ADVERTISEMENT

ಬರಕ್ಕೆ ಬೆದರದೇ ಬದುಕು ಕಟ್ಟಿಕೊಂಡವರು!

ಸ್ವರೂಪಾನಂದ ಎಂ.ಕೊಟ್ಟೂರು
Published 27 ಫೆಬ್ರುವರಿ 2012, 19:30 IST
Last Updated 27 ಫೆಬ್ರುವರಿ 2012, 19:30 IST
ಬರಕ್ಕೆ ಬೆದರದೇ ಬದುಕು ಕಟ್ಟಿಕೊಂಡವರು!
ಬರಕ್ಕೆ ಬೆದರದೇ ಬದುಕು ಕಟ್ಟಿಕೊಂಡವರು!   

ವರ್ಷದಿಂದ  ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ತುಂಬಿ ತುಳುಕಬೇಕಿದ್ದ ಕೆರೆ- ಕಟ್ಟೆಗಳು, ಹಳ್ಳ- ಕೊಳ್ಳಗಳು, ಅಣೆಕಟ್ಟೆಗಳು ಬೇಸಿಗೆ ಬರುವ ಮುನ್ನವೇ ದಾಹ ಎನ್ನುತ್ತಿವೆ. ಕಾಲುವೆ ನೀರಾವರಿಯಂತೂ ಬರದ ಛಾಯೆಯಿಂದ ಬತ್ತಿ ಹೋಗಿದೆ.

ಮಳೆಯಾಶ್ರಿತ ಬೇಸಾಯದಿಂದ ತಮ್ಮ ಬೆವರಿಗೆ ತಕ್ಕ ಭಾಗ್ಯವಿಲ್ಲದೆ ರೈತರು ಬಸವಳಿದಿದ್ದಾರೆ. ಅಂತರ್ಜಲ ಬೇಸಾಯವನ್ನು ನಂಬಿ ಪಾತಾಳವನ್ನು ಜಾಲಾಡಿದರೂ ಒಂದು ತೊಟ್ಟು ನೀರು ಸಿಗದೇ  ಹೈರಾಣಾಗಿದ್ದಾರೆ. ಜೊತೆಗೆ ಆಗಾಗ್ಗೆ ಎದುರಾಗುವ ಅತಿವೃಷ್ಟಿ ಇವರ ಗಾಯದ ಮೇಲೆ ಬರೆ ಎಳೆದುಬಿಡುತ್ತದೆ. ಇದೆಲ್ಲಾ ರೈತರಿಗೆ ಸಂಕಷ್ಟದ ದಿನಗಳು ಎದುರಾಗುತ್ತಿವೆ ಎಂಬುದರ ಮುನ್ಸೂಚನೆ.

ಹೀಗೆ ಕಷ್ಟದಲ್ಲಿದ್ದ ರೈತರು, ಬೇಸಾಯದಿಂದ ಕೈ ಸುಟ್ಟುಕೊಳ್ಳುವಂತೆ ಮಾಡಿದ ಬರಕ್ಕೆ ಹಿಡಿ ಶಾಪ ಹಾಕದೇ ಬಿಟ್ಟಾರೆಯೇ? ಆದರೆ ಈ ಬರಕ್ಕೂ ಜಗ್ಗದೇ ನಮ್ಮ ನಡುವಿನ ಕೆಲವು ರೈತರು ಕೃಷಿ ಮಾಡಿ ಯಶಸ್ವಿಯಾಗುತ್ತಿದ್ದಾರೆ! ಇವರೆಲ್ಲಾ  ಅಕಾಲಿಕವಾಗಿ ಬಂದ ಬರವನ್ನೂ ಸದ್ಬಳಕೆ ಮಾಡಿಕೊಳ್ಳುವ ಚಾಣಾಕ್ಷರು. `ಬಪ್ಪುದು ಬರಲಿ, ಬಂದಿಪ್ಪುದು ನಿಲ್ಲಲಿ, ಬರಲೊಪ್ಪದ್ದನ್ನು ಭರಸೆಳೆದು ಭರಿಸುವ ಶಕ್ತಿ ಮನಕ್ಕಿರಲಿ~ ಎಂಬ ಭಾವನೆ ಈ ರೈತರದ್ದು.

