ADVERTISEMENT

ನಷ್ಟದಲ್ಲಿ ಕೈಹಿಡಿದ ಟೊಮೆಟೊ

ಉಮೇಶ್ ದಡಮಹಳ್ಳಿ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ಪುರಾತನ ನಂಟಿನೊಂದಿಗೆ ವೈಜ್ಞಾನಿಕ ಪದ್ಧತಿಯಲ್ಲಿ ಬೆಳೆ ಬೆಳೆದರೆ ಸಾಕಷ್ಟು ಲಾಭ ಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಅಂತರವಳ್ಳಿ ಗ್ರಾಮದ ಯುವ ಕೃಷಿಕ ಎ.ಆರ್.ನಾಗೇಶ್. ಯಾವ ಬೆಳೆಯೂ ಕೈಗೂಡದಾಗ, ಅವರ ಕೈಹಿಡಿದದ್ದು ಟೊಮೆಟೊ ಬೆಳೆ.

ಜಮೀನ್ದಾರ್ ಕುಟುಂಬದ ಕುಡಿ ನಾಗೇಶ್ ಅವರು ಸಾಂಪ್ರಾದಾಯಿಕ ಬೆಳೆಗೆ ಒಡ್ಡಿಕೊಂಡಿದ್ದರು. ಲಾಭಕ್ಕಿಂತ ನಷ್ಟ ಹೆಚ್ಚಿತು. ರೇಷ್ಮೆ ಕೃಷಿಗೆ ಕೈಹಾಕಿದರು. ಅದು ಸರಿಯಾಗಲಿಲ್ಲ. ಶ್ರಮಿಕರ ಕೊರತೆ, ನೀರಿನ ಅಭಾವ, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಹಿಪ್ಪುನೇರಳೆಯನ್ನೂ ಬುಡಸಮೇತ ಕಿತ್ತೆಸೆದರು. ಮುಂದೇನು ಎಂಬ ಚಿಂತೆಯಲ್ಲಿ ಇರುವಾಗಲೇ ನಿತ್ಯ ತರಕಾರಿ ಟೊಮೆಟೊ ಬೆಳೆಯಲ್ಲಿ ಆಸಕ್ತಿ ಮೂಡಿತು. ರಾವಣಿ ಗ್ರಾಮದ ರವಿಶಂಕರ್ ಸಾಥ್ ನೀಡಿದರು.

ಇದೀಗ 4 ಎಕರೆ ಭೂಮಿಯಲ್ಲಿ 3 ವರ್ಷಗಳಿಂದ ಟೊಮೆಟೊ ಬೆಳೆಯುತ್ತಿದ್ದಾರೆ. ನಷ್ಟ ಆಗಿಲ್ಲ. ಬೆಲೆ ಇಳಿದಾಗ ಸಾಸ್ ತಯಾರಿಕೆಗೆ ಟೊಮೆಟೊ ಮಾರಿದ್ದಾರೆ. ಗಿಟ್ಟಲ್ಲ ಎಂದಾಗ ಹೊಲದಲ್ಲಿಯೇ ಗಿಡ, ಹಣ್ಣು ಗೊಬ್ಬರವಾಗಿಸಿದ್ದಾರೆ. ಹಂತ ಹಂತವಾಗಿ ವರ್ಷವಿಡೀ ಬೆಳೆ ಬೆಳೆಯುವುದರಿಂದ ನಷ್ಟವೇ ಇಲ್ಲ ಎಂಬ ವಿವರಣೆ ಅವರದ್ದು.

`ಹೊಲವನ್ನು ನಾಲ್ಕು ಭಾಗವಾಗಿಸಿ ನಾಟಿ, ಕೊಯ್ಲು, ಔಷಧಿ-ಗೊಬ್ಬರೋಪಚಾರ, ಸಿದ್ಧತೆ ನಡೆಯುವಂತೆ ನೋಡಿಕೊಂಡು ವರ್ಷಪೂರ್ತಿ ಬೆಳೆ ಬೆಳೆಯುತ್ತೇನೆ' ಎನ್ನುತ್ತಾರೆ ನಾಗೇಶ್.

