ADVERTISEMENT

ಬ್ಯಾಡಗಿ ಚಿಲ್ಲಿಯ ಬೀಜದ ಅಂಗಳ

ಎಂ.ಚಂದ್ರಪ್ಪ
Published 21 ಜನವರಿ 2019, 19:30 IST
Last Updated 21 ಜನವರಿ 2019, 19:30 IST
ಮೆಣಸಿನಕಾಯಿ ರಾಶಿ ಮಾಡುತ್ತಿರುವ ಮಹಿಳೆ
ಮೆಣಸಿನಕಾಯಿ ರಾಶಿ ಮಾಡುತ್ತಿರುವ ಮಹಿಳೆ   

ಬಿತ್ತನೆ ಬೀಜ ಖರೀದಿಸಿ ಬೆಳೆಯುವವರ ಸಂಖ್ಯೆ ಅಧಿಕವಾಗಿರುವ ಈ ಕಾದಲ್ಲಿ, ಬಿತ್ತನೆ ಬೀಜಕ್ಕಾಗಿ ಬೆಳೆಯುವವರು ಅಪರೂಪ. ಆದರೆ, ಹುಬ್ಬಳ್ಳಿಯ ಕೃಷಿಕ ಪರಶುರಾಂ ಎಸ್. ಬೆಕ್ಕಿನಕಣ್ಣು ಅವರು, ಮೂರು ದಶಕಗಳಿಂದ ಬಿತ್ತನೆ ಬೀಜಕ್ಕಾಗಿಯೇ ಬ್ಯಾಡಗಿ ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಬೆಳೆಯುವುದಷ್ಟೇ ಅಲ್ಲದೇ, ಬೇರೆ ಬೇರೆ ಜಿಲ್ಲೆಯ ಹಾಗೂ ಹೊರ ರಾಜ್ಯದ ರೈತರಿಗೂ ಬೀಜವನ್ನು ಮಾರಾಟ ಮಾಡುತ್ತಿದ್ದಾರೆ.

ಹುಬ್ಬಳ್ಳಿ ಹೊರವಲಯದ ಬೊಮ್ಮಲಾಪುರದಲ್ಲಿರುವ 110 ಎಕರೆಯಲ್ಲಿ ಪರಶುರಾಂ ಬ್ಯಾಡಗಿ ಮೆಣಸಿನಕಾಯಿ ಬೆಳೆಯುತ್ತಾರೆ. ಈ ಹೊಲದಿಂದ ವಾರ್ಷಿಕವಾಗಿ 500 ಕ್ವಿಂಟಲ್‌ ಮೆಣಸಿನಕಾಯಿ ಉತ್ಪಾದಿಸುತ್ತಾರೆ. ಇದರಲ್ಲಿ ಬಹುಪಾಲ ಬೀಜಕ್ಕೆ ಮೀಸಲು. ಮುಂಗಾರು ಹಂಗಾಮಿನ ಆಸುಪಾಸಿನ ತಿಂಗಳಲ್ಲಿ ಇವರ ಹೊಲಕ್ಕೆ ಭೇಟಿ ನೀಡಿದರೆ, ಕಣ್ಣು ಹಾಯಿಸಿದಷ್ಟೂ ಹಸಿರೆಲೆಗಳ ನಡುವೆ ಫಸಲು ತುಂಬಿರುವ ಮೆಣಸಿನಕಾಯಿ ಗಿಡಗಳನ್ನು ಕಾಣುತ್ತವೆ.

ಧಾರವಾಡ ಜಿಲ್ಲೆಯ ಕುಂದಗೋಳ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಾರೆ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯುವ ರೈತರಲ್ಲಿ ಪರಶುರಾಂ ಮೊದಲಿಗರು. ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಇವರನ್ನು ‘ಕೆಂಪು ತಾಯಿಯ ಮಗ’, ‘ರೆಡ್‌ಕಿಂಗ್‌’ ಎಂದೇ ಗುರುತಿಸಲಾಗುತ್ತಿದೆ.

ADVERTISEMENT
ಬಿತ್ತನೆ ಕಾಯಿಗಳನ್ನು ಆರಿಸುತ್ತಿರುವ ಕಾರ್ಮಿಕರು

ಬಿತ್ತನೆ ಬೀಜ ಉತ್ಪಾದನೆ

ಪರಶುರಾಂ ಅವರು ಮೆಣಸಿನಕಾಯಿಯನ್ನು ಬಿತ್ತನೆ ಬೀಜಕ್ಕೆಂದೇ ಬೆಳೆಯುತ್ತಾರೆ. ಈ ಖ್ಯಾತಿ ಮೂಲಕವೇ ರೈತರಿಗೆ ಇವರು ಚಿರಪರಿಚಿತರು. ಆಂಧ್ರಪ್ರದೇಶ, ರಾಯಚೂರು, ಬಳ್ಳಾರಿ, ಕೊಪ್ಪಳ ಭಾಗದ ಬ್ಯಾಡಗಿ ತಳಿಯ ಬೀಜ ಖರೀದಿಗಾಗಿ ಇವರಲ್ಲಿಗೆ ಬರುತ್ತಾರೆ.

