ADVERTISEMENT

ಶೇಂಗಾ ಪಂಡಿತ ಶೇಖರಪ್ಪ

ಜಿ.ಎನ್.ಶಿವಕುಮಾರ
Published 21 ಮೇ 2012, 19:30 IST
Last Updated 21 ಮೇ 2012, 19:30 IST
ಶೇಂಗಾ ಪಂಡಿತ ಶೇಖರಪ್ಪ
ಶೇಂಗಾ ಪಂಡಿತ ಶೇಖರಪ್ಪ   

`ಹದ ಹಿಡಿದು ಮಾಗಿ ಉಳುಮೆ ಮಾಡ್ಬೇಕು. ಬೇಸಗೆ ಬಿಸಿಲಿಗೆ ಕಾದ ಮಣ್ಣು ಮಳೆ ಬಿದ್ದಾಗ ಹೂನಂತೆ ಅರಳಬೇಕು. ಮಣ್ಣು ಮಾಂದ್ಲಿ ಇದ್ದಂಗಿದ್ರೆ ಶೇಂಗಾ ಬಳ್ಳಿ ಬೊಗಸೆ ತುಂಬುವಷ್ಟು ಕಾಯಿ ಹಿಡಿಯುತ್ತೆ. ಕೃಷಿಯಲ್ಲಿ ಈ ಪದ್ಧತಿ ಅನುಸರಿಸಿ ಶೇಂಗಾ ಬೆಳೆಯಲ್ಲಿ ಹೆಚ್ಚಿನ ಇಳುವರಿ ಪಡೆದೆ. ಸರ್ಕಾರ ಗುರುತಿಸಿ ಪ್ರಶಸ್ತಿನೂ ನೀಡ್ತು~.

ಇದು 2010-11ನೇ ಸಾಲಿನ ರಾಜ್ಯ ಮಟ್ಟದ `ಕೃಷಿ ಪಂಡಿತ~ ಪ್ರಶಸ್ತಿ ಪುರಸ್ಕೃತ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಯರಗನಾಳು ಗ್ರಾಮದ ಶೇಂಗಾ ಬೆಳೆಗಾರ ಎಚ್. ಶೇಖರಪ್ಪ ಅವರ ಅನುಭವದ ನುಡಿ.

ತನ್ನ ಜಮೀನಿನ ಮಣ್ಣಿನ ಗುಣ ಅರಿಯಬೇಕು, ಅದಕ್ಕೇನು ಮಾಡಿದರೆ ತನ್ನ ಶ್ರಮಕ್ಕೆ ಫಲ ನೀಡುತ್ತದೆ ಎಂದು ತಿಳಿದಿರಬೇಕು. ಆಗ ರೈತನಿಗೆ ಭೂತಾಯಿ ಅನ್ಯಾಯ ಮಾಡದೆ ನಾಲ್ಕು ಕಾಳು ಹೆಚ್ಚೇ ಕೊಡುತ್ತಾಳೆ. ಭೂತಾಯಿಯನ್ನು ನಂಬಿ `ಉಡಿಯೊಳಗಿನ ಬೀಜಕ್ಕಿಂತ ಹಿಡಿಯೊಳಗಿನ ಬೀಜ ಮುಂದು~ ಎಂದು ಬಿತ್ತನೆ ಮಾಡುತ್ತೇವೆ ಎಂದು ಮಣ್ಣಿನೊಂದಿಗಿನ ತಮ್ಮ ಒಡನಾಟದ ಬುತ್ತಿಯನ್ನು ಬಿಚ್ಚಿಡುತ್ತಾರೆ ಶೇಖರಪ್ಪ.

ದಾವಣಗೆರೆ ಜಿಲ್ಲೆ ಭದ್ರಾ ಅಚ್ಚಕಟ್ಟು ಪ್ರದೇಶ ವ್ಯಾಪ್ತಿಗೆ ಒಳಪಟ್ಟು ನೀರಾವರಿ ಸೌಲಭ್ಯ ಪಡೆಯುವುದಕ್ಕೂ ಮುನ್ನ ಶೇಂಗಾ ಬೆಳೆಯುವಲ್ಲಿ ಮುಂಚೂಣಿಯಲ್ಲಿತ್ತು. ಜತೆಗೆ, ಅಕ್ಕಪಕ್ಕದ ಹಾವೇರಿ, ಚಿತ್ರದುರ್ಗ, ಬಳ್ಳಾರಿ ಜಿಲ್ಲೆಯ ಶೇಂಗಾ ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸಿತ್ತು.

ಇಲ್ಲಿ ತಯಾರಾದ ಶೇಂಗಾಎಣ್ಣೆ ರಾಷ್ಟ್ರಮಟ್ಟದಲ್ಲಿ ಖ್ಯಾತಿಯನ್ನೂ ಗಳಿಸಿತ್ತು. ಪ್ರಸ್ತುತ ಶೇಂಗಾ ಬೆಳೆ ಪ್ರದೇಶ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ವಹಿವಾಟು ಸಹ ಅಷ್ಟಕ್ಕಷ್ಟೆ ಎನ್ನುವಂತಾಗಿದೆ.

