ADVERTISEMENT

ಸಾವಯವ ಕೃಷಿಯಲ್ಲಿ ಖುಷಿ...

ಮಾದರಿಯಾದ ಖಡಕಲಾಟದ ರೈತ ಅಶೋಕ ಧುಮಾಳ

ಸುಧಾಕರ ಎಸ್.ತಳವಾರ, ಬೆಂಗಳೂರು
Published 25 ಮಾರ್ಚ್ 2019, 19:45 IST
Last Updated 25 ಮಾರ್ಚ್ 2019, 19:45 IST
ಅಶೋಕ ಧುಮಾಳ ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ತಂಬಾಕು ಬೆಳೆ
ಅಶೋಕ ಧುಮಾಳ ಅವರು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ತಂಬಾಕು ಬೆಳೆ   

ಚಿಕ್ಕೋಡಿ: ಅತಿಯಾದ ರಸಗೊಬ್ಬರ, ಕೀಟನಾಶಕ ಮತ್ತು ನೀರು ಬಳಸುವ ಕೃಷಿಯಿಂದ ರೈತರು ಕೈಸುಟ್ಟಿಕೊಂಡಿದ್ದೇ ಹೆಚ್ಚು. ಇಂತಹ ಕೃಷಿಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುವ ಜೊತೆಗೆ ಭೂಮಿಯ ಸತ್ವವೂ ಸಾಯುತ್ತದೆ. ಆದರೆ, ಶೂನ್ಯ ಬಂಡವಾಳದ ಸಾವಯವ ಕೃಷಿ ಕೈಗೊಂಡು ಹೆಚ್ಚಿನ ಆದಾಯ ಗಳಿಸುವ ಜೊತೆಗೆ ಭೂಮಿಯ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂಬುದನ್ನು ತಾಲ್ಲೂಕಿನ ಖಡಕಲಾಟ ಗ್ರಾಮದ ರೈತ ಅಶೋಕ ರಾಮು ಧುಮಾಳ ನಿರೂಪಿಸಿದ್ದಾರೆ.

ಅವರ ಕೃಷಿ ಪದ್ಧತಿಯು ಮಾದರಿಯಾಗಿದ್ದು, ಇತರ ರೈತರನ್ನು ಸೆಳೆಯುತ್ತಿದೆ. ಈ ಮಾದರಿ ಅನುಸರಿಸಲು ಹಲವರು ಮುಂದೆ ಬರುತ್ತಿದ್ದಾರೆ. ಸಲಹೆ ಪಡೆಯುತ್ತಿದ್ದಾರೆ.

ಇವರು ತಮ್ಮ 12 ಎಕರೆಯಷ್ಟು ಭೂಮಿಯಲ್ಲಿ ಹತ್ತಾರು ವರ್ಷಗಳಿಮದ ಸಾವಯವ ಕೃಷಿ ಮಾಡುತ್ತಿದ್ದಾರೆ. ಭೂಮಿಗೆ ರಸಗೊಬ್ಬರ ಹಾಕುವುದಿಲ್ಲ. ಬೆಳೆಗಳಿಗೆ ಕೀಟನಾಶಕ ಸಿಂಪರಣೆಯ ಮಾತೇ ಇಲ್ಲ. ಆದರೂ, ಅವರ ಹೊಲದಲ್ಲಿ ಮಾರುದ್ದ ಬೆಳೆಗಳು ನಳನಳಿಸುತ್ತಿವೆ. ಕಾರಣವಿಷ್ಟೇ, ಈ ಬೆಳೆಗಳಿಗೆ ಅವರು ಅಗತ್ಯ ಪ್ರಮಾಣದಲ್ಲಿ ನೀರು ಮತ್ತು ಎರೆಹುಳು ಗೊಬ್ಬರ ನೀಡುತ್ತಾರೆ. ಬೆಳೆಗಳಿಗೆ ಜೈವಿಕ ಗೊಬ್ಬರ ಘಟಕದಿಂದ ಬಸಿದು ಬರುವ ದ್ರಾವಣವನ್ನು ಸಿಂಪಡಿಸುತ್ತಾರೆ.

