ADVERTISEMENT

ಪಾರಂಪರಿಕ ಜ್ಞಾನದ ವಾರಸುದಾರ

ಘನಶ್ಯಾಮ ಡಿ.ಎಂ.
Published 23 ಡಿಸೆಂಬರ್ 2013, 19:30 IST
Last Updated 23 ಡಿಸೆಂಬರ್ 2013, 19:30 IST
ಹಲಸಿನ ಗಿಡಕ್ಕೆ ಮದ್ದು ಮಾಡುತ್ತಿರುವ ಕಾಮಣ್ಣ
ಹಲಸಿನ ಗಿಡಕ್ಕೆ ಮದ್ದು ಮಾಡುತ್ತಿರುವ ಕಾಮಣ್ಣ   

ತಮ್ಮ ತೋಟ– ಹೊಲಗಳಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡರೂ ಮಧುಗಿರಿ ತಾಲ್ಲೂಕು ಬಡವನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಮೊದಲು ರಂಗಾಪುರದ ಕಾಮಣ್ಣ ಅವರ ಮನೆ ಬಾಗಿಲು ತಟ್ಟುತ್ತಾರೆ. ಬಹುತೇಕ ಕಾಯಿಲೆ, ಕೀಟಬಾಧೆಗೆ ಅವರ ಬಳಿ ಜನಪದ ಜ್ಞಾನದ ಉತ್ತರ ಇದೆ.

ಇವರ ಕೈಲಿ ಚಿಕಿತ್ಸೆ ಮಾಡಿಸಿಕೊಂಡ ಸಾವಿರಾರು ಹಲಸಿನ ಮರಗಳು ನಗುತ್ತಾ ಫಲ ಕೊಡುತ್ತಿವೆ. ಇವರ ಮಾತು ಗೌರವಿಸಿದವರ ತೆಂಗಿನ ತೋಟಗಳಲ್ಲಿ ಇಳುವರಿ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹುಣಸೆ, ತೆಂಗು, ಅಡಿಕೆ ಗಿಡಗಳ ನರ್ಸರಿ ಮಾಡುವವರು ಎಂಥ ಬೀಜ ಆಯ್ದುಕೊಳ್ಳಬೇಕು ಎಂದು ಇವರಿಂದ ಪಾಠ ಹೇಳಿಸಿಕೊಳ್ಳುತ್ತಾರೆ.

‘ಮರಗಳಿಗೆ ಫಲ ಕೊಡಲು ಕಲಿಸುವ ಈ ವಿದ್ಯೆಯನ್ನು ಎಲ್ಲಿಂದ ಕಲಿತಿರಿ’ ಎಂದು ಕೇಳಿದರೆ, ತಂದೆ ಚೌಡಪ್ಪನವರಿಂದ ಎನ್ನುತ್ತಾರೆ. ‘ಅವರು ಎಲ್ಲಿಂದ ಕಲಿತರು’ ಎಂದರೆ ಅವರಪ್ಪ– ಅವರಪ್ಪ– ಅವರಪ್ಪನಿಂದ ಎಂದು ನಗುತ್ತಾರೆ. ಪಾರಂಪರಿಕ ಕೃಷಿ ಜ್ಞಾನದ ಕೊಂಡಿಯಂತಿರುವ ಕಾಮಣ್ಣ ಈ ಭಾಗದಲ್ಲಿ ‘ದೊಡ್ಡ ಮಾವಯ್ಯ’ ಎಂದೇ ಪ್ರಸಿದ್ಧಿ.

ತುಮಕೂರು ಜಿಲ್ಲೆಯ ರೈತರು ಹೆಚ್ಚು ಮೆಚ್ಚಿಕೊಂಡ ಕಾಮಣ್ಣ ಅವರ ಕೆಲವು ಕೃಷಿ ತಂತ್ರಗಳ ಪರಿಚಯ ಇಲ್ಲಿದೆ.

