ಮಣ್ಣು ತುಂಬುವ ಸರಳ ಸಾಧನ
ನೀವು ಕಾಳು ಮೆಣಸು, ಅಡಿಕೆ ಸಸಿ, ಆಲಂಕಾರಿಕ ಗಿಡ, ವೈವಿಧ್ಯಮಯ ಹೂವಿನ ಗಿಡಗಳು... ಇಂಥ ಬಹು ಬೇಡಿಕೆಯುಳ್ಳ ಗಿಡಗಳನ್ನು ನರ್ಸರಿ ಮಾಡಲು ನಿರ್ಧರಿಸಿದ್ದೀರಿ. ಆದರೆ ಸಾವಿರಾರು ಪ್ಲಾಸ್ಟಿಕ್ ಕವರ್‌ಗಳಿಗೆ ಮಣ್ಣು ತುಂಬುವುದು ಹೇಗಪ್ಪಾ ಎಂದು ಚಿಂತಿಸುತ್ತಾ ಇರಬಹುದು.
ಅಂಥವರಿಗೆಲ್ಲಾ ಮಣ್ಣು ತುಂಬುವ ಸರಳ ಸಾಧನವನ್ನು ಕಂಡು ಹಿಡಿದಿದ್ದಾರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಚವತ್ತಿ ಸಮೀಪದ ಕುಮ್ಮನಮನೆಯ (ತಟ್ಟೀಸರ) ದಿನೇಶ ಶಾಂತಾರಾಮ ಹೆಗಡೆ. ನಿರುಪಯುಕ್ತ ಪರಿಕರಗಳನ್ನೇ ಉಪಯೋಗಿಸಿಕೊಂಡು ಸಿದ್ಧ ಮಾಡಿರುವ ಉಪಕರಣವಿದು.
ದಿನೇಶ ಹೆಗಡೆ ಮತ್ತು ಸುಬ್ರಾಯ ಹೆಗಡೆ ಸಹೋದರರು ಪ್ರಧಾನವಾಗಿ ಅಡಿಕೆ ಕೃಷಿ ಮಾಡಿದರೂ, ತೆಂಗು, ಭತ್ತದ ಕೃಷಿಯನ್ನೂ ಮಾಡುತ್ತಿದ್ದಾರೆ. ಅಲ್ಪ ಪ್ರಮಾಣದಲ್ಲಿ ಕಾಳು ಮೆಣಸು, ಏಲಕ್ಕಿಯೂ ಇದೆ. ಈ ಸಹೋದರರು ತಮ್ಮ ತೋಟದಲ್ಲಿ ಇನ್ನಷ್ಟು ಕಾಳು ಮೆಣಸಿನ ಕೃಷಿ ಮಾಡುವ ಉದ್ದೇಶದಿಂದ, ಅದನ್ನು ನರ್ಸರಿ ಮಾಡಲು ನಿರ್ಧರಿಸಿದರು.
ಹೊಸ್ಮನೆಯ ಕಾಳು ಮೆಣಸಿನ ಬೆಳೆಗಾರರಾದ ಶ್ರೀಧರ ಭಟ್‌ರ ಮಾರ್ಗದರ್ಶನದಲ್ಲಿ ನರ್ಸರಿಗೆ ಬೇಕಾಗುವ ಪರಿಕರಗಳನ್ನು (ಮಣ್ಣು, ಮರಳು, ಗೊಬ್ಬರ, ಪ್ಲಾಸ್ಟಿಕ್ ಕವರ್....) ಹೊಂದಿಸಿಕೊಂಡರು. ಆ ಸಮಯದಲ್ಲಿ ದಿನೇಶ ಅವರಿಗೆ ಪ್ಲಾಸ್ಟಿಕ್ ಕವರಿನಲ್ಲಿ ಮಣ್ಣು ತುಂಬುವುದೇ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ನಿರ್ಧರಿಸಿದರು. ಹಾಗೇ ಬಹಳ ವಿಚಾರಿಸಿ ಕಾರ್ಯರೂಪಕ್ಕೆ ಇಳಿಸಿದ್ದೇ ಈ ಸರಳ ಸಾಧನ.
