ADVERTISEMENT

ಕೃಷಿ ಮಂಥನ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2010, 8:15 IST
Last Updated 23 ಡಿಸೆಂಬರ್ 2010, 8:15 IST

ಪ್ರಶ್ನೆ: ಸೂರ್ಯಕಾಂತಿಯನ್ನು ಯಾವ ಕಾಲದಲ್ಲಾದರೂ ಬಿತ್ತಬಹುದು ಎನ್ನುತ್ತಾರೆ. ನಮಗೆ ನೀರಿನ ಸೌಲಭ್ಯವಿದೆ. ಈಗ ಬಿತ್ತಬಹುದೆ?
ಗಂಗಾಧರಸ್ವಾಮಿ ಮಾನ್ವಿ , ರಾಯಚೂರು ಜಿಲ್ಲೆ

ಉತ್ತರ:  ಯಾವುದೇ ಬೆಳೆಯನ್ನು  ಯಾವಾಗಲಾದರೂ ಬಿತ್ತನೆ ಮಾಡಬಹುದೆಂದರೆ ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಬಿತ್ತಬಹುದೆಂದು ಅರ್ಥ. ಸೂರ್ಯಕಾಂತಿಯನ್ನು ಈಗ ಬಿತ್ತನೆ ಮಾಡಬಹುದು.  ಸೂರ್ಯಕಾಂತಿಗೆ ವಾತಾವರಣದಲ್ಲಾಗುವ ಬದಲಾವಣೆಗೆ ಹೊಂದಿಕೊಂಡು ಬೆಳೆಯುವ ಶಕ್ತಿ ಇದೆ. ಒಣ ಹವಾಗುಣ ತಡೆದುಕೊಂಡು ಬೆಳೆಯುವುದರಿಂದ ಸಾಧಾರಣ ಫಲವತ್ತಾದ ಮಣ್ಣಿನಲ್ಲೂ ಬೆಳೆಯಬಹುದು. ಈಗ ಅಂದರೆ ಡಿಸೆಂಬರ್ ಮತ್ತು ಜನವರಿಯಲ್ಲಿ ಬಿತ್ತಲು ಸರಿಯಾದ ಕಾಲ. ಮಾರ್ಡೇನ್, ಕೆಬಿಎಸ್‌ಎಚ್-1, ಕೆಬಿಎಸ್‌ಎಚ್-44, ಕೆಬಿಎಸ್‌ಎಚ್-53, ಡಿಎಸ್‌ಎಚ್-1 ತಳಿಗಳು ಬಿತ್ತನೆಗೆ ಸೂಕ್ತ. ಇವಲ್ಲದೆ ಖಾಸಗಿ ಕಂಪನಿಗಳ ಹಲವು ತಳಿಗಳಿವೆ. ಮಾರ್ಡೇನ್ ತಳಿ ಸುಮಾರು 85 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದರಲ್ಲಿ ಎಣ್ಣೆ ಅಂಶ ಹೆಚ್ಚಾಗಿದೆ.

ಕೆಬಿಎಸ್‌ಎಚ್-1 ತಳಿ ನೂರು ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಇದರಲ್ಲಿ ಮಾರ್ಡೇನ್ ತಳಿಗಿಂತ ಹೆಚ್ಚು ಎಣ್ಣೆ ಅಂಶವಿದೆ. ಡಿಎಸ್‌ಎಚ್-1 ತಳಿಗೆ ಕೇದಿಗೆ ರೋಗ ನಿರೋಧಕ ಶಕ್ತಿ ಇದೆ. ಇವುಗಳಲ್ಲಿ ನಿಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಯನ್ನು ನೀವು ಆಯ್ಕೆ ಮಾಡಿಕೊಳ್ಳಿ. ಹೆಕ್ಟೇರ್‌ಗೆ 60 ಕಿಲೋ ಗ್ರಾಂ ಸಾರಜನಕ, 75 ಕಿಲೋ ಗ್ರಾಂ ರಂಜಕ, 60 ಕಿಲೋ ಗ್ರಾಂ ಪೊಟ್ಯಾಷ್ ಮತ್ತು 100 ಕಿಲೋ ಗ್ರಾಂ ಜಿಪ್ಸಂ ಬೇಕಾಗುತ್ತದೆ. ಚೆನ್ನಾಗಿ ಉಳುಮೆ ಮಾಡಿ,  ಸಾಲಿನಿಂದ ಸಾಲಿಗೆ 60 ಸೆಂ.ಮೀಟರ್, ಬಿತ್ತನೆಯಿಂದ ಬಿತ್ತನೆಗೆ 7 ಸೆಂ.ಮೀ ಅಂತರದಲ್ಲಿ ಬಿತ್ತನೆ ಮಾಡಬೇಕು.

