ADVERTISEMENT

ದೇವನಹಳ್ಳಿ ಚಕ್ಕೋತ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಕಿತ್ತಳೆ ಜಾತಿ ಹಣ್ಣುಗಳ್ಲ್ಲಲೇ ದೊಡ್ಡ ಗಾತ್ರದ ಚಕ್ಕೋತವನ್ನು ನಾಡಿನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದೆ. ಆದರೂ ದೇವನಹಳ್ಳಿ ಚಕ್ಕೋತಕ್ಕೆ ಎಲ್ಲೆಡೆ ಬೇಡಿಕೆ. ಇಲ್ಲಿನ ಹಣ್ಣು ವಿಶಿಷ್ಟವಾದ ಹುಳಿ- ಸಿಹಿ ಮಿಶ್ರಣ ಹಾಗೂ ಸುವಾಸನೆಯಿಂದಲೇ ಹೆಚ್ಚು ಪ್ರಸಿದ್ಧಿ.

ಸಿಟ್ರೊಸ್ ಗ್ರ್ಯಾಂಡಿಸ್ ಎಂದು ವೈಜ್ಞಾನಿಕವಾಗಿ ಕರೆಯುವ ಚಕ್ಕೊತ, ರೋಟಾಸ್‌ಸಿಯೋ ಸಸ್ಯ ಜಾತಿಗೆ ಸೇರಿದೆ. ಇದನ್ನೇ ಇಡಿಯಾಗಿ ಬೆಳೆಯುವುದು ಕಡಿಮೆ. ಆದರೆ ತೆಂಗು, ಅಡಿಕೆ ತೋಟಗಳ ಬದುಗಳಲ್ಲಿ ಮತ್ತು ಮನೆಯ ಅಂಗಳ ಹಾಗೂ ಹಿತ್ತಲಲ್ಲಿ ಬೆಳೆಯಲಾಗುತ್ತಿದೆ.

ದೇವನಹಳ್ಳಿ ಚಕ್ಕೋತಕ್ಕೆ 350 ವರ್ಷಗಳ ಇತಿಹಾಸವಿದೆ ಎಂಬುದು ಸ್ಥಳಿಯ ಹಿರಿಯರ ಹೇಳಿಕೆ. ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ ಚಕ್ಕೋತ ಹಣ್ಣನ್ನು ದೇವನಹಳ್ಳಿಗೆ ಪರಿಚಯಿಸಿದ್ದರು ಎನ್ನಲಾಗಿದ್ದು, ಮೈಸೂರಿನ ಮಹಾರಾಜರು ಮತ್ತು ರಾಜಪರಿವಾರ ಇಲ್ಲಿನ ರುಚಿಕರ ಹಣ್ಣಿಗೆ ಮನಸೋತಿತ್ತು.

ಇಲ್ಲಿ ಬೆಳೆಯುವ ಚಕ್ಕೋತ ತಳಿಯ ಹಣ್ಣಿನ ಒಳಭಾಗ ಬಿಳಿ ಮತ್ತು ಕೆಂಪಾಗಿದ್ದು, ಸ್ವಲ್ಪ ಹುಳಿ ಮಿಶ್ರಿತ ಸಿಹಿ ರುಚಿ ಹೊಂದಿದೆ, ರಸಭರಿತವಾಗಿದೆ. ಮಣ್ಣಿನ ಫಲವತ್ತತೆ, ನೀರು ಮತ್ತು ಹವಾಮಾನ ಕಾರಣದಿಂದ ಈ ಚಕ್ಕೊತ ಸ್ವಾದಿಷ್ಟವಾಗಿರುತ್ತದೆ. ಹೀಗಾಗಿ ಈ ಹಣ್ಣು ತಿಂದ ನಂತರ ನಾಲಿಗೆಗೆ ಕಹಿ ಆಗುವುದಿಲ್ಲ; ಆದರೆ ಬೇರೆ ಕಡೆ ಬೆಳೆಯುವ ಚಕ್ಕೋತ ತಿಂದ ನಂತರ ಕಹಿ ಅನುಭವ ಉಂಟಾಗುತ್ತದೆ ಎನ್ನುತ್ತಾರೆ ಪ್ರಗತಿಪರ ರೈತ ಶಿವನಾಪುರ ರಮೇಶ್.