ಹಲಸಿನ ಬಂಜೆತನಕ್ಕೆ ಭತ್ತದ ಹುಲ್ಲು
ಹಲಸಿನ ಮರ ಫಲ ಬಿಡಲಿಲ್ಲ ಎಂದರೆ ಅದಕ್ಕೆ ಭತ್ತದ ಹುಲ್ಲು ಸುತ್ತುವುದೇ ಪರಮ ಔಷಧಿ.
ಮರದ ಸುತ್ತಳತೆ 2 ಅಡಿಯಷ್ಟು ಬೆಳೆದ ನಂತರವೂ ಹಲಸಿನ ಮರ ಫಲ ಬಿಡದಿದ್ದರೆ, ನೆಲದಿಂದ ಅರ್ಧ ಅಡಿ ಅಂತರ ಬಿಟ್ಟು ಒಂದು ಪುರುಷ ಪ್ರಮಾಣ (5 ಅಡಿ) ಭತ್ತದ ಹುಲ್ಲು ಸುತ್ತಬೇಕು. ಭತ್ತದ ಹುಲ್ಲನ್ನು ಹಗ್ಗದಂತೆ ಹೊಸೆದು, ಗೌರಿ ಹಬ್ಬದ ದಿನವೇ ಸುತ್ತಿದರೆ ಉತ್ತಮ ಪರಿಣಾಮ ಬೀರುತ್ತದೆ.

ಗೌರಿ ಹಬ್ಬದ ನಂತರ ಬರುವ ಸೋನೆ ಮಳೆಯಲ್ಲಿ ಭತ್ತದ ಹುಲ್ಲು ನೆನೆದು, ಗಾಳಿ– ಬಿಸಿಲಿನ ಹದದಲ್ಲಿ ಮರದ ಬುಡಕ್ಕೆ ಶಾಖ ನೀಡುತ್ತದೆ. ಇದರಿಂದ ಮರದ ಪುರುಷತ್ವ ಜಾಗೃತಗೊಂಡು ಬಂಜೆತನ ನಿವಾರಣೆಯಾಗುತ್ತದೆ.

ಮಧುಗಿರಿ ತಾಲ್ಲೂಕು ಹೊಸಹಳ್ಳಿ ಗ್ರಾಮದಲ್ಲಿ 6 ಅಡಿ ಸುತ್ತಳತೆಯ ಮರ ಕಾಯಿ ಬಿಟ್ಟಿರಲಿಲ್ಲ. ಅಲ್ಲಿಗೂ ಹೋಗಿ ಹುಲ್ಲು ಸುತ್ತಿಬಂದೆ. ಹಸನಾಗಿ ಕಾಯಿ ಬಿಡುತ್ತಿದೆ. ಇಂಥ ನೂರಾರು ಉದಾಹರಣೆಗಳು ನನ್ನ ಕಣ್ಣಳತೆಯೊಳಗೆ ಇವೆ. ಕೃಷಿ ವಿಜ್ಞಾನಿಗಳು ಈ ಕುರಿತು ಸಂಶೋಧನೆ ನಡೆಸಿ ನಿರ್ದಿಷ್ಟ ಕಾರಣವನ್ನು ವಿಜ್ಞಾನದ ತಳಹದಿಯಲ್ಲಿ ವಿವರಿಸಬೇಕಿದೆ.

ಕೆಂಪು ಮಣ್ಣಿಗೆ ಅಡಿಕೆ ಸಿಪ್ಪೆ
ಅಡಿಕೆ ಸಂಸ್ಕರಣೆಯ ನಂತರ ಸಿಪ್ಪೆ ನಿರುಪಯೋಗಿ ವಸ್ತುವಾಗಿ ರಸ್ತೆ ಬದಿ ರಾಶಿ ಬಿದ್ದು ಬೆಂಕಿಗೆ ಆಹುತಿಯಾಗುತ್ತದೆ. ಅಡಿಕೆ ಸಿಪ್ಪೆ ಹಾಕಿದರೆ ತೋಟಗಳಿಗೆ ಅಣಬೆ ರೋಗ ಬರುತ್ತದೆ ಎಂದು ರೈತರು ಹೆದರುತ್ತಾರೆ. ಇದು ತಪ್ಪು.

