ADVERTISEMENT

ಮಳೆ ಆಶ್ರಯದಲ್ಲಿ ಸಮೃದ್ಧ ತೊಂಡೆ

ಕೆ.ನರಸಿಂಹ ಮೂರ್ತಿ
Published 30 ನವೆಂಬರ್ 2011, 19:30 IST
Last Updated 30 ನವೆಂಬರ್ 2011, 19:30 IST
ಮಳೆ ಆಶ್ರಯದಲ್ಲಿ ಸಮೃದ್ಧ ತೊಂಡೆ
ಮಳೆ ಆಶ್ರಯದಲ್ಲಿ ಸಮೃದ್ಧ ತೊಂಡೆ   

ಒಂದು ಕಿಲೋಮೀಟರ್ ಉದ್ದದ ರಸ್ತೆ ಮೇಲೆ ಬಿದ್ದ ಮಳೆಯ ನೀರನ್ನೆಲ್ಲ  ತಮ್ಮ ಹೊಲದೊಳಕ್ಕೆ ಹರಿಸಿಕೊಂಡು ಒಂದೆಡೆ ಸಂಗ್ರಹಿಸಿ ಅದರಿಂದ ತೊಂಡೆಕಾಯಿ ಬೆಳೆಯುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯ ರೈತ ಮುನಿನಾರಾಯಣಪ್ಪ ಮತ್ತು ಅವರ ಮಗ ಬ್ಯಾಟಪ್ಪ.

ಕಳೆದ ಜೂನ್ ತಿಂಗಳ ಎರಡನೇ ವಾರದಲ್ಲಿ ತೊಂಡೆ ಸಸಿಗಳನ್ನು ಅವರು ನಾಟಿ ಮಾಡಿದ್ದರು. ಬೆಳೆಗೆ ಮಳೆಯನ್ನೇ ನೆಚ್ಚಿಕೊಂಡಿದ್ದರು. ಅವರ ಊರಿನ ಒಂದು ತುದಿಯಲ್ಲಿರುವ ಅವರ ಹೊಲಕ್ಕೆ ಹೋಗಲು ಸುಮಾರು ಒಂದು ಕಿ.ಮೀ ದೂರ ಕ್ರಮಿಸಬೇಕು.

ಆ ದಾರಿ ಮತ್ತು ಅದರ ಅಕ್ಕಪಕ್ಕ ಬಿದ್ದ ಮಳೆ ನೀರು ಸರಾಗವಾಗಿ ಹರಿದುಹೋಗಲು ಅವರು ಕಾಲುವೆ ನಿರ್ಮಿಸಿದರು. ಇಳಿಜಾರಿನ ಕಡೆ ಮಳೆ ನೀರು ಕಾಲುವೆಗೆ ಸರಾಗವಾಗಿ ಹರಿದು ಬರುವಂತೆ ಮಾಡಿದ್ದಾರೆ. ಹೀಗಾಗಿ ಅವರ ಹೊಲದ ರಸ್ತೆಯ ಮೇಲೆ ಬಿದ್ದ ಬಹುತೇಕ ಮಳೆ ನೀರು ಅವರ ಹೊಲದಲ್ಲಿರುವ ಕುಂಟೆಗೆ ಬಂದು ಸೇರುತ್ತದೆ.

ಹತ್ತಾರು ವರ್ಷಗಳ ಹಿಂದೆ ಅವರ ತಂದೆ ಜಮೀನಿನಲ್ಲಿ ಪುಟ್ಟ ಕುಂಟೆಯನ್ನು ನಿರ್ಮಿಸಿದ್ದರು. ಮುನಿನಾರಾಯಣಪ್ಪ ಅವರು ಈಗ ಅದನ್ನು ವಿಸ್ತರಿಸಿದ್ದಾರೆ. ಕುಂಟೆಯಲ್ಲಿ ಸಂಗ್ರಹವಾದ ನೀರು ಭೂಮಿಯ ಆಳಕ್ಕೆ ಇಂಗುವುದಿಲ್ಲ. ಹೀಗಾಗಿ ವರ್ಷವಿಡೀ ನೀರು ಲಭ್ಯವಿರುತ್ತದೆ.

ಈಗಲೂ ಅಲ್ಲಿ 10ರಿಂದ 12 ಅಡಿಯಷ್ಟು ನೀರಿದೆ. ಕುಂಟೆಯಿಂದ ಅವರು ನೀರನ್ನು ಬಿಂದಿಗೆಗಳಲ್ಲಿ ಮೇಲಕ್ಕೆ ಎತ್ತಿ ಹೆಗಲ ಮೇಲೆ ಹೊತ್ತೊಯ್ದು ತೊಂಡೆ ಬೆಳೆಗೆ ಹಾಕುತ್ತಾರೆ.
ಆಗಸ್ಟ್ ಮೂರನೇ ವಾರದ ತೊಂಡೆ ಬಳ್ಳಿಗಳಲ್ಲಿ ಕಾಯಿಗಳು ಕಾಣಿಸಿಕೊಂಡವು.

ವಾರಕ್ಕೊಮ್ಮೆ ಕಟಾವು ಮಾಡುತ್ತಾರೆ. ಆರಂಭದಲ್ಲಿ ಇಳುವರಿ ಕಡಿಮೆ ಇತ್ತು. ಈಗ ಸರಾಸರಿ 150ರಿಂದ 200 ಕೇಜಿಯಷ್ಟು ತೊಂಡೆಕಾಯಿ ಸಿಗುತ್ತಿದೆ. ಅವನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರುತ್ತಾರೆ. ಕೇಜಿಗೆ 8ರಿಂದ 10 ರೂಪಾಯಿ ಬೆಲೆ ಸಿಗುತ್ತಿದೆ. ತೊಂಡೆಕಾಯಿ ಬಳ್ಳಿಗಳ ನಡುವೆ ಕಳೆ ಬೆಳೆಯದಂತೆ ತಡೆಯಲು ಮಿಶ್ರ ಬೆಳೆಯಾಗಿ ಬೆಂಡೆಕಾಯಿ ಬೆಳೆಯುತ್ತಿದ್ದಾರೆ.

ಹಲವು ವರ್ಷಗಳ ಹಿಂದೆ ಕುಂಟೆಗೆ ಏತವಿತ್ತು. ಅದರಲ್ಲೇ  ನೀರೆತ್ತಿ ಹಾಯಿಸಿ ಮುಸುಕಿನ ಜೋಳ, ಸೊಪ್ಪು, ತರಕಾರಿಗಳನ್ನು ಬೆಳೆಯುತ್ತ್ದ್ದಿದರು.  ಬೆಳೆದ ತರಕಾರಿಗಳನ್ನು ತಂಬಿಹಳ್ಳಿಯ ಸಂತೆಗೆ ಸಾಗಿಸಿ ಮಾರುತ್ತಿದ್ದೆವು ಎಂದು ಮುನಿನಾರಾಯಣಪ್ಪ ನೆನಪು ಮಾಡಿಕೊಳ್ಳುತ್ತಾರೆ.

`ನಮ್ಮ ಹೊಲದ ರಸ್ತೆ ಮತ್ತು ಅದರ ಅಕ್ಕಪಕ್ಕ ಬೀಳುವ ಮಳೆಯ ನೀರಿನ ಒಂದು ಹನಿಯನ್ನೂ ವ್ಯರ್ಥ ಮಾಡುವುದಿಲ್ಲ. ಜಲಸಂವರ್ಧನೆ ಯೋಜನೆ ಅಡಿಯಲ್ಲಿ 9 ಸಾವಿರ ರೂಪಾಯಿ ಸಹಾಯ ಧನ ಪಡೆದು 2008ರಲ್ಲಿ ಕುಂಟೆಯನ್ನು ವಿಸ್ತರಿಸಿದೆವು. ಕಳೆದ ವರ್ಷ ಕುಂಟೆಯಲ್ಲಿ ನೀರು ತುಂಬಿ ಹರಿದಿತ್ತು. ಈ ವರ್ಷ ಮಳೆ ಕಡಿಮೆಯಾಗಿ ನೀರೂ ಕಡಿಮೆ ಸಂಗ್ರಹವಾಗಿದೆ. ಮುಂದಿನ ವರ್ಷ ಕುಂಟೆಯನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ~ ಎನ್ನುತ್ತಾರೆ ಅವರು.

`ಹೊಲಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸುವ ಪ್ರಯತ್ನ ಮಾಡಿದ್ದೇವೆ. ಅದರಿಂದ ನೀರನ್ನು ಮಿತವಾಗಿ ಬಳಸಿಕೊಂಡು ಹೆಚ್ಚು ಬೆಳೆಗಳನ್ನು ಬೆಳೆಯಬಹುದು ಎನ್ನುತ್ತಾರೆ ಮುನಿನಾರಾಣಪ್ಪ ಅವರ ಮಗ ಶಿಕ್ಷಕರಾದ ಬ್ಯಾಟಪ್ಪ. ಶಾಲೆ ಮುಗಿದ ನಂತರ ಅವರು ಹೊಲದಲ್ಲಿ  ದುಡಿಯುತ್ತಾರೆ.

ಮಳೆ ಆಧಾರದ ಬೇಸಾಯವನ್ನೇ ನೆಚ್ಚಿಕೊಂಡಿರುವ ಮುನಿನಾರಾಯಣಪ್ಪ ಅವರಿಗೆ ಊರಲ್ಲಿ ಇನ್ನೊಂದು ಕಡೆ ಇರುವ ಜಮೀನಿನಲ್ಲಿ ಮಾವು ಬೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.