ADVERTISEMENT

ತೆಂಗಿಗೆ ಕಪ್ಪು ತಲೆ ಹುಳುಗಳ ಕಾಟ

ಮಂಜುನಾಥ ಗೌಡರ
Published 23 ಡಿಸೆಂಬರ್ 2010, 8:45 IST
Last Updated 23 ಡಿಸೆಂಬರ್ 2010, 8:45 IST
ತೆಂಗಿಗೆ ಕಪ್ಪು ತಲೆ ಹುಳುಗಳ ಕಾಟ
ತೆಂಗಿಗೆ ಕಪ್ಪು ತಲೆ ಹುಳುಗಳ ಕಾಟ   

‘ತೆಂಗು ಬೆಳೆ; ಬಡತನ ಕಳೆ’ ಎಂಬ ಗಾದೆ ಮಾತೊಂದಿದೆ. ಆದರೆ ತುಮಕೂರು ದಾಟಿ ಗುಬ್ಬಿ ತಲುಪುತ್ತಿದ್ದಂತೆ ಈ ಗಾದೆ ನೂರಕ್ಕೆ ನೂರರಷ್ಟು ನಿಜ ಅಲ್ಲ ಅನ್ನಿಸುತ್ತದೆ. ಹಸಿರು ಹೊತ್ತು ನಗಬೇಕಾದ ತೆಂಗಿನ ಮರಗಳು ಮಂಕು ಬಡಿದಂತೆ ಕಾಣುತ್ತಿವೆ. ಈಗ ತೆಂಗಿನ ಸೀಮೆಯಲ್ಲಿ ಕಪ್ಪು ತಲೆ ಹುಳುಗಳ ಕಾರುಬಾರು. ಹುಳುಗಳ ಬಾಧೆಯಿಂದ ಮರಗಳು ಸೊರಗುತ್ತಿವೆ. ತುಮಕೂರು ಜಿಲ್ಲೆಯ ಗುಬ್ಬಿ,ತಿಪಟೂರು ಮತ್ತಿತರ ಕಡೆಗಳಲ್ಲಿ ಹುಳುಗಳ ಹಾವಳಿಯಿಂದ ಸಾವಿರಾರು ತೆಂಗಿನ ಮರಗಳು ನಲುಗುತ್ತಿವೆ.

ಪಶ್ಚಿಮ ಕರಾವಳಿ ಮೂಲಕ ಒಳನಾಡಿನ ಮುಖ್ಯ ತೆಂಗು ಪ್ರದೇಶಗಳಾದ ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ ಜಿಲ್ಲೆಗಳಿಗೆ ನುಗ್ಗಿದ ಕಪ್ಪು ತಲೆ ಹುಳುಗಳ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುತ್ತ ಸಾಗಿವೆ.

ತಿಪಟೂರು ಹಾಗೂ ಗುಬ್ಬಿ ತಾಲ್ಲೂಕುಗಳಲ್ಲಿ ರೋಗ ವ್ಯಾಪಕವಾಗಿ ಹಬ್ಬಿದೆ. ತಿಪಟೂರಿನಲ್ಲಿ ಸುಮಾರು 2,500 ಹೆಕ್ಟೆರ್, ಗುಬ್ಬಿಯಲ್ಲಿ 1,500 ಹೆಕ್ಟೆರ್, ಚಿಕ್ಕನಾಯಕನಹಳ್ಳಿ 500 ಹೆಕ್ಟೆರ್, ತುಮಕೂರಿನಲ್ಲಿ  350 ಹೆಕ್ಟೆರ್, ತುರುವೇಕೆರೆಯಲ್ಲಿ 386ಹೆಕ್ಟೆರ್ ಹಾಗೂ ಕುಣಿಗಲ್‌ನಲ್ಲಿ 350 ಹೆಕ್ಟೆರ್‌ನಷ್ಟು ಪ್ರದೇಶದಲ್ಲಿರುವ ತೆಂಗಿನ ಮರಗಳು ಹುಳುಗಳ ಹಾವಳಿಗೆ ತುತ್ತಾಗಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