ಗೆದ್ದಲು ಹುಳುಗಳು ಹೆಚ್ಚಾಗಿರುವ ಕೆಂಪು ಮಣ್ಣಿನ ಭೂಮಿಯಲ್ಲಿ ಅಡಿಕೆ ಸಿಪ್ಪೆಯನ್ನು ಮುಚ್ಚಿಗೆಗೆ ಬಳಸಬಹುದು. ಆದರೆ ತೋಟಕ್ಕೆ ಹರಡುವ ಮೊದಲು 50 ದಿನ ಬಿಸಿಲಿನಲ್ಲಿ (ತೆರೆದ ಬಯಲಿನಲ್ಲಿ) ಚೆನ್ನಾಗಿ ಒಣಗಿಸಬೇಕು. ಒಣಗಿದ ಅಡಿಕೆ ಸಿಪ್ಪೆಯನ್ನು ಗದ್ದೆಗೆ ಹರಡಿದರೆ, ಗೆದ್ದಲು ಅವನ್ನು ಮಣ್ಣಿಗೆ ಸೇರಿಸುತ್ತವೆ. ಅಡಿಕೆ ಸಿಪ್ಪೆಯ ಮುಚ್ಚಿಗೆ ಮಾಡಿದ ಅಡಿಕೆ– ತೆಂಗಿನ ತೋಟಕ್ಕೆ ತಿಂಗಳಿಗೆ ಎರಡು ಸಲ ನೀರು ಕೊಟ್ಟರೆ ಸಾಕು. ಇಲ್ಲದಿದ್ದರೆ ತಿಂಗಳಿಗೆ ನಾಲ್ಕು ಬಾರಿ ನೀರು ಕೊಡಬೇಕಾಗುತ್ತದೆ.

ನಮ್ಮ ತೋಟದ ಉತ್ಪನ್ನ ಯಾವುದೇ ರಸ್ತೆ ಬದಿಯಲ್ಲಿ ಉರಿದು ಬೂದಿಯಾಗಿ ಪರಿಸರ ಮಾಲಿನ್ಯ ಉಂಟು ಮಾಡುವ ಬದಲು, ನಮ್ಮದೇ ತೋಟದಲ್ಲಿ ಗೊಬ್ಬರವಾದರೆ ಒಳಿತಲ್ಲವೇ?

ತುದಿ ಬೀಜದಲ್ಲಿ ತಾಯ್ತನ
ಹುಣಸೆ ಗಿಡ ಬೆಳೆಸಲು ಬೀಜ ಆರಿಸಿಕೊಳ್ಳುವ ಮರದಲ್ಲಿ 1 ಕೆ.ಜಿ. ಹುಣಸೆ ಬೀಜಕ್ಕೆ 2ರಿಂದ 2.5 ಕೆ.ಜಿ. ಹಣ್ಣು ಬರಬೇಕು. ಹಣ್ಣಿನ ಒಳಭಾಗ ಬಿಳುಪಾಗಿರಬೇಕು ಮತ್ತು ಪ್ರತಿ ವರ್ಷ ಫಸಲು ಕೊಡಬೇಕು. ಇಂಥ ಮರದ ಹುಣಸೆ ಭಲ್ಲೆಯ (ತೊಳೆ) ತುದಿಯಲ್ಲಿರುವ ಬೀಜಗಳನ್ನೇ ಸಂಗ್ರಹಿಸಿ ಬಿತ್ತನೆಗೆ ಆರಿಸಿಕೊಳ್ಳಬೇಕು. ಅದರಲ್ಲಿ ಮಾತ್ರ ತಾಯಿ ಮರದ ಸ್ವಭಾವ ದಾಟಿರುತ್ತದೆ. ತೊಟ್ಟಿನ ಸನಿಹಕ್ಕೆ ಬಂದಂತೆಯೂ ಬೀಜಗಳಲ್ಲಿ ತಾಯಿ ಮರದ ಸ್ವಭಾವ ಕಡಿಮೆಯಾಗುತ್ತದೆ.

