ADVERTISEMENT

ಡೊಣ ಮೆಣಸು ಧಾರಾಳ ಫಸಲು

ನಾಗರಾಜ ಎಸ್‌.ಹಣಗಿ
Published 16 ಡಿಸೆಂಬರ್ 2013, 19:30 IST
Last Updated 16 ಡಿಸೆಂಬರ್ 2013, 19:30 IST
ಡೊಣ ಮೆಣಸಿನಕಾಯಿ ಗಿಡದ ಮಾಹಿತಿ ನೀಡುತ್ತಿರುವ ಬಸವರಾಜ ಬೆಂಡಿಗೇರಿ
ಡೊಣ ಮೆಣಸಿನಕಾಯಿ ಗಿಡದ ಮಾಹಿತಿ ನೀಡುತ್ತಿರುವ ಬಸವರಾಜ ಬೆಂಡಿಗೇರಿ   

ಕಾಲಿಕ ಮಳೆ, ಆಳುಗಳ ಸಮಸ್ಯೆ, ಏರುತ್ತಿರುವ ಒಕ್ಕಲುತನದ ಖರ್ಚು, ಸಕಾಲಕ್ಕೆ ದೊರೆಯದ ಬೆಂಬಲ ಬೆಲೆ... ಹೀಗೆ ನಾನಾ ಸಮಸ್ಯೆಗಳಿಂದಾಗಿ ರೈತರು ಇಂದು ಒಕ್ಕಲುತನದಿಂದ ವಿಮುಖರಾಗುತ್ತಿದ್ದಾರೆ. ಇವುಗಳ ನಡುವೆಯೇ ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕು ಲಕ್ಷ್ಮೇಶ್ವರದ ರೈತ ಬಸವರಾಜ ಬೆಂಡಿಗೇರಿ.

ನೈಸರ್ಗಿಕ ಕೃಷಿ ತತ್ವಗಳನ್ನು ಅಳವಡಿಸಿಕೊಂಡು 45 ಎಕರೆ ನೀರಾವರಿ ಭೂಮಿಯಲ್ಲಿ 32 ವರ್ಷಗಳಿಂದ ಇವರು ಒಕ್ಕಲುತನ ಮಾಡುತ್ತಿದ್ದಾರೆ. ಸದ್ಯ ಮೂರು ಎಕರೆಯಲ್ಲಿ ಜವಾರಿ ಡೊಣ (ಡೊಣ್ಣ) ಮೆಣಸಿನಕಾಯಿ ಬೆಳೆಯುತ್ತಿರುವ ಇವರು ಅದರಿಂದ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ತಾವೇ ಸಂಗ್ರಹಿಸಿದ ಡೊಣ ಮೆಣಸಿನಕಾಯಿ ಬೀಜವನ್ನು ಮಡಿ ಪದ್ಧತಿಯಲ್ಲಿ ಬಿತ್ತನೆ ಮಾಡಿ ಸಸಿ ತಯಾರಿಸಿದ್ದಾರೆ.

ಹೀಗೆ ತಯಾರಾದ ಸಸಿಗಳನ್ನು ಜುಲೈ ತಿಂಗಳಲ್ಲಿ ಗಿಡದಿಂದ ಗಿಡಕ್ಕೆ ಎರಡೂವರೆ ಅಂತರದಲ್ಲಿ ನಾಟಿ ಮಾಡಿದ್ದಾರೆ. ಇದಕ್ಕಾಗಿ ಈವರೆಗೆ ಕೇವಲ 35 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಕಾಲ ಕಾಲಕ್ಕೆ ಸಸಿಗಳನ್ನು ಮಕ್ಕಳಂತೆ  ಜೋಪಾನ ಮಾಡಿದ ಪರಿಣಾಮ ಇವರ ಹೊಲದಲ್ಲಿನ ಡೊಣ ಮೆಣಸಿನಕಾಯಿ ಗಿಡಗಳು ಉತ್ತಮವಾಗಿ ಬೆಳೆದು ನಿಂತಿವೆ.

ಇವರು ಈಗಾಗಲೆ ಒಂದೂವರೆ ಲಕ್ಷ ರೂಪಾಯಿ ಬೆಲೆಯ ಫಸಲನ್ನು ಮಾರಾಟ ಮಾಡಿದ್ದಾರಲ್ಲದೆ ಇನ್ನೂ ಒಂದೂವರೆ ಲಕ್ಷ ರೂಪಾಯಿಯಷ್ಟು ಫಸಲು ಬರುತ್ತದೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ. ಆರೋಗ್ಯಯುತವಾಗಿರುವ ಗಿಡಗಳಲ್ಲಿ ಡೊಣ ಮೆಣಸಿನಕಾಯಿ ರಾಶಿ ತುಂಬಿ ತುಳುಕುತ್ತಿದ್ದು, ನಿತ್ಯ ಐದಾರು ಚೀಲದಷ್ಟು ಕಾಯಿ ಕೀಳುತ್ತಾರೆ.

