ಕೃಷಿ ಭೂಮಿಯಲ್ಲಿ ಈಗ ಮೈ ಮುರಿದು ದುಡಿಯುವವರೇ ವಿರಳ. ಹೀಗಿರುವಾಗ ಹೊಸ ಪದ್ಧತಿ ಅಳವಡಿಸಿಕೊಂಡು ಪ್ರಯೋಗ ಮಾಡುವುದು, ಕೃಷಿ ಚಟುವಟಿಕೆಯ ಆಯ-ವ್ಯಯ ದಾಖಲಿಸುವುದು ಎಂದರೆ ಬಹಳ ಕಷ್ಟ ಎಂಬುದು ಬಹುತೇಕ ಕೃಷಿಕರ ಅಭಿಪ್ರಾಯ.
ಆದರೆ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲ್ಲೂಕು ಬಂಡಿಮನೆಯ ರೈತ ಶಿವರಾಮ ನಾರಾಯಣ ಹೆಗಡೆ. ಮನಸ್ಸಿದ್ದರೆ ಸಾಗುವಳಿ ಭೂಮಿಯಲ್ಲಿಯೇ ಪ್ರಯೋಗ ಮಾಡಿ, ಕೃಷಿಯ ಆಯವ್ಯಯಗಳನ್ನು ಸುವ್ಯವಸ್ಥಿತವಾಗಿ ಇಟ್ಟು, `ಲೆಕ್ಕಾಚಾರದ~ ಪ್ರಯೋಜನ ಪಡೆಯಲು ಸಾಧ್ಯ ಎಂಬುದಕ್ಕೆ ಅವರೊಂದು ನಿದರ್ಶನ.
1970 ರಲ್ಲಿ ಪಿಯುಸಿ ಮುಗಿಸಿದ ಮೇಲೆ ಪರಂಪರಾಗತ ಸಾಗುವಳಿ ಭೂಮಿ ಅಭಿವೃದ್ಧಿಪಡಿಸಲು ತಂದೆಗೆ ಹೆಗಲು ಕೊಟ್ಟರು. 6 ಸಹೋದರರ ಈ ಮನೆಯಲ್ಲಿ ಪೂರ್ಣಾವಧಿ ಕೃಷಿಯಲ್ಲಿ ತೊಡಗಿಕೊಂಡವರು ಶಿವರಾಮ ಹೆಗಡೆ ಮಾತ್ರ. ಅವರೊಬ್ಬ ಪ್ರಯೋಗಶೀಲ ಕೃಷಿಕ. ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ತೆಗೆಯುವುದು ಅವರ ಮುಖ್ಯ ಗುರಿ.
ಅವರು ಕೃಷಿ ಕಸುಬಿಗೆ ಇಳಿದಾಗ 4 ಎಕರೆ ಬಾಗಾಯ್ತ (ಅಡಿಕೆ ತೋಟ), 9 ಎಕರೆ ತರಿ (ಗದ್ದೆ) ಜಮೀನು ಹಾಗೂ ಖುಷ್ಕಿ ಬೇಣ ಇತ್ತು. ಮೊದಮೊದಲು ಹಿರಿಯರು ಹಾಕಿಕೊಟ್ಟ ಚೌಕಟ್ಟಿನಲ್ಲಿಯೇ ಸಾಗುವಳಿ ಮಾಡಿದರು. ಆದರೆ ದಿನ ಕಳೆದಂತೆ ಉತ್ಪನ್ನಕ್ಕಿಂತ ಖರ್ಚುಗಳೇ ಹೆಚ್ಚಾಗಿದ್ದನ್ನು ಗ್ರಹಿಸಿ ಇಳುವರಿ ವೃದ್ಧಿಗೆ ಯೋಜನೆ ರೂಪಿಸಿದರು. ಗದ್ದೆಯ ಭಾಗವನ್ನು ತೋಟವಾಗಿ ಪರಿವರ್ತಿಸಿದರು. ಹೀಗಾಗಿ ಅವರ ತೋಟದ ವಿಸ್ತೀರ್ಣ 9 ಎಕರೆಗೆ ಏರಿತು.
ತೋಟಗಳಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು, ಅದರ ಸಾಧಕ-ಬಾಧಕವನ್ನು ಸ್ವತಃ ಅರಿತರು. ಸಂಪೂರ್ಣ ಸಾವಯವ ಕೃಷಿಕರಾದರು. ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪನ್ನ ಪಡೆಯದೇ ಇದ್ದರೇ ರೈತನಿಗೆ ಉಳಿಗಾಲ ಇಲ್ಲ ಎಂಬುದು ಅವರಿಗೆ ಮನದಟ್ಟಾಗಿತ್ತು. ಹೀಗಾಗಿ ತೋಟದಲ್ಲಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿ ಎರೆಹುಳ ಗೊಬ್ಬರ ತಯಾರಿಸಿ ಅಡಿಕೆ ಸಸಿಗಳಿಗೆ ನೀಡಿದರು. ಉಳಿದ ಗೊಬ್ಬರವನ್ನು ಮಾರಾಟ ಮಾಡಿ ಒಂದಿಷ್ಟು ಹಣ ಸಂಪಾದಿಸಿದರು.
ಇಷ್ಟಾದರೂ ಅವರಿಗೆ ಸಮಾಧಾನ ಇರಲಿಲ್ಲ. ಉತ್ಪಾದನಾ ಖರ್ಚನ್ನು ಮತ್ತಷ್ಟು ತಗ್ಗಿಸಲೇಬೇಕಿತ್ತು. ಎರೆಹುಳ ಗೊಬ್ಬರ ತಯಾರಿಗೆ ಕಚ್ಚಾ ಸಾಮಗ್ರಿಗಳನ್ನು ಪೂರೈಸುವುದು ಖರ್ಚಿನ ಕೆಲಸವಾಗಿದ್ದರಿಂದ ಆ ಗೊಬ್ಬರವನ್ನು ತಯಾರಿಕೆಯನ್ನೇ ನಿಲ್ಲಿಸಿದರು.
ಆಮೇಲೆ ಸುಭಾಶ್ ಪಾಳೇಕರ ಅವರ ನೈಸರ್ಗಿಕ ಕೃಷಿ ಬಗ್ಗೆ ಆಸಕ್ತಿ ವಹಿಸಿ ಅದನ್ನು ಅನುಷ್ಠಾನಕ್ಕೆ ತಂದರು. ಇವರು ಹೊಸ ಹೊಸ ಪ್ರಯೋಗ ಮಾಡಿದಾಗ ಮೂದಲಿಸಿದವರೇ ಹೆಚ್ಚು. `ಶಿವರಾಂ ಭಾವ ತೋಟನೇ ತೇಕ್ಕತ್ನ~ ಎಂದು ಎಷ್ಟೋ ಜನರು ಹೇಳ್ದ್ದಿದೂ ಉಂಟು. ಆದರು ಅವರು ಎದೆಗುಂದಲಿಲ್ಲ. ಹೀಗಾಗಿ ಈಗ ಅವರ ತೋಟ ಫಲಭರಿತ, ಸಮೃದ್ಧವಾಗಿಯೇ ಇದೆ.
ಅವರು ಮೂರು ವರ್ಷದಿಂದ ಶೂನ್ಯ ಕೃಷಿ ಪದ್ಧತಿಯನ್ನೇ ಅನುಸರಿಸಿದ್ದಾರೆ. ಚೆನ್ನಾಗಿ ಮುಚ್ಚಿಗೆ ಮಾಡಿ, ಜೀವಾಮೃತ ನೀಡುತ್ತಾರೆ. ಕೊಟ್ಟಿಗೆಯಿಂದ ನೇರವಾಗಿ ತೋಟಕ್ಕೆ ಸ್ಲರಿ, ಗೋಮೂತ್ರವನ್ನು ಪೈಪ್ ಮೂಲಕ ರವಾನಿಸಿ ನೀಡುತ್ತಿದ್ದಾರೆ. ಈ ವಿಧಾನದಿಂದ ಉತ್ಪಾದನಾ ಖರ್ಚು ಶೇ 35-40 ರಷ್ಟು ಕಡಿಮೆಯಾಗಿದೆ ಎನ್ನುತ್ತಾರೆ. ಅಲ್ಲದೇ ಬೇಸಿಗೆಯಲ್ಲಿ ಗದ್ದೆಯಲ್ಲಿ ಉದ್ದು, ಹೆಸರು, ದನಗಳ ಮೇವನ್ನು ಬೆಳೆಯುತ್ತಿದ್ದಾರೆ.