ಹುಣಸೆಹಣ್ಣಿಗೆ ಅಡಿಕೆ ಪಟ್ಟೆ
ಮನುಷ್ಯನ ದೇಹದಲ್ಲಿ ಉತ್ಪತ್ತಿಯಾಗುವ ವಿಷದ ಅಂಶಗಳನ್ನು ಹೊರಗೆ ಹಾಕುವ ಸಾಮರ್ಥ್ಯ ಹುಣಸೆಹಣ್ಣಿಗೆ ಇದೆ. ಇದು ತನ್ನ ಸಂಪರ್ಕಕ್ಕೆ ಬಂದ ಯಾವುದೇ ವಸ್ತುವನ್ನು ದೀರ್ಘಾವಧಿಯಲ್ಲಿ ಕರಗಿಸುತ್ತದೆ. ಹೀಗಾಗಿ ಹುಣಸೆಹಣ್ಣನ್ನು ಲೋಹ, ಪ್ಲಾಸ್ಟಿಕ್ ಅಥವಾ ಮಣ್ಣಿನ ಪಾತ್ರೆಗಳಲ್ಲಿ ಸಂಗ್ರಹಿಸಬಾರದು. ಹುಣಸೆ ಹಣ್ಣನ್ನು ಅಡಿಕೆ ಪಟ್ಟೆಯಲ್ಲಿ ಇರಿಸಿ, ಹತ್ತಿ ದಾರದಿಂದ ಹೊಲಿದು ಪ್ಯಾಕ್ ಮಾಡಬೇಕು. ಈ ವಿಧಾನದಲ್ಲಿ ಎಷ್ಟು ವರ್ಷ ಇಟ್ಟರೂ ಹುಣಸೆ ಹಾಳಾಗುವುದಿಲ್ಲ. ದೇಹಕ್ಕೂ ಹಾನಿಕಾರಕವಲ್ಲ.

ಬಾಳೆ ಇಲ್ಲದ ತೋಟ ಬೇಡ
ನಾಲ್ಕು ತೆಂಗಿನ ಮರಗಳ ಗರಿಗಳು ಕಲೆಯುವ ಜಾಗದಲ್ಲಿ ಒಂದು ಬಾಳೆ ಗಿಡ ನೆಟ್ಟರೆ ತೆಂಗಿನ ಮರಗಳಲ್ಲಿ ಇಳುವರಿ ಹೆಚ್ಚುತ್ತದೆ. ಬಾಳೆ ಎಲೆ– ಕಂದು ತೆಂಗಿನ ತೋಟದಲ್ಲಿ ಬಿದ್ದು ಕೊಳೆತರೆ ನೆಲಕ್ಕೆ ರಂಜಕದ (ಪೊಟ್ಯಾಶ್) ಅಂಶ ಸಿಗುತ್ತದೆ. ಬಾಳೆ ಗಿಡ ವಾತಾವರಣವನ್ನು ತಂಪಾಗಿ ಇಡುವ ಕಾರಣ ನೀರಿನ ಮಿತವ್ಯಯವೂ ಸಾಧ್ಯವಾಗುತ್ತದೆ.
ತೆಂಗಿನ ಮರದಿಂದ ಹರಳು ಉದುರುವ ಬಾಧೆಯೂ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಹಿಂದಿನವರು ‘ಬಾಳೆ ಇಲ್ಲದ ತೋಟ– ಮಜ್ಜಿಗೆ ಇಲ್ಲದ ಊಟ’ ಎಂದು ಗಾದೆಯನ್ನೇ ಮಾಡಿದ್ದರು’.
(ಕಾಮಣ್ಣ ಅವರ ಸಂಪರ್ಕ ಸಂಖ್ಯೆ: 9731276194)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.