ADVERTISEMENT

ನೈಸರ್ಗಿಕ ಆದಾಯ

ಬಸವರಾಜ ಹವಾಲ್ದಾರ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಒಂಬತ್ತು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ಇವರು ಕೈಗೊಂಡಿದ್ದು, ತಾವು ಬೆಳೆದ ಬೆಳೆಯ ಬೀಜಗಳನ್ನೇ ಬಳಸಿಕೊಳ್ಳುವ ಮೂಲಕ ಬಂಡವಾಳವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ಇಳಿಸಿದ್ದಾರೆ. ದುಡಿಮೆಯಷ್ಟೇ ಈಗ ಭೂಮಿಗಾಗಿ ಅವರು ಬಳಸುತ್ತಿರುವ ಬಂಡವಾಳ.

ಮೊದಲು ಮೂರು ಅಡಿ ಸಾಲಿನಂತೆ ಕಬ್ಬನ್ನು ಬೆಳೆಯುತ್ತಿದ್ದ ಅವರು, ಈಗ ಐದು ಅಡಿ ಸಾಲಿನಲ್ಲಿ ಬೆಳೆಯುತ್ತಿದ್ದಾರೆ. ಈ ಪ್ರಯೋಗ ಮಾಡಿದ ಮೇಲೆ ಪ್ರತಿ ಎಕರೆಗೆ ಕಬ್ಬಿನ ಇಳುವರಿಯು 50 ರಿಂದ 70 ಟನ್‌ಗೆ ಹೆಚ್ಚಾಗಿದೆ. `ನೈಸರ್ಗಿಕ ಕೃಷಿ ಅಳವಡಿಸಿಕೊಂಡ ಮೊದಲ ವರ್ಷ ಪ್ರತಿ ಎಕರೆಗೆ 30 ಟನ್‌ಗೆ ಕುಸಿಯಿತು. ಆಗ ಊರಿನ ಬಹುತೇಕ ಜನರು ನನ್ನ ಸ್ಥಿತಿ ಕಂಡು ಗೇಲಿ ಮಾಡಿದ್ದರು. ಆದರೆ, ಮುಂದಿನ ವರ್ಷಗಳಲ್ಲಿ ಸಿಕ್ಕ ಉತ್ತಮ ಫಲದಿಂದಾಗಿ ಈಗ ಅವರಲ್ಲಿಯೇ ಸಾಕಷ್ಟು ಮಂದಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ' ಎನ್ನುತ್ತಾರೆ ಕೃಷ್ಣ.

ಕಬ್ಬನ್ನು ಐದು ಅಡಿ ಸಾಲಿನಲ್ಲಿ ಬೆಳೆಯುವುದರಿಂದ ಕಬ್ಬಿಗೆ ಗಾಳಿ, ಬಿಸಿಲು ಚೆನ್ನಾಗಿ ದೊರೆಯುತ್ತದೆ. ಕಬ್ಬಿನೊಂದಿಗೆ ಉಪಬೆಳೆಗಳಾಗಿ ಹೀರೇಕಾಯಿ, ಪಡುವಲಕಾಯಿ, ಮೂಲಂಗಿ, ಈರುಳ್ಳಿ, ತೊಗರಿ, ಕೀರೆಸೊಪ್ಪು, ಅಲಸಂದೆ, ಉದ್ದು, ಹೆಸರು ಮುಂತಾದ ಅಲ್ಪಾವಧಿಯ ಬೆಳೆಗಳನ್ನು ಬೆಳೆದುಕೊಳ್ಳುತ್ತೇನೆ. ಪ್ರತಿಯೊಂದರಿಂದ ಎಕರೆಗೆ ತಿಂಗಳಿಗೆ 5 ರಿಂದ 10 ಸಾವಿರ ರೂಪಾಯಿವರೆಗೂ ಆದಾಯ ಬರುತ್ತದೆ ಎನ್ನುತ್ತಾರೆ ಅವರು.

ರಾಸಾಯನಿಕ ರಹಿತ ಕಬ್ಬು
ಕಬ್ಬಿನ ಬೆಳೆಯುನ್ನು ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಬೆಳೆಸುತ್ತೇನೆ. ಉಳಿದ ಕಬ್ಬಿಗೆ ಪ್ರತಿ ಟನ್‌ಗೆ 24 ರೂಪಾಯಿ ಸಿಗುತ್ತದೆ. ನಾನು ಬೆಳೆದ ಕಬ್ಬಿಗೆ ಪ್ರತಿ ಟನ್‌ಗೆ 500 ರೂಪಾಯಿ ಹೆಚ್ಚಿಗೆ ಸಿಗುತ್ತದೆ. ಬೆಂಗಳೂರಿನ ಇಸ್ಕಾನ್ ಸಂಸ್ಥೆಯವರು ಖರೀದಿಸುತ್ತಾರೆ. ಅವರು, ಖರೀದಿಸದಿದ್ದರೆ ಪ್ರತಿ ಟನ್‌ಗೆ 750 ರೂಪಾಯಿಯಂತೆ ನೀಡಿ ಆಲೆಮನೆಗಳಲ್ಲಿ ಬೆಲ್ಲ ತಯಾರಿಸಿಕೊಂಡು ಬರುತ್ತೇನೆ ಎನ್ನುವುದು ಅವರ ಅನುಭವದ ಮಾತು.

