ADVERTISEMENT

ರಾಗಿ, ಅಕ್ಕಡಿ ಜತೆ ಚೆಂಡು ಹೂ

ದೊಡ್ಡಬಾಣಗೆರೆ ಮಾರಣ್ಣ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಮಾಗಡಿ ತಾಲ್ಲೂಕಿನ ಚಂದೂರಾಯನಹಳ್ಳಿಯ ರೈತ ರಂಗಸ್ವಾಮಯ್ಯ 20 ಗುಂಟೆಯಲ್ಲಿ ಮೊದಲ ಬಾರಿಗೆ ಚೆಂಡು ಹೂ ಬೆಳೆದಿದ್ದಾರೆ. ಇದರಲ್ಲಿ ಅಚ್ಚರಿಪಡುವಂತದ್ದೇನೂ ಇಲ್ಲ. ಆಹಾರ ಧಾನ್ಯಗಳ ಬೆಳೆಗಳ ಜೊತೆಗೆ ಚೆಂಡು ಹೂ ಬೆಳೆದಿರುವುದೇ ವಿಶೇಷ.

ಮಾಗಡಿ-ಕುಣಿಗಲ್ ರಸ್ತೆಯಲ್ಲಿರುವ ಚಂದೂರಾಯನಹಳ್ಳಿಯ ರಸ್ತೆ ಬದಿಯಲ್ಲೇ ರಂಗಸ್ವಾಮಯ್ಯ ಅವರ ಮೂರು ಎಕರೆ ಜಮೀನಿದೆ. ಅದರಲ್ಲಿ ಎರಡೂವರೆ ಎಕರೆಯಲ್ಲಿ ರಾಗಿ ಜೊತೆಗೆ ಅವರೆ, ಜೋಳ, ಎಳ್ಳು ಬೆಳೆದಿದ್ದಾರೆ. ಪಕ್ಕದ ಇಪ್ಪತ್ತು ಗುಂಟೆಯಲ್ಲಿ ಚೆಂಡೂ ಹೂ ಬೆಳೆದಿದ್ದಾರೆ.

ರಂಗಸ್ವಾಮಯ್ಯ ಒಮ್ಮೆ ಸಮೀಪದ ಕಲ್ಯಾ ಗ್ರಾಮದ ಕಂಡಕ್ಟರ್ ನಾಗರಾಜು ಎಂಬುವರ ಹೊಲದಲ್ಲಿ ಕನಕಾಂಬರ ಹೂ ಬೆಳೆದಿರುವುದನ್ನು ನೋಡಿದ್ದರು. ಮಾಗಡಿ ಹೂವಿನ ಮಾರುಕಟ್ಟೆಯಲ್ಲಿ ಒಂದು ಕುಚ್ಚು ಕನಕಾಂಬರ ಹೂವಿಗೆ 15 ರೂ ಬೆಲೆ ಇದೆ ಎಂದು ನಾಗರಾಜು ಹೇಳಿದಾಗ ಹೂ ಬೆಳೆಯುವುದು ಲಾಭದಾಯಕ ಅನ್ನಿಸಿತು. ಮಾರುಕಟ್ಟೆಯಲ್ಲಿ ಚೆಂಡು ಹೂಗಳಿಗೆ ಬೆಲೆ ಇರುವುದನ್ನು ಗಮನಿಸಿದ ರಂಗಸ್ವಾಮಯ್ಯ 20 ಗುಂಟೆ ಜಾಗದಲ್ಲಿ ಹೂ ಬೆಳೆಯಲು ನಿರ್ಧರಿಸಿದರು.

ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡುವಾಗ ಸಾಲುಗಳ ನಡುವೆ ಅರ್ಧ ಅಡಿ ಅಂತರ ಬಿಟ್ಟು ದಿಂಡು ಕಟ್ಟಿದ್ದರು. ಈ ದಿಂಡಿನೊಳಗೆ ಗೊಬ್ಬರ ಸೇರಿಸಿದರು. ದಿಂಡಿನ ಮೇಲೆ ಸಸಿ ನಾಟಿ ಮಾಡಿದರು.ಹೂಗಳ ಕೊಯ್ಲಿಗೆ  ಅನುಕೂಲವಾಗುವ ಜೊತೆಗೆ ನೀರು ಬಸಿದು ಹೋಗಲೆಂದು ಈ ವಿಧಾನ ಅನುಸರಿಸಿದರು. ಹೊಲದ ಕೊಳವೆ ಬಾವಿಯಿಂದ ನೀರು ಹಾಕಿ ಗಿಡಗಳನ್ನು ಬೆಳೆಸಿದರು.

ಇದುವರೆಗೆ ನಾಲ್ಕು ಸಲ ಹೂಗಳನ್ನು ಕೊಯ್ದು ಮಾರಾಟ ಮಾಡಿದ್ದಾರೆ. ವಾರಕ್ಕೊಂದು ಸಲ ಕೊಯ್ಲು ಮಾಡುತ್ತಾರೆ. ದೀಪಾವಳಿವರೆಗೆ ಹೂ ಕೊಯ್ಲು ಮಾಡಬಹುದು ಎಂಬ ನಿರೀಕ್ಷೆ ರಂಗಸ್ವಾಮಯ್ಯ ಅವರದು. ಗೌರಿ ಹಬ್ಬದ ಸಮಯದಲ್ಲಿ ಒಂದು ಕೇಜಿ ಹೂವಿಗೆ 40 ರೂ ಬೆಲೆ ಸಿಕ್ಕಿತ್ತು. ದಸರಾ, ದೀಪಾವಳಿ ಸಮಯದಲ್ಲಿ ಇನ್ನೂ ಹೆಚ್ಚು ಬೆಲೆ ಸಿಗುವ ನಿರೀಕ್ಷೆ ಅವರದು. ಬಿಡಿ ದಿನಗಳಲ್ಲಿ ಕೇಜಿಗೆ 20 ರೂ ನಂತೆ ಮಾರಾಟ ಮಾಡುತ್ತಿದ್ದಾರೆ.

ಬೆಂಗಳೂರಿಗೆ ಒಯ್ದರೆ ಹೆಚ್ಚು ಬೆಲೆ ಸಿಗಬಹುದು. ಆದರೆ ಸಾಗಿಸುವುದು ಕಷ್ಟ ಎನ್ನುತ್ತಾರೆ ರಂಗಸ್ವಾಮಯ್ಯ ಅವರ ಪತ್ನಿ   ಯಶೋಧಮ್ಮ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.