ADVERTISEMENT

ಶೂನ್ಯ ಬಂಡವಾಳದಲ್ಲಿ ವಿದ್ಯುತ್!

ಪ್ರಜಾವಾಣಿ ವಿಶೇಷ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST
ನೀರು ಮಿಶ್ರಿತ ಸಗಣಿ ತ್ಯಾಜ್ಯ ಸಂಗ್ರಹದೊಂದಿಗೆ ರಾಜಕುಮಾರ್
ನೀರು ಮಿಶ್ರಿತ ಸಗಣಿ ತ್ಯಾಜ್ಯ ಸಂಗ್ರಹದೊಂದಿಗೆ ರಾಜಕುಮಾರ್   

`ಐದು ವರ್ಷಗಳಿಂದ ಇವರು ವಿದ್ಯುತ್‌ಗಾಗಿ ಕಾದಿಲ್ಲ. ಸಿಲಿಂಡರ್‌ಗಾಗಿ ಸರದಿ ನಿಂತಿಲ್ಲ. ಹೊಲಕ್ಕೆ ಸರಕಾರಿ ಗೊಬ್ಬರ ಹಾಕಿಲ್ಲ. ಹಾಗಂತ ಇವರೇನೂ ಕತ್ತಲಲ್ಲಿ ಬದುಕುತ್ತಿಲ್ಲ. ಸೌದೆ, ಸೀಮೆಎಣ್ಣೆಯನ್ನು ಉರುವಲಾಗಿ ಬಳಸುತ್ತಿಲ್ಲ. ಹೊಲದಲ್ಲಿ ಮಾತ್ರ ಪ್ರತಿಬಾರಿ ಚಿನ್ನದಂತಹ ಪೈರು ಬರುವುದು ತಪ್ಪಿಲ್ಲ!

ಇದೇನಿದು ಎನ್ನುವ ಕೌತುಕವೇ? ಹಾಗಾದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕನ್ನನಾಯಕನಕಟ್ಟೆಯ ಗ್ರಾಮದ ರೈತ ಕೆ.ರಾಜಕುಮಾರ್‌ರವರ ಮನೆಗೆ ಬನ್ನಿ. ಇವರು ವಿದ್ಯುತ್ ಹಾಗೂ ಗ್ಯಾಸ್ ಉತ್ಪತ್ತಿ ಮಾಡುವುದು ಪ್ರಕೃತಿಯ ಶಕ್ತಿಯನ್ನಾಧರಿಸಿ! ಅದು ಬಹುತೇಕ ಶೂನ್ಯ ಬಂಡವಾಳದಲ್ಲಿ! ಹೀಗಾಗಿ ದುಡ್ಡು ಕೊಟ್ಟರೂ ವಿದ್ಯುತ್, ಗ್ಯಾಸ್ ಸಿಗದೇ ಪರಿತಪಿಸುವ ಜನರ ನಡುವೆ ಇವರು ವಿಶಿಷ್ಟವಾಗಿ ಕಾಣುತ್ತಾರೆ.

ಹಳ್ಳಿಗಳು ಅಂದಮೇಲೆ ವಿದ್ಯುತ್ ಅಷ್ಟಕಷ್ಟೆ. ಇದು `ಶಾಕ್' ಕೊಟ್ಟಿದ್ದು ಮಕ್ಕಳ ಕಲಿಕೆಗೆ! ಹೀಗಾಗಿ ಇದಕ್ಕೆ ರಾಜಕುಮಾರ್ ಪರ್ಯಾಯ ವ್ಯವಸ್ಥೆಯ ಹುಡುಕಾಟದಲ್ಲಿದ್ದರು. ಬಳ್ಳಾರಿ ಜಿಲ್ಲೆ ಹೇಳಿಕೇಳಿ ಬಿರುಬಿಸಲಿಗೆ ಹೆಸರುವಾಸಿ. ಇಲ್ಲಿ ತಾಪಮಾನಕ್ಕೆ ಬರವಿಲ್ಲ. ಇದನ್ನೇ ಇವರು ಧನಾತ್ಮಕವಾಗಿ ತೆಗೆದುಕೊಂಡರು. ತಮ್ಮ ಮನೆಗೆ ಸೋಲಾರ್ ದೀಪಗಳನ್ನು ಅಳವಡಿಸಿದರು. ತಮ್ಮ ಪುಟ್ಟ ಮನೆಗೆ ಬೇಕಾದ ಬೆಳಕು, ಅಷ್ಟೇ ಏಕೆ ಫ್ಯಾನ್, ಮಿಕ್ಸಿಗೂ ಸೌರವಿದ್ಯುತ್ ಸಂಚರಿಸಿತು. ಪದೇ ಪದೇ ಕತ್ತಲು ಇಣುಕುತ್ತಿದ್ದ ಮನೆಯಲ್ಲೆಗ ನಿರಂತರ ಬೆಳಕು! ಅಂದಿನಿಂದ ಇದುವರೆಗೂ ಇವರು ವಿದ್ಯುತ್‌ಗಾಗಿ ಕಾದಿಲ್ಲ. ವಿದ್ಯುತ್ ಬಿಲ್ ಎರಡು ಅಂಕಿ ದಾಟಿಲ್ಲ!

