ADVERTISEMENT

ಮಂಗನ ಜ್ವರ; ದನಗಳಿಂದ ಪ್ರಸಾರ

​ಪ್ರಜಾವಾಣಿ ವಾರ್ತೆ
Published 4 ಜೂನ್ 2012, 19:30 IST
Last Updated 4 ಜೂನ್ 2012, 19:30 IST

`ಡಾಕ್ಟ್ರೇ, ಜಾನುವಾರುಗಳಿಂದ ಮಂಗನ ಕಾಯ್ಲೆ ಬರುತ್ತಾ?~ ಎಂದು ಮಲೆನಾಡಿನ ತೀರ್ಥಹಳ್ಳಿ, ಹೊಸನಗರ ಭಾಗಗಳಲ್ಲಿ ರೈತರು ಆತಂಕದಿಂದ ಕೇಳುತ್ತಿದ್ದಾರೆ. ಇನ್ನೂ ಕೆಲವರು  `ನಮ್ ದನ-ಎಮ್ಮೆಗಳಿಗೆ ಮಂಗನ ಜ್ವರ ಅಂಟುತ್ತಾ ಏನ್ಕತೆ?~ ಎನ್ನುತ್ತಾ  ಮಂಡೆ ಬಿಸಿ ಮಾಡಿಕೊಳ್ಳುತ್ತಿದ್ದಾರೆ.

ಅವರ ಗಾಬರಿಗೆ ಕಾರಣವೂ ಇದೆ. ಈ ಸಲ ಜಿಲ್ಲೆಯ ದಟ್ಟ ಮಲೆನಾಡಿನ ಈ ಎರಡೂ ತಾಲ್ಲೂಕುಗಳ ಕೆಲವು ಗ್ರಾಮಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡು ಜನರಲ್ಲಿ  ತೀವ್ರ ಆತಂಕ ಮೂಡಿಸಿದೆ.

ಹೌದು, ಮಲೆನಾಡಿಗರು ಮಂಗಗಳ ಉಪಟಳದಿಂದ ರೋಸಿಹೋಗಿದ್ದಾರೆ. ಇವು ಕೊಡುವ ತೊಂದರೆಗಳು ಒಂದೇ ಎರಡೇ! ಭತ್ತದ ಪೈರನ್ನು ಎಳೆದೆಳೆದು ತಿನ್ನುತ್ತವೆ. ತಿಂದಿದ್ದರ ಹತ್ತು ಪಟ್ಟು ಹಾಳು ಮಾಡುತ್ತವೆ. ತರಕಾರಿ, ಬಾಳೆಗೊನೆ, ಹಣ್ಣುಗಳು, ಕೊನೆಗೆ ಎಳನೀರನ್ನೂ ಬಿಡುತ್ತಿಲ್ಲ. ಚಿಗುರು ಅಡಿಕೆ ಕಾಯಿಗಳನ್ನು ಚೀಪಿ ಚೀಪಿ ಎಸೆಯುತ್ತವೆ.

ಜಮೀನಿನ ಪಕ್ಕ ನಿಲ್ಲಿಸಿದ ಬೈಕು, ಜೀಪುಗಳ ಸೀಟುಗಳು ಇವುಗಳ ಕಿತಾಪತಿಯಿಂದ ಚೂರು ಚೂರು! ತಂತಿ, ಕೇಬಲ್‌ಗಳೂ ಕಪಿ ಚೇಷ್ಟೆಯಲ್ಲಿ ತುಂಡಾಗುತ್ತಿವೆ. ಕೋತಿಗಳ ಇಂತಹ ಹತ್ತಾರು ಹಾವಳಿಗಳನ್ನು ಶಪಿಸುತ್ತಲೆ ಸಹಿಸಿಕೊಂಡಿದ್ದ ಮಲೆನಾಡ ಮಂದಿ ಈಗ ಮಂಗನ ಕಾಯಿಲೆಯಿಂದ ಬೆಚ್ಚಿ ಬೀಳತೊಡಗಿದ್ದಾರೆ.

ಏನಿದು ಮಂಗನ ಕಾಯಿಲೆ? ವೈದ್ಯಕೀಯವಾಗಿ ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆಎಫ್‌ಡಿ) ಎಂದು ಕರೆಸಿಕೊಳ್ಳುವ ಈ ಪ್ರಾಣಿಜನ್ಯ ರೋಗ ಫ್ಲೇವಿ ವೈರಸ್ ಎಂಬ ವೈರಾಣುವಿನಿಂದ ಬರುತ್ತದೆ. ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಅರಣ್ಯದಲ್ಲಿ ಈ ರೋಗಾಣುಗಳನ್ನು ಮೊದಲು ಗುರುತಿಸಿದ್ದರಿಂದ ಈ ಹೆಸರು. 1957ರಲ್ಲೆ ಕಾಣಿಸಿಕೊಂಡ ಮಂಗನ ಜ್ವರ ನಂತರದಲ್ಲಿ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾ ಜನರನ್ನು ಗಾಬರಿ ಬೀಳಿಸುತ್ತಿದೆ.

