ADVERTISEMENT

ಕೂರಿಗೆ ಬಳಕೆ ಖರ್ಚು ಉಳಿಕೆ

ಸುರೇಶ.ಎನ್.ಧಾರವಾಡಕರ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ಕೃಷ್ಣಾ ಹಾಗೂ ತುಂಗಭದ್ರಾ ನದಿಗಳು ರಾಯಚೂರು ಜಿಲ್ಲೆಯ ಜೀವನಾಡಿ. ಈ ನದಿಗಳ ನೀರನ್ನು ಬಳಸಿ ರೈತರು ವರ್ಷದಲ್ಲಿ ಎರಡು ಭತ್ತದ ಬೆಳೆ ಬೆಳೆಯುತ್ತಾರೆ. ಆದರೆ, ಈ ವರ್ಷ ಎರಡನೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ. ಜಲಾಶಯದಲ್ಲಿ ನೀರಿಲ್ಲ.

ಮಲೆನಾಡು ಮತ್ತು ನೀರಾವರಿ ಪ್ರದೇಶಗಳಲ್ಲಿ ಭತ್ತದ ನಾಟಿ ಜತೆಗೆ ಬಿತ್ತುವುದೂ ಹೆಚ್ಚು ಪ್ರಚಲಿತದಲ್ಲಿದೆ. ಆದರೆ ರಾಯಚೂರು ಜಿಲ್ಲೆಯ ರೈತರು ನೀರು ಇಲ್ಲದೆ ಭತ್ತ ಬೆಳೆಯುವುದೇ ಇಲ್ಲ.

ಅವರ ಈ ಸಂದಿಗ್ಧ ಅರಿತ ರಾಯಚೂರು ಕೃಷಿ ವಿವಿ ಉಸ್ತುವಾರಿ ಕುಲಪತಿಗಳಾದ ಎಸ್.ಜಿ. ಪಾಟೀಲ ಅವರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಹಕಾರದೊಂದಿಗೆ ಮಾನ್ವಿ ತಾಲೂಕಿನ ಶಿರವಾರ ಗ್ರಾಮದ ಶರಣಪ್ಪ ಖಾನಾಪುರ ಇವರ ಹೊಲದಲ್ಲಿ `ಶೂನ್ಯ ಬೇಸಾಯ ಕೂರಿಗೆ~ಯಲ್ಲಿ ಬಿತ್ತುವ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದರು. ಇದನ್ನು ನೋಡಲು ಆಸಕ್ತ ರೈತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.

ಅಲ್ಲಿ ತಜ್ಞರು ಹೇಳಿದ್ದಿಷ್ಟು: ತುಂಗಭದ್ರಾ ನದಿ ಪಾತ್ರದಲ್ಲಿ ಸುಮಾರು 25 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿದೆ. ಇದಕ್ಕಾಗಿ ಭೂಮಿಯಲ್ಲಿ 15 ರಿಂದ 20 ಸೆಂ.ಮೀ ಆಳದವರೆಗೆ ಉಳುಮೆ ಮಾಡಲಾಗುತ್ತದೆ. ಈ ರೀತಿ ಉಳುಮೆಗೆ ಹೊಲವನ್ನು ಹದ (ಪಡ್ಲಿಂಗ್) ಮಾಡಲು ಹೆಚ್ಚು ಹಣ ಖರ್ಚಾಗುತ್ತದೆ.

ಹೆಚ್ಚು ನೀರು ನಿಲ್ಲಿಸುವುದರಿಂದ ಮಣ್ಣಿನ ಸವಕಳಿ ಉಂಟಾಗುತ್ತದೆ. ರಸಗೊಬ್ಬರ, ಕೀಟನಾಶಕ ಬಳಕೆ ಹೆಚ್ಚಾಗುತ್ತದೆ.ಸಾಮಾನ್ಯವಾಗಿ ರೈತರು ಗದ್ದೆಯಲ್ಲಿ ಹೆಚ್ಚು ನೀರು ನಿಲ್ಲಿಸಿ ಕೆಸರನ್ನು ಹದ ಮಾಡಿ ಭತ್ತದ ಸಸಿ ನಾಟಿ ಮಾಡುತ್ತಾರೆ. ಸದಾ ನೀರು ನಿಲ್ಲಿಸುವುದರಿಂದ ಜೌಗು ಸಮಸ್ಯೆ ಹೆಚ್ಚುತ್ತಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.

ಆದ ಕಾರಣ ನಾಟಿ ಪದ್ಧತಿ ಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಬೇಸಾಯ ಕ್ರಮದಲ್ಲಿ ಬದಲಾವಣೆಯ ಅನಿವಾರ್ಯತೆ ಇದೆ. ಮೊದಲ ಹಂತವಾಗಿ ನೀರನ್ನು ಉಳಿಸುವತ್ತ ಹೆಜ್ಜೆ ಇಡಬೇಕಾಗಿದೆ. ಅದಕ್ಕಾಗಿ ಭತ್ತವನ್ನು ನಾಟಿ ಮಾಡುವ ಬದಲಾಗಿ ಬಿತ್ತುವುದಕ್ಕೆ ಆದ್ಯತೆ ಕೊಡಬೇಕಾಗಿದೆ.

ಇದೇ ಸಂದರ್ಭದಲ್ಲಿ ಟ್ರಾಕ್ಟರ್‌ಗೆ `ಶೂನ್ಯ ಬೇಸಾಯ ಕೂರಿಗೆ~ ಜೋಡಿಸಿ ಬಿತ್ತನೆ ಮಾಡುವ ವಿಧಾನ ತೋರಿಸಲಾಯಿತು. ಇದರಲ್ಲಿ ಬಿತ್ತನೆಗೆ ಮೊದಲು ಹೊಲವನ್ನು ಹದ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಹೊಲದಲ್ಲಿ ಕಸ-ಕಡ್ಡಿ, ಹುಲ್ಲು ಇರುವಾಗಲೇ ಬಿತ್ತನೆ ಮಾಡಬಹುದು.