ಒಂದು ಎಕರೆ ಭೂಮಿಯಲ್ಲಿ ಬೆಳೆ ಆಳೆತ್ತರಕ್ಕೆ ಬಂದಿದೆ. ಮೂರು ಕೊಯ್ಲು ಆಗಿವೆ. ಕೊಯಮತ್ತೂರು ಮಾರುಕಟ್ಟೆಯಲ್ಲಿ ತಾವು ಬೆಳೆದ ಬೆಳೆಗೆ ಹೆಚ್ಚು ಧಾರಣೆ ಸಿಕ್ಕಿದ್ದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಿಂದಿನ ಬೆಳೆಯಲ್ಲಿ ದಾಖಲೆ ಬೆಲೆಗೆ ಟೊಮೆಟೊ ಮಾರಾಟ ಮಾಡಿ ಲಕ್ಷಾಧಿಪತಿ ಆದುದನ್ನು ನೆನಪಿಸಿಕೊಳ್ಳುತ್ತಾರೆ ಅವರು.

ನೀಗಿದ ನೀರಿನ ಸಮಸ್ಯೆ
`ಅಂತರ್ಜಲ ಕ್ಷೀಣತೆ ಮತ್ತು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ 10ಗುಂಟೆ ಜಮೀನಿಗೆ ನೀರು ಸಾಲುತ್ತಿರಲಿಲ್ಲ. ಆಗ ಸ್ವಂತ ಖರ್ಚಿನಲ್ಲಿಯೇ ಹನಿ ನೀರಾವರಿ ಅಳವಡಿಸಿಕೊಂಡೆ. ನೀರಿನ ಸಮಸ್ಯೆ ನೀಗಿತು. ಪ್ರಾರಂಭದಲ್ಲಿ 5-6 ಬಾರಿ ಉಳುಮೆ ಮಾಡಿ, 8-10 ಟ್ರ್ಯಾಕ್ಟರ್ ತಿಪ್ಪೆ ಗೊಬ್ಬರ ಹಾಕಿದೆ. 28 ದಿನದ ನರ್ಸರಿ ಗಿಡ ತಂದು ನಾಟಿ ಮಾಡಿಸಿದೆ. ವಾರದ ನಂತರ ಡಿ.ಎ.ಪಿ ಹಾಕಿ ಕೈಮುರಿ ಮಾಡಿಸಿದೆ. ಮೂರು ವಾರಗಳ ನಂತರ ಕೊಟ್ಟಿಗೆ ಗೊಬ್ಬರ,  ರಾಸಾಯನಿಕ ಮಿಶ್ರಣ ಹಾಕಿ 2ನೇ ಮುರಿ ಮಾಡಿಸಿದೆ. ಕೊನೆ ನೆಟ್ಟು, ತಂತಿ ಬಿಗಿದು ಸುತ್ತಲಿ ದಾರದಿಂದ ಗಿಡಗಳನ್ನು ಹಂತ ಹಂತವಾಗಿ ಮೇಲೆತ್ತಿ ಕಟ್ಟಿದ್ದೇನೆ. ಇದೇ ರೀತಿ ಪ್ರತಿ ಬಾರಿ ನಡೆಯುತ್ತದೆ. ಕಾಲ ಕಾಲಕ್ಕೆ ನೀರು, ಔಷಧಿ ಸಿಂಪರಣೆ ನಡೆಯುತ್ತದೆ' ಎಂದು ಟೊಮೆಟೊ ಬೆಳೆಯುವ ವಿಧಾನವನ್ನು ನಾಗೇಶ್ ಬಿಚ್ಚಿಡುತ್ತಾರೆ.