ಸಾಮಾನ್ಯವಾಗಿ ಇಲಿ, ಹೆಗ್ಗಣ, ಅಳಿಲುಗಳು ಈ ರೋಗಾಣುಗಳ ವಾಹಕಗಳು. ಇವುಗಳ ರಕ್ತ ಹೀರಿದ ಉಣ್ಣೆ ಹುಳುಗಳು ಮಂಗ, ಮಾನವರಿಗೆ ಸೋಂಕು ತಗುಲಿಸುತ್ತವೆ.

ಏನಿವು ಉಣ್ಣೆ ಹುಳುಗಳು?
ಜಾನುವಾರುಗಳು ಮತ್ತು ಇತರೆ ಪ್ರಾಣಿಗಳ ರಕ್ತ ಹೀರಿ ಬದುಕುವ ಈ ಉಣ್ಣೆ ಹುಳುಗಳು (ಜ್ಚಿ) ಹೊರ ಪರಾವಲಂಬಿ ಜೀವಿಗಳು. ಇವಕ್ಕೆ ಇಣಗು, ವಣಗು ಅಂತಲೂ ಕರೆಯುತ್ತಾರೆ. ಚಿಕ್ಕ ಗಾತ್ರದ ಈ ಚಪ್ಪಟೆ ಹುಳುಗಳು ಪ್ರಾಣಿಗಳ ರಕ್ತ ಹೀರಿದ ನಂತರ ಉಬ್ಬಿದ ಒಣ ದ್ರಾಕ್ಷಿಯಂತೆ ಕಾಣುತ್ತವೆ. ತೆವಳುತ್ತಲೆ ಒಂದು ಪ್ರಾಣಿಯಿಂದ ಮತ್ತೊಂದಕ್ಕೋ ಅಥವಾ ಮಾನವರಿಗೊ ದಾಟುವ ಉಣ್ಣೆಗಳಲ್ಲಿ ಹಲವು ಬಗೆಗಳಿವೆ. ಮಂಗನ ಕಾಯಿಲೆ ಸೇರಿದಂತೆ ವಿವಿಧ ರೋಗಗಳನ್ನು ಹರಡಿಸುವಲ್ಲಿ ಇವುಗಳದ್ದೇ ಪ್ರಮುಖ ಪಾತ್ರ. 

 ರೋಗ ಲಕ್ಷಣ: ಉಣ್ಣೆಗಳಿಂದ ಸೋಂಕು ತಗಲಿಸಿಕೊಂಡ ಮಂಗಗಳು ತೀವ್ರ ಜ್ವರದಿಂದ ಗುಂಪುಗುಂಪಾಗಿ ಸಾವನ್ನಪ್ಪುತ್ತವೆ. ಇವುಗಳ ರಕ್ತ ಕುಡಿದ ಇಣಗುಗಳು ಆಕಸ್ಮಿಕವಾಗಿ ಮನುಷ್ಯರನ್ನು ಕಚ್ಚಿದಾಗ ರೋಗಾಣುಗಳು ದೇಹ ಸೇರಿ ವಾರದೊಳಗೆ ಕಾಯಿಲೆಯ ಲಕ್ಷಣಗಳನ್ನು ಹುಟ್ಟು ಹಾಕುತ್ತವೆ. ತೀವ್ರ ತಲೆನೋವು, ಮೈಕೈ ನೋವು, ವಿಪರೀತ ಜ್ವರ, ರಕ್ತಸ್ರಾವದಿಂದ ಬಳಲುವ ರೋಗಿಗಳಿಗೆ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ದೊರಕದಿದ್ದರೆ ಜೀವಕ್ಕೆ ಅಪಾಯವಾಗಬಹುದು. ಆದರೆ ಮಂಗನ ಕಾಯಿಲೆಗೆ ಲಸಿಕೆ ಲಭ್ಯ ಎನ್ನುವುದು ಇದ್ದುದರಲ್ಲಿ ಸಮಾಧಾನದ ಅಂಶ.