‘ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಮೆಣಸಿನ ಪೈರು ನಾಟಿ ಮಾಡುತ್ತೇವೆ. ಐದೂವರೆ ತಿಂಗಳಲ್ಲಿ ಬೆಳೆ ಕೈಸೇರುತ್ತದೆ. ಮಳೆ ಕೈಕೊಟ್ಟರೂ ಶೇ 50ರಷ್ಟು ಫಸಲು ಗ್ಯಾರಂಟಿ’ ಎಂಬುದು ಪರಶುರಾಂ ಅವರ ಆತ್ಮವಿಶ್ವಾಸದ ನುಡಿ.

ಜೂನ್‌ ನಿಂದ ಜನವರಿ–ಫೆಬ್ರುವರಿವರೆಗೆ ನಿತ್ಯ 100ಕ್ಕೂ ಹೆಚ್ಚು ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಫೆಬ್ರುವರಿಯಿಂದ ಜೂನ್‌ವರೆಗೆ ಭೂಮಿ ಉಳುಮೆ, ಹಸನು ಮಾಡುವ ಕೆಲಸವಿರುತ್ತದೆ. ಈ ಅವಧಿಯಲ್ಲಿ ಕನಿಷ್ಠ 20 ಮಂದಿ ಕೆಲಸ ಮಾಡುತ್ತಾರೆ. ಹುಬ್ಬಳ್ಳಿ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಕಾರ್ಮಿಕರನ್ನು ‌ಕರೆತಂದು ಕೆಲಸ ಮಾಡಿಸುತ್ತಾರೆ. ‘ನಮ್ಮಲ್ಲಿರುವ ಕಾರ್ಮಿಕರು 30 ವರ್ಷಗಳಿಂದ ದುಡಿಯುತ್ತಿದ್ದಾರೆ’ ಎನ್ನುತ್ತಾರೆ ಪರಶುರಾಂ.

ತಳಿ ಬದಲಾವಣೆ

ಬಹುತೇಕ ರೈತರು ಯಾವಾಗಲೂ ಒಂದೇ ತಳಿ ನಾಟಿ ಮಾಡುತ್ತಾರೆ. ಸಹಜವಾಗಿ ಇಳುವರಿ ಕುಸಿಯುತ್ತದೆ. ಆದರೆ, ಪರಶುರಾಂ ಅವರು ಪ್ರತಿ ವರ್ಷ ಬೇರೆ ಬೇರೆ ತಳಿಯ ಬ್ಯಾಡಗಿ ಮೆಣಸಿನಕಾಯಿ ನಾಟಿ ಮಾಡುತ್ತಾರೆ. ಕುಂದಗೋಳ, ಗುಡಿಗೇರಿ ಸೇರಿದಂತೆ ವಿವಿಧೆಡೆಯಿಂದ ಬಿತ್ತನೆ ಬೀಜ ಖರೀದಿಸಿ ತಂದು ನಾಟಿ ಮಾಡುತ್ತಾರೆ. ಆ ಭಾಗದ ರೈತರೂ ಕೊಡು–ಪಡೆಯುವ ಪದ್ಧತಿ ಅನುಸರಿಸುತ್ತಿದ್ದು, ಉತ್ತಮ ಇಳುವರಿ ಕಾಣುತ್ತಿದ್ದಾರೆ. ತಳಿ ಬದಲಾವಣೆಯಿಂದ ಭೂಮಿಯ ಫಲವತ್ತತೆ ಹೆಚ್ಚಲಿದೆ ಎಂಬುದು ಪರಶುರಾಂ ಅವರು ಕಂಡುಕೊಂಡ ಸತ್ಯ.

