ADVERTISEMENT

ನೈಸರ್ಗಿಕ ತೋಟದ ಸುಂದರ ನೋಟ

ಅಮೃತ ಭೂಮಿ 35

ಬಸವರಾಜ ಹವಾಲ್ದಾರ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST

ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಆಹಾರಧಾನ್ಯ ಬೆಳೆಯುವವರು ರಾಜ್ಯದ ವಿವಿಧೆಡೆ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಆದರೆ ಇಲ್ಲೊಬ್ಬರು ವಾಣಿಜ್ಯ ಬೆಳೆಯಾದ ಗುಲಾಬಿ ಹೂವನ್ನು ನೈಸರ್ಗಿಕ ಕೃಷಿ ಪದ್ಧತಿ ಮೂಲಕ ಬೆಳೆದು ಗಮನ ಸೆಳೆಯುತ್ತಿದ್ದಾರೆ.

ನೈಸರ್ಗಿಕ ಕೃಷಿ ಮೂಲಕ ಬೆಳೆದ ಆಹಾರಧಾನ್ಯದ ಫಸಲಿಗೆ ರಾಸಾಯನಿಕ ಉಪಯೋಗಿಸಿ ಬೆಳೆದ ಬೆಳೆಗಿಂತ ಹೆಚ್ಚಿನ ಬೆಲೆ ಸಿಗುತ್ತದೆ. ಗುಲಾಬಿ ಹೂವಿಗೆ ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ದೊರೆಯುತ್ತಿಲ್ಲ. ಇಳುವರಿಯಲ್ಲಿಯೂ ಅಂಥ ಬದಲಾವಣೆ ಆಗಿಲ್ಲ.

ಬೆಲೆ ಹೆಚ್ಚಿಗೆ ಸಿಗದಿದ್ದರೂ, ನೈಸರ್ಗಿಕ ಪದ್ಧತಿಯಲ್ಲಿ ಗುಲಾಬಿಯನ್ನು ಬೆಳೆಯುತ್ತಿರುವುದರಿಂದ ಉಳಿದ ಬೆಳೆಗಾರರಿಗಿಂತ ಹೆಚ್ಚಿನ ಲಾಭವಾಗುತ್ತಿದೆ ಎನ್ನುತ್ತಾರೆ ಕಳೆದ ಮೂರು ವರ್ಷಗಳಿಂದ ಈ ಪದ್ಧತಿಯಲ್ಲಿ ಬೆಳೆಯುತ್ತಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಲಕ್ಷ್ಮೀಸಾಗರದ ರೈತ ಮಲ್ಲೇಶ್.

`ಅರ್ಧ ಎಕರೆ ಪ್ರದೇಶದಲ್ಲಿ ಮುಳ್ಳು ಹೈಬ್ರಿಡ್ ಗುಲಾಬಿ ಬೆಳೆಯಲು ಆರಂಭಿಸಿದೆ. 5/2 ಅಡಿ ಅಂತರದಲ್ಲಿ ಗುಲಾಬಿ ಹಾಕಲಾಗಿದ್ದು, ನಿತ್ಯ 800 ಹೂಗಳು ಸಿಗುತ್ತವೆ. ಅವುಗಳನ್ನು 70 ಪೈಸೆಗೆ ಒಂದರಂತೆ ಪಾಂಡವಪುರ ಹಾಗೂ ಕೆ.ಆರ್. ಪೇಟೆಯಲ್ಲಿ ಮಾರಾಟ ಮಾಡುತ್ತಿದ್ದೇನೆ ಎನ್ನುತ್ತಾರೆ' ಅವರು.

ಗಮನಾರ್ಹ ಉಳಿತಾಯ
ಈ ಕೃಷಿ ಪದ್ಧತಿಯಲ್ಲಿ ಮಾಡಿದರೂ ಗುಲಾಬಿಗೆ ಹೂಗಳಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ ಎನ್ನುವುದು ನಿಜ. ಆದರೆ, ಮಾಡುತ್ತಿದ್ದ ಖರ್ಚಿನಲ್ಲಿ ಖಂಡಿತ ಗಮನಾರ್ಹವಾಗಿ ಉಳಿತಾಯವಾಗುತ್ತಿದೆ. ಅದೇ ನನಗೆ ಉಳಿದವರಿಗಿಂತ ಹೆಚ್ಚಿನ ಲಾಭ ನೀಡುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.

`ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿರುವುದರಿಂದ ರಾಸಾಯನಿಕ ಗೊಬ್ಬರ ಬಳಸುವುದೇ ಇಲ್ಲ. ಕಾರ್ಮಿಕರ ಕೆಲಸದ ಪ್ರಮಾಣವೂ ಕಡಿಮೆ ಇರುತ್ತದೆ. ಗುಲಾಬಿ ಗಿಡಗಳಿಗೆ ಹಾಗೂ ಅದಕ್ಕೆ ತಗಲುವ ರೋಗಗಳಿಗೆ ಉಳಿದವರು ರಾಸಾಯನಿಕ ಗೊಬ್ಬರ ಹಾಕುತ್ತಾರೆ ಹಾಗೂ ಔಷಧಿಗಳನ್ನೂ ಸಿಂಪಡಿಸುತ್ತಾರೆ.

ADVERTISEMENT

ನಾನು ಯಾವುದೇ ಗೊಬ್ಬರವನ್ನು ಸಿಂಪಡಿಸುವುದಿಲ್ಲ. ಜೀವಾಮೃತ ಮುಂತಾದವನ್ನು ಸಿಂಪಡಿಸುತ್ತೇನೆ. ಹೀಗಾಗಿ ಅರ್ಧ ಎಕರೆಗೆ 25 ಸಾವಿರ ರೂಪಾಯಿಯಷ್ಟು ಉಳಿತಾಯವಾಗುತ್ತದೆ' ಎನ್ನುತ್ತಾರೆ ಮಲ್ಲೇಶ್.

ಗುಲಾಬಿ ಗಿಡಗಳ ಸಾಲಿ ಮಧ್ಯದಲ್ಲಿ ಕಬ್ಬಿನ ತರಗನ್ನು ಹಾಕಿ ಮುಚ್ಚಿ ಬಿಡಲಾಗುತ್ತದೆ. ಪರಿಣಾಮ ಯಾವುದೇ ಕಳೆ ಬೆಳೆಯುವುದಿಲ್ಲ. ನೀರು ಹಾಯಿಸುವುದರಿಂದ ಕ್ರಮೇಣ ತರಗೂ ಕೊಳೆತು ಗಿಡಗಳಿಗೆ ಉತ್ತಮ ಗೊಬ್ಬರವಾಗುತ್ತದೆ ಎಂದು ವಿವರಿಸಿದರು.

`ಗುಲಾಬಿ ಬೆಳೆಯನ್ನು ಈಗ ಎರಡು ಎಕರೆಗೆ ವಿಸ್ತರಿಸುತ್ತಿದ್ದೇನೆ. ಬೇರೆ ಬೇರೆ ಬಣ್ಣದ ಹೂ ಬಿಡುವ ಗಿಡಗಳನ್ನು ಹಾಕುತ್ತಿದ್ದೇನೆ. ರಾಸಾಯನಿಕ ಗೊಬ್ಬರ ಬಳಸದೆ ಬೆಳೆಸುವ ಹೂಗಳಿಗಾಗಿ ಪ್ರತ್ಯೇಕ ಮಾರುಕಟ್ಟೆಯಿಲ್ಲ. ಅದರ ವ್ಯವಸ್ಥೆಯಾದರೆ ಉತ್ತಮ ಬೆಲೆ ಪಡೆಯಬಹುದು' ಎನ್ನುವುದು ಅವರ ಮಾತು.

ಗುಲಾಬಿ ಸಸಿಗಳನ್ನು ನೆಟ್ಟು ಮೂರು ತಿಂಗಳ ನಂತರ ಹೂ ಬಿಡಲು ಆರಂಭಿಸುತ್ತದೆ. ವರ್ಷಕ್ಕೊಮ್ಮೆ ಗಿಡಗಳನ್ನು ಕತ್ತರಿಲಾಗುತ್ತದೆ. ಇದಾದ ನಂತರದ ಒಂದೂವರೆ ತಿಂಗಳು ಬಿಟ್ಟರೆ ಉಳಿದ ದಿನಗಳಲ್ಲಿ ಹೂವು ಬಿಡುತ್ತಲೇ ಇರುತ್ತದೆ. ಹೂವು ಬಿಡಿಸುವ ಕಾರ್ಯಕವನ್ನು ಈಗ ಮನೆಯವರೇ ಮಾಡಿಕೊಳ್ಳುತ್ತಿದ್ದೇವೆ. ವ್ಯಾಪ್ತಿ ವಿಸ್ತರಿಸಿದ ಮೇಲೆ ಇನ್ನೂ ನಾಲ್ಕಾರು ಜನರಿಗೆ ಕೆಲಸ ಸಿಗಲಿದೆ ಎಂಬುದು ಅವರ ಅನಿಸಿಕೆ. ಸಂಪರ್ಕಕ್ಕೆ 9980219669.
- ಬಸವರಾಜ ಹವಾಲ್ದಾರ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.