ADVERTISEMENT

ಕುಲಾಂತರಿಗೆ 10 ವರ್ಷ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2012, 19:30 IST
Last Updated 27 ಫೆಬ್ರುವರಿ 2012, 19:30 IST
ಕುಲಾಂತರಿಗೆ 10 ವರ್ಷ
ಕುಲಾಂತರಿಗೆ 10 ವರ್ಷ   

ಇತ್ತೀಚಿನ ದಿನಗಳಲ್ಲಿ ತಳಿವಿಜ್ಞಾನದಿಂದ ಮಾರ್ಪಡಿಸಿದ `ಕುಲಾಂತರಿ~ (ಜಿಎಂ ಅಥವಾ ಜೆನೆಟಿಕಲಿ ಮಾಡಿಫೈಡ್) ಆಹಾರಗಳ ಬಗ್ಗೆ ಬಹಳಷ್ಟು ಆತಂಕ ಮತ್ತು ಭಯ ಕೇಳಿಬರುತ್ತಿದೆ. ಇದಕ್ಕೆ ತಪ್ಪು ಕಲ್ಪನೆಗಳೇ ಕಾರಣ.

ಆದ್ದರಿಂದ ವಿಜ್ಞಾನಿಗಳು ಕೃಷಿ ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ  ವಾಸ್ತವಾಂಶ, ಸುರಕ್ಷತೆ ಮತ್ತು ಪ್ರಯೋಜನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು, ಅವರಲ್ಲಿನ ಆತಂಕ ನಿವಾರಿಸಬೇಕು.

ಕಳೆದ 25 ವರ್ಷಗಳಲ್ಲಿ ಆಧುನಿಕ ಕೃಷಿಯ ಮೇಲೆ ಪ್ರಭಾವ ಬೀರಿದ ಏಕೈಕ, ಅತ್ಯಂತ ಗಣನೀಯ ತಂತ್ರಜ್ಞಾನವೇ ಜೈವಿಕ ತಂತ್ರಜ್ಞಾನ. ಇದರ ಮುಖ್ಯ ಉದ್ದೇಶ ಇಳುವರಿ ಹೆಚ್ಚಿಸುವುದು, ಕೀಟ- ರೋಗ ಬಾಧೆ ಕಡಿಮೆ ಮಾಡುವುದು.

2002 ರಿಂದ ಈಚೆಗೆ ನಮ್ಮ ದೇಶದಲ್ಲಿ ಅನುಮೋದನೆ ಪಡೆದ ಏಕೈಕ ಕುಲಾಂತರಿಯೆಂದರೆ ಬಿಟಿ ಹತ್ತಿ. ಈ ಬೆಳೆ ನಮ್ಮಲ್ಲಿ ಬಂದು 10 ವರ್ಷವಾಯಿತು. ಈಗ 60 ಲಕ್ಷ ರೈತರು ಒಂದು ಕೋಟಿ ಹೆಕ್ಟೇರುಗಳಲ್ಲಿ ಇದನ್ನು ಬೆಳೆಯುತ್ತಿದ್ದಾರೆ. ಇದು ಈ ತಂತ್ರಜ್ಞಾನದಲ್ಲಿ ಅವರಿಗಿರುವ ನಂಬಿಕೆಗೆ ನಿದರ್ಶನ. ಜೈವಿಕ ತಂತ್ರಜ್ಞಾನ ಹೊಸ ಹೊಸ ಉಪಜಾತಿಗಳನ್ನು ಹೆಚ್ಚು ಬೇಗ ಮತ್ತು ಸಮರ್ಥವಾಗಿ ಉತ್ಪಾದಿಸುತ್ತದೆ.

ಜೊತೆಗೆ ಇದರಿಂದ ಸಸ್ಯಗಳಲ್ಲಿ ನಮಗೆ ಬೇಕಾದ ಗುಣಗಳನ್ನು ತುಂಬಲು ಸಾಧ್ಯವಾಗುತ್ತದೆ. ಆದರೆ ಈಗ ಅನುಸರಿಸುತ್ತಿರುವ ಸಾಂಪ್ರದಾಯಿಕ ತಂತ್ರಗಳಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ. ಜೈವಿಕ ತಂತ್ರಜ್ಞಾನದ ಬಗ್ಗೆ ಇರುವ ಎಷ್ಟೋ ಭಯಗಳು ವೈಜ್ಞಾನಿಕವಾಗಿ ನಿರಾಧಾರ ಎನ್ನಲು ಇಲ್ಲಿವೆ ಕೆಲವು ಕಾರಣ.