ಜಾನುವಾರುಗಳ ಪಾತ್ರ: ಮಂಗನ ಕಾಯಿಲೆ ಇಲ್ಲಿಯವರೆಗೆ ಜಾನುವಾರುಗಳಲ್ಲಿ ವರದಿಯಾಗಿಲ್ಲ. ಪ್ರಾಣಿಗಳಲ್ಲಿ ಮಂಗಗಳಿಗೆ ಮಾತ್ರ ಈ ವೈರಾಣುಗಳಿಂದ ರೋಗ ಬರುತ್ತದೆ. ದನ-ಎಮ್ಮೆಗಳಿಗೆ ಈ ಕಾಯಿಲೆ ಬರದಿದ್ದರೂ ಸೋಂಕು ಹರಡಿಸುವಲ್ಲಿ ಇವುಗಳ ಪಾತ್ರವೂ ಇದೆ.

ಮೇಯಲು ಹೊರಗೆ ಬಿಟ್ಟ ಜಾನುವಾರುಗಳ ಮೈಗೆ ಹತ್ತಿಕೊಂಡ ಉಣ್ಣೆಗಳು ನಂತರದಲ್ಲಿ ಇವುಗಳ ಸಂಪರ್ಕಕ್ಕೆ ಬರುವ ಮನುಷ್ಯರ ದೇಹಕ್ಕೆ ದಾಟುವ ಮೂಲಕ ರೋಗ ಪ್ರಸಾರ ಮಾಡುತ್ತವೆ. ಮೊದಲೆಲ್ಲಾ ಕಾಡಂಚಿನಲ್ಲಿ ಮೇಯವ ದನಕರುಗಳಿಗೆ ಕಾಡು ಉಣ್ಣೆಗಳು ಹತ್ತಿಕೊಂಡು ಊರೊಳಗೆ ಬರುವ ಸಾಧ್ಯತೆಗಳು ಹೆಚ್ಚಿದ್ದವು. ಸೊಪ್ಪು ಸದೆಗಾಗಿ ಕಾಡಿಗೆ ಹೋಗುವವರು ಮೈಯನ್ನು ಪೂರ್ತಿಯಾಗಿ ಬಟ್ಟೆಯಿಂದ ಮುಚ್ಚಿಕೊಳ್ಳುವಂತೆ, ಉಣ್ಣೆ ನಾಶಕ ಮುಲಾಮುಗಳನ್ನು ಲೇಪಿಸಿಕೊಳ್ಳುವಂತೆ ಸಲಹೆ ಮಾಡಲಾಗುತ್ತಿತ್ತು.

ಆದರೆ ಈಗೀಗ ಮಂಗಗಳ ಸಂತತಿ ವಿಪರೀತ ಹೆಚ್ಚಿ ಕಾಡಿಂದ ಊರಿಗೆ ಇವುಗಳ ವಾಸ್ತವ್ಯ ಬದಲಾಗಿದೆ. ಅರಣ್ಯ ನಾಶದ ಪರಿಣಾಮದಿಂದಾಗಿ ಕಾಡಲ್ಲಿ ಹೊಟ್ಟೆಪಾಡು ಕಷ್ಟವಾಗಿ ಕೋತಿಗಳು ಊರಿಗೆ ದಾಳಿ ಮಾಡುತ್ತಿವೆ. ಇವುಗಳ ಈ ಪರಿಯ ಓಡಾಟದಿಂದ ಸೋಂಕು ಪೀಡಿತ ಪ್ರದೇಶದ ಸುತ್ತಮುತ್ತ ರೋಗಾಣುಗಳು ಹರಡುವ ಸಂಭವ ಜಾಸ್ತಿ. ಹಾಗಾಗಿ ಬರೇ ಕಾಡಿಗೆ ಹೋಗುವವರಷ್ಟೇ ಅಲ್ಲ, ನಾಡಲ್ಲಿರುವವರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಉಣ್ಣೆಗಳ ನಿಯಂತ್ರಣ ಪ್ರಮುಖ ಅಂಶವಾಗಿದೆ.

ಸ್ವಚ್ಛತೆ ಮೊದಲ ಆದ್ಯತೆ: ದನಕರುಗಳ ಮೈಮೇಲಿರುವ ಉಣ್ಣೆಗಳು ಕೇವಲ ಮಂಗನ ಜ್ವರವಷ್ಟೇ ಅಲ್ಲ, ಕೆಂಪು ಮೂತ್ರ ರೋಗ, ಥೈಲೀರಿಯಾ, ಕಂದು ರೋಗ ಮುಂತಾದ ಹಲವು ಕಾಯಿಲೆಗಳನ್ನು ಹರಡಿಸುವಲ್ಲಿ ವಾಹಕಗಳಾಗಿ ಕೆಲಸ ಮಾಡುತ್ತವೆ. ಅಲ್ಲದೆ ಉಣ್ಣೆ ಬಾಧೆಯಿರುವ ಜಾನುವಾರುಗಳು ರಕ್ತಹೀನತೆಯಿಂದ ಸೊರಗುವುದಲ್ಲದೆ ರೋಗ ನಿರೋಧಕ ಶಕ್ತಿ ಕಳೆದುಕೊಂಡು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತವೆ.
 
