ADVERTISEMENT

ಬಾಡು ರೋಗಕ್ಕೆ ಇಲ್ಲಿದೆ ಮದ್ದು

ಪ್ರಜಾವಾಣಿ ವಿಶೇಷ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST
ಬಾಡುರೋಗಕ್ಕೆ ತುತ್ತಾದ ಟೊಮೆಟೊ ಬೆಳೆ
ಬಾಡುರೋಗಕ್ಕೆ ತುತ್ತಾದ ಟೊಮೆಟೊ ಬೆಳೆ   

ಟೊಮೆಟೊ ಗಿಡದಲ್ಲಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಕಂದು ಬಣ್ಣದ್ದಾಗುತ್ತಿದೆಯೇ, ಸೌತೆಕಾಯಿ, ಕರಬೂಜ, ಕಲ್ಲಂಗಡಿ ಅಥವಾ ಇನ್ನಾವುದೇ ಬಳ್ಳಿಗಳು ಮಧ್ಯಾಹ್ನದ ಅವಧಿಯಲ್ಲಿ ಸೊರಗಿದಂತೆ ಕಂಡು ಸಂಜೆ ಹೊತ್ತಿಗೆ ಪುನಃ ಆರೋಗ್ಯವಾದಂತೆ ಕಾಣಿಸುತ್ತಿದೆಯೇ...
ಹಾಗಿದ್ದಲ್ಲಿ ಈ ಬೆಳೆಗಳು ಫ್ಯುಸೇರಿಯಂ ಸೊರಗು ರೋಗ (ಬಾಡು ರೋಗ)ಕ್ಕೆ ತುತ್ತಾಗಿವೆ ಎಂದೇ ಅರ್ಥ.

ಹೌದು. ಬೇಸಿಗೆ ಕಾಲದಲ್ಲಿ ತರಕಾರಿ ಬೆಳೆಗಳನ್ನು ಕಾಡುವ ಈ ರೋಗ ಬೆಳೆಗಳಿಗೆ ಬಹಳ ಅಪಾಯಕ. ಈ ರೋಗಕ್ಕೆ ತುತ್ತಾದ ಪ್ರದೇಶಗಳಲ್ಲಿ ಶೇ. 70-80ರಷ್ಟು ಬೆಳೆ ಹಾನಿಯಾಗುತ್ತದೆ. ರೈತರು ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಸಂಪೂರ್ಣ ನಷ್ಟವೇ ಗತಿ. ರೈತರು ಈ ರೋಗದ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲೇಬೇಕಾದ ಅವಶ್ಯಕತೆ ಇದೆ.

ಏನಿದು ರೋಗ?
ಈ ಬಾಡುರೋಗವು ಬೇರೆ ಬೇರೆ ರೀತಿಯ ಫ್ಯುಸೇರಿಯಂ ಪ್ರಬೇಧಗಳಿಂದ ಬರುತ್ತವೆ. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಫ್ಯುಸೇರಿಯಂ ಆಕ್ಸಿಸ್ಪೋರಮ್. ಇವು ಅತ್ಯಂತ ಪರಿಣಾಮಕಾರಿಯಾದಂತಹ ಶೀಲಿಂಧ್ರ. ಇವು ರೋಗ ತಗುಲಿದ ಕಾಯಿ ಮತ್ತು ಹಣ್ಣುಗಳಲ್ಲಿ ಮತ್ತು ಮಣ್ಣಿನ ಒಳಪದರ ಮತ್ತು ಹೊರಪದರದಲ್ಲಿ ಬದುಕಿರುತ್ತವೆ. ಈ ಸೂಕ್ಷ್ಮಜೀವಿಯು ಮಳೆ ಹನಿ ಹಾಗೂ ಪ್ರತಿನಿತ್ಯ ಬಳಸುವ ಸಲಕರಣೆಗಳಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹರಡುತ್ತವೆ. ಈ ಜೀವಿಗಳು ಸಾಮಾನ್ಯವಾಗಿ ಹೆಚ್ಚು ಉಷ್ಣಾಂಶದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಜೀವಿಗಳು ಹುಳಿ ಅಥವಾ ಕ್ಷಾರ, ಮರಳು ಮಿಶ್ರಿತ ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವು ಹಲವು ವರ್ಷಗಳವರೆಗೆ ಮಣ್ಣಿನಲ್ಲಿ ಜೀವಿಸುವ ಸಾಮರ್ಥ್ಯ ಹೊಂದಿವೆ.

ಇದರ ಪ್ರಮುಖ ಗುಣ ಎಂದರೆ ಗಿಡಗಳು ಬೆಳಗಿನ/ಮಧ್ಯಾಹ್ನದ ಸಮಯದಲ್ಲಿ ಸೊರಗಿದಂತೆ ಕಾಣುವುದು ಮತ್ತು ರಾತ್ರಿ ಸಮಯದಲ್ಲಿ ಗುಣಮುಖವಾದಂತೆ ಕಾಣಿಸುವುದು. ಈ ತರಹದ ಲಕ್ಷಣಗಳು, ಗಿಡಗಳು ಪೂರ್ತಿಯಾಗಿ ಸೊರಗಿ ಹೋಗುವ ತನಕ ಕಂಡು ಬರುತ್ತವೆ.

ನಿಯಂತ್ರಣಕ್ಕೆ ಕ್ರಮ
ಈ ರೋಗ ಬಾರದಂತೆ ಮುಂಜಾಗ್ರತಾ ಕ್ರಮದ ಅಗತ್ಯವಿದೆ. ಅವೆಂದರೆ

* ಸಸಿ ಮಡಿಗಳನ್ನು ರೋಗವಿಲ್ಲದ ಮಣ್ಣಿನಲ್ಲಿ ಬೆಳೆಯಬೇಕು ಮತ್ತು ರೋಗರಹಿತ ಬೀಜಗಳಿಂದ ಸಸಿ ಮಡಿಗಳನ್ನು ಬೆಳೆಸಬೇಕು.
* ರೋಗಪೀಡಿತ ಗಿಡಗಳಿಂದ ನೀರನ್ನು ಇತರೆ ಆರೋಗ್ಯಕರ ಗಿಡಗಳಿಗೆ ಹರಿಯದಂತೆ ತಡೆಗಟ್ಟುವುದು.
* ಬೆಳೆ ಬದಲಾವಣೆಗೆ ಜೋಳ ಅಥವಾ ರಾಗಿಯನ್ನು ಬೆಳೆಯಬೇಕು ಮತ್ತು ಕನಿಷ್ಠ 5 ರಿಂದ 6 ವರ್ಷಗಳ ಕಾಲ ಆ ಭೂಮಿಯಲ್ಲಿ ಬೇರೆ ಬೆಳೆಯನ್ನು ಬೆಳೆಯಬೇಕು.
* ರೋಗಾಣು ಮಣ್ಣಿನ ಮೇಲ್ಪದರದಲ್ಲಿ ಬದುಕುವುದರಿಂದ ಹೆಚ್ಚು ತೇವಾಂಶ ಇಲ್ಲದಂತೆ ಮಣ್ಣನ್ನು ನೋಡಿಕೊಳ್ಳಬೇಕು.
* ಬೇಸಿಗೆ ಕಾಲದಲ್ಲಿ ಪಾಲಿಥಿನ್ ಹೊದಿಕೆಯನ್ನು ಮಣ್ಣಿಗೆ ಹೊದಿಸುವುದರಿಂದ ಈ ರೋಗ ತಡೆಗಟ್ಟಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.