ತುಮಕೂರು, ಚಿತ್ರದುರ್ಗ, ಕೋಲಾರ, ಬಳ್ಳಾರಿಯಂಥ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಶೇಂಗಾ (ಕಡಲೇಕಾಯಿ)ಬೆಳೆಯುವುದು ಸಾಮಾನ್ಯ. ಅನೇಕ ರೀತಿಯ ರೋಗ ಬಾಧೆಗಳು, ಕೂಲಿ ಕಾರ್ಮಿಕರ ಸಮಸ್ಯೆ ಇತ್ಯಾದಿಯಿಂದಾಗಿ ಶೇಂಗಾ ಬೆಳೆಯಲ್ಲಿ ಇಳುವರಿ ಕಮ್ಮಿಯಾಗುವುದು ಒಂದೆಡೆಯಾದರೆ, ಪ್ರತಿವರ್ಷವೂ ಒಂದೇ ಬೆಳೆಯನ್ನು ಬೆಳೆಯುವ ಕಾರಣ, ಭೂಮಿಯ ಫಲವತ್ತತೆ ತಗ್ಗಿ ಹೆಚ್ಚಿನ ಇಳುವರಿ ಬರದೇ ಇರುವುದು ಇನ್ನೊಂದೆಡೆ. ಇದರಿಂದ ಸಾಲ ಬಾಧೆಯೆಂಬ ವಿಷವರ್ತುಲದ ಸುಳಿಯಲ್ಲಿ ಸಿಗುವ ರೈತನ ಪಾಡು ಮಾತ್ರ ಶೋಚನೀಯ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೈತರ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಲ್ಲ. ಪ್ರತಿ ಬಾರಿಯೂ ಶೇಂಗಾ ಬೆಳೆಯುವ ಇಲ್ಲಿಯ ರೈತರು ಇನ್ನೊಂದು ಬೆಳೆಯತ್ತ ಮುಖ ಮಾಡುವ ಗೋಜಿಗೆ ಹೋಗುತ್ತಿಲ್ಲ. ಇದರಿಂದಾಗಿ ಶೇಂಗಾಕ್ಕೆ ಬೇಕಾಗುವ ಪೋಷಕಾಂಶಗಳು ಆ ಭೂಮಿಯಲ್ಲಿ ಕಡಿಮೆಯಾಗುತ್ತಿವೆ. ಮಣ್ಣಿಗೆ ಸಾವಯವ ಗೊಬ್ಬರ ಹಾಕದೇ ಇರುವುದು, ಮಣ್ಣು-ನೀರನ್ನು ಸರಿಯಾದ ರೀತಿಯಲ್ಲಿ ಸಂರಕ್ಷಣೆ ಮಾಡದೇ ಇರುವುದು ಮತ್ತು ಕೃಷಿ ಭೂಮಿ ವರ್ಷದ ಬಹು ಸಮಯ ಸೂರ್ಯನ ರಣ ಬಿಸಿಲಿಗೆ ಸುಡುವುದರಿಂದ ಮಣ್ಣಿನಲ್ಲಿರುವ ಎಲ್ಲಾ ಪೋಷಕಾಂಶಗಳು ಹಾಳಾಗಿ ಭೂಮಿ ಬರಡಾಗುತ್ತಿದೆ.
ಈ ರೀತಿಯ ಸಂಕಷ್ಟಕ್ಕೆ ಗುರಿಯಾಗದಿರಲು ಇರುವ ಪರಿಹಾರವೆಂದರೆ ಶೇಂಗಾ ಬೆಳೆಗೆ ಪರ್ಯಾಯವಾಗಿ ತೊಗರಿ ಬೆಳೆ ಬೆಳೆಯುವುದು. ಮೇಲೆ ತಿಳಿಸಿದ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ ಈ ಬೆಳೆ, ಅದರಲ್ಲೂ ಸುಧಾರಿತ ತಳಿ ಬಿ ಆರ್ ಜಿ -2 ತಳಿ ಇಂಥ ರೈತರಿಗೆ ಹೊಸ ಆಶಾಕಿರಣವಾಗಿದೆ.