ಬಿಟಿ ಹತ್ತಿಯ ಯಶಸ್ಸು
ಬಿಟಿ ಹತ್ತಿ ನಮ್ಮ ದೇಶದ ಹತ್ತಿ ಬೆಳೆಯಲ್ಲಿ ಕ್ರಾಂತಿಯನ್ನೇ ಮಾಡಿದೆ. ಹೀಗಾಗಿಯೇ ವಿಶ್ವ ಮಟ್ಟದಲ್ಲಿ ಹತ್ತಿ ಉತ್ಪಾದನೆಯಲ್ಲಿ ನಾವೀಗ ಐದರಿಂದ ಎರಡನೆಯ ಸ್ಥಾನಕ್ಕೆ ಏರಿದ್ದೇವೆ. ಇದು ಮೊದಲ ಕುಲಾಂತರಿ ಬೆಳೆ ತಂತ್ರಜ್ಞಾನದ ಯಶಸ್ಸಿಗೆ ಸಾಕ್ಷಿ. ಇದರ ಜೊತೆಗೆ ಕ್ರಿಮಿನಾಶಕಗಳ ಬಳಕೆಯೂ ಗಣನೀಯವಾಗಿ ಕಡಿಮೆಯಾಗಿದೆ. ವಾತಾವರಣ ಕಲುಷಿತಗೊಳ್ಳುವುದು ಇಳಿಮುಖಗೊಂಡಿದೆ, ರೈತರಿಗೆ ಲಾಭಾಂಶ ಹೆಚ್ಚಿದೆ.

ರಾಷ್ಟ್ರೀಯ ಕೃಷಿ ಸಂಶೋಧನಾ ಯೋಜನೆಯಲ್ಲಿ ರೈತರು, ವಿಜ್ಞಾನಿಗಳ ಸಹಕಾರದೊಡನೆ ಸ್ಥಳೀಯ ಸಾಂಪ್ರದಾಯಿಕ ತಳಿಗಳನ್ನು ಬಳಸಿ ಅದರಲ್ಲಿಯೇ ನೂರಾರು ಹೊಸ ಉಪಜಾತಿಗಳನ್ನು ಮತ್ತು ಹೈಬ್ರಿಡ್ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಇವುಗಳಿಂದ ಇಳುವರಿ, ಗುಣಮಟ್ಟ ಹೆಚ್ಚಿದೆ.

ಹವಾಮಾನ ಬದಲಾವಣೆಯಿಂದ ನೀರು ಮತ್ತು ಬೇಸಾಯ ಯೋಗ್ಯ ಭೂಮಿ ಕಡಿಮೆಯಾಗುತ್ತದೆ, ಕಾಡುಗಳು ನಾಶವಾಗುತ್ತಿವೆ. ಇದಕ್ಕೆಲ್ಲ ಜೈವಿಕ ತಂತ್ರಜ್ಞಾನ ಬಳಕೆಯೇ ಪರಿಹಾರ. ಇದರಲ್ಲಿ ವಿವಿಧ ಸುಧಾರಣೆಗಳ ಮೂಲಕ ಉತ್ಪಾದಕತೆ ಹೆಚ್ಚಿಸಬಹುದು. ಇಂಥ ತಳಿಗಳು ಮತ್ತು ಹೈಬ್ರಿಡ್ ತಳಿಗಳು ಕಠಿಣ ಪರಿಸರಗಳನ್ನು ತಾಳಿಕೊಳ್ಳುವ ಶಕ್ತಿ ಹೊಂದಿವೆ.

ಜೈವಿಕ ತಂತ್ರಜ್ಞಾನದ ಉತ್ಪನ್ನಗಳ ಜೈವಿಕ ಸುರಕ್ಷತೆಯನ್ನು ನಿರ್ಣಯಿಸಲು ಭಾರತ ಸರ್ಕಾರ ಒಂದು ಶಾಸನಬದ್ಧ ನಿಯಂತ್ರಣ ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿ ಸುರಕ್ಷತೆಯ ಅಂಶವನ್ನು ನೋಡಿಕೊಳ್ಳಬೇಕು.
 