ಹದ ನೋಡಿ ನೀರು ಹಾಯಿಸಿ. ಕಳೆ ತೆಗೆದು ಒಂದು ತಿಂಗಳೊಳಗೆ ಬುಡಕ್ಕೆ ಮಣ್ಣು ಹಾಕಿ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಸಸ್ಯ ಸಂರಕ್ಷಣಾ ಕ್ರಮಗಳಿಗೆ ರಿಯಾಯಿತಿ ಸಿಗುತ್ತದೆ. ಕುತ್ತಿಗೆ ಕೊಳೆ ರೋಗ ಇರುವ  ಕಡೆಗಳಲ್ಲಿ ಬೆಳೆ ಪರಿವರ್ತನೆ ಮಾಡಿ. ಬಿತ್ತನೆ ಮುಂಚೆ ಪ್ರತಿ ಕೇಜಿ ಬೀಜಕ್ಕೆ ಐದು ಗ್ರಾಂ ಇಮಿಪಿಕೊಡ್ಲ್‌ನಿಂದ  ಉಪಚಾರ ಮಾಡಿ ಬಿತ್ತನೆ ಮಾಡಿ.

ಪ್ರಶ್ನೆ: ಡೈಕೋಡರ್ಮಾ ಎನ್ನುವುದು ರಾಸಾಯನಿಕ ಔಷಧಿಯೇ ಅಥವಾ ಜೈವಿಕ ಔಷಧಿಯೇ? ಇದರ  ಉಪಯೋಗವೇನು?
ಕೆಂಚೇಗೌಡ
- ಬಾಗೂರು, ಚನ್ನರಾಯಪಟ್ಟಣ ತಾಲ್ಲೂಕು

ಉತ್ತರ: ಟೈಕೋಡರ್ಮಾ ಎಂಬುದು ಜೀವಾಣು ಗೊಬ್ಬರ. ಟೈಕೋಡರ್ಮಾ ಮಣ್ಣಿನಲ್ಲಿ ಇರುವ ಶಿಲೀಂದ್ರ. ಇದು ಎಲ್ಲಾ ಹವಾಮಾನದಲ್ಲೂ ಇರುತ್ತದೆ. ಇದು ರಾಸಾಯನಿಕ ವಸ್ತುವಲ್ಲ. ರಾಸಾಯನಿಕ ಗೊಬ್ಬರಕ್ಕಿಂತ ತೀರ ಭಿನ್ನವಾದ ಪ್ರಕೃತಿಯಲ್ಲಿ ಸಿಗುವ ಗೊಬ್ಬರ. ಇದನ್ನು ಬಿತ್ತನೆ ಮಾಡುವ ಮಾಡುವ ಒಂದು ತಿಂಗಳ ಮೊದಲು ಮಣ್ಣಿಗೆ ಸೇರಿಸಿದರೆ ಈ ಟೈಕೋಡರ್ಮಾ ವಸ್ತುವು ಶಿಲೀಂದ್ರಗಳ ಮೇಲೆ ಬೆಳವಣಿಗೆ ಹೊಂದಿ, ಬೆಳೆಗಳಿಗೆ ರೋಗ ತರುವ ಶಿಲೀಂದ್ರಗಳನ್ನು ನಾಶಪಡಿಸುತ್ತವೆ. ಇದನ್ನು ಎಲ್ಲಾ ಬಗೆಯ ತೋಟಗಾರಿಕೆ ಬೆಳೆಗಳಿಗೆ ಮತ್ತು ಹೂವಿನ ಗಿಡಗಳಿಗೆ ಬಳಸಬಹುದು. ಎಲ್ಲಾ ಬಗೆಯ ಧಾನ್ಯಗಳಿಗೆ ಬರುವ ಶಿಲೀಂದ್ರ ರೋಗಗಳನ್ನು ತಡೆಗಟ್ಟುತ್ತದೆ. ಟೊಮಟೊ, ಪರಂಗಿ ಹಣ್ಣು, ಆಲೂಗಡ್ಡೆ, ಹಸಿರು ಮೆಣಸಿನಕಾಯಿ, ಜೋಳ, ಶುಂಠಿ, ಭತ್ತ, ರಾಗಿ, ಏಲಕ್ಕಿ, ಕಾಳು ಮೆಣಸು ಮುಂತಾದ ತರಕಾರಿ ಬೆಳೆಗಳಿಗೆ ಉಪಯೋಗಿಸಬಹುದು. ಹಿಪ್ಪುನೆರಳೆ ಬೆಳೆಗೂ ಬಳಸಬಹುದು.
ಟೈಕೋಡರ್ಮಾ ಜೀವಾಣು ಗೊಬ್ಬರವನ್ನು ರಾಸಾಯನಿಕ ಗೊಬ್ಬರದೊಡನೆ ಬೆರೆಸಬಾರದು. ವರ್ಷಕ್ಕೊಮ್ಮೆ  ಸಾವಯವ ಗೊಬ್ಬರ ಬಳಸುವಾಗ ಅವುಗಳಲ್ಲಿ ಬೆರೆಸಿ ಬಳಸುವುದು ಒಳ್ಳೆಯ ಕ್ರಮ. ಅಥವಾ ಮುಂಗಾರು ಮತ್ತು ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡುವ ಸಮಯದಲ್ಲಿ ಬಳಸಬಹುದು.