ಬಗೆಹರಿದ ಸಿಲಿಂಡರ್ ಸಮಸ್ಯೆ
ಇಂದು ಸಿಲಿಂಡರ್‌ನದ್ದು ದೊಡ್ಡ ಸಮಸ್ಯೆ. ಮುಂಚಿತವಾಗಿ ಬುಕ್ಕಿಂಗ್ ಮಾಡಿಸಿ, ದುಪ್ಪಟ್ಟು ಹಣ ಕೊಡುತ್ತೇನೆಂದರೂ ಸಕಾಲಕ್ಕೆ ಸಿಗುತ್ತವೆ ಎನ್ನುವ ನಂಬಿಕೆ ಇಲ್ಲ. ಇದಕ್ಕಾಗಿ ಇವರು ಮಾಡಿಕೊಂಡಿದ್ದು ಗೋಬರ್ ಗ್ಯಾಸ್ ಸಿಸ್ಟಂ. ಇವರು ರೈತರಾಗಿದ್ದರಿಂದ ಕೊಟ್ಟಿಗೆ ತುಂಬಾ ದನ ಕರುಗಳೇ. ಇವುಗಳ ಸಗಣಿ ಬಳಸಿ ಗೋಬರ್ ಗ್ಯಾಸ್ ಉತ್ಪತ್ತಿ ಮಾಡಿದರು.  ಅಡುಗೆ ಮನೆಗೆ ಸಂಪರ್ಕ ಕಲ್ಪಿಸಿದರು. ಈಗ ನೆನಸಿಕೊಂಡಾಗಲೆಲ್ಲಾ ಗ್ಯಾಸ್ ಲಭ್ಯ. ಹೀಗಾಗಿ ಸಿಲಿಂಡರ್ ಬುಕ್ಕಿಂಗ್, ವೇಟಿಂಗ್‌ನಂತಹ ಉಪದ್ರವಗಳಿಂದ ದೂರ! ಹಣ ಮತ್ತು ಸಮಯ ಎರಡೂ ಉಳಿತಾಯ.

ಗೋಬರ್ ಗ್ಯಾಸ್ ಆದ ನಂತರ ಉಳಿದಿರುವ ನೀರು ಮಿಶ್ರಿತ ಸಗಣಿಯನ್ನು ವ್ಯರ್ಥ ಮಾಡದೇ ಒಂದೆಡೆ ಸೇರುವಂತಹ ವ್ಯವಸ್ಥೆ ಮಾಡಿದರು. ಇದರ ಪಕ್ಕದಲ್ಲಿಯೇ ಎರೆಹುಳ ಗೊಬ್ಬರದ ಗುಂಡಿ ಮಾಡಿದರು. ಹೊಲ-ಮನೆಯ ಕರಗುವ ತ್ಯಾಜ್ಯ, ಒಣಗಿದ ಸ್ಲರಿಯನ್ನು ಈ ಗುಂಡಿಗೆ ತುಂಬಿಸಿದರು. ಇದರಿಂದ ಎರೆಹುಳಗಳು ಗರಿಷ್ಠ ಮಟ್ಟದಲ್ಲಿ ಉತ್ಪತ್ತಿಯಾಗಿ ಉತ್ಕೃಷ್ಟ ಗೊಬ್ಬರ ಶೇಖರಣೆಯಾಗಿತು. ಈಗ ವರ್ಷಕ್ಕೆ ಕನಿಷ್ಠ 10 ಟನ್ ಎರೆಹುಳಗೊಬ್ಬರ ಉತ್ಪತ್ತಿಯಾಗುತ್ತದೆ. ಇದು ಹೊಲದ ಮಣ್ಣಿನಲ್ಲಿ ಸೇರಿ, ಸಾರವನ್ನು ಹೆಚ್ಚಿಸಿ, ಬಂಪರ್ ಬೆಳೆ ಕೈ ಸೇರುವುದಕ್ಕೆ ಕಾರಣವಾಗಿದೆ.  ಹೀಗೆ ರಾಜಕುಮಾರ್ ಪ್ರಕೃತಿದತ್ತ ಕೊಡುಗೆಗಳನ್ನು ಬಳಸಿಕೊಂಡು ಜೀವನದ ಅಗತ್ಯತೆಗಳ ವಿಷಯದಲ್ಲಿ ಅಭಾವ ತಲೆದೋರದಂತೆ ಮಾಡಿಕೊಂಡಿದ್ದಾರೆ.

`ಪ್ರಕೃತಿ ನಮ್ಮ ಅಗತ್ಯಗಳನ್ನು ಪೂರೈಸುತ್ತದೆ ವಿನಃ ನಮ್ಮ ದುರಾಸೆಗಳನ್ನು ಅಲ್ಲ  ಎನ್ನುವುದಕ್ಕೆ ನನ್ನ ಈ ಯೋಜನೆ ಸೂಕ್ತ ನಿದರ್ಶನ. ಅತ್ಯಂತ ಕಡಿಮೆ ಖರ್ಚು, ಶ್ರಮದ ಮೂಲಕ ನಿರಂತರವಾಗಿ ಫಲ ಪಡೆಯಬಹುದು ಎಂಬುದಕ್ಕೆ ನಾನೇ ಸಾಕ್ಷಿ. ಈ ನಿಟ್ಟಿನಲ್ಲಿ ಇಂದು ಸರಕಾರದಿಂದ ಅನೇಕ ಸೌಲಭ್ಯಗಳಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು'  ಎನ್ನುತ್ತಾರೆ ರಾಜಕುಮಾರ್. ಸಂಪರ್ಕಕ್ಕೆ  9480946772
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.