ಬಿ.ಆರ್.ಜಿ ಎಂದರೆ...
ಬಿ.ಆರ್.ಜಿ ಎಂದರೆ ಬೆಂಗಳೂರು ರೆಡ್ ಗ್ರಾಮ್. ಬೆಂಗಳೂರು ಸುತ್ತಮುತ್ತ ಬೆಳೆಯುವ ದೇಸಿತಳಿಗಳನ್ನು ಸಂಗ್ರಹಿಸಿ, ಅವುಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವಿಜ್ಣಾನಿಗಳು ಸುಧಾರಿತ ತಳಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ತಳಿ ಹೈಬ್ರಿಡ್ ತಳಿಯಲ್ಲ, ಇದರಲ್ಲಿ ಬರುವ ಉತ್ತಮವಾದ ಬೀಜಗಳನ್ನು ಆಯ್ಕೆಮಾಡಿಕೊಂಡು ಮತ್ತೆ ಮರುಬಳಕೆ ಮಾಡಿ ಬೆಳೆ ಬೆಳೆಯಬಹುದು. ಕಾಳುಗಳು ತಿಳಿ ಕಂದು ಬಣ್ಣ ಹೊಂದಿದ್ದು, ಬೇಳೆ ತಯಾರಿಸಲು ಉತ್ತಮವಾಗಿರುತ್ತದೆ. ಬಲಿತ ಹಸಿಕಾಯಿ ಬೀಜಗಳನ್ನು ತರಕಾರಿಯಾಗಿ ಬಳಸಬಹುದು.
ಈ ತಳಿಯ ತೊಗರಿ ಬೆಳೆದು ಆದಾಯದ ಮಾರ್ಗ ಕಂಡುಕೊಂಡಿದ್ದಾರೆ ಪಾವಗಡ ತಾಲ್ಲೂಕಿನ ಗಂಗಸಾಗರದ ರೈತ ಜಿ.ಕೆ.ನಾರಾಯಣಪ್ಪ. ಇಲ್ಲಿ ಮಳೆ ಬರುವುದು ತೀರಾ ಅಪರೂಪ. ಮಳೆಗಾಲದಲ್ಲಿ ಹಾಗೊಮ್ಮೆ ಹೀಗೊಮ್ಮೆ ಬರುವ ಮಳೆಯೇ ಇಲ್ಲಿನ ಕೃಷಿ ಭೂಮಿಗೆ ಆಶ್ರಯ. ಕೊಳವೆ ಬಾವಿ ಕೊರೆಸಿದರೂ ಎಂಟುನೂರು ಅಡಿಯೋ ಇಲ್ಲವೇ ಸಾವಿರ ಅಡಿಗೆ ನೀರು ಸಿಕ್ಕರೆ ಪುಣ್ಯ. ಇಂತಿಪ್ಪ ಊರಿನಲ್ಲಿ ನಾರಾಯಣಪ್ಪ ಶೇಂಗಾ ಬೆಳೆಯನ್ನೇ ಬೆಳೆದು ಕೈಸುಟ್ಟುಕೊಂಡು ಎರಡು ವರ್ಷಗಳಿಂದ ಈ ತಳಿಯ ತೊಗರಿ ಬೆಳೆದು ಲಾಭದತ್ತ ಮುಖ ಮಾಡಿದ್ದಾರೆ. 2013ರಲ್ಲಿ 4 ಎಕರೆಯಲ್ಲಿ ಲಾಭಗಳಿಸಿದ ಇವರು ಕಳೆದ ವರ್ಷ ಎಂಟು ಎಕರೆಗೆ ಈ ಬೆಳೆಯನ್ನು ವಿಸ್ತರಿಸಿಕೊಂಡಿದ್ದಾರೆ.
