ADVERTISEMENT

ಬರದಲ್ಲೂ `ಬರಗ'ದ ಮೆರುಗು

ಸುರೇಶ ಎನ್.ಧಾರವಾಡಕರ
Published 21 ಜನವರಿ 2013, 19:59 IST
Last Updated 21 ಜನವರಿ 2013, 19:59 IST

`ನೋಡ್ರಿ ಸಾಹೇಬ್ರ ಇನ್ನ್ ಮಳಿ ಬರಲ್ಲಿಲ್ಲ ಅಂದ್ರೂ ಈ ಬರಗ ಬರತೆತೀ'... ' ಮೊನ್ನೇ 2 ದಿನಾ ಆದ ಅಕಾಲಿಕ ಮಳೀನ ಸಾಕ್ ಇದಕ್ಕ್' ಹೀಗೆ ಕರಾರುವಕ್ಕಾಗಿ ಹೇಳುತ್ತಿದ್ದರು ಚಿದಾನಂದಪ್ಪ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಹೊಸಳ್ಳಿ ಕ್ಯಾಂಪ್‌ನಲ್ಲಿರುವ ರೈತರೆಲ್ಲಾ ಮಳೆ ಹಾಗೂ ಕಾಲುವೆ ನೀರಿಗಾಗಿ ಕಾಯ್ದು ಕುಳಿತಿದ್ದರೆ, ಚಿದಾನಂದಪ್ಪ ಮಾತ್ರ ಆಗಲೇ ಇಣುಕಿದ ಅಲ್ಪ ಮಳೆಯಲ್ಲಿಯೇ ಬರಗ ಬೆಳೆಯುವತ್ತ ಕೈ ಚಾಚಿದ್ದರು. ಹೊಸಳ್ಳಿ ಕ್ಯಾಂಪ್ ರೈತರ ಹೊಲದಲ್ಲಿದ್ದ ಪೈರು ನೀರಿಲ್ಲದೆ ಒಣಗುತ್ತಿದ್ದರೆ, ಚಿದಾನಂದಪ್ಪ ಅವರ ಹೊಲದಲ್ಲಿ ಬರಗದ ಪೈರು ಹಸಿರಿನಿಂದ ಕಂಗೊಳಿಸುತ್ತಿತ್ತು.

ರಾಯಚೂರು ಜಿಲ್ಲೆಯ ಸೋನಾ ಮಸೂರಿ ಅಕ್ಕಿ ರಾಜ್ಯದಲ್ಲಿ ಅಷ್ಟೆ ಅಲ್ಲದೇ ಹೊರ ರಾಜ್ಯಗಳಲ್ಲೂ ಪ್ರಸಿದ್ಧಿ ಪಡೆದಿದೆ. ಸೋನಾ  ಮಸೂರಿ ಬತ್ತ ಬೆಳೆಯಲು ಮಳೆಯ ಅಭಾವ ಹಾಗೂ ಅಣೆಕಟ್ಟುಗಳಲ್ಲಿ ನೀರು ಇಲ್ಲ. ಹಾಗಾಗಿ ಬತ್ತದ ನಾಡಿನಲ್ಲಿ `ಬರಗ' ಕಾಲಿರಿಸಿದೆ.

ಸದಾ ಹಸಿರು
ಹೊಸಳ್ಳಿ ಕ್ಯಾಂಪ್ ರೈತರು ಮಳೆ ಬರುವ ಸಮಯಕ್ಕೆ ರಾಸಾಯನಿಕ ಗೊಬ್ಬರ, ಕೀಟನಾಶಕ ಖರೀದಿ ಮಾಡಲು ಚಿತ್ತ ಹರಿಸಿದ್ದ ಸಮಯದಲ್ಲಿ ಚಿದಾನಂದಪ್ಪ ಹೊಲಕ್ಕೆ ತಿಪ್ಪೆಗೊಬ್ಬರ ಸಾಗಿಸುತ್ತಿದ್ದರು. ತಿಪ್ಪೆಗೊಬ್ಬರಕ್ಕಾಗಿ ಅವರ ಮನೆಯಲ್ಲಿ 12 ಎಮ್ಮೆ, 3 ಹಸು, 2 ನಾಟಿ ಹಸು, 2 ಎತ್ತುಗಳಿವೆ.  ಸಾವಯವ ಗೊಬ್ಬರ ಬಳಕೆ ನೋಡಿದಾಗ ಅನ್ನಿಸಿದ್ದು ಅವರೊಬ್ಬ ಪಕ್ಕಾ ಸಾವಯವ ಕೃಷಿಕ ಅಂತ. ಹೀಗಾಗಿ ರಾಸಾಯನಿಕ ಗೊಬ್ಬರ ಸಿಗುತ್ತೋ ಇಲ್ಲವೋ ಎಂಬ ಆತಂಕ ಅವರ ಮುಖದಲ್ಲಿ ಕಾಣಲಿಲ್ಲ.

