ADVERTISEMENT

ಕಮಲಾಪೂರದ ಕೆಂಪು ಬಾಳೆ ಕಂಪು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2010, 8:40 IST
Last Updated 23 ಡಿಸೆಂಬರ್ 2010, 8:40 IST
ಕಮಲಾಪೂರದ ಕೆಂಪು ಬಾಳೆ ಕಂಪು
ಕಮಲಾಪೂರದ ಕೆಂಪು ಬಾಳೆ ಕಂಪು   

ಗುಲ್ಬರ್ಗಾ ಜಿಲ್ಲೆಯ ಮಣ್ಣಿನಲ್ಲಿ ಕೆಂಪು ಬಾಳೆ ಬೆಳೆಯುವುದು ಕಷ್ಟ ಎಂಬುದು ರೈತರ ಅಭಿಪ್ರಾಯ. ಆದರೆ ಗುಲ್ಬರ್ಗಾ ತಾಲೂಕಿನ ಕಮಲಾಪೂರದ ರೈತ ಸೂರಜ್ ಎಸ್. ಪಾಟೀಲರು ಕೆಂಪು ಬಾಳೆ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನಲವತ್ತು ವರ್ಷ ವಯಸ್ಸಿನ ಸೂರಜ್ ಪಾಟೀಲರು ಪ್ರಯೋಗಶೀಲ ಮನಸ್ಸಿನವರು. ಕಳೆದ ಹದಿನಾರು ವರ್ಷಗಳಿಂದ ಅವರು ಕೆಂಪು ಬಾಳೆ ಬೇಸಾಯ ಮಾಡುತ್ತಿದ್ದಾರೆ. ಹಳೆಯ ಕಾಲದ ಎರಡು ತೆರೆದ ಬಾವಿಗಳ ನೀರನ್ನು ಬಳಸಿಕೊಂಡು ನಾಲ್ಕು ಎಕರೆ ಭೂಮಿಯಲ್ಲಿ  ಕೆಂಪು ಬಾಳೆ ಬೆಳೆಯುತ್ತಿದ್ದಾರೆ. ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಬೆಳೆಯದ ಕೆಂಪು ಬಾಳೆ ಬೇಸಾಯದ ಯಶಸ್ಸಿಗಾಗಿ 2009-10ನೇ ಸಾಲಿನ ಡಾ. ಮರಿಗೌಡ ಸ್ಮಾರಕ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ ಅವರಿಗೆ ಸಿಕ್ಕಿದೆ.

 ಕೆಂಪು ಬಾಳೆ ಬೇಸಾಯ ಉಳಿದ ಬಾಳೆ ತಳಿಗಳ ಬೇಸಾಯದಂತಲ್ಲ. ನಾಲ್ಕು ಎಕರೆಯಲ್ಲಿ ಅವರು 900 ಕೆಂಪು ಬಾಳೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಈ ತಳಿಯ ಬಾಳೆ ಗಿಡ ಸಾಮಾನ್ಯವಾಗಿ 15-18 ಅಡಿ ಎತ್ತರ ಬೆಳೆಯುತ್ತದೆ. ಕಂದುಗಳನ್ನು ನಾಟಿ ಮಾಡಲು ಜೂನ್‌ನಿಂದ ಆಗಸ್ಟ್ ಅವಧಿ ಸೂಕ್ತ ಕಾಲ.

ಬಾಳೆ ಗೊನೆ  ಬರಲು 16ರಿಂದ 18 ತಿಂಗಳು ಬೇಕು. ಕೆಂಪು ಬಾಳೆಯನ್ನು ಒಂದು ಎಕರೆಯಲ್ಲಿ ಬೆಳೆಯಲು 50 ಸಾವಿರ ರೂ ಖರ್ಚು ಬರುತ್ತದೆ. ಸೂರಜ್ ಪಾಟೀಲರು ಸಾವಯವ ಹಾಗೂ ಹಸಿರೆಲೆ ಗೊಬ್ಬರ ಹಾಕಿ ಬಾಳೆ ಬೆಳೆಯುತ್ತಾರೆ. ಅವರು ಬೆಳೆಯುವ ಗುಣಮಟ್ಟದ ಕೆಂಪು ಬಾಳೆಗೆ ಬೆಂಗಳೂರು ಮತ್ತು ಮುಂಬಯಿಗಳಲ್ಲಿ ಭಾರೀ ಬೇಡಿಕೆ ಇದೆ. ಒಂದು ಡಜನ್ ಬಾಳೆ ಹಣ್ಣಿಗೆ ನೂರು ರೂ ಬೆಲೆ ಇದೆ. ಸ್ಥಳೀಯವಾಗಿಯೂ ಹಣ್ಣು ಮಾರಾಟ  ಮಾಡುತ್ತಾರೆ. ಬಾಳೆ ಹಣ್ಣಿನ ಮಾರಾಟದಿಂದ ಎಕರೆಗೆ 3 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ಕೆಂಪು ತಳಿಗೆ ಪೇಟೆಂಟ್: ರಾಜ್ಯ ತೋಟಗಾರಿಕೆ ಇಲಾಖೆಯ ಪ್ರಯತ್ನದಿಂದ ರಾಷ್ಟ್ರ ಮಟ್ಟದಲ್ಲಿ ಸಾಂಪ್ರದಾಯಿಕ ತೋಟಗಾರಿಕೆ ಬೆಳೆಗಳ ತಳಿ ಸಂರಕ್ಷಣೆಗಾಗಿ ಪ್ರಸಕ್ತ ವರ್ಷ 27 ತೋಟಗಾರಿಕೆ ಬೆಳೆಗಳು ಪೇಟೆಂಟ್ ಪಡೆದಿವೆ. ಅವುಗಳಲ್ಲಿ ಕಮಲಾಪೂರದ ಕೆಂಪು ಬಾಳೆಯೂ ಸೇರಿದೆ. ಕೊಡಗಿನ ಕಿತ್ತಳೆ ಮತ್ತು ಹಸಿರು ಏಲಕ್ಕಿ, ಮೈಸೂರು ವೀಳ್ಯದೆಲೆ ಮತ್ತು ಮಲ್ಲಿಗೆ, ಅರೆಬಿಕಾ ಕಾಫಿ, ನಂಜನಗೂಡಿನ ರಸಬಾಳೆ,ದೇವನಹಳ್ಳಿಯ ಚಕ್ಕೋತ, ಅಪ್ಪೆ ಮಾವಿನ ಮಿಡಿ ಪೇಟೆಂಟ್ ಪಡೆದ ರಾಜ್ಯದ ತೋಟಗಾರಿಕೆ ಉತ್ಪನ್ನಗಳು.

