ADVERTISEMENT

ಬಹು ಬಳಕೆಯ ಬೆಂಗಳೂರು ನೀಲಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬೆಂಗಳೂರು ಬ್ಲೂ (ನೀಲಿ) ದ್ರಾಕ್ಷಿಗೆ 150 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಇದನ್ನು ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತಿದೆ.

ತಿನ್ನುವುದಕ್ಕೆ ಮಾತ್ರವಲ್ಲದೆ ವೈನ್ ತಯಾರಿಕೆಗೂ ಬಳಸಬಹುದು ಎನ್ನುವುದು ಇದರ ವಿಶೇಷ. ಏಕೆಂದರೆ ಸಾಮಾನ್ಯವಾಗಿ ಫ್ರೆಂಚ್ ದ್ರಾಕ್ಷಿ ವೈನ್ ತಯಾರಿಕೆಗೆ ಸೂಕ್ತವಾಗಿದ್ದರೂ ಅದನ್ನು ಹಣ್ಣಿನ ರೂಪದಲ್ಲಿ ತಿನ್ನಲು ಸಾಧ್ಯವಿಲ್ಲ. ಆದರೆ ಬೆಂಗಳೂರು ಬ್ಲೂ ದ್ರಾಕ್ಷಿಯಿಂದ ವೈನ್, ಜ್ಯೂಸ್, ಸ್ಪೀರಿಟ್ ತಯಾರಿಸಬಹುದು. ಅಲ್ಲದೆ, ತಿನ್ನಲು ಕೂಡ ರುಚಿಯಾಗಿರುತ್ತದೆ. ವರ್ಷ ಪೂರ್ತಿ ಫಲ ನೀಡುವುದು ಇದರ ಮತ್ತೊಂದು ವೈಶಿಷ್ಟ್ಯತೆ.

ಇದು ಸಣ್ಣ ಹಾಗೂ ಮಧ್ಯಮ ಹಿಡುವಳಿದಾರರ ಆಶಾಕಿರಣ ಎಂದರೆ ತಪ್ಪಲ್ಲ. ಅರ್ಧ ಎಕರೆ, ಒಂದು ಎಕರೆಯಂತಹ ಸಣ್ಣ ಸಣ್ಣ ಭೂ ಪ್ರದೇಶದಲ್ಲೂ ಇದರ ಕೃಷಿ ಸಾಧ್ಯ. ಅಲ್ಲದೆ ಬೆಲೆ ಕೂಡ ದುಬಾರಿಯೇನಲ್ಲ. ಬಡ ಹಾಗೂ ಮಧ್ಯಮ ವರ್ಗದ ಜನತೆಯ ಕೈಗೆಟಕುತ್ತದೆ. ಹೀಗಾಗಿ  ಬೆಂಗಳೂರು ನೀಲಿಗೆ `ಬಡವರ ದ್ರಾಕ್ಷಿ~ ಎಂಬ ಅನ್ವರ್ಥ ನಾಮವೂ ಇದೆ.

ನಂದಿ ಕಣಿವೆ ಪ್ರದೇಶದಲ್ಲಿ ಇದರ ವ್ಯವಸಾಯ ವ್ಯಾಪಕವಾಗಿದೆ. ನಮ್ಮ ರಾಜ್ಯದ ಸುಮಾರು 4500 ಹೆಕ್ಟೇರ್ ಪ್ರದೇಶದಲ್ಲಿ ಇದನ್ನು  ಬೆಳೆಯುತ್ತಿರುವ ಅಂದಾಜಿದೆ. ಅಲ್ಲದೆ ಈ ನೀಲಿ ದ್ರಾಕ್ಷಿ ಬೆಳೆಯುವ ಏಕೈಕ ರಾಜ್ಯ ನಮ್ಮದು ಎಂಬ ಹೆಗ್ಗಳಿಕೆ ಇದ್ದರೂ ಸರ್ಕಾರದ ಪ್ರೋತ್ಸಾಹ ಮಾತ್ರ ಶೂನ್ಯ.


