ADVERTISEMENT

ಮರೆತು ಹೋಗುತ್ತಿರುವ ಮುಳ್ಳೇ ಹಣ್ಣು

ಗಣಪತಿ ಹಾಸ್ಪುರ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST

`ಚಿನ್ನು,  ಅಲ್ ನೋಡು... ಎಷ್ಟೊಂದು  ಮುಳ್ಳೇ ಹಣ್ಣು. ಆಹಾ! ಎಂಥಾ ರುಚಿಯಿದ್ದು... ಮಾರಾಯ್ತಿ!~  ಎಂದು ಆ ಕ್ಷಣ ಗೆಳತಿಯಲ್ಲಿ ಉತ್ಸಾಹದಿಂದ ಹೇಳಿದ್ದೆ. `ಅಯ್ಯೊ... ಇದು ಎಂಥದೂ ಅಲ್ಲಾ. ನಂ ಅಜ್ಜನ ಮನೆ ಸುತ್ತ ಮುಳ್ಳೇ ಹಣ್ಣಿನ ಗಿಡ ಬಹಳ ಇದ್ದು. ಸಕತ್ ಹಣ್ಣು ಬಿಟ್ಟಿದ್ದು ಗೊತ್ತಿದ್ದ?~ ಎಂದು ಆಕೆ ಕೇಳಿದಾಗ ನನಗೆ ಆಶ್ಚರ್ಯದ ಜೊತೆಗೆ ಕುತೂಹಲವೂ ಉಂಟಾಗಿತ್ತು.

ಹೌದು. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಶಿರಸಿ, ಸಿದ್ದಾಪುರ ತಾಲೂಕಿನ ಹಲವು ಕಡೆಗಳಲ್ಲಿ ಕಪ್ಪು ಮುಳ್ಳೇ ಹಣ್ಣಿನ ಗಿಡಗಳಿವೆ. ಹಣ್ಣುಗಳಿಂದ ತುಂಬಿಕೊಂಡು ರಾರಾಜಿಸುತ್ತಿವೆ. ಅವುಗಳನ್ನು ಕೊಯ್ದು ತಿನ್ನುವವರು ಮಾತ್ರ ವಿರಳವಾಗಿದ್ದಾರೆ.

ಈಗಿನ ಆಧುನಿಕ ಯುಗದಲ್ಲಿ ಮಲೆನಾಡಿನ ಬೆಟ್ಟ- ಬ್ಯಾಣಗಳಲ್ಲಿ ಸುಲಭವಾಗಿ ಸಿಗುವ ಮುಳ್ಳೇ, ಕವಳಿ, ನೇರಲೆ, ಹಲಿಗೆ, ದಡಸಲು, ನೂರಕಲು, ಚಳ್ಳೇ ... ಹೀಗೆ ಹಲವಾರು ಬಗೆಯ ರುಚಿಕರವಾದ ಹಣ್ಣುಗಳು ಜನಸಾಮಾನ್ಯರಿಂದಲೇ ದೂರವಾಗತೊಡಗಿವೆ.
ಮೊದಲೆಲ್ಲಾ ಮಕ್ಕಳು ಶಾಲೆ ಬಿಡುವುದೇ ತಡ, ಬೆಟ್ಟ-ಬ್ಯಾಣಗಳನ್ನು  ಸುತ್ತಿ ಮುಳ್ಳೇ ಹಣ್ಣಿನ ಮಟ್ಟಿಯನ್ನು ಹುಡುಕಿ, ತಮಗೆ ಸಿಕ್ಕಿದಷ್ಟು ಹಣ್ಣುಗಳನ್ನು ಆರಿಸಿ ತಿನ್ನುತ್ತಾ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದರು.
 
ಎಷ್ಟೋ ಬಾರಿ ಕೊಯ್ದುಕೊಂಡು ಮುಳ್ಳೇ ಹಣ್ಣನ್ನು ಕಿಸೆಯಲ್ಲಿ ಇಟ್ಟುಕೊಂಡು ಮರು ದಿನ ಶಾಲೆಗೆ ಬರುವಾಗ ಸವಿಯುವುದೂ ಇತ್ತು. ಆಗಿನ ಮಕ್ಕಳಿಗೆ ಕಾಡಿನ ಹಣ್ಣಿನ ಪರಿಚಯ ಚೆನ್ನಾಗಿಯೇ ಇತ್ತು. ಜೊತೆಗೆ ಆ ಹಣ್ಣುಗಳನ್ನು ಸ್ವತಂತ್ರವಾಗಿಯೇ ಕೊಯ್ದು ತಿನ್ನುವ ಕೌಶಲ್ಯ, ಚಾಣಾಕ್ಷತನವಿತ್ತು. ಒಮ್ಮೆ ರುಚಿ ನೋಡಿದವರು, ಮುಂದಿನ ವರುಷ ಆ ಹಣ್ಣಿನ ಹಂಗಾಮು ಎದುರು ನೋಡುತ್ತಿದ್ದರು.