ಹೈದರಾಬಾದ್ ಕರ್ನಾಟಕದ ಕೆಂಪು ಬಾಳೆಗೆ ಜಿಯಾಗ್ರಫಿಕಲ್ ಇಂಡಿಕೇಶನ್ ರಿಜಿಸ್ಟ್ರಿ (ಭೌಗೋಳಿಕ ಗುರುತು ದಾಖಲಾತಿ ನೋಂದಣಿ) ಮಾನ್ಯತೆ ಸಿಕ್ಕಿರುವುದರಿಂದ ಈ ಬಾಳೆ ಹೊಸ ಹೆಸರು (ಬ್ರ್ಯಾಂಡ್ ನೇಮ್) ಪಡೆಯಲಿದೆ. ಮುಂದಿನ ದಿನಗಳಲ್ಲಿ ಅಪರೂಪದ ಹಾಗೂ ಅಳಿವಿನ ಅಂಚಿನಲ್ಲಿ ಇರುವ ಕೆಂಪು ಬಾಳೆ ತಳಿ ಸಂರಕ್ಷಣೆಗಾಗಿ ನೆರವು ನೀಡಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
 ‘ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಾಳೆ ಬೆಳೆಯುವುದು ಒಂದು ಸಾಹಸ. ಬಿರುಗಾಳಿಗೆ ಕೆಂಪು ಬಾಳೆ ಗಿಡಗಳು ತುತ್ತಾಗುವುದರಿಂದ ಇವನ್ನು ಬೆಳೆಯಲು ರೈತರು ಆಸಕ್ತಿ ತೋರಿಸುವುದಿಲ್ಲ. ಕಮಲಾಪೂರದ ಕೆಂಪು ಬಾಳೆ ಔಷಧೀಯ ಗುಣಗಳಿವೆ.

ಹಣ್ಣಿನಲ್ಲಿ ಹೇರಳ ಪೋಷಕಾಂಶಗಳ ಆಗರವಾಗಿದೆ. ಒಂದೆರಡು ಸಲ ನಷ್ಟವಾದರೂ ಕಮಲಾಪೂರದ ಕೆಂಪು ಬಾಳೆಯನ್ನು ಬೆಳೆದು ಸಂರಕ್ಷಿಸಲು ಆಸಕ್ತಿ ಹೊಂದಿದ್ದೇನೆ. ಕೆಂಪು ಬಾಳೆಯನ್ನು ಹೊರದೇಶಗಳಿಗೆ ರಫ್ತು ಮಾಡುವ ಅವಕಾಶ ಸಿಕ್ಕಿಲ್ಲ. ಆದರೆ ಈ ವಿಶಿಷ್ಟ ಹಾಗೂ ಹಳೆಯ ತಳಿ ನಮ್ಮಲ್ಲಿ ಇರುವುದೇ ಹೆಮ್ಮೆಯ ಸಂಗತಿ. ಈ ಕಾರಣಕ್ಕಾಗಿ ನನಗೆ ಡಾ. ಮರೀಗೌಡ ಸ್ಮಾರಕ ಪ್ರಶಸ್ತಿ ಸಿಕ್ಕಿದೆ ಎನುತ್ತಾರೆ ಪಾಟೀಲ್.

ಕೆಂಪು ಬಾಳೆ ಬೆಳೆಯುವ ಆಸಕ್ತಿ ಇರುವ ರೈತರು ಪಾಟೀಲರ ಜತೆ ಸಮಾಲೋಚನೆ ಮಾಡಬಹುದು. ಅವರ   ಮೊಬೈಲ್ ನಂಬರ್: 9448012702. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.