ಇವರೆಲ್ಲ ಸಮೃದ್ಧವಾಗಿ ಮಳೆಯಾದರೆ ತಮ್ಮ ತಮ್ಮ ಜಮೀನುಗಳಲ್ಲಿ ಬಿತ್ತಿ ಬೆಳೆದು ಸುಗ್ಗಿಯನ್ನು ಹಿಗ್ಗಿನಿಂದ ಆಚರಿಸುತ್ತಾರೆ. ಒಂದು ವೇಳೆ ಬರಗಾಲ ಬಿತ್ತು ಎಂದು ಇಟ್ಟುಕೊಳ್ಳಿ. ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು, ಅಣೆಕಟ್ಟೆಗಳು ಸೇರಿದಂತೆ ನೀರಿನ ಶೇಖರಣೆಯ ತಾಣಗಳು ಇವರ ಹೊಟ್ಟೆಯನ್ನು ತಣ್ಣಗೆ ಇಡುತ್ತವೆ. ಇದೆಲ್ಲಾ ಇವರ ಲಾಭ ನಷ್ಟವನ್ನು ತಾಳೆ ಹಾಕಿ ಸರಿದೂಗಿಸುವ ಒಂದು ಪರ್ಯಾಯ ವ್ಯವಸ್ಥೆಯಾಗಿದೆ. ಅದು ಹೇಗೆ ಅಂತಿರಾ? ಇಲ್ಲಿ ನೋಡಿ.

ಕೆರೆ ಅಂಗಳದಲ್ಲಿ...
ಎಲ್ಲ ಕಡೆಯಂತೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಸುತ್ತಮುತ್ತ ಕೂಡ ಅರೆ ಬರೆ ಮಳೆಯಿಂದ ಕೆರೆಕುಂಟೆಗಳ ನೀರು ಬೇಗ ಕಡಿಮೆಯಾಗುತ್ತದೆ. ಬೇಸಿಗೆ ಬರುವ ಮುನ್ನವೇ ಕ್ಷಾಮ ಇಣುಕಿ ನೋಡುತ್ತದೆ. ಇದರಿಂದ ಮಳೆ ಹಾಗೂ ಕಾಲುವೆ ನೀರು ಅವಲಂಬಿಸಿದ ರೈತರು ಸ್ವಂತ ಜಮೀನುಗಳಲ್ಲಿ ಫಲ ಕಾಣದೇ ಕೈ ಸುಟ್ಟುಕೊಳ್ಳುತ್ತಾರೆ. ಆದರೆ ಇವರಲ್ಲಿ ಅನೇಕರು ಕಂಗೆಡದೆ ಕೆರೆಕುಂಟೆಗಳ ಹಿನ್ನೀರಿನ ಪ್ರದೇಶಗಳಲ್ಲಿ (ಕೆರೆ ಅಂಗಳ) ತಮ್ಮ ವ್ಯವಸಾಯ ಆರಂಭಿಸುತ್ತಾರೆ.
 
ತಾವೇ ಇಂತಿಷ್ಟು ಜಾಗ ಎಂದು ಗುರುತು ಮಾಡಿಕೊಂಡು ಸಾಗುವಳಿಗೆ ಇಳಿಯುತ್ತಾರೆ. ನೀರು ತಳಮಟ್ಟಕ್ಕೆ ತಲುಪಿದಾಗಲೇ ಇವರ ಕೃಷಿ ಚಟುವಟಿಕೆಗಳು ಗರಿಗೆದರಿಬಿಡುತ್ತವೆ.