ಕೊಟ್ಟಿಗೆ ಗೊಬ್ಬರ ಬಳಕೆ

ಜಮೀನಿಗೆ ಇವತ್ತಿಗೂ ಕೊಟ್ಟಿಗೆ ಗೊಬ್ಬರ ಬಳಸುತ್ತಿದ್ದಾರೆ. ಪ್ರತಿ ವರ್ಷ 20 ಎಕರೆಗೆ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಮಳೆ ಕಡಿಮೆಯಾದರೂ ಶೇ 50 ರಷ್ಟು ಬೆಳೆಗೆ ಮೋಸವಿಲ್ಲವಂತೆ. ಜತೆಗೆ ಮೆಣಸಿನಕಾಯಿ ಬಣ್ಣ ಮಾಸಿಲ್ಲ. ಕಾಯಿ ಬಿಡುವ ಸಂದರ್ಭದಲ್ಲಿ ಮಿಡತೆ ಕಾಟ ಹಾಗೂ ಮುರುಟು ರೋಗ ಕಾಣಿಸಿಕೊಂಡರಷ್ಟೇ ಒಂದು ಬಾರಿ ಕೀಟನಾಶಕ ಸಿಂಪಡಿಸುತ್ತಾರೆ. ‘ಹೆಚ್ಚು ಕೀಟನಾಶಕ ಸಿಂಪಡಿಸಿದರೆ ಗಾಢ ಕೆಂಪು ಇರುವುದಿಲ್ಲ. ಹೆಚ್ಚು ಫಸಲು ಪಡೆಯಲು ಅಡ್ಡ ದಾರಿ ಹಿಡಿಯಲ್ಲ’ ಎಂದು ಕಡ್ಡಿ ಮುರಿದಂತೆ ಹೇಳುತ್ತಾರೆ ಅವರು.

ನಮ್ಮ ಭಾಗದಲ್ಲಿ ಜವುಳು ನೀರು ಇರುವ ಕಾರಣ ಕೊಳವೆಬಾವಿ ಹಾಕಿಸಿಲ್ಲ. ಹುಬ್ಬಳ್ಳಿ ತಾಲ್ಲೂಕಿನಲ್ಲಿ ಆಗಿಂದಾಗ್ಗೆ ಮಳೆ ಕೂಡ ಆಗುವುದರಿಂದ ಈವರೆಗೆ ನಷ್ಟ ಎಂಬುದು ಸುಳಿದಿಲ್ಲ. ಹೀಗಾಗಿ ಮೂವತ್ತು ವರ್ಷಗಳಿಂದ ಮಳೆಯಾಶ್ರಿತವಾಗಿಯೇ ಬ್ಯಾಡಗಿ ಮೆಣಸು ಬೆಳೆಯುತ್ತಿದ್ದಾರಂತೆ. ‘ಧರ್ಮದಿಂದ ದುಡಿದರೆ ದೇವರು ಕೈಬಿಡಲ್ಲ’ ಎಂಬುದು ಪರಶುರಾಂ ನಂಬಿಕೆ.

ಕೊಯ್ಲಾದ ಫಸಲನ್ನು ಕಾಪಿಡಲು ಹುಬ್ಬಳ್ಳಿಯಲ್ಲಿ ಒಣಮೆಣಸಿನಕಾಯಿ ದಾಸ್ತಾನಿಗೆ ಗೋದಾಮು ವ್ಯವಸ್ಥೆ ಇದೆ. ಆದರೆ, ನಿರ್ವಹಣೆ ಸರಿ ಇಲ್ಲ. ಬಹಳಷ್ಟು ರೈತರು ದುಬಾರಿ ಬಾಡಿಗೆ ತೆತ್ತು ಖಾಸಗಿ ಗೋದಾಮುಗಳಲ್ಲಿ ಫಸಲು ಇರಿಸುತ್ತಾರೆ. ಹಾವೇರಿಯ ಬ್ಯಾಡಗಿಯಲ್ಲಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಇದೆ. ನಮ್ಮಲ್ಲಿಯ ಬಹುತೇಕ ಇಳುವರಿಯನ್ನು ಬ್ಯಾಡಗಿಗೆ ತೆಗೆದುಕೊಂಡು ಹೋಗುತ್ತಾರೆ. ‘2ನೇ ದರ್ಜೆಯ (ಸೆಕೆಂಡ್‌ ಕ್ವಾಲಿಟಿ) ಕಾಯಿಯನ್ನು ಹಾವೇರಿಯ ಬ್ಯಾಡಗಿ ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ’ ಎನ್ನುತ್ತಾ ಅವರು ಮಾರುಕಟ್ಟೆಯ ವಿವರ ನೀಡುತ್ತಾರೆ.

