ADVERTISEMENT

ಸಮಗ್ರ ಬೇಸಾಯದ ಸಿದ್ಧಲಿಂಗಪ್ಪ

ಡಿ.ಬಿ, ನಾಗರಾಜ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

`ನಮ್ಮನೆಯಲ್ಲಿ ಎಲ್ರೂ ದುಡೀತೀವಿ. ಬೇಸಾಯ ಅನ್ನೋದು ನಮ್ಮ ಪಾಲಿಗೆ ನೆಮ್ಮದಿ ಕಂಡುಕೊಳ್ಳುವ ದಾರಿ. ಶ್ರೀಮಂತಿಕೆ ಬೇಡ. ಆದರೆ ಎಂದೂ ಕೈಬಿಡದ ನೆಮ್ಮದಿ ಬೇಕು. ರೈತ ಅಂತ ಹೇಳಿಕೊಳ್ಳೋಕೆ ನಂಗಂತೂ ಹೆಮ್ಮೆ ಅನ್ನಿಸುತ್ತೆ~.
- ತುಮಕೂರು ತಾಲ್ಲೂಕು ಯಲದಡ್ಲು ಗ್ರಾಮದ ಯುವರೈತ ಸಿದ್ದಲಿಂಗಪ್ಪ ಅವರ ಮುಕ್ತ ಅನಿಸಿಕೆ ಇದು.

ಇವರ ಒಂಬತ್ತು ಎಕರೆ ಜಮೀನಿನಲ್ಲಿ ಅಡ್ಡಾಡಿದರೆ ಮನುಷ್ಯನೊಬ್ಬ ಬದುಕಲು ಏನೆಲ್ಲ ಬೇಕೋ ಅದೆಲ್ಲವನ್ನೂ ಕಾಣಬಹುದು. ಭತ್ತ, ರಾಗಿ, ತರಕಾರಿ, ಸೊಪ್ಪು, ಹಣ್ಣು, ಹೈನುಗಾರಿಕೆ, ಕೋಳಿ, ಕುರಿ, ಜೇನು. ಈ ಪಟ್ಟಿ ಇನ್ನಷ್ಟು ಬೆಳೆಯುತ್ತದೆ.

ತೋಟದ ನಿರ್ವಹಣೆಗೆ ಹಸಿರೆಲೆ ಗೊಬ್ಬರ, ಜೀವಸಾರ, ಎರೆಹುಳು ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಬೇವಿನ ಹಿಂಡಿ, ಜೈವಿಕ ಗೊಬ್ಬರ, ಜೀವಾಮೃತ, ಬೀಜಾಮೃತ, ನಾಟಿ ಯೂರಿಯಾಗಳನ್ನೇ ಸಿದ್ದಲಿಂಗಪ್ಪ ನೆಚ್ಚಿಕೊಂಡಿದ್ದಾರೆ.

ಬೆಳೆಗೆ ಕೀಟಬಾಧೆ ಕಾಣಿಸಿಕೊಂಡರೆ ಅವರು ರಾಸಾಯನಿಕ ಕೀಟನಾಶಕ ಸಿಂಪಡಿಸುವುದಿಲ್ಲ. ಹುಳಿಮಜ್ಜಿಗೆ, ನಾಟಿ ಹಸುವಿನ ಗಂಜಲ, ಬೇವಿನ ಬೀಜದ ಕಷಾಯ, ಈರುಳ್ಳಿ-ಬೆಳ್ಳುಳ್ಳಿ ಕಷಾಯ ಸಿಂಪಡಿಸಿ ನಿಯಂತ್ರಿಸುತ್ತಾರೆ.
 
ತೋಟದಲ್ಲಿರುವ ಸಾವಿರಾರು ಪಕ್ಷಿಗಳು ಸ್ವಾಭಾವಿಕವಾಗಿಯೇ ಕೀಟಗಳನ್ನು ಹುಡುಕಿ ತಿಂದು ಇವರ ಕೃಷಿಗೆ ನೆರವಾಗುತ್ತವೆ. `ಪಕ್ಷಿಗಳ ಆರೋಗ್ಯಕ್ಕೆ ಹಾನಿಕರ ಎಂಬ ಕಾರಣಕ್ಕಾಗಿ ರಾಸಾಯನಿಕ ಕೀಟನಾಶಕ ಸಿಂಪಡನೆ ಕೈಬಿಟ್ಟೆ~ ಎಂದು ಸಿದ್ದಲಿಂಗಪ್ಪ ಮುಗುಳ್ನಗುತ್ತಾರೆ.

ಈ ತೋಟಕ್ಕೆ ಭೇಟಿ ನೀಡಿದ ರೈತರು ನೀರಿನ ಸದ್ಬಳಕೆ ಪಾಠವನ್ನೂ ಕಲಿಯಬಹುದು. ಹನಿ ನೀರಾವರಿ, ತುಂತುರು ನೀರಾವರಿ, ಇಂಗುಗುಂಡಿ, ಮಳೆ ನೀರು ರಕ್ಷಿಸಲು ಬದು, ಕೃಷಿ ಹೊಂಡ, ಜಲ ಮರುಪೂರಣ ಸೇರಿದಂತೆ ಹಲವು ತಂತ್ರ ಇಲ್ಲಿ ಬಳಕೆಯಾಗುತ್ತಿವೆ.
ತೋಟ ನಿರ್ವಹಣೆಯ ಎಲ್ಲ ಖರ್ಚು ಕಳೆದರೂ ವರ್ಷಕ್ಕೆ ಐದು ಲಕ್ಷ ಉಳಿಯುವ ಲೆಕ್ಕಾಚಾರ ಈ ರೈತನದು.

ಕಾರ್ಮಿಕರ ಸಮಸ್ಯೆ, ಮಳೆ ಕೊರತೆ, ಸಂಪನ್ಮೂಲ ನಿರ್ವಹಣೆಯಲ್ಲಿ ವೈಫಲ್ಯ, ಸರ್ಕಾರದ ನಿರ್ಲಕ್ಷ್ಯ ಇತ್ಯಾದಿ ಸಮಸ್ಯೆಗಳ ಸುಳಿಯಲ್ಲಿ ನೊಂದು ನರಳಿದ ರೈತರು ಬೇಸಾಯದಿಂದ ವಿಮುಖರಾಗುವ ಮೊದಲು ಸಿದ್ದಲಿಂಗಪ್ಪ ಅವರನ್ನು ಭೇಟಿಯಾಗಬೇಕು. ಎಂಥವರ ಮನದಲ್ಲಿಯೂ ಕೃಷಿ ಪರ ಉತ್ಸಾಹ ತುಳುಕಿಸುವ ಸಾಮರ್ಥ್ಯ ಅವರಲ್ಲಿದೆ. ಅವರ ಸಂಪರ್ಕ ಸಂಖ್ಯೆ: 99643 52491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.