ಗಿಡ ನೆಡುವಾಗಲೇ ಕೈತುಂಬ ಹಣ್ಣು ಸಿಗುವ ಇಂಥದ್ದೊಂದು ಅದ್ಭುತ ನೋಡಬೇಕೆಂದರೆ ಮಂಗಳೂರು-ಉಡುಪಿಯ ಹೆದ್ದಾರಿಯಲ್ಲಿರುವ ಉಚ್ಚಿಲದಿಂದ ಒಂದು ಕಿಲೋಮೀಟರ್ ಮುಂದೆ ಇರುವ ಮೂಳೂರು ಗ್ರಾಮಕ್ಕೆ ಬರಬೇಕು. ಅಲ್ಲಿ ಕಾಣಿಸುತ್ತದೆ ನಿಮಗೆ ಎಂ. ಎ. ಮೂಸಾ ಅವರ ಕೈಚಳಕ.
ಕೌಶಲದ ಕಸಿ ಕಲೆಯ ಮೂಲಕ ನಾಟಿ ಮಾಡಿದ ವರ್ಷದಿಂದಲೇ ಫಸಲು ಕೊಯ್ಯುವ ಸಾಧನೆ ಅವರದ್ದು. ರೈತರಿಗೆ ಉತ್ತಮ ಗುಣಮಟ್ಟದ ಎಲ್ಲಾ ವಿಧದ ಕಸಿ ಗಿಡಗಳನ್ನು ಕೊಡಬೇಕೆಂಬ ಉದ್ದೇಶದಿಂದ ಅವರು ತಮ್ಮ `ಈಸ್ಟ್- ವೆಸ್ಟ್ ನರ್ಸರಿ'ಯಲ್ಲಿ ದಿಢೀರ್ ಫಲ ಕೊಡುವ ಗಿಡಗಳನ್ನು ತಯಾರಿಸಿ ಕೊಡುತ್ತಿದ್ದಾರೆ.
ಹಣ್ಣು ಮತ್ತು ಹೂಗಿಡಗಳಲ್ಲಿ ಯಾವುದು ಇದೆ ಎಂಬ ಪ್ರಶ್ನೆಗಿಂತ ಯಾವುದು ಇಲ್ಲ ಅಂತ ಕೇಳಬೇಕಾಗುತ್ತದೆ. ಜಗತ್ತಿನ ಯಾವುದೇ ತಳಿಯ ಹೂ ಅಥವಾ ಹಣ್ಣಿನ ಗಿಡಗಳೆಲ್ಲವೂ ಅವರಲ್ಲಿ ಸಿಗುತ್ತದೆ.`ಬಹುತೇಕ ಗಿಡಮರಗಳನ್ನು ನಮ್ಮ ಕೃಷಿಭೂಮಿಯಲ್ಲಿ ನೆಟ್ಟು ಬೆಳೆಸಿದ್ದೇವೆ. ಕಸಿ ಕಟ್ಟಲು ಇದರಿಂದ ಆರೋಗ್ಯಕರವಾದ ಕೊಂಬೆಗಳನ್ನು ಮಾತ್ರ ಆರಿಸುತ್ತೇವೆ.
ಅದರಲ್ಲೂ ಈ ವರ್ಷದಿಂದಲೇ ಹೂ ಬಿಡುವಂಥ ಕೊಂಬೆಗಳು ನಮ್ಮ ಆಯ್ಕೆ. ಬೇರೆಡೆಯಿಂದ ಕೊಂಬೆಗಳನ್ನು ಹಣ ಕೊಟ್ಟು ತರುವಾಗಲೂ ನಮ್ಮ ಆಯ್ಕೆಯಲ್ಲಿ ರಾಜಿಯಿಲ್ಲ. ದೂರದಿಂದ ಫಲವತ್ತಾದ ಮಣ್ಣು, ಮರಳು ತರಿಸುತ್ತೇವೆ.ಕಸಿ ಕಟ್ಟುವ ಮಾತೃಗಿಡ ಕೂಡ ಉತ್ತಮ ಬೀಜಗಳಿಂದ ತಯಾರಾಗುತ್ತದೆ' ಎಂದು ಯಶಸ್ಸಿನ ಗುಟ್ಟು ಬಿಚ್ಚಿಡುತ್ತಾರೆ ಮೂಸಾ.
ರಸಗೊಬ್ಬರಕ್ಕೆ ಕಡಿವಾಣ
ಬೇಗ ಹೂವು ಬಿಡಲಿ ಎಂದು ರಸಗೊಬ್ಬರಗಳು, ಚೋದಕಗಳನ್ನು ಮೂಸಾ ಬಳಸುವುದಿಲ್ಲ. ಕುರಿಗೊಬ್ಬರ, ಹರಳಿಂಡಿಯಂತಹ ಸಾವಯವ ಗೊಬ್ಬರ, ಸಾಕಷ್ಟು ನೀರು, ನೆರಳುಗಳನ್ನು ಒದಗಿಸಿ ಲಕ್ಷಗಳ ಸಂಖ್ಯೆಯಲ್ಲಿ ತಯಾರಿಸುವ ಗಿಡಗಳನ್ನು ಆಸಕ್ತ ರೈತರಿಗೆ ಪೂರೈಸುತ್ತಾರೆ.