ಈ ವರ್ಷ ಬಿದ್ದ ಮಳೆ ಪ್ರಮಾಣ ತುಂಬಾ ಕಡಿಮೆ. ಹಾಕಿದ ಬೀಜ ಎಲ್ಲವೂ ಹುಟ್ಟುತ್ತದೆ ಎಂಬ ನಂಬಿಕೆ. ಕಾರಣ ಭೂ ತಾಯಿ ನಾವು ಬಿತ್ತಿರುವ ಒಂದು ಕಾಳಿಗೆ ನಾಲ್ಕು ಕಾಳು ಕೊಡುತ್ತಾಳೆ ಎಂಬ ಅಚಲವಾದ ನಂಬಿಕೆ ಚಿದಾನಂದಪ್ಪ ಅವರದು. `ಬರಗ' ಬಿತ್ತನೆ ಮಾಡಿದ್ದು ಎರಡು ಎಕರೆ ಹೊಲದಲ್ಲಿ. ಬಿತ್ತನೆಗೆ ಮೊದಲು ತಿಪ್ಪೆಗೊಬ್ಬರ ಹರಡಿದ್ದಾರೆ. ರಾಣೇಬೆನ್ನೂರಿನ ನಾಗಪ್ಪ ನಿಂಬೆಗೊಂದಿ ಅವರಿಂದ ಬರಗ ಬೀಜ ಖರೀದಿ. 2012ರ ಆಗಸ್ಟ್ ತಿಂಗಳಲ್ಲಿ ಅಲ್ಪಸ್ವಲ್ಪ ಬಿದ್ದ ಹುಬ್ಬಿ ಮಳೆಯನ್ನೇ ನಂಬಿ ಬಿತ್ತನೆ ಕೈಗೊಂಡರು.

ಬರಗದ ಪೈರು ಚೆನ್ನಾಗಿ ಮೊಳಕೆ ಬಂದ ನಂತರ ಎರಡು ಬಾರಿ ಕುಂಟೆ ಹೊಡೆದಿದ್ದಾರೆ. ಪೈರಿನ ಬುಡಕ್ಕೆ ಮಣ್ಣು ಆಧಾರವಾಗಲಿ ಎಂದು. ಮಳೆ ಬಾರದ ಕಾರಣ ಮತ್ತೆ ಗೊಬ್ಬರ ಹಾಕಲಿಲ್ಲ.  ಆದರೆ, ಇತ್ತೀಚೆಗೆ ಎರಡು ದಿನ ಬಂದ ಅಕಾಲಿಕ ಮಳೆಯಿಂದಾಗಿ ಭೂಮಿಯಲ್ಲಿ ತೇವಾಂಶ ಇದೆ. ಅದಕ್ಕೆ ಕಾರಣ ಬಿತ್ತನೆ ಮಾಡುವ ಮೊದಲು ಹರಡಿದ ತಿಪ್ಪೆಗೊಬ್ಬರ. ತಿಪ್ಪೆಗೊಬ್ಬರಕ್ಕೆ ತೇವಾಂಶ ಹಿಡಿದಿಡುವ ಸಾಮರ್ಥ್ಯ ಇದೆ. ಹಾಗಾಗಿ ಬರಗದ ಪೈರು ಒಣಗಿಲ್ಲ. ಕಳೆದ ಕೆಲ ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಾ ಬಂದಿರುವ ಚಿದಾನಂದಪ್ಪ, ಮೊದಲು ರಾಸಾಯನಿಕ ಕೃಷಿ ಮಾಡಿದವರೇ. ಆದರೆ, ಅದು ಭೂಮಿಗೂ ಹಾಗೂ ಆರೋಗ್ಯಕ್ಕೂ ಹಾನಿಕಾರಕ ಅಂತ ತಿಳಿದ ಮೇಲೆ ರಾಸಾಯನಿಕ ಕೃಷಿಗೆ ವಿದಾಯ ಹೇಳಿದ್ದಾರೆ.

