ADVERTISEMENT

ಸಣ್ಣ ರೈತನ ದೊಡ್ಡ ಸಾಧನೆ

ಪ.ರಾಮಕೃಷ್ಣ
Published 16 ಮಾರ್ಚ್ 2011, 19:30 IST
Last Updated 16 ಮಾರ್ಚ್ 2011, 19:30 IST

ದಕ್ಷಿಣ ಕನ್ನಡ ಜಿಲ್ಲೆಯ ಅಬ್ದುಲ್ ಜಲೀಲ್ ಸಣ್ಣ ವಯಸ್ಸಿನಲ್ಲೇ ಮೂಡಿಗೆರೆ ಫಲ್ಗುಣಿ ಗ್ರಾಮಕ್ಕೆ ಕಾಫಿ ತೋಟಗಳಲ್ಲಿ ದುಡಿಯಲು ಬಂದವರು. ಅವರ ತಾಯಿ ಸಣ್ಣದೊಂದು ಚಹಾ ಅಂಗಡಿ ನಡೆಸುತ್ತಿದ್ದರು. ಅದರಿಂದ ಬಂದ ಆದಾಯದಲ್ಲಿ ಒಂದೂವರೆ ಎಕರೆ ಬೀಳು ಭೂಮಿ ಖರೀದಿಸಿದರು. ನಾಲ್ಕನೇ ತರಗತಿವರೆಗೆ ಓದಿದ ಜಲೀಲ್‌ಗೆ ಹಲವು ಕೆಲಸ ಮಾಡಿದರೂ ಅದರಿಂದ ನೆಮ್ಮದಿ ಬದುಕು ಸಾಧ್ಯವಾಗಲಿಲ್ಲ. ನಂತರ ಅವರು ತಮ್ಮ ಭೂಮಿಯಲ್ಲಿ ಬೇಸಾಯ ಮಾಡುವ ನಿರ್ಧಾರ ಮಾಡಿದರು.

ಜಲೀಲ್ ಅವರಿಗೆ ಈಗ ಬೇಸಾಯ ಒಲಿದಿದೆ. ಒಂದೂವರೆ ಎಕರೆ ಭೂಮಿಯನ್ನು ಬೇಸಾಯಕ್ಕೆ ಒಳಪಡಿಸಿದ್ದಲ್ಲದೆ ಅದರಿಂದ ಬಂದ ಆದಾಯದಲ್ಲಿ ಇನ್ನೂ ಎರಡು ಎಕರೆ ಭೂಮಿ ಖರೀದಿಸಿ ಅಲ್ಲೂ ಬೇಸಾಯ ಮಾಡುತ್ತಿದ್ದಾರೆ.  ಹನ್ನೆರಡು ವರ್ಷಗಳ ಶ್ರಮದ ಫಲವಾಗಿ ಬಿದಿರು ಮೆಳೆ ತುಂಬಿದ್ದ ಅವರ ಭೂಮಿಯಲ್ಲಿ ಈಗ ಕಾಫಿ, ಯಾಲಕ್ಕಿ, ಅಡಿಕೆ, ಬಾಳೆ ಮತ್ತಿತರ ಬೆಳೆಗಳಿವೆ.

ಬೆಳಿಗ್ಗೆ ಐದು ಗಂಟೆಗೆ ಅಬ್ದುಲ್ ಜಲೀಲ್ ದಿನಚರಿ ಆರಂಭವಾಗುತ್ತದೆ. ಅವರ ಮೊದಲ ಕೆಲಸ ಹಸುಗಳ ಹಾಲು ಕರೆಯುವುದು. ಎರಡು ಮಿಶ್ರ ತಳಿ ಹಸುಗಳಿಂದ ಹನ್ನೆರಡು ಲೀಟರ್ ಹಾಲನ್ನು ಕರೆದು ಮಾರಾಟ ಮಾಡಿ ದಿನಕ್ಕೆ 150 ರೂ. ಗಳಿಸುತ್ತಾರೆ. ಹಸುಗಳ ಸೆಗಣಿಯನ್ನು ಎರೆಗೊಬ್ಬರ ತಯಾರಿಕೆಗೆ ಬಳಸುತ್ತಾರೆ. ಕೊಟ್ಟಿಗೆ ಗೊಬ್ಬರ ಮತ್ತು ಎರೆ ಗೊಬ್ಬರಗಳನ್ನು ತಮ್ಮ ತೋಟಕ್ಕೆ ಬಳಸುತ್ತಾರೆ. ಅವರು ರಾಸಾಯನಿಕ ಗೊಬ್ಬರ ಬಳಸುವುದಿಲ್ಲ. ತೋಟಕ್ಕೆ ಬಳಸಿ ಹೆಚ್ಚಾದ ಗೊಬ್ಬರವನ್ನು ಮಾರಾಟ ಮಾಡುತ್ತಾರೆ.

