ADVERTISEMENT

ಬೆಳೆಗಳ ನೆಲಸಮಗೊಳಿಸುವ ನೆಲಮುಚ್ಚಲ ಬಳ್ಳಿ

ಪ.ರಾಮಕೃಷ್ಣ
Published 7 ಜನವರಿ 2013, 19:59 IST
Last Updated 7 ಜನವರಿ 2013, 19:59 IST
ಬೆಳೆಗಳ ನೆಲಸಮಗೊಳಿಸುವ ನೆಲಮುಚ್ಚಲ ಬಳ್ಳಿ
ಬೆಳೆಗಳ ನೆಲಸಮಗೊಳಿಸುವ ನೆಲಮುಚ್ಚಲ ಬಳ್ಳಿ   

ರಬ್ಬರ್ ಮರದ ಹಿತರಕ್ಷಣೆಗಾಗಿ ಅದರ ಬುಡದಲ್ಲಿ ಹಬ್ಬಿಸುವ ನೆಲಮುಚ್ಚಲಿನ ಬಳ್ಳಿ ಇತರ ಮರಗಿಡಗಳಿಗೆ ಮಾರಕವಾಗಿ ನಿರ್ವಂಶಗೊಳಿಸುವ ಅಪಾಯ ಕಾಣತೊಡಗಿದೆ. 

ಕೇವಲ ರಬ್ಬರ್ ಮರಗಳ ಬುಡದಲ್ಲಿ ಹರಡಬೇಕಾದ ಬಳ್ಳಿ ಮೈಲುಗಟ್ಟಲೆ ದೂರ ಸಾಗಿ ಇತರ ರೈತರ ಕೃಷಿಗೂ ವ್ಯಾಪಕವಾಗಿ ಹಾನಿ ತರುತ್ತಿದೆ.  ಸಾಗಿದಲ್ಲೆಲ್ಲಾ ಬೇರು ಬಿಟ್ಟು ನೆಲದಾಳದಲ್ಲಿ ಆಳವಾಗಿ ಗೆಡ್ಡೆಯನ್ನೂರುವ ಈ ರಾಕ್ಷಸ ಸಸ್ಯದ ವಂಶ ಅಳಿಸಲು ಶತಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ ಎಂಬುದು ಅಸಂಖ್ಯಾತ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಬೋಳುಗುಡ್ಡದಲ್ಲಿ ರಬ್ಬರ್ ಗಿಡ ನೆಡುವಾಗಲೇ ಮೊಳಕೈ ಉದ್ದವಿರುವ ಮುಚ್ಚಲು ಬಳ್ಳಿಯನ್ನೂ ಅದರ ಜತೆಗೇ ನೆಡುವುದು ವಾಡಿಕೆ. ನಿಸರ್ಗದ ಸತ್ವವನ್ನೇ ಬಳಸಿ ಚಿಗುರಿ ಹರಡುವ ಈ ಬಳ್ಳಿ ರಬ್ಬರಿನ ಮಟ್ಟಿಗೆ ರಕ್ಷಣಾತ್ಮಕ ಎಂಬುದರಲ್ಲಿ ಸಂದೇಹವಿಲ್ಲ. ಬುಡವನ್ನು ತಂಪಾಗಿಡುತ್ತದೆ. ಬೇರೆ ಕಳೆಗಳು ಬಂದರೆ ಅದನ್ನು ಆವರಿಸಿ ಬಗ್ಗಿಸಿ ಕೊಂದು ಹಾಕುತ್ತದೆ.

ಮಣ್ಣಿನಾಳದ ಸಾರಜನಕವನ್ನು ಈ ಬಳ್ಳಿಯ ಬೇರುಗಳು ಮೇಲಕ್ಕೆಳೆಯುವ ಕಾರಣ ರಬ್ಬರಿನ ಬೇರುಗಳಿಗೆ ಅದರ ಅಂಶ ಸಿಗುತ್ತದೆ.  ನೆಲ ಮುಚ್ಚಲು ಆವರಿಸಿದ ತೋಟಗಳಲ್ಲಿ ರಸಗೊಬ್ಬರ ನೀಡುವಾಗ ಸಾರಜನಕದ ಪ್ರಮಾಣ ಕಮ್ಮಿ ನೀಡಬಹುದು. ಅಲ್ಲದೆ ಮಳೆಗಾಲದಲ್ಲಿ ಎರಡು ಸಲ ಈ ಬಳ್ಳಿಯನ್ನು ಪೂರ್ತಿಯಾಗಿ ಕತ್ತರಿಸಿಬಿಟ್ಟರೆ ಶೀಘ್ರವಾಗಿ ಕೊಳೆತು ಮರಗಳಿಗೆ ಅತ್ಯುತ್ತಮ ಗೊಬ್ಬರವೂ ಆಗುತ್ತದೆ. ಹೀಗಾಗಿ ರಬ್ಬರ್ ಬೋರ್ಡಿನವರು ಕೂಡ ನೆಲಮುಚ್ಚಲು ನೆಡುವುದನ್ನು ಕೃಷಿಕರಿಗೆ ಕಡ್ಡಾಯಗೊಳಿಸುತ್ತಾರೆ. ಇದರ ಹೊರತು  ಜಾನುವಾರುಗಳ ಮೇವಿಗೆ ಅದು ಉಪಯುಕ್ತವಲ್ಲ. 

ರಬ್ಬರಿನ ಮಟ್ಟಿಗೆ ಗುಣಕಾರಿಯಾದರೂ ನೆಲಮುಚ್ಚಲು ಊರಿನಾದ್ಯಂತ ಹಬ್ಬುವುದನ್ನು ತಡೆಯಲಾಗದು. ತೆಂಗು, ಅಡಿಕೆ, ಗೇರು ಮುಂತಾದ ಇತರ ಫಸಲು ಬರುವ ಮರಗಳನ್ನು ತ್ವರಿತ ಗತಿಯಿಂದ ಏರಿ ಅದರ ಶಿರವನ್ನು ತಲುಪಿ ಗರಿಗಳನ್ನು, ಎಲೆಗಳನ್ನು ಮುದುಡಿಸಿ ಮುದ್ದೆ ಮಾಡಿ ಕೊಂದೇ ಹಾಕುತ್ತದೆ.  ಎಷ್ಟು ಸಲ ಕತ್ತರಿಸಿದರೂ ಗೆಣಸಿನ ಬಳ್ಳಿಯಂತೆ ಮೊಳ ಉದ್ದಕ್ಕೊಂದು ಕಡೆ ಬೇರು ಬಿಡುವ ಕಾರಣ ರಕ್ತಬೀಜನಂತೆ ಅಲ್ಲಿಂದ ಚಿಗುರಿ ವಾರದೊಳಗೆ ಗುರಿ ತಲುಪುತ್ತದೆ.

ಕೃಷಿ ಗಿಡ, ಕಾಡುಗಿಡವೆಂಬ ಭೇದವಿಲ್ಲದೆ ಎಲ್ಲವನ್ನೂ ಆಲಿಂಗಿಸಿ ನಿರ್ವಂಶಗೊಳಿಸುತ್ತದೆ. ರಬ್ಬರ್ ಬೆಳೆದ ಒಬ್ಬ ರೈತನಿಂದಾಗಿ ಅಕ್ಕಪಕ್ಕದ ಇತರ ರೈತರಿಗೂ ಅದರಿಂದ ಆಗುವ ಕಿರಿಕಿರಿಯನ್ನು ತಪ್ಪಿಸಲು ಮಾರ್ಗೋಪಾಯವನ್ನು ಕಾಣದೆ ಬಳಲುವಂತಾಗಿದೆ. ಕಳೆನಾಶಕ್ಕೆ ಯಾವುದೇ ವಿಷಕ್ಕಿಂತಲೂ ಇದು ಪರಿಣಾಮಕಾರಿಯಾದ ನಿಸರ್ಗದ ಕೊಡುಗೆ ಎಂದು ಸಂತಸಪಡುತ್ತಿದ್ದವರಿಗೆ ಅದೀಗ ನುಂಗಲಾಗದ ತುತ್ತಾಗಿದೆ. 

ರಬ್ಬರ್ ಬೋರ್ಡಿನವರಲ್ಲಿ ಕೇಳಿದರೆ ಮುಚ್ಚಲು ಬಳ್ಳಿಯನ್ನು ರಬ್ಬರ್ ಗಿಡಗಳ ಸಾಲಿನಲ್ಲಿ ಮಾತ್ರ ಉಳಿಸಿಕೊಂಡು ಮುಂದೆ ಹೋಗದಂತೆ ಪದೇಪದೇ ಕತ್ತರಿಸಬೇಕು, ಅದರ ಬೆಳವಣಿಗೆಯನ್ನು ನಿಯಂತ್ರಿಸಲು ಬೇರೆ ಉಪಾಯವಿಲ್ಲ ಎಂದು ಉತ್ತರಿಸುತ್ತಾರೆ. ಆದರೆ ಕೂಲಿ ಕಾರ್ಮಿಕರ ಅಭಾವದಿಂದಾಗಿ ವರ್ಷಕ್ಕೊಮ್ಮೆ ಅದನ್ನು ಕಸಿ ಮಾಡುವುದೇ ದುಸ್ತರವಾಗಿದೆ. ಹತ್ತಾರು ಎಕರೆಗಳಲ್ಲಿ ಹರಡಿರುವ ಬಳ್ಳಿಯ ನಿಯಂತ್ರಣ ಅಸಾಧ್ಯವಾಗಿ ರೈತರು ಪರಿತಪಿಸುತ್ತಿದ್ದಾರೆ. ಹೊಸದಾಗಿ ರಬ್ಬರ್ ಕೃಷಿಗಿಳಿಯುವವರು ಈ ಬಳ್ಳಿಯ ಇನ್ನೊಂದು ಮುಖದ ಬಗೆಗೆ ಈಗಲೇ ಚಿಂತಿಸಿದರೆ ಯೋಗ್ಯವೆನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.