ADVERTISEMENT

ಲಕ್ಷ್ಮೇಶ್ವರ ಸೇರಿದಂತೆ ಹಾವೇರಿ ಜಿಲ್ಲೆಯ ಹಾನಗಲ್‌ ಹಾಗೂ ಸವಣೂರು ತಾಲ್ಲೂಕಿನ ಯಲವಗಿ ಮಾರುಕಟ್ಟೆಗಳಿಗೂ ಮೆಣಸಿನಕಾಯಿಯನ್ನು ಮಾರಾಟಕ್ಕೆ ಕಳುಹಿಸುತ್ತಾರೆ. ಬೆಳೆಗಳಿಗೆ ತಪ್ಪದೆ ಜೀವಾಮೃತ ಬಳಸುವ ಇವರು ಜೀವಾಮೃತ ಘಟಕಗಳನ್ನು ಅಳವಡಿಸಿಕೊಂಡು ಎಲ್ಲ ಬೆಳೆಗಳಿಗೂ ಅದನ್ನು ಬಳಸುತ್ತಾರೆ. ಗೊಬ್ಬರಕ್ಕಾಗಿ ‘ಮಲ್ಚಿಂಗ್‌’ ಪದ್ಧತಿ ಪಾಲಿಸಿ ಹತ್ತಿ ಕಟ್ಟಿಗೆ, ಗೋವಿನಜೋಳದ ದಂಟು, ಒಣಗಿದ ಮೆಣಸಿನಕಾಯಿ ಗಿಡಗಳು ಹೀಗೆ ಹೊಲದಲ್ಲಿನ ಯಾವುದೇ ‘ಬೆಳೆಯುಳಿಕೆ’ಯನ್ನು ಹಾಳು ಮಾಡದೆ ಮಣ್ಣಿನಲ್ಲಿ ಮುಚ್ಚುತ್ತಾರೆ.

ಸಗಣಿ ಗೊಬ್ಬರಕ್ಕಿಂತ ‘ಮಲ್ಚಿಂಗ್‌’ ಮಾಡುವುದು ದೊಡ್ಡ ಲಾಭ ಎಂದು ಹೇಳುವ ಇವರು ‘ಸಗಣಿ ಗೊಬ್ಬರ ಭಾಳ ತುಟ್ಟಿ ಆಗೇತಿ. ಒಂದು ಟ್ರ್ಯಾಕ್ಟರ್‌ ಗೊಬ್ಬರಾ ಹೊಲಕ್ಕ ಹಾಕಬೇಕಂದ್ರ ಕಡಿಮಿ ಅಂದ್ರೂ 1,500 ರೂಪಾಯಿ ಬೇಕು. ಒಂದು ಎಕರೆ ಹೊಲಕ್ಕ ಅಂದಾಜು 15–20 ಟ್ರ್ಯಾಕ್ಟರ್‌ ಗೊಬ್ಬರ ಬೇಕಾಗತೈತಿ. ಆದರ ಇದು ಎಲ್ಲಾ ರೈತರಿಗೂ ಸಾಧ್ಯಿಲ್ಲ.

ಹಿಂಗಾಗಿ ಪೀಕು ತಕ್ಕೊಂಡ ಮ್ಯಾಲ ಹೊಲದಾಗ ಉಳಿಯೋ ಕಳೆ ಕಸಾ ಎಲ್ಲಾನೂ ಮಣ್ಣಾಗ ಮುಚ್ಚಿದರ ಅದಾ ಕೊಳತ ಛಲೋ ಗೊಬ್ಬರ ಆಕ್ಕೈತಿ. ಹಿಂಗ ಮಾಡದರಿಂದ ಖರ್ಚು ಕಡಿಮಿ ಅಕ್ಕೈತಿ ಮತ್ತ ಹೊಲಾನೂ ಗಟ್ಟಿಮುಟ್ಟಾಗತೈತಿ’ ಎಂದು ಈ ರೈತರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

ವಿಭಿನ್ನ ಬೆಳೆ
ಗುಲಾಬಿ, ಸುಗಂಧರಾಜ್‌, ಬದನೇಕಾಯಿ, ರೇಷ್ಮೆ, ಬಿಟಿ ಹತ್ತಿ, ಗೋವಿನಜೋಳ, ಮಾವಿನ ಗಿಡ ಹೀಗೆ 45 ಎಕರೆಯಲ್ಲಿ ಪ್ರತಿ ವರ್ಷ ವಿವಿಧ ಬೆಳೆಗಳನ್ನು ತೆಗೆಯುವ ಇವರು ಅದರಿಂದ ಉತ್ತಮ ಆದಾಯ ಗಳಿಸುತ್ತಿದ್ದಾರೆ.   ‘ಒಕ್ಕಲುತನ ನಮ್ಮ ಮನಿ ಮೂಲ ಕಸುಬು. ಅದನ್ನ ನಾ ಎಂದೂ ಮರೆಯಂಗಿಲ್ಲ’ ಎಂದು ಬೆಂಡಿಗೇರಿಯವರು ಭೂಮಿ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.

ಎಲ್ಲ ರೈತರಂತೆ ಇವರೂ ಆಳುಗಳ ಸಮಸ್ಯೆ ಎದುರಿಸಿದ್ದಾರೆ. ಆದರೆ ಕಷ್ಟಪಟ್ಟು ದುಡಿಯುವ ರೈತರನ್ನು ಹುಡುಕಿ ಅವರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಾರೆ. ಬಂಡವಾಳ ಇವರದು, ದುಡಿಮೆ ರೈತರದು. ಅವರೊಂದಿಗೆ ಇವರೂ ಹೊಲದಲ್ಲಿ ಕೆಲಸ ಮಾಡುತ್ತಾರೆ. ಕಾರಣ ಇವರಿಗೆ ಆಳಿನ ಸಮಸ್ಯೆ ಅಷ್ಟೊಂದು ಕಾಡುವುದಿಲ್ಲ. ಹೀಗೆ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಒಕ್ಕಲುತನ ಮಾಡುತ್ತಿರುವ ಬೆಂಡಿಗೇರಿಯವರು ಇತರೇ ರೈತರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಇವರ ಮೊಬೈಲ್‌ ಸಂಖ್ಯೆ 99640–99698.
–ನಾಗರಾಜ ಎಸ್‌. ಹಣಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.