‘ಮೂರು ವರ್ಷಗಳಿಂದ ಹುಳುಗಳ ಹಾವಳಿ ಬೆನ್ನಿಗೆ ಅಂಟಿದ ಬೇತಾಳನಂತೆ ಕಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಇಳುವರಿ ಕ್ಷೀಣಿಸುತ್ತಿದೆ. ಕೃಷಿ ತಜ್ಞರು ಹಾಗೂ ಅನುಭವಿ ಬೆಳೆಗಾರರು  ಹೇಳಿದ ಹುಳು  ನಿಯಂತ್ರಣ ಕ್ರಮಗಳನ್ನು ಪ್ರಯೋಗ ಮಾಡಿ ಕೈ ಸುಟ್ಟುಕೊಂಡಿದ್ದೇವೆ.

  ಇಡೀ ತೋಟದ ಮರಗಳು ರೋಗಕ್ಕೆ ತುತ್ತಾಗಿವೆ. ಒಂದು ಮರದಲ್ಲಿ 25ರಿಂದ 30 ಕಾಯಿ ಬಿಟ್ಟರೆ ಅದೇ ದೊಡ್ಡ ಇಳುವರಿ ಎಂಬಂತಾಗಿದೆ ಎಂದು  ನೋವಿನಿಂದ ಹೇಳುತ್ತಾರೆ ಗುಬ್ಬಿ ತಾಲ್ಲೂಕು ನಿಟ್ಟೂರಿನ ರೈತ ಎನ್.ಎಲ್.ನರಸಿಂಹಯ್ಯ. ತೆಂಗಿನಿಂದ ವರ್ಷಕ್ಕೆ 60 ಸಾವಿರ ಆದಾಯ ಪಡೆಯುತ್ತಿದ್ದ ಅವರಿಗೆ ಮೂರು ವರ್ಷಗಳಿಂದ ವರ್ಷಕ್ಕೆ ಹತ್ತು ಸಾವಿರ ರೂಗಳೂ ಸಿಗುತ್ತಿಲ್ಲವಂತೆ.

ಮತ್ತೊಬ್ಬ ರೈತ ಸುರೇಶ ಬಾಬು ಅವರ ತೋಟದ ಪರಿಸ್ಥಿತಿ ಇನ್ನೂ ಗಂಭೀರ. ಇಡೀ ತೋಟ ಒಣಗಿದೆ. ಮರಗಳಲ್ಲಿನ ಗರಿಗಳು ನೆಲಕ್ಕೆ ಬಾಗಿವೆ. ಗಿಡಗಳಿಂದ ನಿತ್ಯ ಗರಿಗಳು ಉದುರುವುದನ್ನು ನೋಡಿದರೆ ಕರುಳು ಕಿತ್ತು ಬಂದಷ್ಟು ನೋವಾಗುತ್ತದೆ ಎನ್ನುತ್ತಾರೆ.

ರೋಗ ನಿಯಂತ್ರಿಸುವ ಕ್ರಮಗಳು ಕೃಷಿ ಅಧಿಕಾರಿಗಳಿಗೆ ಗೊತ್ತಿಲ್ಲವೋ ಅಥವಾ ನಮ್ಮ ಅದೃಷ್ಟ ಸರಿ ಇಲ್ಲವೋ ಗೊತ್ತಿಲ್ಲ ಎಂದು ಅವರು ನೋವಿನಿಂದ ಹೇಳುತ್ತಾರೆ. ಈ ರೋಗ ‘ಲೆಪ್ಯಾಂಟಿಸ್’ ಎಂಬ ಹುಳುವಿನಿಂದ ಹರಡುತ್ತದೆ. ಇದನ್ನು ಕಪ್ಪುತಲೆ ಹುಳು ಎಂದು ರೈತರು  ಕರೆಯುತ್ತಾರೆ. ಮರಿ ಹುಳು ಬೆಳೆಗೆ ಹಾನಿ ಮಾಡುತ್ತವೆ. ಗರಿಗಳ ತಳಭಾಗದಲ್ಲಿ ದಟ್ಟ ಬಲೆ ಕಟ್ಟಿಕೊಂಡು ಅದರೊಳಗೆ ಸೇರಿ ಹಸಿರು ಭಾಗವನ್ನು ತಿನ್ನುತ್ತವೆ. ಇದರಿಂದ ಒಣಹುಲ್ಲಿನ ಬಣ್ಣದ ಮಚ್ಚೆಗಳು ಗರಿಗಳಲ್ಲಿ ಕಾಣುತ್ತವೆ. ಕ್ರಮೇಣ ಇಡೀ ಗರಿ ಒಣಗುತ್ತದೆ. ಹುಳುಗಳು ಹೆಚ್ಚಾದರೆ ಕಾಯಿಗಳ ಹೊರ ತಿರುಳನ್ನೂ ತಿನ್ನುತ್ತವೆ ಎಂದು ತುಮಕೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕೆ.ನಾಗರಾಜಯ್ಯ ಹೇಳುತ್ತಾರೆ.

