ADVERTISEMENT

ದಾಂಡೇಲಿನರ್ಸರಿಯಲ್ಲಿ ಬಿದಿರಿನ ಚಿಗುರು

​ಪ್ರಜಾವಾಣಿ ವಾರ್ತೆ
Published 21 ಮೇ 2012, 19:30 IST
Last Updated 21 ಮೇ 2012, 19:30 IST

ಪಶ್ಚಿಮ ಘಟ್ಟದಲ್ಲಿ ಈಗ ಬಿದಿರು ಸಾಮೂಹಿಕ ಅಂತ್ಯ ಕಾಣುತ್ತಿದೆ. ಹಾಗೇ ಸಾವನ್ನಪ್ಪಿದ ಬಿದಿರು ಅರಣ್ಯಕ್ಕೆ ಅಪಾಯ ತಂದಿಡುತ್ತದೆ. ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಕಾಳ್ಗಿಚ್ಚಿಗೆ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಬಲಿಯಾಗಿದೆ. ಇಂತಹ ಕಾಳ್ಗಿಚ್ಚಿನ ಸಂದರ್ಭದಲ್ಲಿ ಒಣಗಿದ ಬಿದಿರು ಹೊತ್ತಿ ಉರಿಯುವ ಮೂಲಕ ಬೆಂಕಿ ವ್ಯಾಪಿಸಲು ಕಾರಣವಾಗುತ್ತದೆ.

ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ಕಾಡಿನ ನಡುವೆ ಹಾದು ಹೋದ ರಸ್ತೆಯುದ್ದಕ್ಕೂ ಬಿದಿರು ಅವಸಾನಗೊಂಡು ಒಣಗಿ ನಿಂತಿರುವುದು ಕಣ್ಣಿಗೆ ಬೀಳುತ್ತದೆ. ಅರಣ್ಯಕ್ಕೆ ಬಿದಿರು ಕೂಡ ಜೀವಾಳ. ಇದನ್ನು ಕಾಗದ ಕಾರ್ಖಾನೆಯಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಜೊತೆಗೆ ಅಲಂಕಾರದಲ್ಲೂ ಉಪಯೋಗಕ್ಕೆ ಬರುತ್ತದೆ. ಲಕ್ಷಾಂತರ ಜನರು ಬಿದಿರನ್ನು ನಂಬಿ ಈಗಲೂ ಜೀವನ ನಡೆಸುತ್ತಿದ್ದಾರೆ.

40 ರಿಂದ 60 ವರ್ಷದ ವರೆಗೆ ಬದುಕುವ ಬಿದಿರು ಹೂ ಬಿಟ್ಟಾಗ ಅಂತ್ಯ ಕಾಣುತ್ತದೆ. ಒಣಗಿದ ಬಿದಿರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದರೆ ಅರಣ್ಯವೇ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗುತ್ತದೆ. ಈಗಾಗಲೇ ಬೆಂಕಿಯ ಅನಾಹುತಕ್ಕೆ ಅದೆಷ್ಟೋ ಜೀವವೈವಿಧ್ಯಗಳು ನಾಶವಾಗಿವೆ. ಹೀಗಾಗಿ ಬಿದಿರು ಒಣಗಿದರೆ ಅರಣ್ಯಕ್ಕೇ ಭಯ ಆವರಿಸಿಕೊಳ್ಳುತ್ತದೆ.
 
ಹಾಗಂತ ಈ ಒಣಗಿದ ಬಿದಿರನ್ನು ಕಡಿದು ವಿಲೇವಾರಿ ಮಾಡುವಂತಿಲ್ಲ. ಜೀವ ವೈವಿಧ್ಯ ಅದರಲ್ಲಿ ಹಾಗೇ ಉಳಿಯುವುದರಿಂದ ಅದು ಮರಳಿ ಮಣ್ಣಿಗೆ ಸೇರಬೇಕು ಎನ್ನುವುದು ಭಾರತೀಯ ವನ್ಯಜೀವಿ ಮಂಡಳಿಯ ಅಭಿಪ್ರಾಯ.

ಅತ್ತ ಅರಣ್ಯದಲ್ಲಿ ಬಿದಿರು ಸಾವನ್ನಪ್ಪುತ್ತಿದ್ದರೆ ದಾಂಡೇಲಿಯಲ್ಲಿ ಅರಣ್ಯ ಇಲಾಖೆಯವರು ತಮ್ಮ ನರ್ಸರಿಯಲ್ಲಿ ಬಿದಿರಿನ ಕೃಷಿ ಮಾಡುತ್ತಿದ್ದಾರೆ. ದಾಂಡೇಲಿಯ ನರ್ಸರಿಯಲ್ಲಿ ಬಿದಿರು ಸಸಿಗಳು ತಲೆ ಎತ್ತುತ್ತಿವೆ. ಇದನ್ನು ಮಳೆಗಾಲದಲ್ಲಿ ಅರಣ್ಯದಲ್ಲಿ ನೆಡಲಾಗುತ್ತದೆ. ಕಾನನದಲ್ಲಿ ಮತ್ತೆ ಹಸಿರು ಬಿದಿರು ತುಂಬಿಕೊಳ್ಳಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.