ಪ್ರಶ್ನೆ: ಕೃಷಿಗೆ ಬಳಸುವ ನೀರನ್ನು ಪರೀಕ್ಷೆ ಮಾಡಿಸಲೇಬೇಕೆ?
ಜವರಪ್ಪ, ಕೊಳ್ಳೆಗಾಲ, ಚಾಮರಾಜನಗರ ಜಿಲ್ಲೆ
ಉತ್ತರ: ಸಾಮಾನ್ಯವಾಗಿ ನೀರಿನಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೀಸಿಯಂ, ಸೋಡಿಯಂ, ಪೊಟ್ಯಾಷಿಯಂ, ಇವುಗಳ ಕಾರ್ಬೋನೆಟ್, ಬೈಕಾರ್ಬೋನೆಟ್, ಕ್ಲೋರೈಡ್, ಸಲ್ಫೇಟ್‌ಗಳು ಇರುತ್ತವೆ. ಇವುಗಳು ನೀರಿನಲ್ಲಿ ಕರಗಿರುತ್ತವೆ. ಈ ನೀರು ಮಣ್ಣಿಗೆ ಸೇರಿ ಅದರ ಗುಣಧರ್ಮಗಳನ್ನು ಹಾಳು ಮಾಡುತ್ತವೆ. ಇವುಗಳಲ್ಲದೆ ಬೊರಾನ್ ಅಧಿಕವಾಗಿದ್ದರೂ ಬೆಳೆಗಳ ಬೆಳವಣಿಗೆಗೆ ತೊಂದರೆ ಆಗುತ್ತದೆ. ಇಂತಹ ಸಂದರ್ಭದಲ್ಲಿ ನೀರಿನ ವಿಶ್ಲೇಷಣೆಯಿಂದ ವೈಜ್ಞಾನಿಕ ಮಾಹಿತಿಗಳು ದೊರೆಯುತ್ತವೆ. ಅದಕ್ಕಾಗಿ ನೀರನ್ನು ಪರೀಕ್ಷೆ ಮಾಡಿಸಬೇಕು.

ರೈತರು ನೀರಾವರಿಗೆ ಬಳಸುವ ನೀರಿನ ಮಾದರಿಯನ್ನು ಕನಿಷ್ಠ ಒಂದು ಲೀಟರ್‌ನಷ್ಟು ಪರೀಕ್ಷಾ ಕೇಂದ್ರಕ್ಕೆ ಕಳುಹಿಸಬೇಕು. ನೀರನ್ನು ಸಂಗ್ರಹಿಸುವಾಗ ನೀರಿನ ಪಂಪನ್ನು ಒಂದು ಗಂಟೆ ಚಾಲನೆ ಮಾಡಿ, ಅನಂತರ ಬಂದ ನೀರನ್ನು ಸಂಗ್ರಹಿಸಿ. ಕೊಳ ಅಥವಾ ನದಿಯ ನೀರಾದರೆ ಹರಿಯುವ ನೀರನ್ನು ಸಂಗ್ರಹಿಸಿ ಕಳುಹಿಸಬೇಕು. ನೀರನ್ನು  ಸಂಗ್ರಹಿಸಿದ ತಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಇಲ್ಲವಾದರೆ ರಾಸಾಯನಿಕ ಮತ್ತು ಜೈವಿಕ ಬದಲಾವಣೆ ಆಗುವ ಸಾಧ್ಯತೆಗಳಿರುತ್ತವೆ. ನೀರು ನೀರಾವರಿಗೆ ಯೋಗ್ಯವಿಲ್ಲದಿದ್ದಲ್ಲಿ ಆ ಪರೀಕ್ಷಾ ಫಲಿತಾಂಶದಲ್ಲಿ ತಜ್ಷರು ಸಲಹೆ ಮಾಡಿದಂತೆ ಮಣ್ಣಿಗೆ ಉಪಚಾರ ಮಾಡಬೇಕು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಣ್ಣು ಪರೀಕ್ಷಾ ಕೇಂದ್ರಗಳಿವೆ. ಅಲ್ಲಿ ನೀರನ್ನೂ ಪರೀಕ್ಷೆ ಮಾಡುವ ವ್ಯವಸ್ಥೆ ಇದೆ.  ಪರೀಕ್ಷೆಯಿಂದ ನೀರಿನಲ್ಲಿ ಕರಗದ ಲವಣಗಳು, ಸೋಡಿಯಂ ಹಾಗೂ ಇತರ ಅಂಶಗಳು ಬೊರಾನ್ ಪ್ರಬಲತೆ, ಬೈಕಾರ್ಬೋನೆಟ್, ಕ್ಯಾಲ್ಸಿಯಂ ಮತ್ತು ಮ್ಯಾಗ್ನಿಯಂಗಳ ಪ್ರಬಲತೆಯನ್ನು ಪರೀಕ್ಷೆಗೆ ಒಳಪಡಿಸಿ ಪರಿಹಾರ ಸೂಚಿಸುತ್ತಾರೆ. ಏನೇ ಆದರೂ ನೀರಾವರಿ ನೀರನ್ನು ಪರೀಕ್ಷೆ ಮಾಡಿದ ನಂತರ ಬಳಸುವುದು ಒಳ್ಳೆಯ ಕ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT