ADVERTISEMENT

ಮಹಡಿ ಮೇಲೆ ಸಸ್ಯ ರಾಶಿ

ಪ್ರತೀಕ ಪಿ.
Published 6 ಜನವರಿ 2014, 19:30 IST
Last Updated 6 ಜನವರಿ 2014, 19:30 IST

ಇದು ರೆಡಿಮೇಡ್‌ ಕಾಲ. ಆದರೆ ರೆಡಿಮೇಡ್‌ ಆಗಿ ಸಿಗುವ ತರಕಾರಿ, ಸೊಪ್ಪುಗಳಲ್ಲಿ ಸತ್ವಕ್ಕಿಂತ ವಿಷವೇ ಹೆಚ್ಚಾಗಿ ಸೇರಿಕೊಂಡಿರುವ ಅಂಶ ಸತ್ಯ.
ಪಟ್ಟಣಗಳಲ್ಲಿ ಇದ್ದುಕೊಂಡು ಕೊನೆಯ ಪಕ್ಷ ಮನೆಗೆ ಸಾಕಾಗುವಷ್ಟಾದರೂ ತರಕಾರಿ, ಸೊಪ್ಪು, ಔಷಧೀಯ ಗಿಡಗಳನ್ನು ಬೆಳೆಯುವುದು ಹೆಚ್ಚೇನಲ್ಲ. ಜಾಗ ಚಿಕ್ಕದಿದ್ದರೂ ಅದಕ್ಕೆ ಸಮನಾಗಿ ತೋಟ ಮಾಡಬಹುದು. ಈ ಬಗ್ಗೆ ಮಾಹಿತಿ.

ತುಳಸಿ: ಹೆಚ್ಚಿನವರ ಮನೆಯ ಎದುರು ತುಳಸಿ ಗಿಡ ಇದ್ದೇ ಇರುತ್ತದೆ. ಈ ಸಸ್ಯಕ್ಕೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಿಲ್ಲ. ಬೆಳಕು ಬೀಳುವ ಕಿಟಕಿ ಬಳಿ ಇಟ್ಟರೆ ಸುಲಭವಾಗಿ ಬೆಳೆಯುತ್ತದೆ. ಆದರೆ ಕುಂಡದಲ್ಲಿರುವ ಮಣ್ಣು ಯಾವಾಗಲೂ ತೇವಾಂಶದಿಂದ ಕೂಡಿರಬೇಕು.

ಕರಿಬೇವು (ಒಗ್ಗರಣೆ ಸೊಪ್ಪು): ಒಗ್ಗರಣೆ ಇಲ್ಲದೆ ಅಡುಗೆಗೆ ರುಚಿ ಇಲ್ಲ.  ಆದ್ದರಿಂದ ಅಡುಗೆ ಮನೆಯಲ್ಲಿ ಇದು ಇರಲೇಬೇಕು. ಇದು ತಾಜಾ ಆಗಿದ್ದರೆ ಅಡುಗೆ ಇನ್ನಷ್ಟು ರುಚಿ. ಇದನ್ನು ಚಿಕ್ಕ ಜಾಗದಲ್ಲಿ ಕುಂಡದಲ್ಲಿಯೇ ನೆಡಬಹುದು. ಗಿಡ ಬೆಳೆಯುತ್ತಿದ್ದಂತೆ ಅದಕ್ಕೆ ಆಧಾರಕ್ಕಾಗಿ ಕೋಲು ಊರಬೇಕು. ಇದಕ್ಕೆ ಸಾಕಷ್ಟು ಬಿಸಿಲು ಬೇಕು. ಜತೆಗೆ ದಿನಕ್ಕೆ ಒಂದು ಬಾರಿಯಾದರೂ ನೀರುಣಿಸಲೇಬೇಕು.

ADVERTISEMENT

ಪುದೀನ: ಪುದೀನಕ್ಕೂ ಅಡುಗೆಯಲ್ಲಿ ಭಾರಿ ಬೇಡಿಕೆ. ಅದರಲ್ಲೂ ಮಾಂಸಾಹಾರ ಅಡುಗೆಗೆ ಇದು ಇದ್ದರೇನೇ ಚೆನ್ನ. ಚಿಕ್ಕ ಕುಂಡದಲ್ಲಿ ಮಣ್ಣು ಹಾಕಿ ಅದರಲ್ಲಿ ಪುದೀನ ಬೀಜವನ್ನು ಹಾಕಿ. ಅದನ್ನು ಬೆಳಕು ಬೀಳುವಲ್ಲಿ ಇಡಿ.

