ADVERTISEMENT

ಚೆಂಡು ಹೂವಿಗೆ ಮನಸೋತ ರೈತರು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2011, 19:30 IST
Last Updated 7 ಸೆಪ್ಟೆಂಬರ್ 2011, 19:30 IST
ಚೆಂಡು ಹೂವಿಗೆ ಮನಸೋತ ರೈತರು
ಚೆಂಡು ಹೂವಿಗೆ ಮನಸೋತ ರೈತರು   

ಆಹಾರ ಧಾನ್ಯಗಳ ಬೆಳೆಗಳನ್ನು ಬೆಳೆಯುತ್ತಿದ್ದ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ರೈತರು ಈಗ ಹೆಚ್ಚು ಲಾಭ ತಂದು ಕೊಡುವ ಚೆಂಡು ಹೂಗಳಿಗೆ ಮನಸೋತಿದ್ದಾರೆ. ತಾಲ್ಲೂಕಿನಲ್ಲಿ ಈ ವರ್ಷ ಚೆಂಡು ಹೂ ಬೆಳೆಯುವ ಪ್ರದೇಶ ಹೆಚ್ಚಾಗಿದೆ.

ತಾಲ್ಲೂಕಿನಲ್ಲಿ ಈಗ 450 ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆ ಇದೆ. ಬಣ್ಣದ ತಯಾರಿಕೆಯಲ್ಲಿ ಚೆಂಡು ಹೂ ಕಚ್ಚಾ ಸಾಮಗ್ರಿ. ಬಣ್ಣ ತಯಾರಿಸುವ ಕಂಪೆನಿಗಳು ಹೂ ಬೆಳೆಯಲು ರೈತರಿಗೆ ಉತ್ತೇಜನ ನೀಡುತ್ತಿವೆ.

ದಾವಣಗೆರೆ ಜಿಲ್ಲೆಗೆ ಸೀಮಿತವಾಗಿದ್ದ ಕಟ್ರಾಫೆ ಟೋಕೆಮ್ ಹಾಗೂ ಎ.ವಿ.ಥಾಮಸ್ ನ್ಯಾಚುರಲ್ ಪ್ರಾಡೆಕ್ಟ್ ಹೆಸರಿನ ಕಂಪೆನಿಗಳು ತಾಲ್ಲೂಕಿನ ಹತ್ತಾರು ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಚೆಂಡು ಹೂ ಬೇಸಾಯಕ್ಕೆ ಉತ್ತೇಜನ ನೀಡುತ್ತಿವೆ.

ಚೆಂಡು ಹೂ 120 ದಿನಗಳ ಬೆಳೆ. ರೈತರು ಕಂಪೆನಿಗಳು ನೀಡುವ ಚೆಂಡು ಹೂವಿನ ಬಿತ್ತನೆ ಬೀಜಗಳನ್ನು ಮಡಿಗಳಲ್ಲಿ ಬೆಳೆಸಿಕೊಂಡು 15ರಿಂದ 18 ದಿನಗಳ ಸಸಿಗಳನ್ನು ನಾಟಿ ಮಾಡುತ್ತಾರೆ. ನಾಟಿ ಮಾಡಿದ 55-60 ದಿನಕ್ಕೆ ಹೂಗಳು ಮೊದಲ ಕೊಯ್ಲಿಗೆ ಬರುತ್ತವೆ. ಚೆನ್ನಾಗಿ ಅರಳಿದ ಹೂಗಳನ್ನು ಎಂಟು ದಿನಕ್ಕೂಮ್ಮೆ ಕೊಯ್ಲು ಮಾಡುತ್ತಾರೆ.
ಎಂಟು ವಾರಗಳ ಕಾಲ ಹೂಗಳನ್ನು ಹಂತ ಹಂತವಾಗಿ ಕೊಯ್ಲು ಮಾಡಬಹುದು. ಎರಡನೇ ಕಟಾವಿನಿಂದ 7ನೇ ಕಟಾವಿನವರಿಗೆ ಉತ್ತಮ ಇಳುವರಿ ಸಿಗುತ್ತದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ, ರಾಮೇಶ್ವರಬಂಡಿ, ಬಾಚಿಗೊಂಡನಹಳ್ಳಿ, ಅಂಕಸಮುದ್ರ, ಕಿತ್ನೂರು, ಮುತ್ಕೂರು ಸೇರಿದಂತೆ ಹಲವಾರು ಹಳ್ಳಿಗಳ ಹೊಲಗಳಲ್ಲಿ ಈಗ ಮಾರಿಗೋಲ್ಡ್ ತಳಿಯ ಕೇಸರಿ ಬಣ್ಣದ ಚೆಂಡು ಹೂಗಳು ನಳನಳಿಸುತ್ತಿವೆ.

ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಬಣಕಾರ ಕೊಟ್ರೇಶ್ ಅವರು ನಾಲ್ಕು  ಎಕರೆಯಲ್ಲಿ ಚೆಂಡು ಹೂವು ಬೆಳೆದಿದ್ದಾರೆ. ನಾಲ್ಕನೇ ಕೊಯ್ಲಿನಲ್ಲಿ ಅವರಿಗೆ 26 ಟನ್ ಹೂ ಇಳುವರಿ ಸಿಕ್ಕಿದೆ. ಬಿತ್ತನೆಯಿಂದ ಹಿಡಿದು ಕೊಯ್ಲಿನವರೆಗೆ ಕಂಪೆನಿಯ ತಜ್ಞರ ಸೂಚನೆಗಳನ್ನು ಅನುಸರಿಸಿ ಗೊಬ್ಬರ, ಕೀಟನಾಶಕ ಸಿಂಪಡಿಸಿದ್ದೇವೆ. ಉತ್ತಮ ಇಳುವರಿ ಬಂದಿದೆ. ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಕೊಟ್ರೇಶ್.

ಕರ್ನಾಟಕದಲ್ಲಿ ಮೂರು ಕಂಪೆನಿಗಳು ಚೆಂಡು ಹೂ ಬೇಸಾಯಕ್ಕೆ ಉತ್ತೇಜನ ಕೊಡುತ್ತಿವೆ. ಮೈಸೂರು, ಮಂಡ್ಯ, ಚಾಮರಾಜನಗರ, ಕೋಲಾರ, ಬಳ್ಳಾರಿ, ದಾವಣಗೆರೆ ಜಿಲ್ಲೆಗಳಲ್ಲಿ ಸುಮಾರು 18.5 ಸಾವಿರ ಎಕರೆ ಪ್ರದೇಶದಲ್ಲಿ ಚೆಂಡು ಹೂ ಬೆಳೆಯಲು ಈ ಕಂಪೆನಿಗಳು ರೈತರಿಗೆ ಸಹಕಾರ ನೀಡಿವೆ. ರಾಜ್ಯದ  ನಾಲ್ಕು ವಲಯಗಳಲ್ಲಿ 22 ರೈತ ಸೇವಾ ಕೇಂದ್ರಗಳನ್ನು ತೆರೆದಿವೆ ಎಂದು ಕಂಪೆನಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಬೆಳೆಯುವುದಷ್ಟೇ ರೈತರ ಕೆಲಸ. ಕೊಯ್ಲು ಮಾಡಿದ ಹೂಗಳನ್ನು ಕಂಪೆನಿಗಳ ಪ್ರತಿನಿಧಿಗಳು ನೇರವಾಗಿ ಹೊಲಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಸಾಗಾಣಿಕೆ ವೆಚ್ಚವನ್ನೂ ಕಂಪೆನಿಗಳೇ ಭರಿಸುತ್ತವೆ. ವಾರಕ್ಕೊಮ್ಮೆ ರೈತರ ಮನೆ ಬಾಗಿಲಿಗೆ ಹಣ ತಲುಪಿಸುತ್ತಾರೆ.