ಅಂದಹಾಗೆ ಈ ಶೇಖರಣೆಯ ತಾಣಗಳಲ್ಲಿನ ಮಣ್ಣಿನ ಗುಣವೂ ಇವರ ಬೆಳೆಗಳನ್ನು ನಿರ್ಧರಿಸುತ್ತದೆ. ಮುಖ್ಯವಾಗಿ ಕಪ್ಪು, ಕೆಂಪು ಮಣ್ಣು ಹಾಗೂ ಮರಳು ಭೂಮಿ ಇವರಿಗೆ  ಹೆಚ್ಚು ಪ್ರಶಸ್ತವಾದದ್ದು. ಮಣ್ಣಿನ ಗುಣಕ್ಕೆ ಅನುಗುಣವಾಗಿ ತಾವು ಆಯ್ಕೆ ಮಾಡಿಕೊಂಡ ಸೌತೆ, ಹೀರೆಕಾಯಿ, ಕರಬೂಜ, ಕಲ್ಲಂಗಡಿ, ಅಲಸಂದಿ ಸೇರಿದಂತೆ ಇತರೆ ತರಕಾರಿ, ತೋಟಗಾರಿಕೆ ಹಾಗೂ ಹಣ್ಣಿನ ಬೆಳೆ ಹಾಕುತ್ತಾರೆ. ನೀರು ಸರಿದಂತೆಲ್ಲಾ ಅದರೊಂದಿಗೆ ಇವರೂ ಹಂತ-ಹಂತವಾಗಿ ಕೃಷಿ ವಿಸ್ತರಿಸಿಕೊಳ್ಳುತ್ತಾರೆ.

ದಿನಕಳೆದಂತೆ  ನೀರು ಇಂಗುವುದು, ಆವಿಯಾಗುವುದು ಸಹಜವಾಗಿ ಸಾಗುತ್ತದೆ. ಕೆರೆ ಅಂಗಳದಲ್ಲಿ ಹಾಕಿದ ಬೀಜಗಳು ಮೊಳಕೆ ಒಡೆಯುವ ವೇಳೆಗೆ ನೀರು ಸಂಪೂರ್ಣವಾಗಿ ಖಾಲಿಯಾಗಿ ತೇವಾಂಶ ಮಾತ್ರ ಉಳಿದಿರುತ್ತದೆ. ಆದರೆ ಮಣ್ಣಿನ ಭರ್ಜರಿ ಫಲವತ್ತತೆಯಿಂದ ಒಳ್ಳೆ ಪೈರು ಬರುತ್ತದೆ. ಇವು ಫಲ ಕೊಡುವ ವೇಳೆಗೆ ಮಣ್ಣಿನ ಮೇಲ್ಮೈ ತೇವಾಂಶ ಇಲ್ಲವಾಗುತ್ತದೆ. ತೇವಾಂಶ ಹಾಗೂ ಚಳಿಗಾಲದಲ್ಲಿ ಬೀಳುವ ಇಬ್ಬನಿಯೇ ಇವು ಬೆಳೆಯಲು ಸಾಕು.

ಹೀಗಾಗಿ ಬೇಸಿಗೆ ಬಲಿತುಕೊಳ್ಳುವ ವೇಳೆಗೆ ತರಕಾರಿ, ತೋಟಗಾರಿಕೆ ಹಾಗೂ ಹಣ್ಣಿನ ಬೆಳೆಗಳು ರೈತರ ಕೈ ಸೇರುತ್ತವೆ. ಬೀಜ ಹಾಕುವ ವೇಳೆ ಸ್ವಲ್ಪವೇ ಖರ್ಚು ಮಾಡಿದರೂ ಸಾವಿರಾರು ರೂಪಾಯಿ ಆದಾಯ ಸಿಗುತ್ತದೆ. ಬೇಸಿಗೆ ಪ್ರಖರವಾಗಿ ಕೆರೆ ಅಂಗಳದ ಭೂಮಿ ಬಾಯಿ ಬಿಡುವ ವೇಳೆಗೆ ಒಂದು ಬೆಳೆ ತೆಗೆಯುವಲ್ಲಿ ಈ ರೈತರು ಯಶಸ್ವಿಯಾಗುತ್ತಾರೆ.

ಇನ್ನೊಂದು ವಿಧಾನ
ಇದಿಷ್ಟು ಒಂದು ವರ್ಗದ ರೈತರ ಕತೆಯಾದರೆ ಮತ್ತೊಂದು ವರ್ಗದ ರೈತರದ್ದು ಬೇರೆಯದ್ದೇ ಕತೆ. ಇವರು ನೀರಿನ ಸೆಲೆ ಇರುವ ಕಡೆ ಗುಂಡಿಗಳನ್ನು ತೋಡಿ ನೀರು ಸಂಗ್ರಹವಾಗುವಂತೆ ನೋಡಿಕೊಳ್ಳುತ್ತಾರೆ. ಆ ನೀರಿನ ಅಕ್ಕಪಕ್ಕದ ಜಾಗವನ್ನು ಸ್ವಚ್ಛಗೊಳಿಸಿ ಸೊಪ್ಪು ತರಕಾರಿಗಳನ್ನು ಬೆಳೆಯಲು ಮಡಿ ಕಟ್ಟಿಕೊಳ್ಳುತ್ತಾರೆ. ಒರತೆ ನೀರನ್ನು ಮಡಿಳಿಗೆ ಹರಿಸಿ ಬೆಳೆ ತೆಗೆಯುತ್ತಾರೆ.

ಮೊದಲು ಹೇಳಿದ ರೈತರು ಕೇವಲ ಒಂದು ಬೆಳೆಗೇ ತೃಪ್ತಿಪಟ್ಟುಕೊಂಡರೆ, ಇವರು ಮಾತ್ರ ಹೆಚ್ಚುಕಡಿಮೆ ವರ್ಷ ಪೂರ್ತಿ ಇದೇ ಕಾಯಕವನ್ನು ಅವಲಂಬಿಸಿ ಬದುಕುತ್ತಾರೆ. ಹೀಗೆ ನೀರಿನ ಶೇಖರಣೆ ತಾಣಗಳಲ್ಲಿ ಬೆಳೆದ ತೋಟಗಾರಿಕೆ ಹಾಗೂ ಹಣ್ಣು, ಸೊಪ್ಪು ತರಕಾರಿಗಳನ್ನು ಪಟ್ಟಣ ಪ್ರದೇಶಗಳಲ್ಲಿ ಅಥವಾ ವಾರದ ಸಂತೆಯಲ್ಲಿ ವ್ಯಾಪಾರಿಗಳಿಗೆ ಮಾರಿ ಹಣ ಸಂಪಾದಿಸುತ್ತಾರೆ.

ಅದೇನೆ ಇರಲಿ, ಬರದಿಂದ ಬಸವಳಿಯುವ ರೈತರಿಗೆ ಹೀಗೆ ಬತ್ತಿ ಹೋದ ಕೆರೆ-ಕಟ್ಟೆಗಳು ಕೂಡ ಬದುಕು ಕಟ್ಟಿಕೊಡುತ್ತವೆ.  ಬರದ ಛಾಯೆಯಿಂದ ಆತ್ಮಹತ್ಯೆ, ವ್ಯವಸಾಯಕ್ಕೆ ಎಳ್ಳು ನೀರು ಬಿಟ್ಟು ಗುಳೆ ಹೋಗುವುದು ಸೇರಿದಂತೆ ಇತರೆ ಇಲ್ಲಸಲ್ಲದ ಯೋಚನೆಗಳತ್ತ ವಾಲುವ ರೈತರಿಗೆ ಇವರ ಬದುಕು ಸ್ಫೂರ್ತಿಯಾಗಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.