ADVERTISEMENT

ರಬ್ಬರ್ ನಡುವೆ ಶುಂಠಿ

ಪ.ರಾಮಕೃಷ್ಣ
Published 20 ಏಪ್ರಿಲ್ 2011, 19:30 IST
Last Updated 20 ಏಪ್ರಿಲ್ 2011, 19:30 IST
ರಬ್ಬರ್ ನಡುವೆ ಶುಂಠಿ
ರಬ್ಬರ್ ನಡುವೆ ಶುಂಠಿ   

ಬೆಳ್ತಂಗಡಿ ತಾಲ್ಲೂಕಿನ ಎಡೆಹಳ್ಳಿ ಹೆಬ್ಬೋಡಿಯ ರೈತ ಭುಜಂಗ ಶೆಟ್ಟರ ಮುಖದಲ್ಲಿ ಈಗ ನೆಮ್ಮದಿ ಎದ್ದು ಕಾಣುತ್ತದೆ.ಏತಕ್ಕೂ ಪ್ರಯೋಜನವಿಲ್ಲ ಎಂದು ಭಾವಿಸಿದ್ದ ಅವರ ಎರಡು ಎಕರೆ ಬೀಳು ಭೂಮಿಯಲ್ಲಿ ಈಗ 380 ಆರ್.ಆರ್. 105 ತಳಿಯ ರಬ್ಬರ್ ಗಿಡಗಳು ತಲೆ ಎತ್ತಿ ನಗುತ್ತಿವೆ. ರಬ್ಬರ್ ನಡುವಿನ ಜಾಗದಲ್ಲಿ ಏರು ಹಾಕಿ ಅಲ್ಲಿ ಶುಂಠಿ ಬೆಳೆದಿದ್ದಾರೆ.

 ಶೆಟ್ಟರು ತಮ್ಮ ಎರಡು ಎಕರೆ ಭೂಮಿಯನ್ನು ಹಲವಾರು ವರ್ಷಗಳಿಂದ ಖಾಲಿ ಬಿಟ್ಟಿದ್ದರು. ಅಲ್ಲಿ ಏನಾದರೂ ಬೆಳೆಯಬಹುದು ಅನ್ನಿಸಿದಾಗ ಜೆಸಿಬಿ ಯಂತ್ರದಿಂದ ಭೂಮಿ ಸಮತಟ್ಟುಗೊಳಿಸಿ ಅಲ್ಲಿ ರಬ್ಬರ್ ಬೆಳೆಯುವ ನಿರ್ಧಾರ ಮಾಡಿದರು. ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ‘ಪ್ರಗತಿ ಬಂಧು’ ತಂಡದ  ಸದಸ್ಯರು. ಹೀಗಾಗಿ ಭೂಮಿ ಸಮತಟ್ಟುಗೊಳಿಸುವ ಕಾಮಗಾರಿಯಲ್ಲಿ ಭಾಗವಹಿಸಿದವರಿಗೆ ಅವರು ಒಂದೇ ಒಂದು ಪೈಸೆ ಕೂಲಿ ಕೊಟ್ಟಿಲ್ಲ.ಎಲ್ಲವೂ ಶ್ರಮ ವಿನಿಮಯದಿಂದಲೇ ನಡೆದಿದೆ. ಶೆಟ್ಟರು ತಮ್ಮ ಭೂಮಿಗೆ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಉತ್ತೇಜನ ನೀಡಿದವರು ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ದುಗ್ಗೇಗೌಡರು. 

 ‘ತುಂಡು ಭೂಮಿಯಲ್ಲಿ ಹಿಂಡು ಬೆಳೆ’ ಯೋಜನೆ ಅಡಿಯಲ್ಲಿ ರಬ್ಬರ್ ನಡುವೆ ಹದಿನೈದು ಕ್ವಿಂಟಲ್ ಶುಂಠಿ ಬಿತ್ತನೆ ಮಾಡಿದ್ದಾರೆ. ಮೆಣಸಿನಕಾಯಿ ಬೆಳೆಸುತ್ತ ಬೇಲಿಯ ಹಾಗೆ ತೊಗರಿ ಬೆಳೆಯುವ ಪ್ರಯತ್ನವೂ ಫಲಿಸಿದೆ. ಭುಜಂಗ ಶೆಟ್ಟರ ಭೂಮಿಯ ಗುಣವೂ ಅವರಿಗೆ ಸಹಕಾರಿಯಾಗಿದೆ. 

ಕೆಂಪುಮಿಶ್ರಿತ ಹರಳು ಮಣ್ಣಾದುದರಿಂದ  ಸಹಜವಾಗಿ ಅದರಲ್ಲಿ ಖನಿಜಾಂಶಗಳಿವೆ. ಒಂದೇ ತಾಕಿನಲ್ಲಿ ಮೂರು ವಿಧದ ಕೃಷಿ ಇರುವುದರಿಂದ ಗೊಬ್ಬರದಲ್ಲಿ  ಗಮನಾರ್ಹ ಉಳಿತಾಯವಾಗಿದೆ. ಧಾರಾಳವಾಗಿ ಕೊಟ್ಟಿಗೆ ಗೊಬ್ಬರ, ತರಗೆಲೆ, ಅಲ್ಪ ಪ್ರಮಾಣದಲ್ಲಿ ರಸಗೊಬ್ಬರ  ಬಳಸಿದ್ದಾರೆ. ಶುಂಠಿ ಗಿಡಗಳು ಸಮೃದ್ಧವಾಗಿ ಬೆಳೆದಿವೆ.

‘ಒಂದು ಕಿಲೋ ಶುಂಠಿ ಬಿತ್ತನೆ ಮಾಡಿದರೆ ಹತ್ತು ಕಿಲೋ ಶುಂಠಿ ಸಿಗುತ್ತದೆ ಎಂಬ ಲೆಕ್ಕಾಚಾರ ಅವರದ್ದು. ಮೂರು ವಾರಗಳ ಹಿಂದೆ ಅವರು ಶುಂಠಿ ಕೊಯ್ಲು ಮಾಡಿದ್ದಾರೆ. ಸುಮಾರು ಐದು ಕ್ವಿಂಟಲ್ ಮೆಣಸಿನಕಾಯಿ  ಇಳುವರಿ ಪಡೆದಿದ್ದಾರೆ. ರಬ್ಬರ್ ಬೆಳೆಯುವ ರೈತರು ಮಿಶ್ರ ಬೆಳೆ ಬೆಳೆದರೆ ಹೆಚ್ಚಿನ ಲಾಭ ಪಡೆಯಬಹುದು ಎನ್ನುವುದು ಅವರ ಅನುಭವ. ಮುಂದಿನ ವರ್ಷ ಅವರು ರಬ್ಬರ್ ನಡುವೆ ಸುವರ್ಣಗೆಡ್ಡೆ ಮತ್ತು ಬಿಳಿ ಕೆಸುವು ಬೆಳೆಯುವ ನಿರ್ಧಾರ ಮಾಡಿದ್ದಾರೆ.  ಆಸಕ್ತರು ಶೆಟ್ಟರ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಅವರ ದೂರವಾಣಿ : 08183/295011.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.