ಸ್ವಲ್ಪ ಭೂಮಿಯಲ್ಲಿ ರೊಬಸ್ಟಾ ಮತ್ತು ಅರೇಬಿಕಾ ಕಾಫಿ ಬೆಳೆಯುತ್ತಾರೆ. ಸ್ವಲ್ಪ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. 50 ಸೆಂಟ್ಸ್ ಗದ್ದೆಯಲ್ಲಿ  9 ಕ್ವಿಂಟಲ್ ರತ್ನ ಚೂಡಿ ಭತ್ತ ಬೆಳೆದಿದ್ದಾರೆ. ಈ ಭತ್ತವನ್ನು ಕೃಷಿ ಇಲಾಖೆ ಅತ್ಯುತ್ತಮ ಬಿತ್ತನೆ ಬೀಜವೆಂದು ಆಯ್ಕೆ ಮಾಡಿದೆ.  ಅವರ ತೋಟದಲ್ಲಿ ಕೇವಲ 30 ಏಲಕ್ಕಿ ಬುಡಗಳಿವೆ. ಅವುಗಳಿಂದ ಏಳು ಕಿಲೋ ಏಲಕ್ಕಿ ಬೆಳೆದಿದ್ದಾರೆ.

85 ಕಾಳು ಮೆಣಸಿನ ಬಳ್ಳಿಗಳಲ್ಲಿ ಮೂರೂವರೆ ಕ್ವಿಂಟಲ್ ಮೆಣಸಿನ  ಫಸಲು ಸಿಕ್ಕಿದೆ.  120 ಅಡಿಕೆ ಮರಗಳಿಂದ 6 ಕ್ವಿಂಟಲ್ ಅಡಿಕೆ ಸಿಕ್ಕಿದೆ. ಕಡಿಮೆ ಭೂಮಿಲ್ಲಿ ಹೆಚ್ಚು ಬೆಳೆ ಬೆಳೆದಿರುವುದು ಅವರ ಸಾಧನೆ. ಅರ್ಧ ಎಕರೆಯಲ್ಲಿ ಬಾಳೆ ಗಿಡಗಳಿಂದ 30 ಸಾವಿರ ರೂ ಆದಾಯ ಪಡೆದಿದ್ದಾರೆ.

 ಕಡಿಮೆ ಖರ್ಚಿನಲ್ಲಿ ಹೈನುಗಾರಿಕೆ ಮಾಡುತ್ತಿರುವ ಜಲೀಲ್ ಅವರಿಗೆ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಮಾರ್ಗದರ್ಶನ ಮಾಡುತ್ತಾರೆ. ಅವರ ಹೊಲ ಗದ್ದೆ ಸುತ್ತ ಸಿಲ್ವರ್ ಓಕ್ ಮರಗಳನ್ನು ಬೆಳೆಸಿದ್ದಾರೆ.

ಸಣ್ಣ ಹಿಡುವಳಿಯಲ್ಲೇ ನೆಮ್ಮದಿಯ ಜೀವನ ನಡೆಸುತ್ತಿರುವ ಜಲೀಲ್ ಅವರ ಸಾಧನೆಯನ್ನು ಅನೇಕರು ಮೆಚ್ಚಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.