ADVERTISEMENT

ಕೈ ಬಿಡದ ಎಲೆಬಳ್ಳಿ

ಮಲ್ಲಪ್ಪ ಪಾರೇಗಾಂವ
Published 5 ಫೆಬ್ರುವರಿ 2018, 19:30 IST
Last Updated 5 ಫೆಬ್ರುವರಿ 2018, 19:30 IST
ಕೈ ಬಿಡದ ಎಲೆಬಳ್ಳಿ
ಕೈ ಬಿಡದ ಎಲೆಬಳ್ಳಿ   

ಮಳೆಯ ಅನಿಶ್ಚಿತತೆ, ಅಂತರ್ಜಲದ ಕುಸಿತ ಮತ್ತು ತುಂಡು ಭೂಮಿಯ ಸಮಸ್ಯೆಯಿಂದ ಕಂಗೆಟ್ಟು ಕೃಷಿ ಚಟುವಟಿಕೆಗಳಿಂದಲೇ ವಿಮುಖರಾಗಿ ಬದುಕನ್ನು ಅರಿಸಿಕೊಂಡು ನಗರಗಳತ್ತ ಗುಳೆ ಹೋಗುವರು ಒಂದು ಕಡೆಯಾದರೆ, ಇರುವ ಭೂಮಿಯನ್ನೇ ನಂಬಿ ಬದುಕು ಕಟ್ಟಿಕೊಂಡವರು ಕೆಲವರು. ಈ ಎರಡನೇ ವರ್ಗಕ್ಕೆ ಸೇರಿದವರಲ್ಲಿ ರಾಣೆಬೆನ್ನೂರ ತಾಲ್ಲೂಕು ಹನುಮಾಪುರ ಗ್ರಾಮದ ರವಿ ಚನಬಸಪ್ಪ ಬಣಕಾರ ಒಬ್ಬರು. ಎಲೆಬಳ್ಳಿಯನ್ನು ಬೆಳೆದು ಆರ್ಥಿಕ ಸಮಸ್ಯೆಯನ್ನು ನೀಗಿಸಿಕೊಂಡವರು ಅವರು.

ರವಿಯವರು ತಮ್ಮ ಒಂದು ಎಕರೆ ಹೊಲದಲ್ಲಿ ಸುಮಾರು 500 ಎಲೆಬಳ್ಳಿ ಮಡಿಗಳನ್ನು ಹಚ್ಚಿದ್ದು, ಒಂದೊಂದು ಮಡಿಯಲ್ಲಿ ನಾಲ್ಕು ಗುಣಿಗಳು ಇವೆ. ಒಟ್ಟಾರೆಯಾಗಿ ಎರಡು ಸಾವಿರ ಎಲೆಬಳ್ಳಿ ಗುಣಿಗಳು ಇವೆ. ಇವರು ತಮ್ಮ ಅಜ್ಜಂದಿರ ಕಾಲದಿಂದಲೂ ಈ ಬೆಳೆಯನ್ನು ಬೆಳೆಯುತ್ತಿದ್ದು, ಈ ಬೆಳೆಯ ಬೆಳವಣಿಗೆ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿದ್ದಾರೆ.

ಎಲೆಬಳ್ಳಿಯನ್ನು ಒಂದು ಸಾರಿ ಹಚ್ಚಿದರೆ, ಹತ್ತರಿಂದ ಹನ್ನೆರಡು ವರ್ಷಗಳವರೆಗೆ ಇಳುವರಿಯನ್ನು ಪಡೆಯಲು ಸಾಧ್ಯ. ಎಲೆಬಳ್ಳಿ ಹಚ್ಚುವ ಪೂರ್ವದಲ್ಲಿ ಹೊಲವನ್ನು ಚೆನ್ನಾಗಿ ಉಳುಮೆಮಾಡಿ, ಕೊಟ್ಟಿಗೆ ಗೊಬ್ಬರ, ಕೆಂಪು, ಕಟಗು ಮಣ್ಣನ್ನು ಹೊಲಕ್ಕೆ ಹೇರಿಸಿ ಚೆನ್ನಾಗಿ ಮಿಶ್ರಣ ಮಾಡಿದ ನಂತರ ಕುರಿಗಳನ್ನು ಹೊಲದಲ್ಲಿ ನಿಲ್ಲಿಸಬೇಕು. ಜೂನ್- ಜುಲೈ ತಿಂಗಳಲ್ಲಿ ನುಗ್ಗಿ, ಹಾಲವಾಳ, ಬೊರ್ಲ, ಚೊಗಚಿ ಬೀಜಗಳನ್ನು ಹಾಕಿದ ನಂತರ ಎಲೆಬಳ್ಳಿಯನ್ನು ಹಚ್ಚಬೇಕು. ಆರು ತಿಂಗಳವರೆಗೆ ನೀರು, ಕೊಟ್ಟಿಗೆ ಗೊಬ್ಬರ ಕೊಟ್ಟು ಬೆಳೆಸಬೇಕು. ಆರು ತಿಂಗಳ ನಂತರ ಇಳುವರಿ ಪ್ರಾರಂಭವಾಗುತ್ತದೆ.

