ADVERTISEMENT

ಮನೆಯ ತೋರಣದಲ್ಲೇ ಬೀಜ ಬ್ಯಾಂಕ್‌

ಕಿಶನರಾವ್‌ ಕುಲಕರ್ಣಿ
Published 26 ಮಾರ್ಚ್ 2018, 19:30 IST
Last Updated 26 ಮಾರ್ಚ್ 2018, 19:30 IST
ಇದು ಭತ್ತದ ವಿವಿಧ ತಳಿಗಳ ತೋರಣ
ಇದು ಭತ್ತದ ವಿವಿಧ ತಳಿಗಳ ತೋರಣ   

ಅವಸಾನದ ಅಂಚಿನಲ್ಲಿರುವ ಅಳಿದುಳಿದ ಬೀಜದ ತಳಿಗಳನ್ನು ಸದ್ದು ಗದ್ದಲವಿಲ್ಲದೆ ಸಂಗ್ರಹಿಸಿ ಅಭಿವೃದ್ಧಿಪಡಿಸುತ್ತಿರುವ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಗುಂಡೇನಟ್ಟಿ ಗ್ರಾಮದ ರೈತರೀಗ ದೇಶಕ್ಕೆ ಸ್ವಾವಲಂಬನೆಯ ಪಾಠ ಮಾಡುತ್ತಿದ್ದಾರೆ. ಸಿದ್ಧಾರೂಢ ಸಾವಯವ ಕೃಷಿಕರ ಬಳಗ ಹಾಗೂ ಬೀಜ ಬ್ಯಾಂಕ್ ಸ್ಥಾಪಿಸಿಕೊಂಡು ಮಾಡುತ್ತಿರುವ ತಳಿ ಸಂರಕ್ಷಣೆ ಕಾರ್ಯಕ್ಕಾಗಿ ರಾಷ್ಟ್ರಮಟ್ಟದ ‘ಸಸ್ಯ ತಳಿ ಸಂರಕ್ಷಕ ಸಮುದಾಯ ಪ್ರಶಸ್ತಿ’ಯನ್ನು ಈ ಹಳ್ಳಿಯವರು ಪಡೆದುಕೊಂಡಿದ್ದಾರೆ.

ಬೀಜದ ಮೇಲೆ ವಿವಿಧ ಕಂಪನಿಗಳು ಏಕಸ್ವಾಮ್ಯ ಸಾಧಿಸುವುದನ್ನು ವಿರೋಧಿಸಿ, ರೈತರಿಗೆ ಸ್ವಾವಲಂಬನೆ ಪಾಠ ಮಾಡುವುದಕ್ಕಾಗಿ 2008ರಲ್ಲಿ 40 ರೈತರು ಸೇರಿ ಸಂಘಟನೆ ಮಾಡಿಕೊಂಡಿದ್ದರು. ಅದೀಗ ಊರಿನ ಸಮೃದ್ಧಿಗೆ ಕಾರಣವಾಗಿದೆ.

ತಾವು ಸಂಗ್ರಹಿಸಿದ ಬೀಜದ ತಳಿಗಳನ್ನೇ ಬೆ(ಅ)ಳೆದು ನೋಡಿ, ಅದು ಸರಿ ಎನಿಸಿದ ನಂತರವೇ ಸಂಗ್ರಹ ಕಾಯಕದಲ್ಲಿ ತೊಡಗುತ್ತಾರೆ. ಅಲ್ಲಿಂದ ನಿಧಾನವಾಗಿ ತಾವು ಸಂಗ್ರಹಿಸಿದ ಬೀಜದ ತಳಿಗಳನ್ನು ಉಳಿದ ರೈತರಿಗೆ ವಿನಿಮಯ ಮಾದರಿಯಲ್ಲಿ ವಿತರಿಸುತ್ತಾರೆ. ಹೀಗೆ ಶುರುವಾದ ಬೀಜ ಸಂರಕ್ಷಣೆ ಆಂದೋಲನ ಕ್ರಮೇಣ ಗುಂಡೇನಟ್ಟಿ ಗ್ರಾಮದ ಸೀಮೆ ದಾಟಿ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಪಸರಿಸುತ್ತಿದೆ. ಎಲ್ಲ ಕಡೆಗಳಿಂದ ಇಲ್ಲಿನ ಬೀಜಕ್ಕೆ ಬೇಡಿಕೆ ಬರುತ್ತಿದೆ ಎಂದು ಮಾರ್ಗದರ್ಶಕರಾದ ಶಿವರಾಜ ಹುನಗುಂದ ಹೇಳುತ್ತಾರೆ.

ADVERTISEMENT

ಬದಲಾಗುವ ಹವಾಗುಣಕ್ಕೆ ಹೊಂದಿಕೊಳ್ಳುವ ಗುಣ, ರೋಗ ನಿರೋಧಕ, ಬರ ನಿರೋಧಕ, ಅತಿವೃಷ್ಟಿ ಮೆಟ್ಟಿ ನಿಲ್ಲುವ, ಉತ್ತಮ ರುಚಿ, ಗುಣಮಟ್ಟ, ಉತ್ಕೃಷ್ಟ ಪೋಷಕಾಂಶ ಹಾಗೂ ಔಷಧಿ ಗುಣಗಳನ್ನು ಹೊಂದಿರುವ ಸುಮಾರು 200 ವರ್ಷಗಳಷ್ಟು ಹಳೆಯ ದೇಸಿ ತಳಿಗಳ ಬೀಜವನ್ನು ಸಂಗ್ರಹಿಸಿದ್ದಾರೆ.

ವಿಶೇಷವಾಗಿ ಪಶ್ಚಿಮಘಟ್ಟದ ರೈತರು ಸಹಾಯ ನೀಡಿದ್ದಾರೆ. ಬಹುತೇಕ ರೈತರು ಈ ಬೀಜಗಳನ್ನು ಆಹಾರಧಾನ್ಯ ಬೆಳೆಯಲು ಬಳಸುವುದರ ಜೊತೆಗೆ ಬೀಜೋತ್ಪಾದನೆಯನ್ನೂ ಮಾಡುತ್ತಿದ್ದಾರೆ. ನೂರಕ್ಕೂ ಹೆಚ್ಚು ಭತ್ತದ ತಳಿಗಳ ಜೊತೆಗೆ ಜೋಳ, ತೊಗರಿ, ಉದ್ದು, ಹೆಸರು, ಅಲಸಂದಿ, ಅಗಸೆ ಹಾಗೂ ತರಕಾರಿಗಳಂತಹ ತಳಿಗಳ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

2011ರಲ್ಲಿ ಸಮುದಾಯ ಬೀಜ ಬ್ಯಾಂಕ್‌ ಸ್ಥಾಪಿಸಿದ್ದಾರೆ. ವಿವಿಧ ತಳಿಗಳ ಸುಮಾರು 92 ಕ್ವಿಂಟಲ್‌ ದೇಸಿ ಬೀಜಗಳನ್ನು ರಾಜ್ಯದ ವಿವಿಧ ರೈತರಿಗೆ ವಿತರಣೆ ಮಾಡಿದ್ದಾರೆ. ಸದ್ಯ ಈ ಭಾಗದಲ್ಲಿ ಕಂಪನಿಯಿಂದ ಬರುವ ಬಂಜೆ ಬೀಜಗಳು, ಕುಲಾಂತರಿ ಬೀಜಗಳ ಹಾವಳಿ ಕಡಿಮೆಯಾಗಿದೆ. ಬಿತ್ತನೆ ಮಾಡುವ ಮುನ್ನ ರೈತರು ಬೀಜಕ್ಕಾಗಿ ಅಂಗಡಿಗಳಿಗೆ ಎಡತಾಕುವುದಿಲ್ಲ. ನೇರವಾಗಿ ರೈತರು ಈ ಹಳ್ಳಿಗರ ಬೀಜ ಬ್ಯಾಂಕ್‌ಗೆ ಬಂದು ಉಚಿತವಾಗಿ ಬೀಜ ತೆಗೆದುಕೊಂಡು ಹೋಗುತ್ತಾರೆ. ಬೆಳೆದ ನಂತರ ಅದಕ್ಕೆ ಮತ್ತಷ್ಟು ಹೆಚ್ಚು ಬೀಜ ಸೇರಿಸಿ ಪುನಃ ಈ ಬ್ಯಾಂಕಿಗೆ ತಂದೊಪ್ಪಿಸುತ್ತಾರೆ.

ಇದರ ಜೊತೆಗೆ ತರಬೇತಿ, ಮಾಹಿತಿ, ಪ್ರಾತ್ಯಕ್ಷಿಕೆಗಳನ್ನು ಉಚಿತವಾಗಿ ಹಮ್ಮಿಕೊಳ್ಳುತ್ತಾರೆ. ರೈತರಿಗೆ ಸಂಸ್ಥೆಯಿಂದ ರಾಷ್ಟ್ರೀಯ ಬೀಜ ಸರಣಿ ಮತ್ತು ನಿರ್ಗತಿಕರಿಗೆ ರೈತರಿಗೆ ಉಚಿತ ಬೀಜದಾನ, ಲಭ್ಯವಿರುವ ಸಂಪನ್ಮೂಲಗಳ ಪುಷ್ಟೀಕರಣ, ಸಾಂಪ್ರದಾಯಿಕ ಪ್ರಭೇದಗಳ ಹುಡುಕಾಟಕ್ಕಾಗಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಔಷಧೀಯ ಮೌಲ್ಯಗಳನ್ನು ದಾಖಲಿಸುವ ಕಿಚನ್ ಗಾರ್ಡನ್ ಚಟುವಟಿಕೆಗಳನ್ನು ಜನಪ್ರಿಯಗೊಳಿಸುವ ಕಾರ್ಯ ನಡೆಯುತ್ತಿವೆ.


ಈ ತಳಿಗಳನ್ನು ನಾನು ಸಂಗ್ರಹಿಸಿ ತಂದಿದ್ದೇನೆ ಕಣ್ರಿ

ಘಟ್ಟಪ್ರದೇಶದಲ್ಲಿ ಅನಾದಿಕಾಲದಿಂದಲೂ ಬಳಕೆ ಇದ್ದು, ಸದ್ಯ ಅಳಿವಿನಂಚಿಗೆ ಬಂದಿರುವ ವಿವಿಧ ದೇಸಿ ತಳಿಗಳ ಬೀಜವನ್ನು ರಕ್ಷಣೆ ಮಾಡಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ಘಟ್ಟಪ್ರದೇಶದ ಜಾಂಜೋಟಿ, ಅಭಿನಾಳ, ಬಾಮಗಾಂವ್, ಮತ್ರಗಾ, ಕಲಕುಂಟಿ, ತೆವಲಿ, ನಿಜನಗೂಡ, ನವಗಾ, ಕರಂಜನಾ ಇಂತಹ ಅನೇಕ ಸ್ಥಳಗಳಿಗೆ ಭೇಟಿ ನೀಡಿ, ಕರೆ ಹಕ್ಕಲಸಾಲಿ, ಸೊರಟ, ಅಭಿನಾಳ, ಕೆಂಪುನೆಳೆ, ಆಲೂರು ಸಣ್ಣ, ಹೆಗ್ಗೆ, ಮುಳ್ಳಾರಿ, ಕಗ್ಗ, ಕೊತಂಬರಿಸಾಳಿ, ಯಾಲಕ್ಕಿಸಾಳಿ, ಬಂಗಾರಕಡ್ಡಿ, ಬಾದಶಾಭೋಗ, ಜೀರಿಗೆಸಣ್ಣ, ಓಡಿಶಾದ ರಾಮಗಲಿ ಮೊದಲಾದ ಅಪರೂಪದ ತಳಿಗಳನ್ನು ಹುಡುಕಿ ಸಂಗ್ರಹಿಸಿ ಅಭಿವೃದ್ಧಿಪಡಿಸಿದ್ದಾರೆ. ಮುಗದ ದೊಡಗ್ಯಾ, ಮುಗದ ಸಿರಿ, ಕುಂಕುಮ ಸಾಲಿ, ಕಾಗಸಾಲಿ, ಡಾಂಬರಸಾಳಿ, ಕುಮುದ, ಕೃಷ್ಣ ಕುಮುದ, ಬಂಗಾರ ಕಡ್ಡಿ, ರತ್ನಚೂಡಿ, ಗಂಧಸಾಳಿ, ಚಂಪಕಸಾಳಿ, ಕರೆಕಾಲ ದೊಡಗ್ಯಾ, ಚಂಡಿಕ್ಯಾ, ಮುಗದ ದೊಡ್ಡಗ್ಯಾ, ಮೈಸೂರು ಮಲ್ಲಿಗೆ, ಕರೆಗಜವಿಲಿ ಮೊದಲಾದ ತಳಿಗಳ ಬೀಜ ಸಂಗ್ರಹ ಇವರಲ್ಲಿದೆ. ಮೂಲ ಬಂಗಾರಕಡ್ಡಿ ಭತ್ತದ ಬೀಜ ತಳಿಯ ಹುಡುಕಾಟ ಇನ್ನೂ ನಡೆದಿದೆ.

ಹಣವಿಲ್ಲ; ನೆಮ್ಮದಿ ಇದೆ: ನಮ್ಮ ಬ್ಯಾಂಕಿನಲ್ಲಿ ಹಣವಿಲ್ಲದಿರಬಹುದು. ಆದರೆ, ಅಳಿದು ಹೋಗಲಿರುವ ಅಪರೂಪದ ದೇಸಿ ಭತ್ತದ ತಳಿಗಳ ಜೊತೆಗೆ ವಿವಿಧ ತರಕಾರಿಯ ಬೀಜಗಳ ಸಾಕಷ್ಟು ಸಂಗ್ರಹವಿದೆ. ಹಣ ಇಲ್ಲದಿದ್ದರೂ ಅಪರೂಪದ ಬೀಜ ಸಂಪತ್ತನ್ನು ಉಳಿಸಿದ ಸಂತೃಪ್ತಿ ಇದೆ ಎಂದು ಶಂಕರ ಲಂಗಟೆ ಸಂತಸದಿಂದ ಹೇಳುತ್ತಾರೆ. ಸಾರ್ವಜನಿಕರಲ್ಲಿ ದೇಸಿ ತಳಿಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರತಿಯೊಂದು ಮನೆಯ ಮುಂಬಾಗಿಲಿಗೆ ಮಾವಿನ ಎಲೆಯ ತೋರಣಗಳ ಬದಲಿಗೆ ವಿವಿಧ ತಳಿಗಳ ಭತ್ತದ ತೆನೆಗಳನ್ನು ಪೋಣಿಸಿ ತೋರಣ ಕಟ್ಟಿದ್ದಾರೆ. ಪ್ರತಿಯೊಂದು ತೋರಣದ ಭತ್ತದ ತೆನೆಗಳಿಗೆ ಆಯಾ ತಳಿಗಳ ಹೆಸರುಗಳ ಚೀಟಿ ಕಟ್ಟಿರುವುದರಿಂದ ಬೇಡಿ ಬಂದವರಿಗೆ ಬೀಜ ಅಭಿವೃದ್ಧಿಪಡಿಸಿ ಎಂದು ಹೇಳಿ ಆಯಾ ತೆನೆಗಳ ಕಾಳುಗಳನ್ನು ಉದುರಿಸಿ ಹೊನ್ನಿನ ಹಾಗೆ ನೀಡುತ್ತಿರುವುದು ವಿಶೇಷ.

ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಬೀಜ ಅಭಿವೃದ್ಧಿ ಮಾಡುವ ದೃಷ್ಟಿಯಿಂದ ಪ್ರತಿಯೊಬ್ಬ ಸದಸ್ಯರು ನಾಲ್ಕಾರು ತಳಿಗಳನ್ನು ದತ್ತು ಪಡೆದು ತಮ್ಮ ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡುತ್ತಿದ್ದಾರೆ. ಇದು ಯಾವ ರೀತಿಯಿಂದ ಬೆಳೆಯುತ್ತಿದೆ ಎಂದರೆ ವಿವಿಧ ದೇಸಿ ತಳಿಗಳನ್ನು ಬಿತ್ತುವವರ ಮನೆಯ ಹೆಸರು ಮುಂದೊಂದು ದಿನ ಆಯಾ ಬೀಜಗಳ ಹೆಸರಾಗಿ ಬದಲಾದರೂ ಅಚ್ಚರಿಪಡಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.