ವ್ಯವಸಾಯ ವಿಧಾನ
ಸಾಮಾನ್ಯವಾಗಿ ಫೆಬ್ರುವರಿ ತಿಂಗಳಿನಲ್ಲಿ ದ್ರಾಕ್ಷಿ ಕಡ್ಡಿಗಳನ್ನು ನೆಡುವ ಪ್ರಕ್ರಿಯೆ ಆರಂಭಿಸುವುದು ಉತ್ತಮ. ಆರೋಗ್ಯವಂತ ಬಳ್ಳಿಯನ್ನು ಮೂರು ತಿಂಗಳುಗಳ ಕಾಲ ಪ್ಯಾಕೇಟ್‌ನಲ್ಲಿ ಹಾಕಿ ಪೋಷಣೆ ಮಾಡಬೇಕು.

ಮೂರು ಅಡಿ ಉದ್ದ ಮೂರು ಅಡಿ ಅಗಲ ಮೂರು ಅಡಿ ಆಳದ ಗುಂಡಿಯನ್ನು ತೆಗೆದು ಅದು ನೈಸರ್ಗಿಕವಾಗಿ ಸಂಪೂರ್ಣ ಒಣಗಲು ಬಿಡಬೇಕು. ಮೂರು ತಿಂಗಳು ಪ್ಯಾಕೆಟ್‌ನಲ್ಲಿ ಪೋಷಣೆ ಮಾಡಿದ ಬಳ್ಳಿಗಳನ್ನು ಈ ಗುಂಡಿಗಳಲ್ಲಿ ಕೆಂಪುಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದ ಮಿಶ್ರಣ ಹಾಕಿ ನೆಡಬೇಕು. ಅಲ್ಲದೆ, ಪ್ರತಿ ಗುಂಡಿಯಲ್ಲೂ 2 ಬಾಂಡಲಿಯಷ್ಟು  ಹೊಂಗೆ ಹಿಂಡಿ ಮತ್ತು ಬೇವಿನ ಹಿಂಡಿ ಪುಡಿ ಮಿಶ್ರಣದ ಮರಳನ್ನು ಹಾಕಬೇಕು. ಹೀಗೆ ನೆಟ್ಟ ಸಸಿ ಮುಂದಿನ ಮೂರು ತಿಂಗಳಲ್ಲಿ ಬಳ್ಳಿಯಾಗಿ ಹರಡಲು ಪ್ರಾರಂಭಿಸುತ್ತದೆ.

ಇದಕ್ಕೆ ಆಸರೆ ನೀಡಲು ಕಲ್ಲು ನೆಟ್ಟು ಚಪ್ಪರ ಹಾಕಬೇಕು. ಮೂರು ತಿಂಗಳಲ್ಲಿ ಬಳ್ಳಿ ಈ ಚಪ್ಪರದ ಮೇಲೆ ಹರಡುವಷ್ಟು ದೊಡ್ಡದಾಗುತ್ತದೆ. ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹಾಕಿ ಸರಿಯಾಗಿ ಪೋಷಣೆ ನೀಡಿದಲ್ಲಿ 9 ತಿಂಗಳಲ್ಲಿ ಮೊದಲನೇ ಇಳುವರಿ ಸಿಗುತ್ತದೆ. ಆದರೆ, ಮೊದಲನೇ ಇಳುವರಿಯನ್ನು (ಫೆಭ್ರುವರಿಯಲ್ಲಿ ನೆಟ್ಟ ಬಳ್ಳಿಯಿಂದ ನವೆಂಬರ್‌ನಲ್ಲಿ ಸಿಗುವ ಹಣ್ಣು) ಚಳಿಗಾಲದಲ್ಲಿ ಕೀಳುವುದು ಸರಿಯಲ್ಲ. ಅದನ್ನು ಬಳ್ಳಿಯಲ್ಲೆೀ ಜನವರಿ ಮಧ್ಯದ ವರೆಗೆ ಬಿಡಬೇಕು.

ಹೀಗೆ ಮೊದಲ ಕಟಾವನ್ನು ಒಂದು ವರ್ಷದ ನಂತರ ಮಾಡಬೇಕು. ಮುಂದಿನ ಪ್ರತಿ ಆರು ತಿಂಗಳಿಗೊಮ್ಮೆ ಫಸಲು ಕಟಾವಿಗೆ ಬರುತ್ತದೆ. ಎಕರೆಯೊಂದಕ್ಕೆ ಸುಮಾರು ಮೂರು ಲಕ್ಷ ರೂಪಾಯಿ ಖರ್ಚಾಗುತ್ತದೆ. ಆದರೆ ಸುಮಾರು 20 ವರ್ಷಗಳ ವರೆಗೆ ನಿರಂತರವಾಗಿ ಫಸಲನ್ನು ನೀಡುತ್ತದೆ. ಒಂದು ಎಕರೆಗೆ  ಪ್ರತಿ ಕಟಾವಿನಲ್ಲೂ 12 ರಿಂದ  15 ಟನ್ ಹಣ್ಣು ಸಿಗುತ್ತದೆ. ಈ ದ್ರಾಕ್ಷಿಯಿಂದ ವೈನ್ ತಯಾರಿಕೆಗಾಗಿಯೇ ಚನ್ನಪಟ್ಟಣ ತಾಲ್ಲೂಕು ಗಂಗೇನದೊಡ್ಡಿಯಲ್ಲಿ ವೈನರಿ ಸ್ಥಾಪಿಸಲಾಗಿದೆ, ಇಲ್ಲಿ ವೈನ್ ತಯಾರಿಕೆ ಬಗ್ಗೆ ಮಾಹಿತಿ ನೀಡುವ `ವೈನ್ ಟೂರಿಸಂ~ ಕೂಡ ಇದೆ.

ವಿದೇಶಿ ಮೂಲದ, ವರ್ಷಕ್ಕೊಮ್ಮೆ ಮಾತ್ರ ಫಸಲು ಕೊಡುವ ಫ್ರೆಂಚ್ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಸರ್ಕಾರದ ಅನುದಾನದೊಂದಿಗೆ ಕೆಲವು ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡುತ್ತಿವೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ನಬಾರ್ಡ್ ನೆರವಿನೊಂದಿಗೆ ಕಿಲೋಗೆ 20 ರಿಂದ 30 ರೂ ದರ ನೀಡುತ್ತದೆ.
 
ಆದರೆ ನಮ್ಮದೇ ನೆಲದ ತಳಿಯಾದ ಬಹುಬಳಕೆಯ ಬೆಂಗಳೂರು ಬ್ಲೂಗೆ ಕರ್ನಾಟಕ ಸರ್ಕಾರ ಈ ಸೌಲಭ್ಯ ಕಲ್ಪಿಸಿಲ್ಲ. ನಮ್ಮ ರೈತರಿಗೂ ಸಹಾಯಧನ ಸಿಕ್ಕರೆ ಪ್ರತಿ ಕಿಲೋಗೆ 4 ರಿಂದ 6 ರೂಪಾಯಿ ಹೆಚ್ಚಿಗೆ ದೊರೆಯುತ್ತದೆ. ವರ್ಷವಿಡೀ ಫಸಲು ಕೊಡುವ ಸ್ಥಳೀಯ ತಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಮಾಹಿತಿಗೆ: 99450 99999.

ವೈಶಿಷ್ಟ್ಯಗಳು
* 150 ವರ್ಷಗಳ ಇತಿಹಾಸ ಹೊಂದಿರುವ ದ್ರಾಕ್ಷಿ.
* ರಾಜ್ಯದಲ್ಲಿ ಮಾತ್ರ ಬೆಳೆಯುವ ದ್ರಾಕ್ಷಿ.
* 12 ತಿಂಗಳುಗಳ ಕಾಲವೂ ಫಲ ನೀಡುವ ಏಕೈಕ ಪ್ರಭೇದ.
* ತಿನ್ನಲು ಬಳಸಬಹುದು. ಜೊತೆಯಲ್ಲೆೀ ವೈನ್, ಜ್ಯೂಸ್ ಹಾಗೂ ಸ್ಪೀರಿಟ್ ಬಳಕೆಗೆ ಉಪಯೋಗಿಸಬಹುದು.
ಬಹು ಉಪಯೋಗಿ, ಸಿಹಿ ದ್ರಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.