ADVERTISEMENT

ಬರದಲ್ಲೂ ಬಂಪರ್ ಬೆಳೆ

ರಾಜಾಸಾಬ ಎಂ.ತಾಳಕೇರಿ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ನೀರಿನ ಕೊರತೆಯಲ್ಲೂ ಇಲ್ಲಿನ ಟೊಮೆಟೊ ಸೇಬು ಹಣ್ಣಿನಂತೆ ಕಂಗೊಳಿಸುತ್ತಿದೆ. ಸಾಮಾನ್ಯ ಟೊಮೆಟೊ 50 ರಿಂದ 100 ಗ್ರಾಂ ತೂಕವಿದ್ದರೆ, ಇಲ್ಲಿಯ ಟೊಮೆಟೊ ಸರಾಸರಿ 300 ರಿಂದ 400 ಗ್ರಾಂ ತೂಗುತ್ತದೆ. `ಈ ರೀತಿಯೂ ಟೊಮೆಟೊ ಬೆಳೆಯಬಹುದು ಎಂಬುದು ನಮಗೇ ತಿಳಿದಿರಲಿಲ್ಲ' ಎಂದು ಅದನ್ನು ಬೆಳೆದ ರೈತರೇ ಅಚ್ಚರಿಯಿಂದ ನುಡಿಯುತ್ತಿದ್ದಾರೆ. ಕೆಲವರು 25 ಟನ್‌ನಷ್ಟು ಟೊಮೆಟೊ ಬೆಳೆದಿದ್ದಾರೆ!

ಇಂಥ ಅದ್ಭುತ ನಡೆದಿರುವುದು ಸೂಕ್ತ ಹವಾಮಾನ, ವಾತಾವರಣ, ಮಣ್ಣಿನ ಗುಣಮಟ್ಟದಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಹೆಸರುವಾಸಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ತೋಟಗಾರಿಕೆ ಇಲಾಖೆ ಅಳವಡಿಸಿರುವ ನೂತನ ತಂತ್ರಜ್ಞಾನದಿಂದ ಇಲ್ಲಿನ ರೈತರು ಬರದಲ್ಲೂ ಬಂಪರ್ ಟೊಮೆಟೊ ಬೆಳೆದಿದ್ದಾರೆ.

ಇಲಾಖೆಯು ಪ್ರತಿ ಹೋಬಳಿಯಲ್ಲಿ ಎರಡು ಗ್ರಾಮಗಳಂತೆ, ರೈತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಈ ಗ್ರಾಮಗಳ ರೈತರ ಒಂದೊಂದು ಎಕರೆಯಲ್ಲಿ ನೂತನ ತಂತ್ರಜ್ಞಾನ ಅಳವಡಿಸಿ, ಪ್ರಾಯೋಗಿಕವಾಗಿ ಬೆಳೆ ಬೆಳೆಯುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಜಿಲ್ಲೆಯ ಕೊಪ್ಪಳ ತಾಲ್ಲೂಕಿನಲ್ಲಿ ಇದಕ್ಕಾಗಿ ಒಟ್ಟು 87 ಫಲಾನುಭವಿಗಳನ್ನು ಆಯ್ಕೆ ಮಾಡಿದೆ.

ಈ ರೀತಿ ಆಯ್ಕೆ ಮಾಡಲಾದ ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಹೋಬಳಿಯ ಗಬ್ಬೂರ ಮತ್ತು ಹಾಲಹಳ್ಳಿ ಗ್ರಾಮಗಳ ರೈತರಾದ ಅಣ್ಣಪ್ಪ, ಕರಿಯಪ್ಪ ಪೂಜಾರ, ಮುರ್ತುಜಸಾಬ, ಮಂಜುನಾಥಗೌಡ ಮುಂತಾದವರ ಹೊಲಗಳಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರಾಯೋಗಿಕವಾಗಿ ಟೊಮೆಟೊ ಬೆಳೆ ಬೆಳೆಯಲಾಗಿದೆ. ಇದರಿಂದ ಹುಲುಸು ಫಸಲು ರೈತರದ್ದು.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಗಾಗಿ ಆಯ್ಕೆ ಮಾಡಿರುವ ಫಲಾನುಭವಿಗಳ ಪೈಕಿ ಬಹುತೇಕ ರೈತರು ಸಣ್ಣ ಹಿಡುವಳಿದಾರರು. ಅನೇಕ ವರ್ಷಗಳಿಂದ ತರಕಾರಿ ಬೆಳೆಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುತ್ತಿದ್ದವರು.