ಇದಕ್ಕಾಗಿ ಅವರು ತಮ್ಮ ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡಿದ್ದಾರೆ. ಪ್ಲಾಸ್ಟಿಕ್‌ನ ಒಂದು ದೊಡ್ಡ ಚೀಲ (ಹಿಂಡಿ/ಉಪ್ಪಿನ ಚೀಲವಾದರೂ ಆದೀತು), ಎರಡು ಪೈಪಿನ ತುಂಡು (ಮೊಳ ಉದ್ದವಿರಲಿ), ಬಲಿಷ್ಠವಾದ ಮೂರು ಗೂಟ, ಬಿದಿರಿನ ಗಳದ ಪುಟ್ಟ ಸಲಾಕೆ, ಕಟ್ಟಲು ಬಳ್ಳಿ... ಇವಿಷ್ಟು ಇದ್ದರೆ ಇದನ್ನು ತಯಾರಿಸಬಹುದು.
ತಯಾರಿಸಿದ್ದು ಹೀಗೆ: ಪ್ಲಾಸ್ಟಿಕ್ ಚೀಲವನ್ನು ಅರ್ಧಕ್ಕೆ ಮಡಚಿಕೊಂಡಿದ್ದಾರೆ. ಚೀಲದ ತಳ ಭಾಗದ ಎರಡು ಮೂಲೆಗಳಿಗೆ ಪೈಪ್ ಹೋಗುವಷ್ಟೇ ರಂಧ್ರವನ್ನು ಮಾಡಿ, ಅದಕ್ಕೆ ಪೈಪನ್ನು ಹಾಕಿದ್ದಾರೆ.
ಪೈಪಿನ ತುಂಡು ಉಳಚಿ ಬೀಳದಂತೆ ಬಳ್ಳಿಯಿಂದ ಗಟ್ಟಿಯಾಗಿ ಕಟ್ಟಿಕೊಂಡರು. ಚೀಲದ ಮೇಲ್ಭಾಗವು ಮಣ್ಣನ್ನು ಬುಟ್ಟಿಯಿಂದ ಹೊಯ್ಯಲು ಅನುಕೂಲವಾಗಲಿ ಎಂದು ಬಿದಿರಿನ ಸಲಾಕೆಯನ್ನು ವೃತ್ತಾಕಾರವಾಗಿ ಸುತ್ತಿ ಹಾಕಿಕೊಂಡಿದ್ದಾರೆ. ಆಮೇಲೆ ಮೂರು ಕಡೆಗಳಿಗೆ ಭದ್ರವಾಗಿ ಗೂಟವನ್ನು ನೆಲಕ್ಕೆ ಹುಗಿದು, ಆ ಗೂಟಕ್ಕೆ ಪೈಪನ್ನು ಜೋಡಿಸಿದ ಪ್ಲಾಸ್ಟಿಕ್ ಚೀಲವನ್ನು ಕಟ್ಟಿದ್ದಾರೆ.
ಮೇಲಿನಿಂದ ಒಬ್ಬರು ಮಣ್ಣನ್ನು ಹಾಕಿದರೆ, ಕೆಳಗಡೆಗೆ ಪೈಪಿನಿಂದ ಬೀಳುವ ಮಣ್ಣಿಗೆ ಪುಟ್ಟ ಪುಟ್ಟ ಪ್ಲಾಸ್ಟಿಕ್ ಕವರ್‌ಗಳನ್ನು ಹಿಡಿದು ಇಬ್ಬರು ಮಣ್ಣು ತುಂಬಿಕೊಳ್ಳಬಹುದು. ಈ ವಿಧಾನದಲ್ಲಿ ಮಣ್ಣನ್ನು ಕೊಟ್ಟೆಗಳಿಗೆ ಬಹುಬೇಗನೆ ತುಂಬಲು ಸಾಧ್ಯ. ಕನಿಷ್ಠ ನಾಲ್ಕು ಜನರಿದ್ದರೆ, ಒಂದು ತಾಸಿನಲ್ಲಿ ಎಂಟು ನೂರು ಪ್ಲಾಸ್ಟಿಕ್ ಕೊಟ್ಟೆಗಳಿಗೆ ಮಣ್ಣು ತುಂಬಬಹುದು ಎನ್ನುತ್ತಾರೆ ದಿನೇಶ. ಸಂಪರ್ಕಕ್ಕೆ 9480789844
ಜೇನಿಗೆ ಮಣ್ಣಿನ ಪೆಟ್ಟಿಗೆ
ಮಣ್ಣಿನ ಜೇನು ಪೆಟ್ಟಿಗೆಯನ್ನು ಮಾಡುವ ವಿನೂತನ ಸಾಹಸಕ್ಕೆ ಕೈಹಾಕಿದವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಕುಂಬಾರಕೇರಿಯ ಯುವಕ ವಾಸುದೇವ ಗುನಗ.