ನೀರು ಬಸಿದು ಹೋಗುವ ಗೋಡು ಮಣ್ಣಿನಿಂದ ಕೂಡಿದ ಪ್ರದೇಶ ಚಕ್ಕೋತ ಬೆಳೆಯಲು ಸೂಕ್ತ. ಬೀಜ ಹಾಕಿ ಬೆಳೆಸಿದರೆ ಆರು ವರ್ಷಕ್ಕೆ ಕಾಯಿ ಬಿಡಲು ಆರಂಭ, ಆದರೆ ಕಸಿ ಮಾಡಿದ ಸಸಿಗಳನ್ನು ನೆಟ್ಟು ಬೆಳೆಸಿದಲ್ಲಿ ಎರಡು ವರ್ಷಕ್ಕೆ ಫಸಲು ಕಾಣಬಹುದು. ವರ್ಷದಲ್ಲಿ 9 ತಿಂಗಳು ಫಸಲು ಖಚಿತ.

ಮಣ್ಣಿನ ಫಲವತ್ತತೆ ಮತ್ತು ಆರೈಕೆ ಮೇಲೆ ಗಿಡಗಳ ಆಯಸ್ಸು ನಿರ್ಧಾರವಾದರೂ 25 ರಿಂದ 30 ವರ್ಷದ ವರೆಗೆ ಒಂದೇ ಗಾತ್ರದ ಹಣ್ಣು  ನಿರೀಕ್ಷಿಸಬಹುದು. ನಂತರ ಗಾತ್ರದಲ್ಲಿ ಕಡಿಮೆಯಾಗುತ್ತಾ ಬರುತ್ತದೆ. ಹಣ್ಣು ಒಂದು ತಿಂಗಳು ಹಾಗೆಯೇ ಇಟ್ಟರೂ ಕೆಡುವುದಿಲ್ಲ.

ತಾಲ್ಲೂಕಿನಲ್ಲಿ ಯಾವುದೇ ಸಭೆ, ಸಮಾರಂಭ ನಡೆದಾಗಲೂ ಅತಿಥಿಗಳಿಗೆ ಚಕ್ಕೋತ ಹಣ್ಣನ್ನು ನೀಡುವುದು ವಾಡಿಕೆ. ಆದರೂ ಈ ಹಣ್ಣುಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲ. ಹೊರಗಿನಿಂದ ಬರುವ ಮಾರಾಟಗಾರರು ಮತ್ತು ದಲ್ಲಾಳಿಗಳಿಗೆ ಎಣಿಕೆ ಲೆಕ್ಕದಲ್ಲಿ ರೈತರು ಹಣ್ಣು ಮಾರುತ್ತಾರೆ. ಸದ್ಯಕ್ಕೆ ಪಟ್ಟಣದ ರಸ್ತೆಯಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಯ ಕೈಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ, ಹಣ್ಣಿನ ಬೆಲೆ ಕಿಲೋಗೆ 30 ರಿಂದ 45 ರೂ.

ದೇವನಹಳ್ಳಿ ಚಕ್ಕೋತ ತಳಿ ಅಭಿವೃದ್ಧಿಗಾಗಿ ತೋಟಗಾರಿಕೆ ಇಲಾಖೆ ಸಂಶೋಧನಾ ಕೇಂದ್ರ ಸ್ಥಾಪಿಸಿ ಸಂರಕ್ಷಣಾ ತಾಕನ್ನು ಅಭಿವೃದ್ಧಿ ಪಡಿಸಿದೆ.  ಕಡಿಮೆ ದರದಲ್ಲಿ ಸಸಿ ನೀಡಲು ಮುಂದಾಗಿದೆ. ಆಸಕ್ತಿಯುಳ್ಳವರು ದೇವನಹಳ್ಳಿ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.