ಆದರೆ, ಈಗ ಪರಿಸ್ಥಿತಿಯೇ ಬದಲಾಗಿದೆ. ಹೈಟೆಕ್ ಜೀವನ ಶೈಲಿ ಮಕ್ಕಳನ್ನು ಬಾಲ್ಯದ ತುಂಟಾಟ, ಹುಡುಗಾಟದಿಂದ ದೂರ ಮಾಡಿದೆ. ನಿತ್ಯ ಶಾಲೆ ಮುಗಿದ ಮೇಲೆ ಟ್ಯೂಷನ್, ಕ್ರಿಕೆಟ್ ಆಟ ಅಥವಾ ಟಿವಿಯಲ್ಲಿ ಸಮಯ ಕಳೆಯುತ್ತಿದ್ದಾರೆ.

ಅಲ್ಲದೇ ಬಹುತೇಕ ಮಕ್ಕಳನ್ನು (ಹಳ್ಳಿಯಲ್ಲಿಯೂ ಸಹಾ) ಇಂದು ಪಾಲಕರು ವಾಹನದಲ್ಲಿಯೇ ಶಾಲೆಗೆ ಬಿಡುವುದರಿಂದ, ಬೆಟ್ಟ-ಬ್ಯಾಣ ಸುತ್ತಿ ಮನೆ ಸೇರುವ ಪರಿಪಾಠವೇ ಇಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಸಹಾ ಕಾಡಿನ ಹಣ್ಣುಗಳ ಪರಿಚಯವೇ ಇಲ್ಲದಂತಾಗಿದೆ. ಬೆಟ್ಟ-ಬ್ಯಾಣಗಳಲ್ಲಿ ಹೇರಳವಾಗಿ ಬೆಳೆಯುವ ಮುಳ್ಳೇಯಂಥ ಹಣ್ಣುಗಳು ಗಿಡದಲ್ಲಿಯೇ ಮಾಗಿ ಉದುರಿ ನೆಲ ಪಾಲಾಗುತ್ತಿವೆ.

 ಮುಳ್ಳೇ ಹಣ್ಣು ಅಂದರೆ ಏನು ಎಂದು ಈಗಿನ ಮಕ್ಕಳಲ್ಲದೇ, ದೊಡ್ಡವರು ಕೇಳಿದರೂ ಆಶ್ಚರ್ಯವಿಲ್ಲ. ಇದು ಬೆಟ್ಟ-ಬ್ಯಾಣಗಳಲ್ಲಿ ಬೆಳೆಯುವ ಬಳ್ಳಿ ರೂಪದ ಸಸ್ಯ. ಇದಕ್ಕೆ ಹೇರಳವಾಗಿ ಮುಳ್ಳುಗಳು ಇರುತ್ತವೆ. ಪ್ರತಿ ದಂಟಿಗೂ ಪುಟ್ಟ ಪುಟ್ಟ (ಕಾಳುಮೆಣಸಿನ ಗಾತ್ರ) ನೂರಾರು ಹಸಿರು ಕಾಯಿ ಬಿಡುತ್ತವೆ. ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅದಕ್ಕಾಗಿಯೇ ಹಳ್ಳಿಗರು ಇದನ್ನು ಕರೀ ಮುಳ್ಳೆ ಹಣ್ಣು ಎಂದೇ ಕರೆಯುತ್ತಾರೆ. ಅವು ತಿನ್ನಲು ಬಹಳ ರುಚಿ. ಸಾಮಾನ್ಯವಾಗಿ ಈ ಹಣ್ಣುಗಳು ಮಕರ ಸಂಕ್ರಾಂತಿಯ ಎಡ ಬಲದಲ್ಲಿ ಹೇರಳವಾಗಿ ಬಿಡುತ್ತವೆ.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.