ಮಜ್ಜಿಗೆ ಹುಲ್ಲು: ನಿಂಬೆಯ ಪರಿಮಳ ಇರುವುದರಿಂದ ಈ ಹುಲ್ಲನ್ನು ‘ನಿಂಬೆ ಹುಲ್ಲು’ ಎಂದೂ  ಕರೆಯುತ್ತಾರೆ. ಸಂಸ್ಕೃತದಲ್ಲಿ ತಕ್ರತಣಿ, ಇಂಗ್ಲೀಷ್‌ನಲ್ಲಿ ‘ಲೆಮನ್ ಗ್ರಾಸ್’ ಎಂದು ಹೇಳುತ್ತಾರೆ.

ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಈ ಹುಲ್ಲನ್ನು ಸುಲಭವಾಗಿ ಕುಂಡಗಳಲ್ಲಿ ಬೆಳೆಸಬಹುದು. ಮಾರುಕಟ್ಟೆಯಲ್ಲಿ ಹುಲ್ಲು ಖರೀದಿಸಿದರೆ ಅದರ ಒಂದು ಕಾಂಡವನ್ನು ತೆಗೆಯಿರಿ. ಅದನ್ನು ಚೆನ್ನಾಗಿ ಕತ್ತರಿಸಿ ನೀರನಲ್ಲಿ ಇಡಿ. ಕಾಂಡವು 2-ರಿಂದ3 ಇಂಚಿನಷ್ಟು ನೀರಿನಲ್ಲಿ ಮುಳುಗಿರಬೇಕು. ಈ ಕಾಂಡವು ನಿಧಾನವಾಗಿ ಬೇರು ಬಿಡಲು ಆರಂಭವಾಗುತ್ತದೆ.

ಸಾಸಂಬರ್: ಸಾವಿರ ಸಂಬಾರ (ಸಾಸಂಬರ್‌) ಗಿಡವು ನೆಲದ ಮೇಲೆ ಪೊದೆಯಾಕಾರದಲ್ಲಿ ಬೆಳೆಯುತ್ತದೆ. ಇದಕ್ಕೆ ಸಾಂಬಾರು ಸೊಪ್ಪಿನಬಳ್ಳಿ, ದೊಡ್ಡಪತ್ರೆ, ಇತ್ಯಾದಿ ಕನ್ನಡ ಹೆಸರುಗಳಿವೆ. ಸಂಸ್ಕೃತದಲ್ಲಿ ಅಜಪಾದ ಇಂದು ಪರ್ಣ ಎನ್ನುತ್ತಾರೆ. ಕೋಲಿಯಸ್ ಅಂಬೋನಿಕಸ್ ಇದು ಇದರ ಸಸ್ಯಶಾಸ್ತ್ರೀಯ ದ್ವಿನಾಮ ಇದು ಲೆಮಿನೇಸಿ ಕುಟುಂಬಕ್ಕೆ ಸೇರಿದೆ. ಕಫ, ಪಿತ್ತ, ಸೇರಿದಂತೆ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ಈ ಗಿಡವನ್ನು ಕುಂಡದಲ್ಲಿಯೂ ಬೆಳೆಯಬಹುದು. ಗೇಣುದ್ದದ ಟೊಂಗೆ ಇದ್ದರೂ ಸಾಕು.  ಕತ್ತರಿಸಿ ತಂದು ಕುಂಡದಲ್ಲಿ ಹಾಕಿದರೆ ಅದು ಹುಲುಸಾಗಿ ಬೆಳೆಯುತ್ತದೆ.

ರೋಸ್ಮರಿ: ಇದಕ್ಕೆ ಆಗಾಗ್ಗೆ ನೀರು ಹಾಕಬೇಕೆಂದೇನಿಲ್ಲ. ಹೀಗಾಗಿ ಇದರ ನಿರ್ವಹಣೆ ಅತಿ ಸುಲಭ. ಪುದೀನ ಜಾತಿಗೆ ಸೇರಿದ ಈ ಸಸ್ಯವನ್ನು ಅಡುಗೆಗೆ ಬಳಸಲಾಗುತ್ತದೆ. ಇತರ ಗಿಡಮೂಲಿಕೆಗಳೊಂದಿಗೆ ಇದನ್ನೂ ನೆಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.