ಇಂತಹ ರೈತರನ್ನೇ ಈ ಯೋಜನೆಗಾಗಿ ಆಯ್ಕೆ ಮಾಡಿ, ರೈತರ ಒಂದು ಎಕರೆ ಜಮೀನಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆ, ಹನಿ ನೀರಾವರಿ, ರಸಾವರಿ ಮತ್ತು ಹಸಿರು ಮನೆ ತಾಂತ್ರಿಕತೆಯಲ್ಲಿ ಬೆಳೆದ ಸಸಿಗಳ ಆಯ್ಕೆ ಮುಂತಾದ ನವೀನ ತಂತ್ರಜ್ಞಾನ ಅಳವಡಿಸಿ ಟೊಮೆಟೊ ಬೆಳೆ ಬೆಳೆಯುವಂತೆ ರೈತರಿಗೆ ತರಬೇತಿ ನೀಡಲಾಗಿದೆ.

ಸೇಬು ಹಣ್ಣಿನ ನೋಟ
ಸುಪೀರಿಯಾ ಎಂಬ ಟೊಮೆಟೊ ತಳಿಯನ್ನು ಆಯ್ಕೆ ಮಾಡಿಕೊಂಡು, ಈ ಯೋಜನೆಯಡಿ ಬೆಳೆದ ಟೊಮೆಟೊ ಹೆಚ್ಚಿನ ಬೆಳೆ ನೀಡಿದೆ. ಸೇಬಿನಂತೆ ಕಂಗೊಳಿಸುತ್ತಿವೆ. ಪ್ರತಿ ಬಾರಿ ಕೊಯ್ಲು ಮಾಡಿದಾಗಲೂ ಸರಾಸರಿ 150 ರಿಂದ 200 ಬುಟ್ಟಿಗಳಷ್ಟು ಇಳುವರಿ ಬರುತ್ತಿದೆ. ಇದು ಸುಮಾರು 8 ರಿಂದ 10 ಕೆ.ಜಿ. ತೂಗುತ್ತಿದೆ. 

25 ಟನ್ ಟೊಮೆಟೊ ಬೆಳೆದ ಗಬ್ಬೂರಿನ ಮಂಜುನಾಥಗೌಡ ತಮ್ಮ ಬೆಳೆ ನೋಡಿ ಅಚ್ಚರಿ ಪಡುತ್ತಾರೆ. `ಬೆಳೆ ತುಂಬಾ ಆರೋಗ್ಯವಾಗಿದ್ದು, ಉತ್ತಮ ಗುಣಮಟ್ಟದ ಕಾಯಿಗಳನ್ನು ಕೊಡುತ್ತಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದು, ಖರೀದಿದಾರರು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಪ್ಲಾಸ್ಟಿಕ್ ಹೊದಿಕೆಯಿಂದಾಗಿ ಕಳೆ ನಿಯಂತ್ರಣವಾಗಿದೆ. ಹನಿ ನೀರಾವರಿ ಹಾಗೂ ರಸಾವರಿಯಿಂದಾಗಿ ನೀರಿನ ಸಮರ್ಪಕ ಬಳಕೆ ಮತ್ತು ಸಸ್ಯಗಳ ಸಮಗ್ರ ಪೋಷಣೆಯಿಂದಾಗಿ ಆಳಿನ ಖರ್ಚು ಸಹ ಕಡಿಮೆಯಾಗಿದೆ. ಲಾಭದಾಯಕವಾಗಿ ಬೆಳೆಯಲು ಸಾಧ್ಯವಾಗಿದೆ' ಎನ್ನುತ್ತಾರೆ.

ಶ್ರಮಕ್ಕೆ ಶ್ಲಾಘನೆ
ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಫಲಾನುಭವಿ ರೈತರ ಶ್ರಮವನ್ನು ಶ್ಲಾಘಿಸಿದ್ದಾರೆ. `ರೈತರಿಗೆ ಅಗತ್ಯ ಸಲಹೆ, ಸಹಕಾರ, ಸೌಲಭ್ಯ ಒದಗಿಸಲೆಂದೇ ತೋಟಗಾರಿಕೆ ಇಲಾಖೆ ಇದೆ. ರೈತರು ಇಲಾಖೆಯ ಸದುಪಯೋಗ ಪಡೆದುಕೊಂಡು, ತಮ್ಮ ಭೂಮಿಗೆ ತಕ್ಕುದಾದ ಬೆಳೆ ಬೆಳೆದು ಆರ್ಥಿಕ ಸದೃಢತೆಯನ್ನು ಸಾಧಿಸಬಹುದಾಗಿದೆ' ಎನ್ನುತ್ತಾರೆ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ಅಧಿಕಾರಿ ಮೂರ್ತಿ. ಕೇಂದ್ರದ ಸಂಪರ್ಕಕ್ಕೆ- 08539-230170.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.