ಬೌದ್ಧಿಕ ಆಸ್ತಿ ಹಕ್ಕುಗಳು
ಸಸ್ಯ ಉಪಜಾತಿಗಳನ್ನು `ಸಸ್ಯ ಉಪಜಾತಿಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ~ (ಪಿಪಿವಿ ಮತ್ತು ಎ್ಆರ್‌ಎಎಐಐ) ಅಡಿಯಲ್ಲಿ ನೋಂದಾಯಿಸಬಹುದು.
ಕುಲಾಂತರಿ ಬೆಳೆ ಬಗ್ಗೆ ಅನೇಕರು ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಆದರೆ ಜೈವಿಕ ತಂತ್ರಜ್ಞಾನದಲ್ಲಿ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂಬುದನ್ನು ಅರಿಯಬೇಕು.

ಕುಲಾಂತರಿ ಬೆಳೆ, ಬೀಜದಲ್ಲಿ `ಹಂತಕ ವಂಶವಾಹಿ~ (ಟರ್ಮಿನೆಟರ್ ಜೀನ್) ಇದೆ, ಅದು ಮುಂದಿನ ಪೀಳಿಗೆಯ ಬೀಜಗಳ ಮೊಳಕೆಯೊಡೆಯುವ ಸಾಮರ್ಥ್ಯವನ್ನು ತಡೆದುಬಿಡುತ್ತದೆ, ಹಾಗಾಗಿ ರೈತರು ಪ್ರತಿ ಬಾರಿಯೂ ಹೊಸದಾಗಿ ಬೀಜಗಳನ್ನು ಕೊಳ್ಳಬೇಕಾಗುತ್ತದೆ ಎಂಬ ಭಯವಿದೆ. ಸಾರ್ವಜನಿಕ ಅಥವಾ ಖಾಸಗಿ ಕ್ಷೇತ್ರದವರ‌್ಯಾರೂ ಯಾವುದೇ ತಳಿವೃದ್ಧಿ ಕಾರ್ಯಕ್ರಮದಲ್ಲಿ ಹಂತಕ ವಂಶವಾಹಿ ಬಳಸುವುದಿಲ್ಲ.

ಮಣ್ಣು ಕಲುಷಿತವಾಗುತ್ತದೆ ಮತ್ತು ಫಲವಂತಿಕೆ ಕಡಿಮೆಯಾಗುತ್ತ ಹೋಗುತ್ತದೆ ಎಂಬುದು ಕೂಡ ಸರಿಯಲ್ಲ. ಏಕೆಂದರೆ ಅನೇಕ ರಾಷ್ಟ್ರಗಳಲ್ಲಿ ವಿಶಾಲ ಭೂಮಿಯಲ್ಲಿ ಕುಲಾಂತರಿ ಬೆಳೆ ಬೆಳೆಯುತ್ತಿದ್ದಾರೆ.

 ಬಿಟಿ ಹತ್ತಿ ಅಥವಾ ಬಿಟಿ ಬದನೆ ಉತ್ಪಾದಿಸುವ ಕ್ರೈ ಪ್ರೊಟೀನುಗಳು ಸಸ್ಯಗಳ ಉಳಿಕೆಗಳ ಜೊತೆ ಮಣ್ಣಿನಲ್ಲಿ ಬಿದ್ದು ಕ್ರಮೇಣ ಒಡೆದು ಹೋಗುತ್ತವೆ. ಆದ್ದರಿಂದ ಈ ಬೆಳೆಗಳು ವಾತಾವರಣಕ್ಕಾಗಲೀ, ಮಾನವನಿಗಾಗಲೀ ಮಾಡಬಹುದಾದ ಹಾನಿ ತೀರಾ ಅಲ್ಪ. ಕುಲಾಂತರಿ ಬೀಜಗಳನ್ನು ಕೇವಲ ಬಹುರಾಷ್ಟ್ರೀಯ ಸಂಸ್ಥೆಗಳು ಮಾತ್ರವೇ ಉತ್ಪಾದಿಸಿ ಮಾರಬಹುದು ಎಂಬುದೂ ಸರಿಯಲ್ಲ.

