ADVERTISEMENT

ಹಂದಿಗಳ ಸಂತೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST
ಹಂದಿಗಳ ಸಂತೆ
ಹಂದಿಗಳ ಸಂತೆ   

ದನಗಳ ಸಂತೆ, ಕುರಿಗಳ ಸಂತೆ, ವಾರಕೊಮ್ಮೆ ನಡೆಯುವ ತರಕಾರಿ ಸಂತೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಹಂದಿಗಳ ಮಾರಾಟಕ್ಕಾಗಿ ಸಂತೆ ನಡೆಯುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಸಮೀಪದ ಆಲೂರು ದುದ್ದನಹಳ್ಳಿ ಗೇಟ್‌ಬಳಿ ಪ್ರತಿ ಸೋಮವಾರ ಬೆಳಗಿನ ಜಾವ 3 ರಿಂದ ಬೆಳಿಗ್ಗೆ 9 ಗಂಟೆವರೆಗೆ ಹಂದಿಗಳ ಸಂತೆ ನಡೆಯುತ್ತದೆ. ಇಷ್ಟು ದೊಡ್ಡ ಹಂದಿ ಸಂತೆ ರಾಜ್ಯದ ಬೇರೆಲ್ಲೂ ಕಾಣಸಿಗದು.

ಕಳೆದ ಹದಿನೈದು ವರ್ಷಗಳಿಂದ ವಾರಕ್ಕೊಮ್ಮೆ ಸಂತೆ ನಡೆಯುತ್ತದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಆಂಧ್ರದ ಹಿಂದೂಪುರ, ಕರ್ನೂಲು, ಅನಂತಪುರ, ಕಡಪ ಹಾಗೂ ರಾಜ್ಯದ ಕೊಪ್ಪಳ, ರಾಯಚೂರು, ಗಂಗಾವತಿ ಮತ್ತಿತರ ಕಡೆಗಳಿಂದ ಹಂದಿಗಳನ್ನು ಕೊಳ್ಳುವವರು ಮತ್ತು ಮಾರುವವರು ಸಂತೆಗೆ ಬರುತ್ತಾರೆ.

ಬೇಸಾಯದ ಜತೆಗೆ ಸಣ್ಣ ಪ್ರಮಾಣದಲ್ಲಿ ಹಂದಿ ಸಾಕುವ ರೈತರು ತಮಗೆ ಹಣದ ಅಗತ್ಯ ಇದ್ದಾಗ ಇಲ್ಲಿಗೆ ಹಂದಿಗಳನ್ನು ತಂದು ಮಾರಾಟ ಮಾಡುತ್ತಾರೆ. ಐದಾರು ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ರೂ ವಹಿವಾಟು ನಡೆಯುತ್ತದೆ.

ಪ್ರತಿ ವಾರ 12 ರಿಂದ 18 ಟನ್‌ಗಳಷ್ಟು ತೂಕದ ನಾಟಿ ಹಂದಿಗಳು ಮಾರಾಟವಾಗುತ್ತವೆ. ದೇವನಹಳ್ಳಿ ತಾಲ್ಲೂಕಿನಲ್ಲೇ  17 ಹಂದಿಮಾಂಸ ಮಾರಾಟ ಕೇಂದ್ರಗಳಿವೆ. ಒಂದೊಂದು ಕೇಂದ್ರದಲ್ಲಿ ದಿನಕ್ಕೆ ಸರಾಸರಿ ದ 30 ರಿಂದ 70ಕೆ.ಜಿ ಮಾಂಸ ಮಾರಾಟವಾಗುತ್ತದೆ ಎಂಬ ಅಂದಾಜಿದೆ.

ಸಂತೆಯಲ್ಲೆ  10ರಿಂದ 25ಕೆ.ಜಿ ತೂಕದ ದೇಸಿ ಹಾಗೂ ಫಾರಂಗಳಲ್ಲಿ ಬೆಳೆಸಿದ ಹಂದಿಗಳು ಬಿಕರಿಯಾಗುತ್ತವೆ. ಬೆಂಗಳೂರು ನಗರದ ಹಂದಿ ಮಾಂಸ ಮಾರಾಟಗಾರರು ಇಲ್ಲಿ ಹಂದಿ ಖರೀದಿಸಿ ಒಯ್ಯುತ್ತಾರೆ.

ಹಂದಿ ಸಂತೆ ನಡೆಯುವ ಜಾಗ ವ್ಯವಸ್ಥಿತವಾಗಿಲ್ಲ. ಈ ಸ್ಥಳವನ್ನು ಶುಚಿಯಾಗಿಡುವ ಕೆಲಸವನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಬೇಕಿದೆ. ಹಂದಿಗಳ ಸಂತೆಗೆ ಸಾರ್ವಜನಿಕರು ಹೆಚ್ಚಾಗಿ ಬರುವುದಿಲ್ಲವಾದ್ದರಿಮದ ಈ ಸ್ಥಳದ ಸ್ವಚ್ಚತೆ ಬಗ್ಗೆ ಸಂಬಂಧಿಸಿದವರಿಗೆ ಹೆಚ್ಚಿನ ಕಾಳಜಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.