ಮಾರ್ಗದರ್ಶನದ ಕೊರತೆ
ಸಾವಯವ ಪದ್ಧತಿ ಅಳವಡಿಕೆಗೆ ಮಾರ್ಗದರ್ಶನ ಕೊರತೆ ಕಾಡಿದೆ. ಕೆಲಸ ಕಾರ್ಯ ಬಿಟ್ಟು ಅಧಿಕಾರಿಗಳ ಬಳಿಗೆ ಅಲೆಯಲು ಆಗೋದಿಲ್ಲ. ಹನಿ ನೀರಾವರಿಗೆ ಸಹಾಯ ಧನವಿದೆ ಎಂದು ಗೊತ್ತಿದ್ದರೂ ಸ್ವಂತ ಖರ್ಚಿನಲ್ಲಿಯೇ ಮಾಡಿಸಿಕೊಂಡೆ. ಅಧಿಕಾರಿಗಳಿಗೆ ದಾಖಲೆ ಒದಗಿಸುವಷ್ಟರಲ್ಲಿ ಕಾಲ ಕಳೆಯುತ್ತದೆ. ದಾಖಲೆ ಬೆಳೆ ಬೆಳೆದರೂ ಅಧಿಕಾರಿಗಳು ಇತ್ತ ಸುಳಿಯದಿರುವುದು ನಿರಾಸೆ ಮೂಡಿಸಿದೆ ಎಂದು ನಾಗೇಶ್ ವ್ಯವಸ್ಥೆ ವಿರುದ್ಧ ಅಸಮಾಧಾನಗೊಂಡರು.

ಟೊಮೆಟೊ ಬಹುಪಯೋಗಿ ತರಕಾರಿ. ಮಾಂಸಹಾರಿ, ಸಸ್ಯಾಹಾರಿ ಭೇದವಿಲ್ಲದೆ ನಿತ್ಯ ಬಳಸುತ್ತಾರೆ. ಬೆಲೆ ಸ್ಥಿರತೆ ಇಲ್ಲದೆ ಒಮ್ಮಮ್ಮೆ ಗಗನಕ್ಕೇರಿ ಮತ್ತೊಮ್ಮೆ ಪಾತಾಳಕ್ಕಿಳಿದಿದೆ. ಇದರಿಂದ ಬಳಕೆದಾರ, ಬೆಳೆಗಾರ ಇಬ್ಬರಿಗೂ ತೊಂದರೆಯಾಗಿದೆ. ಸಸಿ ಮಡಿ ವೆಚ್ಚ ಹೆಚ್ಚು.

ಗುಣಮಟ್ಟದ ಸಸಿ ವಿತರಣೆ, ವೈಜ್ಞಾನಿಕ ಬೆಳೆ ಸಂಸ್ಕರಣಾ ಘಟಕ, ಬೆಲೆಯಲ್ಲಿ ಸ್ಥಿರತೆ ಮೂಡಿಸುವತ್ತ ಸರ್ಕಾರ ಗಮನ ಹರಿಸಬೇಕು ಎನ್ನುವುದು ಅವರ ಸಲಹೆ. `ಟೊಮೆಟೊ ಬೆಳೆಯನ್ನು ಹಂತಹಂತವಾಗಿ ಬೆಳೆದರೆ ಲಾಭ ಕಟ್ಟಿಟ್ಟಬುತ್ತಿ. ಕಾಲಕ್ಕೆ ತಕ್ಕ ಬಿತ್ತನೆ ಆಯ್ಕೆ, ರೋಗ, ಕೀಟ ಭಾದೆ ತಡೆದರೆ ಬಂಪರ್ ಬೆಳೆ ಗ್ಯಾರಂಟಿ. ಆಸಕ್ತರಿಗೆ ಸಲಹೆ, ಮಾರ್ಗದರ್ಶನ ನೀಡಲು ಸದಾ ಸಿದ್ಧನಿದ್ದೇನೆ' ಎನ್ನುತ್ತಾರೆ ನಾಗೇಶ್. ಸಂಪರ್ಕಕ್ಕೆ 8722726670.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.