ಕುಂಬಾರಿಕೆಯನ್ನೇ ವೃತ್ತಿಯಾಗಿಸಿಕೊಂಡಿರುವ ವಾಸುದೇವ ಗುನಗ ಅವರು ತಮ್ಮ ಹೊಸವಿಚಾರವನ್ನು ಕೃತಿರೂಪಕ್ಕಿಳಿಸಿ ಒಂದು ಪೆಟ್ಟಿಗೆಯಲ್ಲಿ ಜೇನು ಸಾಕಣೆ ಮಾಡುತ್ತಿದ್ದಾರೆ.
ಈ ಮಣ್ಣಿನ ಪೆಟ್ಟಿಗೆ ಪರಿಸರಕ್ಕೆ ಪೂರಕವಾಗಿದ್ದು, ಮರಗಳನ್ನು ಉಳಿಸುವುದರ ಜೊತೆಗೆ ವರುಷದ ಮೂರು ಕಾಲದಲ್ಲೂ ಪೆಟ್ಟಿಗೆಯೊಳಗಿನ ತಾಪಮಾನವನ್ನು ಸರಿದೂಗಿಸುತ್ತದೆ. ಪ್ರಾಕೃತಿಕವಾಗಿ ಜೇನುಹುಳಗಳು ಕಟ್ಟಿಗೆ ಗೂಡಿಗಿಂತ ಮಣ್ಣಿನ ಗೂಡುಗಳನ್ನೇ ಇಷ್ಟಪಡುತ್ತವಲ್ಲದೇ ಇಳುವರಿ ಕೂಡ ಅಧಿಕ ಎಂಬುದು ಅವರ ಅನಿಸಿಕೆ. ಮಳೆಗೆ ಹಾಳಾಗದ ಈ ಮಣ್ಣಿನ ಗೂಡುಗಳನ್ನು ಕಟ್ಟಿಗೆ ಗೂಡುಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಬಹುದಾಗಿದೆ.
ಆಳ ತೆಗೆಯುವ ಪರಿ
ಕೃಷಿ ಕೂಲಿಕಾರರೂ ಈಗ ಹೊಸ ಹೊಸ ಪ್ರಯೋಗಗಳನ್ನು ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಇದಕ್ಕೆ ಸಾಕ್ಷಿ ಯಲ್ಲಾಪುರ ತಾಲ್ಲೂಕಿನ ಕೊಡ್ಲಗದ್ದೆಯ ಸುರೇಶ ಲಕ್ಷ್ಮಣ ಪಟಗಾರ. ಇವರು ಭೂಮಿಯ ಆಳ ತೆಗೆಯುವ ಸರಳ ಪದ್ಧತಿಯನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ, ಕೊದೆ ಇರುವ ಬಿದಿರಿನ ಗೂಟವನ್ನು ಬಳಸಿ ಇಕ್ಕಟ್ಟಾದ ಜಾಗದಲ್ಲಿ ಸರಳವಾಗಿ ಆಳ ತೆಗೆಯುವುದು.
ಹೊಂಡದಲ್ಲಿ ಇಬ್ಬರ ಬದಲಾಗಿ ಒಬ್ಬರೇ ಸಾಕು. ಹೊಂಡದಲ್ಲಿ ಇಬ್ಬರಿದ್ದರೆ ಮಣ್ಣನ್ನು ಕಡಿಯುವುದು ಕಷ್ಟ.
ಹಸಿಮಣ್ಣಿನಿಂದ ಗೂಟದ ಹಿಡಿತ ಜಾರಲು ಶುರುವಾದರೆ ನೀರಿನಿಂದ ತೊಳೆದರೆ ಸಾಕು. ಮೂರು ಜನರು ಬೇಕಾಗುವ ಈ ಕೆಲಸಕ್ಕೆ ಇಬ್ಬರೇ ಸಾಕಲ್ಲದೆ ಕಡಿಮೆ ಅವಧಿಯಲ್ಲಿ ಈ ಗೂಟದ ಸಹಾಯದಿಂದ ಕೆಲಸ ಮುಗಿಸಬಹುದು. ಮಾಹಿತಿಗೆ: 9902043446.
ಬೀರಣ್ಣ ನಾಯಕ ಮೊಗಟಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.