ಸಂಸ್ಕರಿಸಿದ ಬಿತ್ತನೆ ಬೀಜ

ಇಂಗ್ಲೆಂಡ್‌ಗೂ ‘ಬ್ಯಾಡಗಿ’ ರಫ್ತು‌

ಮೂರು ವರ್ಷಗಳ ಹಿಂದೆ ಬ್ಯಾಡಗಿ ಮೆಣಸಿನಕಾಯಿಯನ್ನು ಇಂಗ್ಲೆಂಡ್‌ಗೆ ರಫ್ತು ಮಾಡಲಾಗಿತ್ತು. ಮಾರುಕಟ್ಟೆಯಪ್ರಮುಖರಾದ ಬಿ.ಡಿ.ಪಾಟೀಲರ ನೆರವಿನಿಂದ ಸರಕು ಕಳುಹಿಸಿದ್ದರು. ಉತ್ತಮ ಬೆಲೆಯೂ ಸಿಕ್ಕಿತ್ತು. ಈ ಹಿಂದೆ ಕೂಡ ಕೆಲವು ರೈತರು ಬ್ಯಾಡಗಿ ಮೆಣಸಿನಕಾಯಿಯನ್ನು ವಿದೇಶಕ್ಕೆ ರಫ್ತು ಮಾಡಿದ್ದರು. ಆದರೆ, ಅದರಲ್ಲಿ ಅಧಿಕ ಪ್ರಮಾಣದ ರಾಸಾಯನಿಕ ಇದ್ದ ಕಾರಣ ತಿರಸ್ಕೃತವಾಗಿತ್ತು. ‘ನಾವು ಕಳುಹಿಸಿಕೊಟ್ಟ ಮೆಣಸಿನಕಾಯಿ ಆವಕ ಅಂತರರಾಷ್ಟ್ರೀಯ ಮಾನದಂಡಗಳಿಗೆ ಪೂರಕವಾಗಿತ್ತು. ಆದರೆ, ಇತ್ತೀಚೆಗೆ ಸ್ಥಳೀಯ ರೈತರು ಹಾಗೂ ಆಂಧ್ರದ ರೈತರೇ ಯಥೇಚ್ಛ ಪ್ರಮಾಣದಲ್ಲಿ ಖರೀದಿಗೆ ಬರುತ್ತಿದ್ದಾರೆ. ಬೆಲೆಯೂ ತೃಪ್ತಿದಾಯಕವಾಗಿದೆ. ಹಾಗಾಗಿ ಇನ್ನಷ್ಟು ಬೆಲೆಗೆ ಮಾರಾಟ ಮಾಡಬೇಕೆಂಬ ಇರಾದೆಯೂ ನನಗಿಲ್ಲ. ಸಿಕ್ಕಷ್ಟರಲ್ಲೇ ತೃಪ್ತಿ ಕಾಣುತ್ತಿದ್ದೇನೆ. ಆದ್ದರಿಂದ ರಫ್ತಿಗೆ ಮನಸ್ಸು ಮಾಡುತ್ತಿಲ್ಲ’ ಎನ್ನುತ್ತಾರೆ ಪರಶುರಾಂ. ಅಂದ ಹಾಗೆ, ಸರ್ಕಾರ ಪರಶುರಾಂ ಅವರನ್ನು ಪ್ರಗತಿಪರ ಕೃಷಿಕ ಎಂದು ಪರಿಗಣಿಸಿ 2009ರಲ್ಲಿ ಚೀನಾ ಪ್ರವಾಸಕ್ಕೆ ಕಳುಹಿಸಿತ್ತು. ‘ಚೀನಾದ ಬೂದಿಮಿಶ್ರಿತ ಮಣ್ಣು ನೋಡಿದಾಗ ನಮ್ಮ ಕಪ್ಪು ಮಣ್ಣೇ ಶ್ರೇಷ್ಠ’ ಎಂದು ತಾಯಿ ನೆಲದ ಬಗೆಗಿರುವ ಅದಮ್ಯ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ

ಮಹಾಮಳೆಯಿಂದ ಸಂಕಷ್ಟ

ಒಣ ಮೆಣಸಿನಕಾಯಿಯಲ್ಲಿ ಓಲಿಯೋರಿಸನ್‌ ಎಂಬ ಎಣ್ಣೆ ಹಾಗೂ ಬಣ್ಣ ಸಂಸ್ಕರಿಸುವ ಕಾರ್ಖಾನೆಗಳು ಹೆಚ್ಚಾಗಿರುವುದು ಕೇರಳದಲ್ಲಿ. ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಅಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಕಾರ್ಖಾನೆಗಳು ಸ್ಥಗಿತಗೊಂಡವು. ಮೆಣಸಿನಕಾಯಿ ಮಾರಾಟ ಕ್ಷೀಣಿಸಿ, ದರ ಕುಸಿಯಿತು. ಮೂರ್ನಾಲ್ಕು ತಿಂಗಳು ರೈತರು ಸಂಕಷ್ಟ ಅನುಭವಿಸಿದರು. ಸ್ಥಳೀಯ ಮಾರುಕಟ್ಟೆಯಲ್ಲೂ ದರ ಕ್ವಿಂಟಲ್‌ಗೆ ₹7 ಸಾವಿರದಿಂದ ₹8 ಸಾವಿರಕ್ಕೆ ಇಳಿಯಿತು. ಈಗ ಬೆಲೆ ಸುಧಾರಿಸಿದೆ’ ಎಂದರುಪರಶುರಾಂ. ಪರಶುರಾಂ ಅವರ ಸಂಪರ್ಕಕ್ಕೆ: 9448390583.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.