ಖರ್ಚು ವೆಚ್ಚದ ದಾಖಲೆ
ಅನೇಕ ಕೃಷಿಕರು ಕೃಷಿಗೆ ತೊಡಗಿಸಿದ ಹಣ, ಅದರಿಂದ ಸಿಗುವ ಉತ್ಪನ್ನ. ಇತ್ಯಾದಿಗಳ ವ್ಯವಸ್ಥಿತ ದಾಖಲೆ ಇಡುತ್ತಿಲ್ಲ. ಇದರಿಂದ ಸಮಸ್ಯೆ ಸುಳಿಯಲ್ಲಿ ಬೀಳುತ್ತಿದ್ದಾರೆ. ಹೀಗಾಗಿ ಸರಿಯಾಗಿ ಲೆಕ್ಕ ಇಟ್ಟು ಕೃಷಿ ಮಾಡಿದರೆ ಮಾತ್ರ ಪ್ರಗತಿ ಬಗ್ಗೆ ತಿಳಿಯಲು ಸಾಧ್ಯ ಎನ್ನುವುದು ಹೆಗಡೆಯವರ ಅನುಭವದ ಮಾತು.
1990 ರಿಂದಲೂ ತಮ್ಮ ಜಮೀನಿನ ಖರ್ಚು, ಆದಾಯದ ಲೆಕ್ಕ ಇಟ್ಟಿದ್ದಾರೆ. 20 ವರ್ಷದ ಕೃಷಿಯ ಪ್ರಗತಿಯನ್ನು ಒಂದೇ ಪುಟದಲ್ಲಿ ದಾಖಲಿಸಿದ್ದಾರೆ. ಅವರ ಈ ಪ್ರಗತಿ ಪತ್ರಿಕೆಯನ್ನು ನೋಡಿದ ನಬಾರ್ಡ್ ಅಧಿಕಾರಿಗಳೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 1990 ರಲ್ಲಿ 30 ಕ್ವಿಂಟಲ್ ಅಡಿಕೆ ಇಳುವರಿ ಬಂದಿದ್ದರೆ 2009 ರಲ್ಲಿ 138 ಕ್ವಿಂಟಲ್ ಬಂದಿದೆ. ಇದೂ ದಾಖಲಾಗಿದೆ.
2001 ರವರೆಗೆ ಬೆಳೆಗಳಿಗೆ ಸಾಮಾನ್ಯ ದರ ಇತ್ತು. ಆಮೇಲೆ ಹವಾಮಾನದಲ್ಲಿ ವ್ಯತ್ಯಯ ಉಂಟಾಗಿ ನೀರಿಗೂ ಬರ ಬಂತು. ಕೃಷಿಕ ಶ್ರಮವಹಿಸಿ ಬೆಳೆದರೂ ಬೆಲೆ ಇಳಿಮುಖವಾಗಿ, ಉತ್ಪಾದನಾ ಖರ್ಚು ಶೇ 80 ರಿಂದ 90 ರಷ್ಟು ಏರಿಕೆ ಕಂಡಿತ್ತು. ಉಳಿದ ಹಣದಲ್ಲಿ ಸಾಗುವಳಿ ಮಾಡಿ, ಜೀವನ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣ ಆಗಿತ್ತು ಎಂದು ಶಿವರಾಮ ಹೆಗಡೆ ತಮ್ಮ ಪ್ರಗತಿ ಪತ್ರಿಕೆಯ ಪಟ್ಟಿಯಲ್ಲಿ ದಾಖಲಿಸಿದ್ದನ್ನು ವಿವರಿಸುತ್ತಾರೆ.
