ADVERTISEMENT

ಮಲ್ಲಿಗೆ ನಡುವೆ ತರಕಾರಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST
ಮಲ್ಲಿಗೆ ನಡುವೆ ತರಕಾರಿ
ಮಲ್ಲಿಗೆ ನಡುವೆ ತರಕಾರಿ   


ರೈತರು ಈಗ ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಕಡಿಮೆ ಹಣದಲ್ಲಿ ಬೇಸಾಯ ಮಾಡಿ ಹೆಚ್ಚು ಆದಾಯ ಪಡೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಹಣ್ಣು,ಹೂ, ತರಕಾರಿ ಇತ್ಯಾದಿಗಳನ್ನು ಮಿಶ್ರ ಬೆಳೆಯಾಗಿ ಬೆಳೆಯುವ ಪ್ರಯತ್ನ ಅಲ್ಲಲ್ಲಿ ನಡೆಯುತ್ತಿದೆ. ಹೂವಿನ ತೋಟದಲ್ಲಿ ತರಕಾರಿ ಬೆಳೆಯುವ ಪ್ರಯತ್ನ ಹೊಸದಲ್ಲ. ಆದರೆ ಅದರಲ್ಲಿ ಯಶಸ್ಸು ಪಡೆದವರು ವಿರಳ.

ಸುಳ್ಯದ ರೈತ ಮಹಿಳೆ ಜಯಂತಿ ಅಂಥವರಲ್ಲಿ ಒಬ್ಬರು. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆದಿಲಕ್ಷ್ಮಿ ಸ್ವಸಹಾಯ ಸಂಘದ ಸದಸ್ಯೆ. ಸಂಘದಿಂದ ಅವರಿಗೆ ಮಲ್ಲಿಗೆ ಬೆಳೆಯಲು 500ರೂ ನೆರವು ಸಿಕ್ಕಿತ್ತು. ಈ ಹಣದಲ್ಲಿ ಶಂಕರಪುರ ಮಲ್ಲಿಗೆ ಸಸಿಗಳನ್ನು ಖರೀದಿಸಿ ಹತ್ತು ಸೆಂಟ್ಸ್ ಜಾಗದಲ್ಲಿ ನಾಟಿ ಮಾಡಿದರು.

ಮಲ್ಲಿಗೆಯೊಂದಿಗೆ ಮಿಶ್ರ ಬೆಳೆಯಾಗಿ ಹಲವು ತರಕಾರಿಗಳನ್ನೂ ಬೆಳೆದರು. ಐದು ವರ್ಷಗಳಿಂದ ಅವರು ಹೂ ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಈ ಮಿಶ್ರ ಬೇಸಾಯ ಅವರ ಕೈಹಿಡಿದಿದೆ.  ಮಲ್ಲಿಗೆ ಹೂಗಳ ಮಾರಾಟದಿಂದ ಜಯಂತಿ ಅವರಿಗೆ ಮಾರುಕಟ್ಟೆಯಲ್ಲಿ ಸಿಗುವ ಬೆಲೆ ಆಧಾರದ ಮೇಲೆ ದಿನಕ್ಕೆ 50 ರೂಗಳಿಂದ 1000 ರೂವರೆಗೆ ಆದಾಯವಿದೆ. ಹೂವಿನಿಂದ ವರ್ಷಕ್ಕೆ 30 ಸಾವಿರ ರೂ ಆದಾಯ ಪಡೆಯುತ್ತಿದ್ದಾರೆ.

ಮಲ್ಲಿಗೆ ಗಿಡಗಳ ನಡುವೆ ಮುಳ್ಳು ಸೌತೆ, ಕುಂಬಳ ಕಾಯಿ, ಶುಂಠಿ, ಟೊಮೆಟೊ, ಹಾಗಲಕಾಯಿ, ಬೆಂಡೆ, ಅರಿಸಿನ, ಮೆಣಸು,ಅಲಸಂಡೆ, ಸುವರ್ಣಗಡ್ಡೆ ಇತ್ಯಾದಿಗಳನ್ನು ಬೆಳೆಯುತ್ತಾರೆ. ಮಲ್ಲಿಗೆ ಮತ್ತು ಮತ್ತು ತರಕಾರಿ ಬೆಳೆಗಳಿಗೆ ಸಾವಯವ ಗೊಬ್ಬರ ಮಾತ್ರ ಬಳಸುತ್ತಾರೆ. ಬೆಳೆದ ತರಕಾರಿಯನ್ನು ಮನೆಗೂ ಬಳಸುತ್ತಾರೆ. ಸ್ವಲ್ಪ ಮಾರಾಟ ಮಾಡುತ್ತಾರೆ. ತರಕಾರಿ ಮಾರಾಟದಿಂದ ವರ್ಷಕ್ಕೆ ಹತ್ತು ಸಾವಿರ ಆದಾಯವಿದೆ. ಕೇವಲ ಹತ್ತು ಸೆಂಟ್ಸ್ ಜಾಗದಲ್ಲಿ ಹೂ, ತರಕಾರಿ ಬೆಳೆದು ಸುಮಾರು 40 ಸಾವಿರ ಆದಾಯ ಪಡೆಯುತ್ತಿರುವುದು ಜಯಂತಿ ಅವರ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.