ಪ್ರತಿ ದಿನ ಮುಂಜಾನೆ ನಾನು ಹಾಲು ತರಲು ಸಾಗರದ ಭಾನುಮತಿಯವರ ಮನೆಗೆ ಹೋಗುತ್ತಿದ್ದಾಗ ಅವರ ಮನೆಯ ಹಿತ್ತಲಲ್ಲಿದ್ದ ಹಲವು ತರಹದ ಮೆಣಸಿನ ಕಾಯಿಯ ಗಿಡಗಳು ಕಣ್ಣಿಗೆ ಬೀಳುತ್ತಿದ್ದವು. ಅವುಗಳಲ್ಲಿ ಬೋಂಡಾ ಮೆಣಸು, ಗೊಜ್ಜಿನ ಮೆಣಸು, ಪಲ್ಯದ ಮೆಣಸು, ಖಾರದ ಮೆಣಸು, ಸೂಜಿ ಮೆಣಸು, ಗಿಡ್ಡ ಮೆಣಸು, ಉದ್ದ ಮೆಣಸು, ಚಪ್ಪಟೆ ಮೆಣಸು, ಡೊಳ್ಳು ಮೆಣಸಿನ ಕಾಯಿಗಳು ನನ್ನ ಕ್ಯಾಮೆರಾದಲ್ಲಿ ಜಾಗ ಪಡೆದವು.
ಇವುಗಳಲ್ಲಿ ಕೆಲವು ವರ್ಷವಿಡೀ ಕಾಯಿಬಿಡುತ್ತವೆ. ಇನ್ನು ಕೆಲವು 5-6 ತಿಂಗಳು ಮಾತ್ರ ಕಾಯಿ ಕೊಡುತ್ತವೆ. ಸೊಲನೇಸಿಯೇ ಕುಟುಂಬಕ್ಕೆ ಸೇರಿದ ಈ ಮೆಣಸಿನ ಕಾಯಿಗಳ ಕೆಂಪನೆಯ ಹಣ್ಣುಗಳ ಒಳಗಿರುವ ಬೀಜಗಳನ್ನು ಮಣ್ಣಿನಲ್ಲಿ ಬಿತ್ತಿ, ಸಸ್ಯಾಭಿವೃದ್ಧಿ ಮಾಡಬಹುದು.
ಸಾವಯವ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರ ಹಾಕಿ, ತಂಪಾದ ಭೂಮಿಯಲ್ಲಿ ಇಂತಹ ಮೆಣಸಿನ ಗಿಡಗಳನ್ನು ಬೆಳೆಸಿಕೊಳ್ಳಬಹುದು. ಮನೆಯ ಮುಂದಿನ ಕೈತೋಟಗಳಲ್ಲಿ ಅಥವಾ ಮಣ್ಣುತುಂಬಿದ ಕುಂಡ ಅಥವಾ ಹಳೆಯ ಬಕೇಟುಗಳಲ್ಲಿ ನೆಟ್ಟು ಮನೆಯ ಬಳಕೆಗೆ ಬಳಸಬಹುದು. ಈ ಗಿಡಗಳ ಬುಡಗಳಿಗೆ ಸಾರ ಕೊಟ್ಟಷ್ಟೂ ಗಿಡಗಳ ತುಂಬಾ ಕಾಯಿ ಬಿಡುತ್ತವೆ.
ಈ ಗಿಡಗಳಿಗೆ ರೋಗಗಳು ಮತ್ತು ಕ್ರಿಮಿ ಕೀಟಗಳ ಬಾಧೆ ಹೆಚ್ಚು. ಫಂಗಸ್‌ನಿಂದಾಗಿ ಎಲೆಗಳು ಸುರುಟಿಹೋಗುವುದರಿಂದ ಎಲೆಗಳನ್ನು ಚಿವುಟಿ ಎಸೆದು ಒಲೆಯ ತಣ್ಣಗಿನ ಬೂದಿಯನ್ನು ಗಿಡಗಳ ಮೇಲೆ ಸಿಂಪಡಿಸಬೇಕು. ಬೆಳ್ಳುಳ್ಳಿಯ ರಸವನ್ನೂ ಎಲೆಗಳ ಮೇಲೆ ಚಿಮುಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.