ಹೊಲ ತೇವಾಂಶದಿಂದ ಕೂಡಿದ್ದರೂ ಬಿತ್ತನೆ ಮಾಡಿ ಒಂದು ವಾರದೊಳಗೆ ತೆಳುವಾಗಿ ನೀರು ಹಾಯಿಸಿದರೆ ಸಾಕು ಅಥವಾ ಮಳೆ ಬರುವ ಮುನ್ಸೂಚನೆ ಇರುವಾಗಲೇ ಒಣ ಭೂಮಿಯಲ್ಲೆ ಬಿತ್ತನೆ ಮಾಡಬಹುದು. ಬಿತ್ತನೆ ಮಾಡಿದ 15 ದಿನದೊಳಗೆ ಮಳೆ ಬರದೇ ಇದ್ದರೆ ತೆಳುವಾಗಿ ನೀರು ಹಾಯಿಸಬೇಕು.

ಹೀಗೆ ಬಿತ್ತನೆ ಮಾಡುವುದರಿಂದ
* ಶೇ 30ರಿಂದ 47ರಷ್ಟು ನೀರಿನ ಉಳಿತಾಯ ಆಗುತ್ತದೆ.
* ಉಳುಮೆ ಖರ್ಚು ಕಡಿಮೆ ಆಗುತ್ತದೆ.
* ಕಲುಷಿತ ವಾತಾವರಣ ಕಡಿಮೆ ಆಗುತ್ತದೆ.
* ಮಣ್ಣಿನ ಸವಕಳಿ ಕಡಿಮೆ ಆಗುತ್ತದೆ.
* ಬಿತ್ತನೆ ಸಮಯದಲ್ಲಿ ಕಸ-ಕಡ್ಡಿ, ಹುಲ್ಲು ಮಣ್ಣೊಳಗೆ ಸೇರುವುದರಿಂದ ಮಣ್ಣಿನ ಫಲವತ್ತತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ಸಮಯದ ಉಳಿತಾಯ ಆಗುತ್ತದೆ.
* ಮಣ್ಣಿನ ಸಾಂದ್ರತೆ/ ಕ್ಷಾರ ಹೆಚ್ಚುತ್ತದೆ.
* ಮಣ್ಣಿನಲ್ಲಿ ಲವಣ ಶಕ್ತಿ ಹಾಗೆ ಉಳಿಯುತ್ತದೆ.
* ರೋಗ ನಿಯಂತ್ರಣ ಶಕ್ತಿ ಬರುವುದರಿಂದ ಕಡಿಮೆ ಪ್ರಮಾಣದ ರಸಗೊಬ್ಬರ, ಕೀಟನಾಶಕ ಬಳಕೆ.
* ನಾಟಿಯಲ್ಲಿ ಒಂದು ಎಕರೆಗೆ 20 ರಿಂದ 25 ಕಿಲೊ ಬೀಜ ಬೇಕು. ಆದರೆ ಕೂರಿಗೆಯಲ್ಲಿ ಬಿತ್ತನೆಗೆ 8 ರಿಂದ 10 ಕಿಲೊ ಸಾಕು.
* ಆಳಿನ ಖರ್ಚು ಉಳಿತಾಯ.
* ಇಳುವರಿ ಹೆಚ್ಚುತ್ತದೆ.
ಕೂರಿಗೆ ಬಿತ್ತನೆಯ ಲಾಭಗಳನ್ನು ಪಟ್ಟಿ ಮಾಡಿ ಹೇಳುವ ಸಮಯದ್ಲ್ಲಲೇ ರೈತರೊಬ್ಬರಿಂದ ಪ್ರಶ್ನೆ ತೂರಿ ಬಂತು; `ಸಾಹೇಬರಿಗೆ ಏನ್ ಗೊತ್ತಾಗ್ತದರೀ? ಪುಸ್ತಕದಾಗ ಓದ್ಯಾರ; ಬಂದು ಹೇಳತಾರ್, ಬಿತ್ತಗಿ ಮಾಡಿದ ಅನುಭವ ಇರೋ ರೈತನಿಂದ ಹೇಳಸರೀ~.

ತಕ್ಷಣವೇ ರೈತ ಸಿದ್ಧರಾಮಯ್ಯಸ್ವಾಮಿ ಎದ್ದು ನಿಂತು ಹೇಳಿದರು. `ನಾನು ಮೊದಲ್ ಇದನ್ನ ನಂಬಿರಲಿಲ್ಲಾ, ಯಾತಕ್ಕೂ ಇರ್ಲಿ ಅಂತಾ 1 ಎಕರೆ ಬಿತ್ತಿದೆ. ಬಿತ್ತಗಿ ಮತ್ತ ಆಳಿನ ಖರ್ಚು ಕಡಿಮಿ ಆತು. ಮುಂಚೆ ಸರಾಸರಿ ಎಕರೆಕ 35 ಚೀಲ ಭತ್ತ ಬರ್ತಿತ್ತು. ಕೂರಿಗೆ ಬಿತ್ತನೆ ನಂತ್ರ 48 ಚೀಲ ಇಳುವರಿ ಬಂದೇತಿ ನೋಡ್ರಪಾ~ ಎಂದು ಹೇಳಿದಾಗ ರೈತರ ಅನುಮಾನ ದೂರವಾಗಿತ್ತು.
ಮಾಹಿತಿಗೆ ಪಾಟೀಲರ ಸಂಪರ್ಕ ಸಂಖ್ಯೆ 94806 96301.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.