40ಕ್ಕೂ ಹೆಚ್ಚು ವರ್ಷ ಕೃಷಿಯಲ್ಲಿ ತೊಡಗಿರುವ ಶೇಖರಪ್ಪ ಅವರು, ಪ್ರಸ್ತುತ ಮಳೆ ಆಶ್ರಯಿಸಿ ಶೇಂಗಾ ಬೆಳೆಯುತ್ತಿದ್ದಾರೆ. ಪ್ರತಿ ವರ್ಷ ಮೂರು ಎಕರೆಯಷ್ಟಾದರೂ ಶೇಂಗಾ ಬಿತ್ತನೆ ಮಾಡುತ್ತಾರೆ. ಉಳಿದಂತೆ ತಮ್ಮ ಜಮೀನಿನಲ್ಲಿ ಮನೆಗೆ ಊಟಕ್ಕೆಂದು ಅರ್ಧ ಎಕರೆ ಊಟದ ಜೋಳ, ಅರ್ಧ ಎಕರೆ ರಾಗಿ, ಉಳಿದ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ.

ಇವರದ್ದು, ಮಳೆಯಾಶ್ರಿತ ಆದರೂ ಅಚ್ಚುಕಟ್ಟಾದ ಬೇಸಾಯ.2010-11ನೇ ಸಾಲಿನಲ್ಲಿ 1 ಎಕರೆ 23 ಗುಂಟೆ ಜಮೀನಿನಲ್ಲಿ ಶೇಂಗಾ ಬಿತ್ತನೆ ಮಾಡಿ, ಪ್ರತಿ ಎಕರೆಗೆ 13.75 ಕ್ವಿಂಟಲ್ (40 ಚೀಲ) ಇಳುವರಿ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.

ಅವರನ್ನು ಪ್ರಶ್ನಿಸಿದಾಗ-ಜೂನ್‌ಗೆ ಶೇಂಗಾ ಬಿತ್ತನೆ ಮಾಡುತ್ತೇನೆ. ಮುಂಚಿತವಾಗಿ ಭೂಮಿ ಉಳುಮೆ ಮಾಡಿ ಹದಗೊಳಿಸುತ್ತೇನೆ. ಉಳುಮೆ ನಂತರ ಕೆರೆಮಣ್ಣು, ಕೊಟ್ಟಿಗೆ ಗೊಬ್ಬರ ಚೆಲ್ಲುತ್ತೇವೆ. ಹಸಿ ಮಳೆ ಬಿದ್ದ ತಕ್ಷಣ ಹೆಂಟೆಯೊಡೆದು ಮಣ್ಣನ್ನು ಸಣ್ಣ ಮಾಡಬೇಕು. ಅಗತ್ಯವಿದ್ದರೆ ಮುಂಗುಂಟೆ ಹೊಡೆಯಬೇಕು. ಹದ ನೋಡಿ ಬಿತ್ತನೆ ಮಾಡುತ್ತೇನೆ.

ಬೀಜೋಪಚಾರ ಮಾಡಿ ಕೃಷಿ ಇಲಾಖೆ ಕೊಟ್ಟ ಜಿಂಕ್ ಮಾತ್ರ ಬಳಸಿದ್ದೇನೆ. ಉಳಿದಂತೆ ಯಾವ ರಾಸಾಯನಿಕ ಗೊಬ್ಬರವನ್ನೂ ಬೆಳೆಗೆ ಬಳಸುವುದಿಲ್ಲ. ಮಳೆ ಅತ್ಯಂತ ಕಡಿಮೆ ಬಿದ್ದಾಗ ಸ್ವಲ್ಪ ಇಳುವರಿ ಕಡಿಮೆಯಾದದ್ದೂ ಇದೆ~.

`ಶೇಂಗಾ ಬೆಳೆಗೆ ಕೊಟ್ಟಿಗೆ ಗೊಬ್ಬರದ ಜತೆ, ಜಮೀನಿನಲ್ಲಿ ಕುರಿ ನಿಲ್ಲಿಸುವುದರಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಹಾಗಾಗಿ, ಪ್ರತಿ ವರ್ಷ ಒಂದರಿಂದ ಎರಡು ಸಾವಿರ ಸಂಖ್ಯೆಯಲ್ಲಿರುವ ಕುರಿ ಹಿಂಡನ್ನು ಜಮೀನಿನಲ್ಲಿ ಕನಿಷ್ಠ ಒಂದು ವಾರ ಕಾಲ ನಿಲ್ಲಿಸುತ್ತೇವೆ.
 
ಇದು ಏನೇ ಇರಲಿ; ರೈತನ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬೇಕು~ ಎನ್ನುವ ಶೇಖರಪ್ಪ ಅವರು, ತಮ್ಮ ಕೃಷಿ ಕಾಯಕದ ನೊಗಕ್ಕೆ ಪತ್ನಿ ಈರಮ್ಮ ಹಾಗೂ ಮೂವರು ಪುತ್ರರು ಹೆಗಲು ನೀಡಿರುವುದನ್ನು ಸ್ಮರಿಸಲು ಮರೆಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.