ಬೆಳೆ ಪರಿವರ್ತನೆ
ಬತ್ತವನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಿದ್ದ ಚಿದಾನಂದಪ್ಪ ಕಳೆದ ವರ್ಷ ಬರ ಬಂದಾಗಲೂ ಹೆದರಲಿಲ್ಲ. ತುತ್ತಿನ ಚೀಲ ತುಂಬುವ ಸಲುವಾಗಿ ನವಣೆ ಬೆಳೆದು ಸೈ ಎನಿಸಿಕೊಂಡಿದ್ದರು. ಈಗ ಬರಗ ಬಿತ್ತನೆ ಮಾಡಿದ್ದಾರೆ. ಬರಗದ ಮಧ್ಯೆ ಅಕ್ಕಡಿ ಸಾಲು ಅಂತ ತೊಗರಿ ಬಿತ್ತನೆ ಮಾಡಿದ್ದಾರೆ. ತೊಗರಿ ಕೂಡಾ ಚೆನ್ನಾಗಿ ಬೆಳೆದಿದೆ.

ಕಳೆದ ವರ್ಷ ಬತ್ತದ ದೇಸಿ ತಳಿಗಳಾದ `ನವರ' ಹಾಗೂ `ರತನಸಾಗರ್' ಬೆಳೆದಿದ್ದರು. ಮಳೆ ಅಭಾವದಿಂದ ಅರಿಷಿಣ ಬೆಳೆ ಬಾರದಿದ್ದಾಗ ಎದೆಗುಂದದೇ ತಮಿಳುನಾಡಿನಿಂದ ತಂದ ಸಿಹಿ ಉಳ್ಳಾಗಡ್ಡೆ ಬೆಳೆದಿದ್ದರು. ಹೀಗೆ ತಮ್ಮ ಹೊಲವನ್ನೇ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡ ಚಿದಾನಂದಪ್ಪ ಇತರ ರೈತರಿಗಿಂತ ಭಿನ್ನವಾಗಿ ಕಾಣುತ್ತಾರೆ. ಬರಗವನ್ನೇ ಯಾಕೇ ಆಯ್ಕೆ ಮಾಡಿಕೊಂಡಿರಿ ಎಂಬ ಪ್ರಶ್ನೆಗೆ ಚಿದಾನಂದಪ್ಪ ಹೀಗೆ ಉತ್ತರಿಸುತ್ತಾರೆ.

ಆಹಾರವೆಂದರೆ ಈಗ ಕೇವಲ ಅನ್ನ, ಚಪಾತಿ. ಜೊತೆಗೊಂದಿಷ್ಟು ಪಲ್ಯ ಚಟ್ನಿ. ಈ ಆಹಾರ ತಿಂದ ನಮ್ಮ ಶರೀರ ಗಟ್ಟಿಯಾಗಿರಲು ಹೇಗೆ ಸಾಧ್ಯ. ಸಿರಿ ಧಾನ್ಯಗಳ ಸಮಕ್ಕೆ ಅಕ್ಕಿ, ಗೋಧಿ ಎಂದೂ ನಿಲ್ಲುವುದಿಲ್ಲ. ನಮ್ಮ ಆಹಾರ ಪದ್ಧತಿಯ ದೊಡ್ಡ ದುರಂತ ಎಂದರೆ ಸಾಮೆ, ಸಜ್ಜೆ, ನವಣೆ, ಹಾರಕ, ಬರಗ, ಊದಲು ಅಂತೆಲ್ಲಾ ಸತ್ವಯುತವಾಗಿದ್ದ ಆಹಾರವೆಲ್ಲಾ ಮೂಲೆಗುಂಪಾಗಿದ್ದು.

ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಎಷ್ಟೋ ಬಗೆಯ ರೋಗಗಳು ನಮ್ಮನ್ನು ಆವರಿಸಿಕೊಂಡಿವೆ. ಈ ರೋಗಗಳಿಗೆ ಅನನ್ಯ ಕಡಿವಾಣ ಎಂದರೆ, ಪೋಷಕಾಂಶಗಳ ಗಣಿಯಾದ ಸಿರಿಧಾನ್ಯಗಳು. ಎಷ್ಟೇ ಕಡಿಮೆ ಮಳೆ ಸುರಿಯಲಿ, ವಾತಾವರಣ ಎಂಥದ್ದೇ ಇರಲಿ, ಅಲ್ಲಿ ಸಿರಿಧಾನ್ಯ ಎಂದೂ ಕೈ ಕೊಡುವುದಿಲ್ಲ. ಅದಕ್ಕೇ ಈ ಪ್ರಯೋಗ. ಕಾಲಚಕ್ರ ಮತ್ತೆ ತಿರುಗುತ್ತಿದೆ ಅನಿಸಿತು.

ಚಿದಾನಂದಪ್ಪ ಅವರ ಹೊಲದಲ್ಲಿ ಬೆಳೆದ ಬರಗ ಎಷ್ಟು ಉಪಯುಕ್ತವಾಗಿದೆ ಎಂದರೆ, ಹೊಸಳ್ಳಿ ಕ್ಯಾಂಪ್‌ನಲ್ಲಿರುವ ಪ್ರೌಢಶಾಲೆಯ ಮುಖ್ಯಗುರುಗಳು ವಿದ್ಯಾರ್ಥಿಗಳನ್ನು ಇವರ ಹೊಲಕ್ಕೆ ಶೈಕ್ಷಣಿಕ ಪ್ರವಾಸ ಅಂತ ಕರೆದುಕೊಂಡು ಬಂದು, ಮೂಲೆಗುಂಪಾಗಿರುವ ಈ ಸಿರಿಧಾನ್ಯ ಹೇಗೆ ಇರುತ್ತದೆ, ಅದರ ಮಹತ್ವವೇನು ಎಂಬುದನ್ನು ತಿಳಿಸುತ್ತಾ ಅದನ್ನು ಉಳಿಸುವ ಮತ್ತು ಬಳಸುವ ಅವಶ್ಯಕತೆ ಮನಗಾಣಿಸಿದ್ದು ವಿಶೇಷವಾಗಿತ್ತು.

ಮೊಬೈಲ್ ಟವರ್‌ಗಳ ಹಾವಳಿಯಿಂದ ಕಾಣದಾಗಿದ್ದ ಗುಬ್ಬಿಗಳ ಸಣ್ಣ ಗುಂಪೊಂದು ಇವರ ಹೊಲದಲ್ಲಿ ಬೀಡು ಬಿಟ್ಟಿದೆ. ಅವು ಬರಗದ ಕಾಳನ್ನು ಕುಕ್ಕಿ ತಿನ್ನುವುದನ್ನು ನೋಡಲು ಖುಷಿ ಎನಿಸುತ್ತದೆ ಮತ್ತು ಬರಗದ ಕಾಳಿನಲ್ಲಿರುವ ಸತ್ವದ ಮಹತ್ವ ಇದರಿಂದ ನಮಗೆ ಅರ್ಥವಾಗುತ್ತದೆ ಎನ್ನುತ್ತಾರೆ ಚಿದಾನಂದಪ್ಪ.

ರಾಯಚೂರಿನ ಬಿಸಿಲಿಗೆ ಜಗ್ಗದೇ, ಮಳೆಯ ಅಭಾವದಲ್ಲೂ ಸಾವಯವ ಕೃಷಿಯಲ್ಲಿ ನವಣೆ, ಬರಗದಂತಹ ಸಿರಿಧಾನ್ಯಗಳನ್ನು ಬೆಳೆದು ಬರಕ್ಕೆ ಸೆಡ್ಡು ಹೊಡೆದು ಭರವಸೆ ಮೂಡಿಸಿದ್ದಾರೆ ಚಿದಾನಂದಪ್ಪ.

ತುತ್ತಿನ ಚೀಲ ತುಂಬಿಸಲು ಬೇಕಾದ ಒಡಲಿಗೆ ನೀರು ಸಿಗುತ್ತಿಲ್ಲ. ಪಿಜ್ಜಾ, ಬರ್ಗರ್ ತಿನ್ನುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಅನ್ನ ಸಿಗುವುದೂ ಕಷ್ಟ. ಅದಕ್ಕೆ ಮೊದಲ ಹೆಜ್ಜೆಯಾಗಿ ಬತ್ತದ ನಾಡಿನಲ್ಲಿ ಬರಗ ಕಾಲಿಟ್ಟಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.