ADVERTISEMENT

ಮರಸುತ್ತು ಎಂಬ ಮಾಯೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2012, 19:30 IST
Last Updated 9 ಏಪ್ರಿಲ್ 2012, 19:30 IST

`ಡಾಕ್ಟ್ರೇ! ನಮ್ಮ ಎಮ್ಮೇನ ಮೇಯೋಕೆ ಅಂತ ಕಾಡಿಗೆ ಬಿಟ್ಟಿದ್ದೆ. ಈಗ ತಾನೇ ಅದು ಮನೆಗೆ ಬಂತು, ನೋಡಿದ್ರೆ ಅದರ ಬಾಲ ಮುಕ್ಕಾಲು ಭಾಗ ತುಂಡಾಗಿಬಿಟ್ಟಿದೆ. ರಕ್ತ ಸೋರ‌್ತಾ ಇದೆ. ಸ್ವಲ್ಪ ಬಂದು ನೋಡಬೇಕಾಗಿತ್ತು~. ಅದೊಂದು ಮಧ್ಯಾಹ್ನ ರೈತರೊಬ್ಬರ ಫೋನ್ ಕರೆ.

ಮಲೆನಾಡು ಪ್ರದೇಶದಲ್ಲಿ ಕಾಡಿಗೆ ಮೇಯಲು ಬಿಟ್ಟ ಜಾನುವಾರು ಮನೆಗೆ ಮರಳಿದಾಗ ಅದರ ಬಾಲ ನಿಗೂಢವಾಗಿ ತುಂಡಾಗಿರುತ್ತದೆ.  ಯಾವುದೋ ಜಾತಿಯ ವಿಶೇಷ ಶಕ್ತಿ ಹೊಂದಿದ ಮರ ಅಥವಾ ಗಿಡವು ತನ್ನ ಬಳಿ ಬಂದ ಜಾನುವಾರುಗಳ ಬಾಲವನ್ನು ಹಿಡಿದು ತುಂಡರಿಸುತ್ತದೆ  ಎಂದು ಜನ ನಂಬುತ್ತಾರೆ.

ಇದನ್ನೇ ಮರಸುತ್ತು ಎನ್ನುತ್ತಾರೆ.ಆದರೆ ಇದರಿಂದ ಜಾನುವಾರುಗಳ ಪ್ರಾಣಕ್ಕೇನೂ ಅಪಾಯವಿಲ್ಲ ಎಂದು ಕಳೆದ ಹತ್ತು ವರ್ಷಗಳಿಂದ ಮಲೆನಾಡಿನಲ್ಲಿ ಕೆಲಸ ಮಾಡಿದ ಅನುಭವದಿಂದ ತಿಳಿದುಕೊಂಡಿದ್ದೇನೆ. ಈ ಅವಧಿಯಲ್ಲಿ ಇಂತಹ ಐವತ್ತಕ್ಕೂ ಹೆಚ್ಚು ಜಾನುವಾರುಗಳು ನನ್ನ ಗಮನಕ್ಕೆ ಬಂದಿವೆ.
 
ಬಾಲ ತುಂಡಾದಾಗ ಜಾನುವಾರು ಅಸಾಧ್ಯ ನೋವು ಅನುಭವಿಸುತ್ತದೆ. ಬಾಲವಿಲ್ಲದೇ ಅದರ ಅಂದ ಕೆಡುತ್ತದೆ. ಕ್ರಿಮಿಕೀಟಗಳನ್ನು ತನ್ನ ಬಾಲದಿಂದ ಓಡಿಸಿಕೊಳ್ಳಲು ಸಾಧ್ಯವಾಗದೇ ಇರುವುದರಿಂದ ದೇಹದ ಮೇಲೆ ಕಜ್ಜಿ, ಗಾಯ, ಹುಳುಗಳು ಆಗುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಜಾನುವಾರುಗಳ ಮಾರುಕಟ್ಟೆ ಮೌಲ್ಯ ಕುಸಿಯುತ್ತದೆ.

ಅಂದು ಅಲ್ಲಿ ಕಂಡದ್ದೇನು?

ಫೋನ್ ಮಾಡಿದ ರೈತರ ಕೋರಿಕೆಯಂತೆ ಹೋಗಿ ಆ ಎಮ್ಮೆಯನ್ನು ಪರೀಕ್ಷಿಸಿದೆ. ನೋಡಿದರೆ, ಅದರ ಬಾಲದ ಬುಡದಿಂದ ಒಂದು ಅಡಿ ಕೆಳಗೆ ಬಾಲ ತುಂಡಾಗಿದೆ. ಇದ್ದಷ್ಟು ಬಾಲದ ತುದಿ ಹರಿದುಹೋದಂತೆ ಕಾಣುತ್ತಿದೆ. ರಕ್ತ ಹೆಪ್ಪುಗಟ್ಟಿದೆ. ತುದಿಯ ನಾಲ್ಕು ಇಂಚು ಕೆಂಪಾಗಿ ಊದಿಕೊಂಡಿದೆ.

ಮಾಮೂಲಿನಂತೆ ಗಾಯವನ್ನು ಡ್ರೆಸಿಂಗ್ ಮಾಡಿ ಬಿಗಿಯಾಗಿ ಬ್ಯಾಂಡೇಜು ಕಟ್ಟಿ ಆಂಟಿಬಯೋಟಿಕ್ ಹಾಗೂ ನೋವು ನಿವಾರಕ ಇಂಜೆಕ್ಷನ್ ನೀಡಿದೆ. ಎರಡು ದಿನಕ್ಕೊಮ್ಮೆ ಗಾಯಕ್ಕೆ ಮುಲಾಮು ಹಚ್ಚಲು ಹೇಳಿದೆ. ಇನ್ನೇನೂ ತೊಂದರೆಯಿಲ್ಲ. ಎಂಟು ಹತ್ತು ದಿನಗಳಲ್ಲಿ ಗಾಯ ಪೂರ್ತಿ ಒಣಗಿರುತ್ತದೆ ಎಂದು ಅದರ ಮಾಲೀಕರಿಗೆ ಧೈರ್ಯ ತುಂಬಿದೆ.

ಆದರೆ ನನ್ನ ಕೆಲಸ ಅಲ್ಲಿಗೇ ಮುಗಿದಿರಲಿಲ್ಲ. ತುಂಡಾದ ಬಾಲ ನೋಡುವ ಕುತೂಹಲ! ನಾನು ಬರುವುದಕ್ಕೆ ಮೊದಲೇ ಆ ರೈತರು ಬಾಲ ಹಿಡಿದ ಮರವನ್ನು ಹುಡುಕಿ ಇಟ್ಟಿದ್ದರು. ಎಮ್ಮೆಯು ಮನೆಗೆ ಬಂದ ದಾರಿಯನ್ನೇ ಹಿಡಿದು ಕಾಡಿಗೆ ಹೊರಟ ಅವರಿಗೆ ಅದರ ತುಂಡಾದ ಬಾಲದಿಂದ ಬಸಿದ ರಕ್ತದ ಹನಿಗಳು ಬಾಲವನ್ನು ಹಿಡಿದುಕೊಂಡ ಗಿಡದ ದಾರಿಯನ್ನು ಅನಾಯಾಸವಾಗಿಯೇ ತೋರಿಸಿದ್ದವು!

ಅಲ್ಲಿತ್ತು ಖಳನಾಯಕ: ಅಲ್ಲಿ ಹೋಗಿ ನೋಡಿದರೆ ಸುಮಾರು ನಾಲ್ಕೈದು ವರ್ಷ ವಯಸ್ಸಿನ ಹತ್ತು ಇಂಚು ಸುತ್ತಳತೆಯ ಕಾಂಡ ಹೊಂದಿದ ಕವಲು(Careya arborea) ಜಾತಿಯ ಗಿಡ ಬುಡಮೇಲಾಗಿ ಬಿದ್ದಿತ್ತು. ಅದರ ಕಾಂಡಕ್ಕೆ ನೆಲದಿಂದ ಮೂರು ಅಡಿ ಎತ್ತರದಲ್ಲಿ ನತದೃಷ್ಟ ಎಮ್ಮೆಯ ಬಾಲ ಎರಡು ಸುತ್ತು ಸುತ್ತಿಕೊಂಡಿತ್ತು.
 
ಗಿಡದ ಒಂದು ದೊಡ್ಡ ಬೇರು ತುಂಡಾಗಿತ್ತು. ತಾಯಿಬೇರು ತುಂಡಾಗದಿದ್ದರೂ ಸಡಿಲಗೊಂಡು ನೆಲವನ್ನು ಬಗೆದು ಹೊರಬಂದಿತ್ತು. ಗಿಡದ ಕಾಂಡಕ್ಕೆ ಹಸಿ ಮಣ್ಣಿನ ರಾಡಿ ಮೆತ್ತಿಕೊಂಡಿತ್ತು. ಸುತ್ತಲೂ ಪರೀಕ್ಷಿಸಿ ನೋಡಿದರೆ ಸುಮಾರು ಐವತ್ತು ಅಡಿ ದೂರದಲ್ಲಿ ಮಣ್ಣಿನ ರಾಡಿ ತುಂಬಿದ ನೀರಿನ ಪುಟ್ಟ ಹೊಂಡವೊಂದಿತ್ತು. ಅಲ್ಲಿಂದ ಈ ಗಿಡದ ವರೆಗೆ ರಾಡಿ ಮಣ್ಣು ಚೆಲ್ಲಿತ್ತು.

ಏನಾಗಿರಬಹುದು?
ಕಂಡ ಎಲ್ಲಾ ವಿದ್ಯಮಾನಗಳನ್ನು ಗಮನಿಸಿ ಘಟನೆಗಳನ್ನು ಜೋಡಿಸುತ್ತಾ ಹೋದಾಗ ಸಿಕ್ಕಿದ್ದು ಈ ಚಿತ್ರಣ.ಎಮ್ಮೆಗಳಿಗೆ ನೀರಿನಲ್ಲಿ ಬಿದ್ದು ಹೊರಳಾಡುವುದೆಂದರೆ ತುಂಬಾ ಇಷ್ಟ. ರಾಡಿ ನೀರು (ಅರಲು) ತುಂಬಿದ ಹೊಂಡವಿದ್ದರಂತೂ ಸ್ವರ್ಗ ಸಮಾನ. ಈ ಎಮ್ಮೆ ಮೇಯಲು ಹೋದಾಗ ಅಲ್ಲಿ ಕಂಡ ರಾಡಿ ನೀರಿನ ಹೊಂಡದಲ್ಲಿ ಮಲಗಿ ಹೊರಳಾಡಿದೆ. ಚೆನ್ನಾಗಿ ಸ್ನಾನ ಮಾಡಿ ತೃಪ್ತಿಯಾದ  ನಂತರ ಮೇಲಕ್ಕೆದ್ದು ಮನೆ ಕಡೆ ಹೊರಟಿದೆ.

ರಾಡಿ ಮಣ್ಣು ಮೈಯೆಲ್ಲ ಮೆತ್ತಿಕೊಂಡಿದ್ದರಿಂದ ತುರಿಸಿಕೊಳ್ಳಲು ಹತ್ತಿರದಲ್ಲಿಯೇ ಇದ್ದ ಈ ಕವಲು ಗಿಡದ ಬಳಿ ಬಂದು ಅದಕ್ಕೆ ಮೈ ಹೊಸೆಯತೊಡಗಿದೆ. ಮೈ ತುಂಬ ಇರುವ ಮಣ್ಣಿನ ರಾಡಿಗೆ ಮುತ್ತುವ ನೊಣ, ಸೊಳ್ಳೆಗಳನ್ನು ಓಡಿಸಲು ಸ್ವಾಭಾವಿಕವಾಗಿಯೇ ತನ್ನ ಬಾಲವನ್ನು ಅಲ್ಲಾಡಿಸತೊಡಗಿದೆ.
 
ಹೀಗೆ ಮಾಡುವಾಗ ಬಾಲ ಕವಲು ಗಿಡದ ಸುತ್ತಲೂ ಒಂದು ಸುತ್ತು ಸುತ್ತಿಕೊಂಡಿದೆ. ಗಿಡದ ತೊಗಟೆ ಒರಟಾಗಿರುವುದರಿಂದ ಮತ್ತು ಬಾಲಕ್ಕೆ ಹಸಿ ಮಣ್ಣಿನ ರಾಡಿ ಮೆತ್ತಿಕೊಂಡಿರುವುದರಿಂದ ಗಿಡಕ್ಕೆ ಸುತ್ತಿದ ಬಾಲವು ತಕ್ಷಣದೇ ಬಿಡದೇ ಹಿಡಿದುಕೊಂಡು ಬಿಟ್ಟಿದೆ. ಬಾಲದ ತುದಿಯಲ್ಲಿ ರೋಮಭರಿತ ಕುಚ್ಚು ಇರುವುದರಿಂದ ಈ ಹಿಡಿದುಕೊಳ್ಳುವಿಕೆ ಇನ್ನೂ ಗಟ್ಟಿಯಾಗಿದೆ.

ತನ್ನ ಬಾಲ ಮರಕ್ಕೆ ಅಂಟಿಕೊಂಡುಬಿಟ್ಟಿದ್ದರಿಂದ ಎಮ್ಮೆ ಗಾಬರಿಯಾಗಿ ಕೊಸರಾಡಿದೆ. ಬಾಲವನ್ನು ತಪ್ಪಿಸುವ ರಭಸದಲ್ಲಿ ಗಿಡದ ಸುತ್ತಲೂ ಒಂದು ಸುತ್ತು ತಿರುಗಿರಲೂಬಹುದು. ಈ ಕೊಸರಾಟದಲ್ಲಿ ಬಾಲವು ಬಿಡಿಸಿಕೊಳ್ಳುವುದರ ಬದಲು ಒಂದು ಸುತ್ತಿನ ಮೇಲೆ ಇನ್ನೊಂದು ಸುತ್ತು ಬಂದು ಲಾಕ್ ಆಗಿಬಿಟ್ಟಿದೆ. ಜೊತೆಗೆ ಎಮ್ಮೆ ಗಾಬರಿಯಿಂದ ತನ್ನ ಬಾಲವನ್ನು ಎಳೆಯುತ್ತಿದ್ದಂತೆ ಈ ಬಂಧನ ಇನ್ನೂ ಬಿಗಿಗೊಂಡಿದೆ.

ಬಾಲ ಭದ್ರವಾಗಿ ಮರಕ್ಕೆ ಹಿಡಿದಿದ್ದರಿಂದ ಎಮ್ಮೆ ಇನ್ನೂ ಗಾಬರಿಯಾಗಿ ತಪ್ಪಿಸಿಕೊಳ್ಳಲು ಜೋರಾಗಿ ಎಳೆದೂ ಎಳೆದೂ ಪ್ರಯತ್ನಿಸಿದೆ. ಈ ಜಗ್ಗಾಟದಲ್ಲಿ ಆ ಗಿಡ ಬೇರು ಸಮೇತ ಕಿತ್ತು ಬಂತು. ಇದೇ ಸಮಯಕ್ಕೆ ಬಾಲವೂ ತುಂಡಾಯಿತು. ಅಳಿದುಳಿದ ಬಾಲದೊಂದಿಗೆ ಬದುಕಿದೆಯಾ ಬಡಜೀವವೇ ಎನ್ನುತ್ತ ಎಮ್ಮೆ ಮನೆಗೆ ಓಡಿಬಂದಿದೆ!

ಮರದ ತಪ್ಪಲ್ಲ
ಮರಸುತ್ತು  ಹಿಡಿಯುವ ಘಟನಾವಳಿಯನ್ನು ಹೀಗೆ ವಿಶ್ಲೇಷಿಸಬಹುದು.
ಮರಸುತ್ತು ಹಿಡಿಯಲು ಇಂತಹದೇ ಜಾತಿಯ ಗಿಡ/ ಮರ ಆಗಬೇಕೆಂದಿಲ್ಲ.
ಕಾಂಡದ ಸುತ್ತಲೂ ಬಾಲವು ಒಂದೆರಡು ಸುತ್ತು ಸುತ್ತಲು ಬರುವಷ್ಟು ಸುತ್ತಳತೆಯ ಮರ ಅಗತ್ಯ. ಬಹಳ ದಪ್ಪನೆಯ ಮರವಾದರೆ ಬಾಲ ಇಡೀ ಮರದ ಸುತ್ತಲೂ ಬರಲಾರದು.

ಆಗ ಹಿಡಿದುಕೊಳ್ಳುವ ಸಂಭವವಿಲ್ಲ. ಗಿಡದ ತೊಗಟೆ ಕೊಂಚ ಒರಟಾಗಿರುವುದೂ ಅಗತ್ಯ. ಒರಟಾದ ತೊಗಟೆಗೆ ಬಾಲದ ಕುಚ್ಚಿನಲ್ಲಿರುವ ಕೂದಲುಗಳು ಸುಲಭವಾಗಿ ಹಿಡಿದುಕೊಳ್ಳುತ್ತದೆ.

ಎಮ್ಮೆಯ ಬಾಲಕ್ಕೆ ಇರುವ ಮಣ್ಣಿನ ರಾಡಿ ಅಂಟಿನಂತೆ ಕೆಲಸ ಮಾಡುತ್ತದೆ ಅಥವಾ ಜಾನುವಾರು ಮೈ ತುರಿಸಿಕೊಳ್ಳಲು ಮರಕ್ಕೆ ಉಜ್ಜುತ್ತ ನಿಂತಾಗ ಅಲ್ಲಿ ಸ್ಥಿರ ವಿದ್ಯುತ್ (static electricity) ಉತ್ಪಾದನೆಯಾಗುತ್ತದೆ. ಇದರಿಂದಾಗಿ ಬಾಲ ಮರಕ್ಕೆ ಹಿಡಿದುಕೊಳ್ಳುತ್ತದೆ.

ಹೀಗೆ ತನ್ನ ಬಾಲವು ಮರಕ್ಕೆ ಕೊಂಚ ಹಿಡಿದುಕೊಂಡರೆ ಜಾನುವಾರು ಬಹಳ ಗಾಬರಿಯಿಂದ ಕೊಸರಾಡುತ್ತ ಬಾಲವನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತದೆ. ತಪ್ಪಿಸಿಕೊಳ್ಳಲು ಆಗದೇ ವಿರುದ್ಧ ದಿಕ್ಕಿನಲ್ಲಿ ಮರದ ಸುತ್ತಲೂ ತಿರುಗಬಹುದು. ಆಗ ಬಾಲವು ಇನ್ನೂ ಒಂದು ಸುತ್ತು ಸುತ್ತಿಕೊಳ್ಳುತ್ತದೆ. ಎಳೆದಾಗಲೆಲ್ಲ ಬಾಲವು ಇನ್ನೂ ಭದ್ರವಾಗಿ ಲಾಕ್ ಆಗುತ್ತದೆ.

ಜಾನುವಾರುಗಳ ಬಾಲವೇನೂ ಸುಮ್ಮನೆ ಎಳೆದಾಕ್ಷಣಕ್ಕೆ ತುಂಡಾಗುವಂಥದ್ದಲ್ಲ. ಬೆನ್ನು ಹುರಿಯ ಮೂಳೆಯ ಕೊಂಡಿಗಳು ಬಲವಾದ ಸ್ನಾಯುಗಳ ಹಿಡಿತದೊಂದಿಗೆ ಭದ್ರವಾಗಿರುತ್ತವೆ. ಜೊತೆಗೆ ಚರ್ಮದ ಹೊದಿಕೆ ಬೇರೆ. ಆದರೂ 300 ರಿಂದ 500 ಕಿಲೋ ತೂಗುವ ಜಾನುವಾರು ಜಗ್ಗತೊಡಗಿದಾಗ ಬಾಲ ಕಿತ್ತು ಬರುವುದರ ಜೊತೆಗೆ ಪುಟ್ಟ ಗಿಡವಾದರೆ ಅದೂ ಸಹಿತ ಕೀಳಬಹುದು.

ಸ್ವಲ್ಪ ಗಟ್ಟಿಯಾದ ಮರವಾದರೆ ಬಾಲವಷ್ಟೇ ಹರಿದು ಬರುತ್ತದೆ. ಕಿತ್ತು ಹೋದ ಬಾಲ ಮರಕ್ಕೆ ಸುತ್ತಿಕೊಂಡೇ ಇರುತ್ತದೆ.

ಹಾಗಿದ್ದರೆ ಮರಸುತ್ತು ಹಿಡಿಯದಂತೆ ಏನು ಮಾಡಬಹುದು? ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಆದರೂ ಜಾನುವಾರುಗಳಿಗೆ ಮೈ ತುರಿಕೆ ಬಾರದಂತೆ, ಉಣ್ಣೆ- ಹೇನುಗಳು ಆಗದಂತೆ, ಚರ್ಮ ರೋಗಗಳು ಇಲ್ಲದಂತೆ ನೋಡಿಕೊಳ್ಳಬೇಕು. ಚರ್ಮದ ಆರೋಗ್ಯ ಉತ್ತಮವಾಗಿರಬೇಕು. ಒಟ್ಟಾರೆಯಾಗಿ ಮೇಯಲು ಬಿಟ್ಟಾಗ ತುರಿಸಿಕೊಳ್ಳಲು ಮರಕ್ಕೆ ಮೈ ಉಜ್ಜುವ ಅಗತ್ಯ ಬಾರದಂತೆ ನೋಡಿಕೊಳ್ಳಬೇಕು.
 


 

 ಅತಿಮಾನುಷ ನಂಬಿಕೆ
ಮಲೆನಾಡಿನ ರೈತರೆಲ್ಲರಿಗೂ ಮರಸುತ್ತಿನ ಬಗ್ಗೆ ಗೊತ್ತು. ಕೆಲವರ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬರುವ ಬೂರೆ  ಹಬ್ಬದ ದಿನದಂದು ಮೊಳಕೆ ಒಡೆದ ಯಾವುದೇ ಜಾತಿಯ ಗಿಡವಿರಲಿ ಅದಕ್ಕೆ ಈ ಶಕ್ತಿ ಬರುತ್ತದೆ! ಈ ಮರಸುತ್ತು ಹಿಡಿದುಕೊಂಡ ಸಂದರ್ಭದಲ್ಲಿ ಅದರಿಂದ ಹಸು/ ಎಮ್ಮೆಯನ್ನು ಪಾರು ಮಾಡಲು ಕಬ್ಬಿಣದ ಕತ್ತಿಯಿಂದ ಆ ಮರಕ್ಕೆ ಒಂದು ಕಚ್ಚು ಹಾಕಬೇಕಂತೆ. ಆಗ ಮರವು ಬಾಲವನ್ನು ಬಿಟ್ಟುಬಿಡುತ್ತದಂತೆ. ಆದರೆ ಮರವು ತಾನೇ ಹಿಡಿದುಕೊಂಡಿದ್ದನ್ನು ಪ್ರತ್ಯಕ್ಷ ಕಂಡವರೂ ಇಲ್ಲ. ಅದಕ್ಕೆ ಕತ್ತಿಯಿಂದ ಏಟು ಹಾಕಿ ಬಿಡಿಸಿದವರೂ ಇಲ್ಲ!

ADVERTISEMENT
ಬರಿ ತಪ್ಪು ಕಲ್ಪನೆ
ಬಾಲ ತುಂಡಾಗುವ ಘಟನೆಯನ್ನು ವಿಶ್ಲೇಷಿಸಿದಾಗ ಮರಕ್ಕೆ ಅಂಥದ್ದೇನೂ ಅತಿಮಾನುಷ ಶಕ್ತಿ ಇಲ್ಲ ಎಂಬುದು ತಿಳಿಯುತ್ತದೆ. ಇದರಲ್ಲಿ ತಪ್ಪು ಜಾನುವಾರಿನದ್ದೇ ಹೊರತು ಪಾಪದ ಮರದ್ದಲ್ಲ. ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.