ADVERTISEMENT

ಪ್ರತಿ ಇಪ್ಪತ್ತು ದಿನಕ್ಕೊಮ್ಮೆ ಐದುನೂರು ಮಡಿಗಳಿರುವ ತೋಟದಿಂದ ಹತ್ತು ಎಲೆ ಪೆಂಡಿಗಳು ಬರುತ್ತವೆ. ಪ್ರತಿ ಪೆಂಡಿಯಲ್ಲಿ ಹನ್ನೆರಡು ಸಾವಿರ ಎಲೆಗಳು ಇರುತ್ತವೆ. ಅಕ್ಟೋಬರ್ ತಿಂಗಳಿಂದ ಜೂನ್ ತಿಂಗಳವರೆಗೆ ಉತ್ತಮ ದರ ಸಿಗುತ್ತಿದ್ದು ಪ್ರತಿಪೆಂಡಿಗೆ ₹ 12 ಸಾವಿರದವರೆಗೆ ಬೆಲೆ ಬರುತ್ತದೆ. ಮಳೆಗಾಲದ ಸಂದರ್ಭದಲ್ಲಿ ಸ್ವಲ್ಪ ಮಟ್ಟಿಗೆ ದರ ಕುಸಿತ ಹೊಂದಿರುತ್ತದೆ. ಪ್ರತಿ ಶುಕ್ರವಾರ, ರವಿವಾರ, ಬುಧವಾರ ಎಲೆಯನ್ನು ಕೊಯ್ದು ಸಮೀಪದ ಮಾರುಕಟ್ಟೆಯಾದ ರಾಣೆಬೆನ್ನೂರಿಗೆ ಕಳಿಸುತ್ತಾರೆ. ಒಂದು ಕಡೆಯಿಂದ ಎಲೆ ಕೊಯ್ದುಕೊಂಡು ಹೋದಂತೆ ಮತ್ತೆ ಇಪ್ಪತ್ತು ದಿನಕ್ಕೆ ಎಲೆ ಕೊಯ್ಯಲು ಬರುವುದರಿಂದ ಬೆಳೆಗಾರರಿಗೆ ಬಹಳಷ್ಟು ಅನುಕೂಲಕರ ಬೆಳೆಯಾಗಿದೆ.

ಪ್ರತಿದಿನ ಎಲೆಬಳ್ಳಿ ತೋಟದಲ್ಲಿ ಕೆಲಸ ಮಾಡಬೇಕಾಗುತ್ತದೆ. ಕೊಳವೆ ಬಾವಿಯಿಂದ ಮಡಿಗಳಿಗೆ ನೀರು ಹಾಯಿಸುವುದು. ಬೆಳೆಯುತ್ತಿರುವ ಬಳ್ಳಿಯನ್ನು ಕಟ್ಟುವುದು. ಅಂದರೆ, ನುಗ್ಗಿ, ಚೊಗಚಿ, ಬೊರ್ಲ ಮರಗಳಿಗೆ ಬಳ್ಳಿಯ ತುದಿಯನ್ನು ತೆಗೆದುಕೊಂಡು ಆಶ್ರಯಕ್ಕಾಗಿ ಕಟ್ಟುವುದು. ಹೀಗೆ ಪ್ರತಿನಿತ್ಯ ತೋಟದಲ್ಲಿ ಕೆಲಸ ಇದ್ದೇ ಇರುತ್ತದೆ. ಮೂರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಆರು ತಿಂಗಳಿಗೊಮ್ಮೆ ಕೆಂಪು ಕಟಗು ಮಿಶ್ರಿತ ಮಣ್ಣನ್ನು ಮಡಿಗಳಿಗೆ ಹಾಕುತ್ತಾರೆ.

ಎಲ್ಲಾ ವೆಚ್ಚಗಳನ್ನು ಕಳೆದರೂ ತಿಂಗಳಿಗೆ ₹ 35 ಸಾವಿರದವರೆಗೆ ಆದಾಯ ಬರುತ್ತದೆ. ಸರಕಾರಿ ನೌಕರರಂತೆ ಪ್ರತಿ ತಿಂಗಳು ಸಂಬಳ ಪಡೆಯುವಂತೆ, ಎಲೆಬಳ್ಳಿ ತೋಟದಿಂದ ಆದಾಯ ಬರುತ್ತದೆ. ಹನುಮಾಪುರ ಗ್ರಾಮದಲ್ಲಿ ಬಹುತೇಕರು ಎಲೆಬಳ್ಳಿ ತೋಟವನ್ನು ಹೊಂದಿದ್ದು ಉತ್ತಮವಾದ ಆದಾಯ ಪಡೆಯುತ್ತಿದ್ದಾರೆ. ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ ಬಳಸುವ ಜತೆಗೆ ಬಳ್ಳಿ ಮುರಿಯದಂತೆ, ನೀರಿನ ಕೊರತೆಯಾಗದಂತೆ ನೋಡಿಕೊಂಡರೆ ಪ್ರತಿ ತಿಂಗಳು ಒಳ್ಳೆಯ ಆದಾಯ ಪಡೆಯಬಹುದು ಎಂದು ರವಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.