ಆಯ-ವ್ಯಯದ ಪಟ್ಟಿ ಮಾಡಿದರೆ ಕೃಷಿಯ ಆರ್ಥಿಕ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಲು ಸಾಧ್ಯ. ಅಲ್ಲದೇ ಸಹಕಾರಿ ಸಂಘ, ಬ್ಯಾಂಕುಗಳಿಂದ ಪಡೆದ ಸಾಲ ಯಾವ ರೀತಿಯಲ್ಲಿ ಸದ್ಬಳಕೆಯಾಗಿದೆ ಎಂಬುದನ್ನೂ ಅರಿಯಬಹುದು ಎಂದು ಹೇಳುತ್ತಾರೆ.
ಕೃಷಿ ಲೇಖನಗಳ ಸಂಗ್ರಹ
ಅವರು ಇದರ ಜತೆಗೆ ದಿನ ಪತ್ರಿಕೆಗಳ ಕೃಷಿ ಪುರವಣಿಗಳನ್ನು ಸಹ ಸಂಗ್ರಹಿಸುತ್ತಿದ್ದಾರೆ. ಹೀಗಾಗಿ ಅವರ ಬಳಿ 2001 ರಿಂದ ಈಚಿನ ಎಲ್ಲಾ ಪ್ರಮುಖ ದಿನ ಪತ್ರಿಕೆಗಳ ಕೃಷಿ ಪುರವಣಿ ಮತ್ತು ಇನ್ನಿತರ ವಿಶೇಷ ಪುರವಣಿಗಳಿವೆ. ಅವನ್ನೆಲ್ಲ ವಿಷಯವಾರು ವಿಂಗಡಿಸಿ ಇಟ್ಟಿದ್ದಾರೆ. ಅದರಿಂದ ದೊರೆತ ಮಾಹಿತಿಯನ್ನು ತಮ್ಮ ಜಮೀನಿನಲ್ಲಿ ಪ್ರಯೋಗಿಸುತ್ತಿದ್ದಾರೆ.
ಈ ಕೃಷಿ ಲೇಖನಗಳ ಸಂಗ್ರಹದಿಂದ ಕೃಷಿ ಸುಧಾರಣೆಗೆ ಅನುಕೂಲವಾಯಿತು. ಲೇಖನಗಳಲ್ಲಿ ಬರುವ ಹೊಸ ವಿಚಾರಗಳನ್ನು ಓದಿ, ಕೃಷಿಕರ ಸಂಪರ್ಕ ಮಾಡಿ, ನಮ್ಮ ಹೊಲದಲ್ಲಿ ಅಳವಡಿಸಿಕೊಂಡಿದ್ದೇನೆ ಎನ್ನುತ್ತಾರೆ.
`ಪತ್ರಿಕೆಯಲ್ಲಿ ಬಂದ ಎರೆಹುಳ ಗೊಬ್ಬರದ ವಿಷಯಗಳನ್ನು ನೋಡಿ, ಅದನ್ನು ತಯಾರಿಸುವ ರೈತರನ್ನು ನೇರವಾಗಿ ಸಂಪರ್ಕಿಸಿ ಮಾಹಿತಿ ಪಡೆದೆ. ಆಮೇಲೆ ಆ ಗೊಬ್ಬರವನ್ನು ಸ್ವತಃ ಸಿದ್ಧ ಮಾಡಿ, ನಮ್ಮ ಭೂಮಿಗೆ ಹಾಕಿದೆ. ಹೆಚ್ಚಾದ ಎರೆ ಗೊಬ್ಬರವನ್ನು ಮಾರಿದ್ದರಿಂದ ಸುಮಾರು 70 ಸಾವಿರ ರೂಪಾಯಿ ಗಳಿಸಲು ಸಾಧ್ಯವಾಯಿತು~ ಎಂದು ಹೇಳುವಾಗ ಅವರ ಮುಖದಲ್ಲಿ ತೃಪ್ತಿಯ ಭಾವ.
ವಿಶಿಷ್ಟ ಸಾಧನೆ, ಪ್ರಯೋಗಶೀಲತೆ, ಕೃಷಿಯ ಆಯ-ವ್ಯಯ ದಾಖಲೆಯನ್ನು ಇಡುತ್ತಿರುವುದಕ್ಕಾಗಿ ಅವರಿಗೆ ಅನೇಕ ಸನ್ಮಾನಗಳು ಸಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.