲ್ಲಿ ನುಸಿ ಹತ್ತುವ, ಹುಳು ಹಿಡಿಯುವ ಪ್ರಮಯವೇ ಇಲ್ಲ.
ಆದರೇನು ಮಾಡುವುದು. ಇವೆಲ್ಲ ಈಗ ಇತಹಾಸ ಪುಟ ಸೇರಿವೆ. ಮ್ಯೂಜಿಯಂನಲ್ಲೂ ನೋಡಲು ಕೂಡಾ ಸಿಗುವುದಿಲ್ಲ. ಒಂದು ಮಾತು ಸತ್ಯ. ಹಿರಿಯರ ಕಾಲದ ಎಲ್ಲ ಆಚರಣೆ, ಪದ್ಧತಿ, ಸಾಧನಗಳು ನಿರ್ನಾಮವಾಗಿರುವುದು ಆರೋಗ್ಯಕರ ಬೆಳವಣಿಗೆಯಂತೂ ಅಲ್ಲ !
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.