ಹುಳುಗಳು ಮರದಿಂದ ಮರಕ್ಕೆ ಹರಡಿ ಕೊನೆಗೆ ಇಡೀ ತೋಟಕ್ಕೆ ವ್ಯಾಪಿಸುತ್ತವೆ.ಮಳೆಗಾಲದಲ್ಲಿ ಹುಳುಗಳ ಹಾವಳಿ ಸ್ವಲ್ಪ ಕಡಿಮೆ ಎನಿಸಿದರೂ ಬೇಸಿಗೆಯಲ್ಲಿ ಮತ್ತೆ ಹೆಚ್ಚುತ್ತದೆ. ಮೂರ್ನಾಲ್ಕು ವರ್ಷಗಳ ನಂತರ ಹುಳುಗಳ ಹಾವಳಿ ನಿಯಂತ್ರಣಕ್ಕೆ ಬರುತ್ತವೆ.

ರಾಸಾಯನಿಕಗಳ ಸಿಂಪಡಣೆಯಿಂದ ಹುಳುಗಳ ಹತೋಟಿ ಸಾಧ್ಯ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ರಾಸಾಯನಿಕಗಳನ್ನು ಸಿಂಡಿಸಿದ ತೋಟಗಳಲ್ಲಿ ಹುಳುಗಳ ಹಾವಳಿ ಕಡಿಮೆ ಆಗಿಲ್ಲ ಎಂದು ರೈತರು ಹೇಳುತ್ತಾರೆ.

ತಲೆಕೆಳಕಾದ ಆರ್ಥಿಕ ಸ್ಥಿತಿ
ಕಪ್ಪು ತಲೆ ಹುಳುಗಳ ಹಾವಳಿಯಿಂದ ತುಮಕೂರು   ಜಿಲ್ಲೆಯ ತೆಂಗು ಬೆಳೆಗಾರರ ಹಾಗೂ ತೆಂಗಿನ ಮೇಲೆ ಅವಲಂಬಿಸಿದ್ದವರ ಆರ್ಥಿಕ ಪರಿಸ್ಥಿತಿಯಲ್ಲಿ ಭಾರೀ   ಏರುಪೇರು ಆಗಿದೆ.

ಮೊದಲು ಕೋಟ್ಯಂತರ ರೂ ತೆಂಗಿನ ಉತ್ಪನ್ನಗಳ ವಹಿವಾಟು ನಡೆಯುತ್ತಿತ್ತು. ಜಿಲ್ಲೆಯಲ್ಲಿ ಸುಮಾರು 1,38,660 ಹೆಕ್ಟೆರ್ ಪ್ರದೇಶದಲ್ಲಿ ತೆಂಗು ಬೆಳೆಯುತ್ತಾರೆ. ಹುಳುಗಳ ಹಾವಳಿ ಆರಂಭವಾದಾಗಿನಿಂದ  ಬಹುತೇಕ    ರೈತರ ಆದಾಯಕ್ಕೆ ಕತ್ತರಿ ಬಿದ್ದಿದೆ. ತೆಂಗು ಬೆಳೆದು ನೆಮ್ಮದಿಯಾಗಿದ್ದ ರೈತರು ಈಗ ಅಸಹಾಯಕ ಪರಿಸ್ಥಿತಿ  ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.