‘ತೊಗರಿ ಬೆಳೆಯುವುದರಿಂದ ಹೆಚ್ಚು ಕೂಲಿ ಕಾರ್ಮಿಕರು ಬೇಕಾಗುವುದಿಲ್ಲ, ಬೀಜಕ್ಕೆ ಮತ್ತು ಗೊಬ್ಬರಕ್ಕೆ ದುಬಾರಿ ಹಣ ನೀಡಬೇಕಾಗಿಲ್ಲ. ಕಡಲೆಕಾಯಿ ಬೆಳೆದಷ್ಟೇ ಲಾಭವನ್ನು ಹೆಚ್ಚಿನ ಶ್ರಮವಿಲ್ಲದೇ ಇದರಿಂದಲೂ ಪಡೆಯಬಹುದು’ ಎನ್ನುತ್ತಾರೆ ನಾರಾಯಣಪ್ಪ.
ಬಿತ್ತನೆಯ ಕಾಲ
ಈ ತೊಗರಿಯನ್ನು ಬಿತ್ತನೆ ಮಾಡಲು ಸೂಕ್ತ ಕಾಲ ಮುಂಗಾರಿನ ಜೂನ್ ಅಥವಾ ಜುಲೈ ತಿಂಗಳು. ಜೂನ್ ತಿಂಗಳಿನಲ್ಲಿ ಬಿತ್ತನೆ ಮಾಡಿದರೆ ನವೆಂಬರ್ ತಿಂಗಳಿನಲ್ಲಿ ಕೊಯ್ಲು ಮಾಡಬಹುದು. ಒಂದು ಎಕರೆ ಜಾಗಕ್ಕೆ ಮೂರು ಕೆ.ಜಿ ಬೀಜ ಸಾಕಾಗುತ್ತದೆ. ಈ ತೊಗರಿಯನ್ನು ಜೋಡಿ ಸಾಲಿನಲ್ಲಿ ಬಿತ್ತಬೇಕು (ಒಂದು ಸಾಲು ಮತ್ತು ಅದರ ಪಕ್ಕದಲ್ಲಿ ಇನ್ನೊಂದು ಸಾಲು). ಬೀಜಗಳು ಬಿತ್ತುವಾಗ ಒಂದು ಬೀಜದಿಂದ ಇನ್ನೊಂದು ಬೀಜಕ್ಕೆ ಕನಿಷ್ಠ 4-5 ಇಂಚು ಅಂತರ ಇರಬೇಕು. ಸಾಲಿನಿಂದ ಸಾಲಿಗೆ ಕನಿಷ್ಠ ಐದು ಅಡಿ ಅಂತರ ಇರುವಂತೆ ನೋಡಿಕೊಳ್ಳಬೇಕು. ಬಿತ್ತನೆ ಮಾಡುವ ಮುನ್ನ ಸಾಲುಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ಇವಿಷ್ಟು ನಾರಾಯಣಪ್ಪನವರು ಬಿತ್ತನೆ ಸಮಯದಲ್ಲಿ ಅನುಸರಿಸಿದ ವಿಧಾನ.