ಹಾಲಿನ ಇಳುವರಿ ನೆಲ ಕಚ್ಚಿ ರೈತರು ಸಂಕಷ್ಟಕ್ಕೀಡಾಗುತ್ತಾರೆ. ಹಾಗಾಗಿ ಗೋಪಾಲಕರು ಹೊರ ಪರಾವಲಂಬಿಗಳಾದ ಉಣ್ಣೆ, ಹೇನು, ಚಿಗಟಗಳನ್ನು ನಿಯಂತ್ರಿಸಿ ತಮ್ಮ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಕೆಳಕಂಡ ಅಂಶಗಳ ಬಗ್ಗೆ ಗಮನ ಹರಿಸುವುದು ಅಗತ್ಯ.

ಜಾನುವಾರುಗಳಿಗೆ ನಿತ್ಯ ಸ್ನಾನ ಮಾಡಿಸಬೇಕು. ಬ್ರಷ್, ಕತ್ತ ಅಥವಾ ಹುಲ್ಲು ಚೆಂಡು ಬಳಸಿ ಮೈಯನ್ನು ಚೆನ್ನಾಗಿ ಉಜ್ಜಿ ತೊಳೆಯುವುದರಿಂದ ಮೊಟ್ಟೆ, ಮರಿಗಳೆಲ್ಲಾ ಕಿತ್ತು ಹೋಗಿ ದೇಹ ಕೀಟಾಣು ಮುಕ್ತವಾಗುತ್ತದೆ. ಅಲ್ಲದೆ ನಿತ್ಯ ಉಜ್ಜುವುದರಿಂದ ರಕ್ತ ಸಂಚಾರ ಹೆಚ್ಚಿ ಚರ್ಮ ನುಣುಪಾಗಿ, ಆರೋಗ್ಯವಂತವಾಗುತ್ತದೆ. ಚರ್ಮ ಆರೋಗ್ಯವಾಗಿದ್ದರೆ ಕೀಟ ಬಾಧೆ ಕಮ್ಮಿ.

ಕೊಟ್ಟಿಗೆ ಮತ್ತು ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಲಿ, ಕೊಟ್ಟಿಗೆಯೊಳಗೆ ಗಾಳಿ, ಬೆಳಕು ಧಾರಾಳವಾಗಿ ಬರುವಂತಿರಲಿ. ಇದು ಕ್ರಿಮಿ-ಕೀಟಗಳ ಬೆಳವಣಿಗೆಗೆ ತಡೆಯೊಡ್ಡುತ್ತದೆ. ಗೋಡೆಗಳ ಬಿರುಕು, ಸಂದಿಗಳಲ್ಲಿ ಕೀಟಗಳು ಮೊಟ್ಟೆ, ಮರಿ ಮಾಡುವುದು ಜಾಸ್ತಿ. ಕ್ರಿಮಿನಾಶಕಗಳಿಂದ ಸ್ವಚ್ಛಗೊಳಿಸುವಾಗ ಇದರ ಬಗ್ಗೆ ಗಮನವಿರಲಿ.

ಆರೋಗ್ಯವಂತ ಜಾನುವಾರುಗಳಿಗಿಂತ ಸೋತು ಸೊರಗಿರುವ ಜಾನುವಾರುಗಳಲ್ಲಿ ಉಣ್ಣೆಗಳ ಕಾಟ ಹೆಚ್ಚು. ಆರೋಗ್ಯವಂತ ಪ್ರಾಣಿಗಳ ಚರ್ಮದಡಿ ಕೊಬ್ಬಿನ ಪದರ ಇರುವುದರಿಂದ ರಕ್ತ ನಾಳಗಳು ಸುಲಭದಲ್ಲಿ ಸಿಗುವುದಿಲ್ಲ. ಅದೇ ಸೊರಗಿದ ಜಾನುವಾರುಗಳಲ್ಲಿ ಕೊಬ್ಬಿನ ಪದರ ಇಲ್ಲದೆ ಚರ್ಮ ಬಿರುಕು ಬಿಟ್ಟಿರುವುದರಿಂದ ರಕ್ತ ಹೀರುವುದು ಸುಲಭ. ಹಾಗಾಗಿ ಜಾನುವಾರುಗಳ ಸರಿಯಾದ ಪೋಷಣೆ ಮುಖ್ಯ.

ದನಕರುಗಳನ್ನು ಮೇಯುವುದಕ್ಕೆ ಹೊರಗಡೆ ಬಿಡಲು ಅವಕಾಶವಿಲ್ಲದಿದ್ದರೆ ಬೆಳಿಗ್ಗೆ ಒಂದೆರಡು ಗಂಟೆ ಹೊರಗೆ ಕಟ್ಟಿ. ಬಿಸಿಲು ಡಿ- ಅನ್ನಾಂಗದ ಉತ್ಪಾದನೆಗೆ, ಚರ್ಮದ ಆರೋಗ್ಯಕ್ಕೆ, ಕ್ರಿಮಿಕೀಟಗಳ ನಿಯಂತ್ರಣಕ್ಕೆ, ಬೆದೆಗೆ ಬರಲು, ಗರ್ಭಧಾರಣೆ... ಹೀಗೆ ಹಲವು ವಿಧದಲ್ಲಿ ಸಹಕಾರಿ.

ಮಲೆನಾಡಿನಲ್ಲಿ ಅಡಿಕೆ ಸಿಪ್ಪೆ, ಸೋಗೆಗಳನ್ನು ಅಂಗಳದಲ್ಲಿ ಹರಡುವುದು ಜಾಸ್ತಿ. ಒಣಗಿದ ಸಿಪ್ಪೆ, ಸೋಗೆಗಳಲ್ಲಿ ಚಿಗಟ, ಇಣಗುಗಳ ಸಂತಾನೋತ್ಪತ್ತಿ ಹೆಚ್ಚು. ಹಾಗಾಗಿ ಇವುಗಳನ್ನು ಎಲ್ಲೆಡೆ ಹರಡುವುದರ ಬದಲು ಒಂದೆಡೆ ಕೂಡಿಡುವುದು ಒಳ್ಳೆಯದು.

ಉಣ್ಣೆಗಳ ಕಾಟವಿರುವಲ್ಲಿ ನಿಯಂತ್ರಣಕ್ಕೆ ಉಣ್ಣೆನಾಶಕಗಳನ್ನು ಬಳಸಬಹುದು. ಮೈಗೆ ಹಚ್ಚಿ ಸ್ನಾನ ಮಾಡಿಸುವಂತಹ, ಬೆನ್ನ ಮೇಲೆ ಪಟ್ಟೆ ಎಳೆಯುವಂತಹ, ಪೌಡರ್, ಇಂಜಕ್ಷನ್ ರೂಪದ ವಿವಿಧ ಉಣ್ಣೆ ನಿವಾರಕಗಳು ದೊರಕುತ್ತವೆ. ಆದರೆ ಹೆಚ್ಚಿನವು ರಾಸಾಯನಿಕ ವಿಷಗಳಾದ್ದರಿಂದ ಜಾನುವಾರುಗಳ ಜೊತೆಗೆ ಅವುಗಳ ಹಾಲು ಕುಡಿಯುವವರ ಮೇಲೂ ಅಡ್ಡ ಪರಿಣಾಮ ಬೀರುತ್ತವೆ. ಆದ್ದರಿಂದ ಕೀಟ ನಿಯಂತ್ರಣಕ್ಕೆ ಹೆಚ್ಚೆಚ್ಚು ರಾಸಾಯನಿಕ ಬಳಸದೆ ಸರಿಯಾದ ಪಾಲನೆ, ಪೋಷಣೆ, ಸ್ವಚ್ಛತೆಗೆ ಮಹತ್ವ ನೀಡುವುದು ಮುಖ್ಯ.

ಒಟ್ಟಿನಲ್ಲಿ ಜನ ತಮ್ಮ ವೈಯಕ್ತಿಕ ನೈರ್ಮಲ್ಯದ  ಜೊತೆಯಲ್ಲಿ ಜಾನುವಾರುಗಳ ಶುಚಿತ್ವಕ್ಕೂ ಮಹತ್ವ ನೀಡಿದರೆ ಮಂಗನ ಕಾಯಿಲೆಯಂತಹ ಹಲವು ರೋಗಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು.

 (ಲೇಖಕರು ಪಶುವೈದ್ಯಾಧಿಕಾರಿ.  ಮೊ: 94489 71550)

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.