ಒಂದು ಎಕರೆಯಲ್ಲಿ ಚೆಂಡು ಹೂ ಬೆಳೆಯಲು 15ರಿಂದ 20 ಸಾವಿರ ರೂ ಖರ್ಚಾಗುತ್ತದೆ. ಎಕರೆಗೆ ಕನಿಷ್ಟ 12 ಟನ್ ಹೂ ಸಿಗುತ್ತದೆ. ಟನ್ ಒಂದಕ್ಕೆ 4500 ರೂ ಬೆಲೆ ನಿಗದಿ ಪಡಿಸಿದ್ದಾರೆ.12 ಟನ್ ಹೂ ಬೆಳೆದರೆ 54000 ರೂ ಹಣ ಸಿಗುತ್ತದೆ. ಬೆಳೆದ ರೈತನಿಗೆ ಕನಿಷ್ಠ 30ರಿಂದ 35 ಸಾವಿರ ರೂ ಲಾಭ ಸಿಗುತ್ತದೆ.

ಈ ಚೆಂಡು ಹೂಗಳಲ್ಲಿರುವ ನೈಸರ್ಗಿಕ ಬಣ್ಣವನ್ನು ತೆಗೆಯುತ್ತಾರೆ. ಅದನ್ನು ಔಷಧಿ ತಯಾರಿಕೆಗೆ ಮತ್ತು ಸ್ವಾಭಾವಿಕ ಬಣ್ಣಗಳಿಗೆ ಪರ್ಯಾಯವಾಗಿ ಬಳಸುತ್ತಾರೆ. ಪಾನ್ ಅಮೆರಿಕಾ ಹೆಸರಿನ ಕಂಪೆನಿಯೊಂದು ಅಂತಿಮ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತದೆ.

ಒಟ್ಟಿನಲ್ಲಿ ಆಹಾರ ಧಾನ್ಯಗಳನ್ನು ಬೆಳೆದು ಅವನ್ನು ಮಾರುಕಟ್ಟೆಗೆ ಒಯ್ದು ಮಾರಾಟ ಮಾಡಲು ಹೆಣಗಾಡುತ್ತಿದ್ದ ರೈತರು ಈಗ ಚೆಂಡು ಹೂ ಬೆಳೆದು ಹೆಚ್ಚು ಹಣ ಗಳಿಸುತ್ತಿದ್ದಾರೆ. ಚೆಂಡು ಹೂ ಬೇಸಾಯ ಅನೇಕ ರೈತರನ್ನು ಆಕರ್ಷಿಸಿದೆ.

ಮುಂದಿನ ದಿನಗಳಲ್ಲಿ ತಾಲ್ಲೂಕಿನ ಇನ್ನಷ್ಟು ರೈತರು ಚೆಂಡು ಹೂ ಬೆಳೆಯಲು ಮುಂದಾಗಬಹುದು. ಈಗ ರೈತರಿಗೆ ಉತ್ತೇಜನ ನೀಡುತ್ತಿರುವ ಕಂಪೆನಿಗಳು ಮುಂದೆಯೂ ರೈತರಿಗೆ ಆರ್ಥಿಕ ನೆರವು ನೀಡುತ್ತವೆಯೇ ಎಂಬ ಪ್ರಶ್ನೆಗೆ ಉತ್ತರ ಹೇಳಲು ಈಗ ಸಾಧ್ಯವಿಲ್ಲ. ಹಬ್ಬದ ಸುಗ್ಗಿಯಲ್ಲಿ ಚೆಂಡು, ಸೇವಂತಿಗೆ ಮತ್ತಿತರ ಹೂಗಳನ್ನು ಬೆಳೆಯುತ್ತಿದ್ದ ರೈತರೂ ಈಗ ಕಂಪೆನಿಗಳಿಗಾಗಿ ಚೆಂಡು ಹೂ ಬೆಳೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.