`ಬೀಜಗಳಿಂದ ಹುಟ್ಟಿದ ಗಿಡಗಳನ್ನು ಕೃಷಿಕರಿಗೆ ನಾವು ಕೊಡುವುದಿಲ್ಲ. ಪ್ರತೀ ಗಿಡದ ಬುಡವನ್ನೂ ಪರೀಕ್ಷಿಸದೆ ರೈತರ ಕೈಗಿಡುವುದಿಲ್ಲ' ಎನ್ನುತ್ತಾರೆ.ಮೂಸಾ ಅವರ ಸಂಗ್ರಹದಲ್ಲಿ ಅಪಾರ ಹಣ್ಣಿನ ಗಿಡಗಳಿವೆ. ಐದು ವಿಧದ ಸಪೋಟಾಗಳಿದ್ದು ಕ್ರಿಕೆಟ್ ಬಾಲ್ ತಳಿ ಅತ್ಯಧಿಕ ಫಲ ಕೊಡುತ್ತದೆ. 25 ಬಗೆಯ ಮಾವಿನ ತಳಿಗಳಿವೆ.
ಬೋನ್ಸಾಯ್ ವಿಧಾನದಿಂದ ತಯಾರಿಸಿದ ಥೈಲ್ಯಾಂಡ್ ಡಾರ್ಫ್ ಮಾವು ಗುಂಡಿಯಲ್ಲಿ ನೆಡುವ ಮೊದಲೇ ಕಾಯಿಗಳು ಜೋತಾಡುತ್ತಿವೆ. ಲಿಂಬೆಯಂತಿರುವ ಆರ್ನಮೆಂಟಲ್ ಆರೆಂಜ್ ಒಂದು ಗಿಡದಲ್ಲಿ ಸಾವಿರಾರು ಆಗುತ್ತದೆ.
ಹುಳಿಮಿಶ್ರಿತ ಸಿಹಿಯಿರುವ ಇದು ಸಾರು ಮಾಡಲು ಯೋಗ್ಯ.
ಸೀತಾಫಲ, ಲಕ್ಷ್ಮಣ ಫಲ, ರಾಮಫಲಗಳ ಕಸಿಯನ್ನೂ ಇವರು ಮಾಡುತ್ತಾರೆ. ದಾಳಿಂಬೆ, ಪೂನಾ ಅಂಜೂರ, ಎಗ್ ಫ್ರೂಟ್, ಹಲಸು, ಪಪ್ಪಾಯಿ, ಬಾಳೆಗಳ ತಳಿಗಳು ಅವರಲ್ಲಿವೆ. ನೆಲ್ಲಿ, ಬಿಲ್ವಪತ್ರೆಯಂತಹ ಔಷಧೀಯ ಸಸಿಗಳಿವೆ. ಉಪ್ಪಿನಕಾಯಿಯ ಬಿಂಬುಳಿಯಿದೆ. ಮೋಸಂಬಿ, ಕಿತ್ತಳೆ, ಕೋಕಂ, ಜಾಮೂನು ಹಣ್ಣು, ಕೆಂಪು ಸೀತಾಫಲ, ಬುಗುರಿ ಹಣ್ಣು, ದೀವಿ ಹಲಸು, ತೆಂಗು ಮೊದಲಾದ ವೈವಿಧ್ಯಮಯ ಗಿಡಗಳನ್ನೂ ಮೂಸಾ ಒದಗಿಸುತ್ತಾರೆ.
ರೈತರಿಗೆ ಪೂರೈಸಲು ಸಿದ್ಧವಾಗಿರುವ ಖರ್ಜೂರದ ಮರದಲ್ಲಿ ಕಾಯಿಗಳಾಗಿದ್ದು ಕರ್ನಾಟಕದಲ್ಲಿಯೂ ಖರ್ಜೂರ ಫಲ ಕೊಡಬಲ್ಲುದೆಂದು ತೋರಿಸಿಕೊಟ್ಟಿದ್ದಾರೆ. ಬೇರೆಯವರು ದಾಳಿಂಬೆ ಬೀಜದಿಂದ ಗಿಡ ತಯಾರಿಸುತ್ತಾರೆ. ಇದು ಶೀಘ್ರ ಫಲಕಾರಿಯಲ್ಲ. ಬಲು ಬೇಗನೆ ಫಲ ಸಿಗಲು ಆರೋಗ್ಯಕರವಾದ ಕೊಂಬೆ ಕಸಿಯ ಗಿಡಗಳೇ ಆಗಬೇಕು ಎಂಬುದು ಮೂಸಾ ರೈತರಿಗೆ ಹೇಳುವ ಕಿವಿಮಾತು.
ಸಂಪರ್ಕಕ್ಕೆ 9845157418.
-ಪ. ರಾಮಕೃಷ್ಣ ಶಾಸ್ತ್ರಿ .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.