`ಡೈಯಂಚಾ, ಚಂಬೆಯನ್ನು ಬೆಳೆದು, ಕಟಾವು ಮಾಡಿ ಭೂಮಿಯಲ್ಲಿಯೇ ಸೇರಿಸುತ್ತೇನೆ. ತೆಂಗಿನ ಗರಿ, ಕಬ್ಬಿನ ತರಗನ್ನೂ ಭೂಮಿಗೆ ಸೇರಿಸಲಾಗುವುದು. ಸಮೀಪದಲ್ಲಿ ಇರುವ ಕೆರೆಯಿಂದ 20 ಟ್ರ್ಯಾಕ್ಟರ್ ಮಣ್ಣು ತಂದು ಹೊಲಕ್ಕೆ ಹಾಕಿದ್ದೇನೆ. ಪ್ರತಿ ವರ್ಷವೂ ಆ ಮಣ್ಣನ್ನು ಬಳಸಿಕೊಂಡು ಫಲವತ್ತತೆ ಹೆಚ್ಚಿಸಿಕೊಂಡಿದ್ದೇನೆ. ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ. ಹೂಳು ತೆಗೆಯುವುದರಿಂದ ಕೆರೆಯಲ್ಲಿ ನೀರೂ ಹೆಚ್ಚಿಗೆ ಸಂಗ್ರಹವಾಗುತ್ತದೆ' ಎನ್ನುತ್ತಾರೆ ಕೃಷ್ಣ.

ಜೀರಿಗೆ ಸಾಂಬಾ, ರಾಜಭೋಗ, ರಾಜಮುಡಿ, ಕೊಯಮತ್ತೂರು ಸಣ್ಣ, ನವರಾ, ಧಾರವಾಡ ಕಾಗೆ ಸೆಳಿ, ಕರಿಗ ಜಿವಿಲಿ, ಗಂಧಸಾಲೆ, ಬರ್ಮಾ ಬ್ಲಾಕ್, ದೊಡ್ಡಗರುಡ ಸೇರಿದಂತೆ 14ಕ್ಕೂ ಹೆಚ್ಚು ತಳಿಯ ಭತ್ತಗಳನ್ನು ಬೆಳೆಯುತ್ತಾರೆ. `ನವರಾ' ಅಕ್ಕಿಯನ್ನು ಕೀಲು ನೋವಿಗೆ, `ಕರಿಗ ಜಿವಿಲಿ' ತಾಯಿಯ ಹಾಲು ಹೆಚ್ಚಿಸಲು, `ಜೀರಿಗೆ ಸಾಂಬಾ'ವನ್ನು ಬಿರಿಯಾನಿ ತಯಾರಿಸಲು ಬಳಸುತ್ತಾರೆ. `ಧಾರವಾಡ ಕಾಗೆಸೆಳಿ' ಸುವಾಸನೆ ಭರಿತ ತಳಿಯಾಗಿದ್ದು, ಇದಕ್ಕೆ ಬೇಡಿಕೆ ಹೆಚ್ಚು ಎನ್ನುವುದು ಕೃಷ್ಣ ಅವರ ಮಾತು.

ಜೀವಾಮೃತವೂ ಬಳಕೆ
6.5 ಎಕರೆ ಭೂಮಿಯನ್ನು ನೈಸರ್ಗಿಕ ಕೃಷಿಗೆ ಪರಿವರ್ತಿಸಿದ್ದು, ಮನೆಯ ಆವರಣದಲ್ಲಿಯೇ ಎರೆಹುಳು ಗೊಬ್ಬರ ತಯಾರಿಕೆಗೆ ಕಲ್ಲಿನಿಂದ ತೊಟ್ಟಿಗಳನ್ನು ನಿರ್ಮಿಸಿಕೊಂಡಿದ್ದಾರೆ. ರೋಗ ಕಾಣಿಸಿಕೊಂಡಾಗ ಜೀವಾಮೃತವನ್ನು ಬಳಸುತ್ತಾರೆ. ವಿವಿಧ ತಳಿಯ ಭತ್ತವನ್ನು ಸಂಗ್ರಹಿಸಿಟ್ಟಿದ್ದೇನೆ. ಬೀಜ ಕೇಳಿಕೊಂಡು ಬರುವ ರೈತರಿಗೆ ನೀಡುತ್ತೇನೆ. ಬೆಂಗಳೂರು, ಮಂಡ್ಯ ಸೇರಿದಂತೆ ಹಲವೆಡೆ ಈ ಅಕ್ಕಿ ಹಾಗೂ ಬೆಲ್ಲ ಕೊಂಡುಕೊಳ್ಳುವ ಗ್ರಾಹಕರಿದ್ದು, ಅವರಿಗೂ ಮಾರಾಟ ಮಾಡುತ್ತೇನೆ ಎಂದರು. ಇಲ್ಲಿ ಬೆಳೆಯುವ ಬೆಳೆಯನ್ನು ವೀಕ್ಷಿಸಲು ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಂದ, ವಿವಿಧ ರಾಜ್ಯ ಹಾಗೂ ಮಂಡ್ಯದ ಕೃಷಿ ವಿಜ್ಞಾನ ಕೇಂದ್ರಕ್ಕೆ ಆಗಮಿಸುವ ರೈತರು ಇವರ ಹೊಲಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಳ್ಳುತ್ತಾರೆ.

ಮಂಡ್ಯದ ಕೃಷಿ ವಿಜ್ಞಾನ ಕೇಂದ್ರವು ಪ್ರಗತಿಪರ ಎಂದು ಗೌರವಿಸಿದ್ದರೆ, ಲಯನ್ಸ್ ಕ್ಲಬ್ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರ ಕೃಷಿ ಸಾಧನೆಗೆ ಮನ್ನಣೆ ನೀಡಿವೆ. ಸಂಪರ್ಕಕ್ಕೆ-99026 47906
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.