ADVERTISEMENT

ಒನಕೆ ಸೋರೆ ಒನಪು

ಚನ್ನರಾಜ್ ಎಲ್.ಸಿ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST

ಸುಮಾರು ಮೂವತ್ತು ವರ್ಷಗಳ ಹಿಂದೆ ಬೆಂಗಳೂರು ಅಂಚಿನ ತೋಟದಲ್ಲಿದ್ದೆ. ಅಪ್ಪ ನೆಲಮಂಗಲದ ಸಮೀಪ ಬೇಸಾಯ ಮಾಡುತ್ತಿದ್ದರು. ಶಾಲೆಯ ಬಣ್ಣದ ಮಗ್ಗಿ ಪುಸ್ತಕ, ಜಾಮಿಟ್ರಿ ಬಾಕ್ಸ್, ಇನ್ನಿತರ ಖರ್ಚುಗಳಿಗೆ ಬಾಲ್ಯದಲ್ಲೇ ಬಳ್ಳಿ ತರಕಾರಿಗಳ ಬೆಳೆಗಾರನಾಗಿದ್ದೆ. ಮುಂಗಾರು  ಪ್ರಾರಂಭವಾಗುತ್ತಿದ್ದಂತೆ ಆಲೆ ಮನೆಯ ಬೂದಿಗುಂಡಿ, ತಿಪ್ಪೆಗಳ ಮೂಲೆ, ಬೇಲಿ ಪಕ್ಕದ ಮಣ್ಣಿನ ಗುಡ್ಡೆಗಳನ್ನು ಆಯ್ಕೆ ಮಾಡಿ, ಹಸನು ಮಾಡಿ ಸಿದ್ಧ ಮಾಡಿಕೊಳ್ಳುತ್ತಿದ್ದೆ. ತೋಟದ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರು ಅಮ್ಮನಿಗೆ ಕೊಟ್ಟ ಕುಂಬಳ, ಸೋರೆ ಬೀಜಗಳು, ಅಮ್ಮನ ಸೆರಗಿನ ಗಂಟಿನಿಂದ ನನ್ನ ಕೈಸೇರಿ ಸಿದ್ಧವಾಗಿರುತ್ತಿದ್ದ ಗುಳಿಗಳಿಗೆ ಸೇರುತ್ತಿದ್ದವು.

ಮುಂಗಾರು ಮಳೆ ಹನಿಗಳಿಗೆ ಅಬ್ಬರಿಸಿ ಬೆಳೆದ ಕುಂಬಳ, ಸೋರೆಯ ಬಳ್ಳಿಗಳಲ್ಲಿ ಉದ್ದ, ಗುಂಡು ಆಕಾರದ ವೈವಿಧ್ಯ ತಳಿಗಳು ಬಳ್ಳಿಯ ಮೈದುಂಬುತ್ತಿ­ದ್ದವು. ಮನೆಗೆ ಬಳಸಿ ತೋಟಕ್ಕೆ ಬಂದವರಿಗೆ ಕೊಟ್ಟು ಹೆಚ್ಚಾದವು ಬೆಂಗಳೂರಿನ ಮಾರುಕಟ್ಟೆಗೆ ಹೋಗುತ್ತಿದ್ದ ತರಕಾರಿಗಳ ಜೊತೆ ಮಾರಾಟವಾಗುತ್ತಿದ್ದವು.

ನಾವು ಬೆಳೆಯುತ್ತಿದ್ದ ಬಳ್ಳಿ ತರಕಾರಿಗಳಲ್ಲಿ ವಿಶೇಷವಾದದ್ದು ಒನಕೆ ಸೋರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಗಳಲ್ಲಿದ್ದ ವಿಶೇಷ ತಳಿ ಈ ಒನಕೆ ಸೋರೆ. ಮಹಿಳೆಯರು ಮನೆಯ ಹಿತ್ತಲು, ಹೊಲದ ತೋಟದ ಬೇಲಿ, ಮನೆಯ ಮಾಡು, ಮರ ಗಿಡಗಳ ಮೇಲೆ ಹಬ್ಬಿಸಿ ಈ ಸೋರೆಯನ್ನು ಬೆಳೆಯುತ್ತಿದ್ದರು. ಮನೆಯ ಮಟ್ಟಿಗೆ ಮಹಿಳೆಯರು ಮೆಣಸಿನ ಕಾಯಿಯ ಚಿಕ್ಕ ತಾಕುಗಳಲ್ಲಿ ಮುಖ್ಯ