ಏಕೆಂದರೆ ಸಾರ್ವಜನಿಕ ಸಂಸ್ಥೆಗಳೂ ಕುಲಾಂತರಿಯ ಉಪಜಾತಿಗಳು, ಹೈಬ್ರಿಡ್‌ಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ. ರೈತರಿಗೆ ತರಬೇತಿ ಕೊಟ್ಟರೆ ಅವರೇ ಈ ಬೀಜಗಳನ್ನು ಉತ್ಪಾದಿಸಿ ಇತರ ರೈತರೊಂದಿಗೆ ಹಂಚಿಕೊಳ್ಳಬಹುದು. ಇದಕ್ಕೆ ಧಾರವಾಡ ಕೃಷಿ ವಿವಿಯ ಬಿಟಿ ಬದನೆ ಉಪಜಾತಿಗಳು ನಿದರ್ಶನ.

ರೈತರಿಗೆ ಲಾಭ
ಕುಲಾಂತರಿ ತಂತ್ರಜ್ಞಾನಕ್ಕೆ ಪ್ರೋತ್ಸಾಹ ಬೇಕಿದೆ. ಕುಂಟು ನೆಪ, ತಕರಾರಿನಿಂದ ಅವುಗಳ ಅಭಿವೃದ್ಧಿ ಮತ್ತು ಬಿಡುಗಡೆ ಮಾಡುವುದು ತಡವಾದಷ್ಟೂ ರೈತರಿಗೆ ವಿಜ್ಞಾನದ ಪ್ರಯೋಜನ ಸಿಗುವುದು ತಡವಾಗುತ್ತದೆ. ಜನಸಂಖ್ಯೆ ಹೆಚ್ಚಳ, ಭೂಮಿ ಮತ್ತು ನೀರಿನ ಮೂಲಗಳು ಕಡಿಮೆಯಾಗುತ್ತಿರುವುದು ಮತ್ತು ಆಹಾರದ ಬೆಲೆಗಳು ಏರುತ್ತಿರುವ ಈಗಿನ ಸನ್ನಿವೇಶದಲ್ಲಿ ಭಾರತಕ್ಕೆ ಅತ್ಯಾಧುನಿಕ ಬೆಳೆ ತಂತ್ರಜ್ಞಾನದ ಅಗತ್ಯವಿದೆ.

ಇದರಿಂದ ಕೃಷಿ ಉತ್ಪನ್ನ ಹೆಚ್ಚಿಸಿ ಒಟ್ಟಾರೆ ಆಹಾರದ ಸುರಕ್ಷತೆಯನ್ನು ಸಾಧಿಸಬಹುದು. ಭಾರತದಲ್ಲಿ ಕುಲಾಂತರಿ ತಳಿ ಬಳಕೆ ಹತ್ತಿ ಬೆಳೆಯಲ್ಲಿ ಗಣನೀಯವಾಗಿವೆ. ಆದರೆ ಮುಖ್ಯವಾದ ಏಕದಳ ಧಾನ್ಯಗಳ ವಿಷಯದಲ್ಲಿ ಅಷ್ಟೇನೂ ಪ್ರಗತಿಯಾಗಿಲ್ಲ. ಇದನ್ನು ಗಮನಿಸಬೇಕು.

ಜೈವಿಕ ತಂತ್ರಜ್ಞಾನ ಸಂಶೋಧನೆ ಮಾನವನ ಒಳಿತಿಗಾಗಿ ಆಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ರೈತರ ಏಳಿಗೆಗೆ ಅದನ್ನು ಸಜ್ಜುಗೊಳಿಸಬೇಕು. ಈ ತಂತ್ರಜ್ಞಾನದಲ್ಲಿ ಸಣ್ಣಪುಟ್ಟ ದೋಷಗಳು ಇರಬಹುದಾದರೂ ಅದಕ್ಕಿಂತ ಲಾಭವೇ ಹೆಚ್ಚು. ಈ ಅವಕಾಶವನ್ನು ಬಳಸಿಕೊಳ್ಳಬೇಕು.

(ಲೇಖಕರು ಧಾರವಾಡ ಕೃಷಿ ವಿವಿ ವಿಶ್ರಾಂತ ಕುಲಪತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT