ADVERTISEMENT

ಮರುಜೀವ ನೀಡಿದ ನೀರು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST
ಮರುಜೀವ ನೀಡಿದ ನೀರು
ಮರುಜೀವ ನೀಡಿದ ನೀರು   

ಇದ್ದದ್ದು ಮೂರು ಎಕರೆ ಒಣ ಜಮೀನು. ಮಳೆ ಇಲ್ಲ. ಬದಲಿ ನೀರಿನ ವ್ಯವಸ್ಥೆಯೂ ಇಲ್ಲ. ಜೊತೆಗೆ ಮೂತ್ರಕೋಶದಲ್ಲಿ ಕಲ್ಲಿನ ಸಮಸ್ಯೆ. ಆಸ್ಪತ್ರೆಯಲ್ಲಿ ದುಬಾರಿ ಮೊತ್ತದ ಚಿಕಿತ್ಸೆ. ತುತ್ತು ಅನ್ನಕ್ಕೂ ಪರದಾಡಬೇಕಾದ ಪರಿಸ್ಥಿತಿ.

ಇವೆಲ್ಲವನ್ನೂ ಹಿಮ್ಮೆಟ್ಟಿ ಇರುವ ಜಮೀನಿನಲ್ಲಿಯೇ ಬೆಳೆ ಬೆಳೆದು ಎರಡು ಹೊತ್ತು ನೆಮ್ಮದಿಯ ಊಟ ಮಾಡುತ್ತಿರುವ ಬಳ್ಳಾರಿ  ಜಿಲ್ಲೆಯ ಸಂಡೂರು ತಾಲ್ಲೂಕಿನ ಕುಗ್ರಾಮವಾದ ದೊಡ್ಡ ಉಪ್ಪಾರಹಳ್ಳಿಯ ವಡ್ಡರ ತಿಮ್ಮಪ್ಪನ ಕಥೆ ಇದು.

ಅವರಿವರ ಕೈ ಕಾಲು ಹಿಡಿದು ಹೊಲಕ್ಕೊಂದು ಗಂಗಾಕಲ್ಯಾಣಿ ಯೋಜನೆಯಲ್ಲಿ ಬೋರ್‌ವೆಲ್ ಕೊರೆಸಿಕೊಂಡದ್ದೂ ಆಯ್ತು. ಮುನ್ನೂರು ಅಡಿ ಕೊರೆಸಿದರೂ ಬಂದಿದ್ದು ಒಂದಿಂಚು ನೀರು ಮಾತ್ರ. ಆದರೆ ಸಾಯುವವನಿಗೆ ಹುಲ್ಲುಕಡ್ಡಿಯೇ ಆಸರೆ ಎನ್ನುವಂತೆ ಒಂದಿಚು ನೀರೇ ಇವರಿಗೆ ಈಗ ಜೀವನಾಧಾರವಾಗಿದೆ.

ಈ ನೀರಿನಲ್ಲಿಯೇ ಹೊಲದ ಒಂದು ಭಾಗದಲ್ಲಿ ಕೈ ತೋಟ ಮಾಡಿಕೊಂಡಿರುವ ತಿಮ್ಮಪ್ಪ ಅಲ್ಲಿ ತರಕಾರಿಗಳನ್ನು ಬೆಳೆದು, ಮಾರಾಟ ಮಾಡಿ ತನ್ನ ದಿನನಿತ್ಯದ ಔಷಧಿ ವೆಚ್ಚವನ್ನು ನಿಭಾಯಿಸುವುದರ ಜೊತೆಗೆ ಕುಟುಂಬವನ್ನೂ ಸಂಭಾಳಿಸಿಕೊಂಡು ಹೋಗುತ್ತಿದ್ದಾರೆ.

ತಿಮ್ಮಪ್ಪ ಮೊದಲಿನಿಂದಲೂ ವ್ಯವಸಾಯ ಮಾಡುತ್ತಾ ಬಂದಿದ್ದರೂ ಬರಗಾಲ ಹಾಗೂ ಅನಾರೋಗ್ಯದಿಂದಾಗಿ ವ್ಯವಸಾಯ ಮಾಡಲು ಸಾಧ್ಯವಾಗಲಿಲ್ಲ. ನಂತರ ಕೂಲಿ ಮಾಡಬೇಕಾದ ಪರಿಸ್ಥಿತಿ. ಮಕ್ಕಳ ಮದುವೆ, ವೈದ್ಯಕೀಯ ಖರ್ಚಿಗೆ ಸಾವಿರಾರು ರೂಪಾಯಿ ವೆಚ್ಚ. ಈ ನಡುವೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ನೇಮಕ. ಆದರೆ ಹಣ ಸಂಪಾದಿಸುವ ಗೋಜಿಗೆ ತಿಮ್ಮಪ್ಪ ಹೋಗಲಿಲ್ಲ. ಆರೋಗ್ಯ ಮಾತ್ರ ಕೈಕೊಡುತ್ತಲೇ ಸಾಗಿತ್ತು.

ಕೊನೆಗೆ ಕೂಲಿ ಮಾಡಲು ಕೂಡ ಸಾಧ್ಯವಾಗದೇ ತಲೆ ಮೇಲೆ ಕೈ ಇಟ್ಟು ಕುಳಿತವನಿಗೆ ಹೆಂಡತಿ ಹನುಮಕ್ಕ ಧೈರ್ಯ ತುಂಬಿದಳು. ಬೀಳು ಬಿಟ್ಟಿದ್ದ ಜಮೀನನ್ನು ಹದ ಮಾಡಲು ತಿಮ್ಮಪ್ಪ ಕಾಯಿಲೆ ಲೆಕ್ಕಿಸದೇ ಮುಂದಾದ. ಪತ್ನಿಯ ಜೊತೆ ಹಗಲಿರುಳು ದುಡಿದ ಫಲವೇ ಈಗ ಒಳ್ಳೆಯ ಬೆಳೆ ದೊರೆತಿದೆ.

ಸೊಪ್ಪು, ಟೊಮೆಟೊ, ಬದನೆ, ಮೆಣಸಿನಕಾಯಿ ಸೇರಿದಂತೆ ಇತರ ತರಕಾರಿಗಳನ್ನು ಬೆಳೆಯುತ್ತಾ ಬಂದಿದ್ದಾರೆ. ಹೀಗೆ ಬೆಳೆದವುಗಳನ್ನು ತಿಮ್ಮಪ್ಪನ ಹೆಂಡತಿ ಹನುಮಕ್ಕ ಪ್ರತಿ ನಿತ್ಯ ಸಮೀಪದ ಚೋರನೂರು ಗ್ರಾಮದ ಮನೆ ಮನೆಗೆ ತೆರಳಿ ಮಾರಿ ಹಣ ಸಂಪಾದಿಸುತ್ತಾರೆ.

ಊಟದ ಜೊತೆಗೆ ಔಷಧಿ ವೆಚ್ಚಕ್ಕೆ ಈಗ ಈ ತೋಟ ಸಹಾಯ ಹಸ್ತ ಚಾಚಿದೆ. ಈ ಮೂಲಕ ಅನಾರೋಗ್ಯದ ನಡುವೆಯೂ ವಡ್ಡರ ತಿಮ್ಮಪ್ಪ ಟೊಂಕ ಕಟ್ಟಿ ದುಡಿಯುವ ಮೂಲಕ ಸುತ್ತಲಿನ ಹತ್ತು ಹಳ್ಳಿಯ ಕೃಷಿಕರಿಗೆ ಮಾದರಿಯಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.