ಬೆಳೆ ಮೆಣಸಿನ ಗಿಡಗಳ ಜೊತೆ ಜೋಡಣೆ ಮಾಡಿ ಬೆಳೆಯುತ್ತಿದ್ದ ಹತ್ತಾರು ಬಳ್ಳಿ, ಸೊಪ್ಪು, ಗೆಡ್ಡೆ ತರಕಾರಿಗಳಲ್ಲಿ ಒನಕೆ ಸೋರೆಯೂ ಒಂದು. ಮೇ, ಜೂನ್, ಜುಲೈ ತಿಂಗಳುಗಳ ರೋಹಿಣಿ, ಮೃಗಶಿರ, ಆರಿದ್ರಾ ಮಳೆಗಳ ಸಮಯದಲ್ಲಿ ಈ ಬೀಜ ಬಿತ್ತಿ ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳವರೆಗೆ ಫಸಲು ಪಡೆಯುತ್ತಿದ್ದರು. ಮನೆ ಬಳಕೆಗೆ ಉಪಯೋಗಿಸಿ ಉಳಿದಿದ್ದನ್ನು ಬೀಜಕ್ಕೆ ಬಿಟ್ಟು, ಬರುವ ಮುಂಗಾರಿಗೆ ಇಟ್ಟುಕೊಳ್ಳುತ್ತಿದ್ದರು.

ಸೋರೆ ತಳಿಗಳ ಹುಡುಕಾಟದಲ್ಲಿ ಕಿನ್ನರಿ, ಕೊಂಬು, ಬದನೆ ಸೋರೆಗಳು ಪತ್ತೆಯಾದವು. ಆದರೆ ಒನಕೆ ಸೋರೆಯ ಪತ್ತೆ ಸಿಗಲಿಲ್ಲ. ರಾಮನಗರದ ಮಾಗಡಿಯ ರೈತರಿಂದ ರಾಗಿ ಹುಲ್ಲು ಕೊಂಡು ಹೊರೆ ಕಟ್ಟುತ್ತಿದ್ದಾಗ ಪಕ್ಕದ ಹೊಲದ ಬದುವಿನ ಮೇಲಿದ್ದ ಸೋರೆ ಬಳ್ಳಿಯಲ್ಲಿ ಹತ್ತಾರು ಬಲಿದ ಉದ್ದದ ಸೋರೆ ಬುರುಡೆಗಳು. ರೈತರಿಂದ ತಳಿಯ ಮಾಹಿತಿ ಕೇಳಿದಾಗ ಅದು ಒನಕೆ ಸೋರೆ ಎಂಬುದು ತಿಳಿದುಬಂದಿತು.

ಬಹು ವರ್ಷಗಳ ಹುಡುಕಾಟದ ನಂತರ ಒನಕೆ ಸೋರೆ ಪತ್ತೆಯಾಯಿತು. ರೈತನಿಂದ ಪಡೆದ ಸೋರೆ ಬೀಜಗಳನ್ನು ಹೆಗ್ಗಡದೇವನಕೋಟೆಯ ಕೆಲವು ರೈತರುಗಳಿಗೆ ವಿತರಿಸಿ ಕಬಿನಿ ಹಿನ್ನೀರಿನಲ್ಲಿರುವ ಪೀಪಲ್ ಟ್ರೀ ಸಂಸ್ಥೆಯ ಹೊಲದಲ್ಲಿ ಒನಕೆ ಸೋರೆ ತಳಿಯ ಸಂರಕ್ಷಣೆ, ಸಂವರ್ಧನೆ ಮಾಡಲಾಗುತ್ತಿದೆ. ಆಸಕ್ತರು ೯೯೪೫೨೧೯೮೩೬ ಸಂಪರ್ಕಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.