‘ಬೀಜ ಹುಟ್ಟಿ ಬೆಳೆದು ಸಣ್ಣ ಸಸಿಗಳಾದಾಗ, ಕಳೆ ನಿಯಂತ್ರಣ ಮಾಡಬೇಕು. ಇದನ್ನು ಕುಂಟೆ ಹೊಡೆಯುವುದರಿಂದ ನಾಶಮಾಡಬಹುದು. ಇಷ್ಟು ಮಾಡಿದರೆ ಸಾಕು, ಹೂವು ಕಾಯಾಗುವವರೆಗೆ ಇಲ್ಲಿ ರೈತರಿಗೇನು ಕೆಲಸ ಇರುವುದಿಲ್ಲ. ಹೂವಾಗಿ ಕಾಯಿಕಟ್ಟುವ ಸಮಯದಲ್ಲಿ ಕೀಟಗಳ ಬಾಧೆ ಬರುತ್ತದೆ. ಅದನ್ನು ಗಮನಿಸ ಬೇಕು ಅಷ್ಟೇ. ಹೂವಾಗುವ ಭಾಗದಲ್ಲಿ ಒಣಗುವುದು ಮತ್ತು ಮುದುಡಿಕೊಳ್ಳುವುದು ಇದ್ದರೆ ಕೂಡಲೇ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ಯಾವುದೇ ಸಮಸ್ಯೆ ಬಾರದೇ ಇದ್ದರೆ, ಕಾಯಿ ಬಲಿತ ಮೇಲೆ ತೊಗರಿಯನ್ನು ಕೊಯ್ಲು ಮಾಡಿ, ಒಕ್ಕಣೆ ಮಾಡುವುದು ಒಂದೇ ಕೆಲಸ’ ಎನ್ನುತ್ತಾರೆ ನಾರಾಯಣಪ್ಪ.
‘ಈ ತೊಗರಿಗೆ ಹೂವು ಕಟ್ಟುವ ಸಂದರ್ಭದಲ್ಲಿ ‘ಗೂಡು ಮಾರು ಹುಳ’ ಎಂದು ಕರೆಯುವ ಕೀಟ ತೊಂದರೆ ಮಾಡುತ್ತದೆ. ಇದರಿಂದ ಹೂವುಗಳು ಒಣಗುವುದು ಮತ್ತು ಮುದುಡಿಕೊಂಡಂತೆ ಇರುವುದು ಕಂಡು ಬರುತ್ತದೆ, ಇದರಿಂದ ಕಾಯಿ ಕಟ್ಟಲು ತೊಂದರೆಯಾಗುತ್ತದೆ. ಆದ್ದರಿಂದ ಹೂವು ಬಿಡುವ ಸಮಯದಲ್ಲಿ ಇಂಥ ಸಮಸ್ಯೆ ಕಂಡು ಬಂದರೆ ಸೂಕ್ತ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು’ ಎನ್ನುತ್ತಾರೆ ಪಾವಗಡದ ಕೃಷಿ ವಿಜ್ಣಾನ ಕೇಂದ್ರದ ಪ್ರಭುಗಾಣಿಗೇರ್.
ಲಾಭದ ಲೆಕ್ಕಾಚಾರ
ಬಿಆರ್‌ಜಿ 2 ತೊಗರಿ ಬೆಳೆಯಿಂದ ನಾರಾಯಣಪ್ಪ ಅವರಿಗೆ ಈ ಬಾರಿ ಎಂಟು ಎಕರೆಯಿಂದ 25 ಕ್ವಿಂಟಾಲ್ ತೊಗರಿ ದೊರೆತಿದೆ. ಒಂದು ಕ್ವಿಂಟಾಲ್‌ಗೆ ₹5 ಸಾವಿರದಂತೆ ಒಂದು ಲಕ್ಷ ರೂಪಾಯಿ ಆದಾಯ ಬಂದಿದೆ. ಇವರಿಗೆ ತಗುಲಿರುವ ಖರ್ಚು 30ಸಾವಿರ. ಉಳಿದ 70ಸಾವಿರ ಲಾಭ. ತೊಗರಿಯ ಜೊತೆಗೆ ಆರು ಮೂಟೆ ಬೀಜ ಹಾಕಿ, ಶೇಂಗಾ ಬೆಳೆಯನ್ನೂ ನಾರಾಯಣಪ್ಪ ಬೆಳೆದಿದ್ದು ಮೂರು ಕ್ವಿಂಟಾಲ್ ಇಳುವರಿ ಬಂದಿದೆ. ಇವರ ಸಂಪರ್ಕಕ್ಕೆ: 9480711109
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.