ADVERTISEMENT

ಜೈವಿಕ ದ್ರಾವಣವನ್ನೇ:

ಬಹುತೇಕ ರೈತರು ತಂಬಾಕು ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡುತ್ತಾರೆ. ಆದರೆ, ಧುಮಾಳ ಅವರು ತಂಬಾಕು ಬೆಳೆಗೆ ಕೀಟನಾಶಕ ಬದಲಿಗೆ, ಕೇವಲ ಜೈವಿಕ ದ್ರಾವಣವನ್ನೇ ಸಿಂಪಡಿಸುತ್ತಾರೆ.

ಅವರು ಎರೆಹುಳು ಗೊಬ್ಬರ ಘಟಕ ಹೊಂದಿದ್ದು, ವರ್ಷವಿಡೀ ತಮ್ಮ ಹೊಲಕ್ಕೆ ಬೇಕಾಗುವಷ್ಟು ಎರೆಹುಳು ಗೊಬ್ಬರ ತಯಾರಿಸುವ ಜೊತೆಗೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧೆಡೆ ಎರೆಹುಳು ಗೊಬ್ಬರ ಮತ್ತು ಎರೆಹುಳುಗಳ ಮಾರಾಟವನ್ನೂ ಮಾಡುತ್ತಾರೆ. ಇದರಿಂದ ವರ್ಷಕ್ಕೆ ₹ 1 ಲಕ್ಷಕ್ಕೂ ಅಧಿಕ ವರಮಾನ ಗಳಿಸುತ್ತಾರೆ.

ಕಸದಿಂದ ರಸ:

ಹೊಲದಲ್ಲಿ ಕಸಕಡ್ಡಿ, ಕಬ್ಬಿನ ರವದಿ, ಜಾನುವಾರುಗಳ ತ್ಯಾಜ್ಯವನ್ನೆಲ್ಲ ಎರೆಹುಳು ಗೊಬ್ಬರ ಘಟಕದಲ್ಲಿ ಹಾಕಿ ಗೊಬ್ಬರ ತಯಾರಿಸುತ್ತಾರೆ. ಅದಕ್ಕೆ ಅವರು ಹಾಕಿರುವ ಬಂಡವಾಳ ಕಡಿಮೆಯೇ. ಶೆಡ್‌ ನಿರ್ಮಾಣಕ್ಕೆ ಮಾತ್ರ ಬಂಡವಾಳ ಹಾಕಿದ್ದಾರೆ.

‘ಸಾವಯವ ಕೃಷಿಯಿಂದ ಎಕರೆಯೊಂದರಲ್ಲಿ ಕನಿಷ್ಠ 1 ಸಾವಿರ ಕೆ.ಜಿ. ತಂಬಾಕು ಬೆಳೆಯುತ್ತೇನೆ. ಇದರಿಂದ ಖರ್ಚು ವೆಚ್ಚ ಕಳೆದು ₹ 1 ಲಕ್ಷ ಆದಾಯ ಬರುತ್ತದೆ. ಅದೇ ಸಾಮಾನ್ಯ ಕೃಷಿಯಲ್ಲಾದರೆ ರಸಗೊಬ್ಬರ, ಕೀಟನಾಶಕ ಮುಂತಾದ ಖರ್ಚು ವೆಚ್ಚಗಳನ್ನು ಕಳೆದು ₹ 30ಸಾವಿರದಿಂದ ₹ 40ಸಾವಿರ ಆದಾಯ ಗಳಿಸಲು ಹೆಣಗಾಡಬೇಕಾಗುತ್ತದೆ’ ಎನ್ನುತ್ತಾರೆ ಅಶೋಕ.

12 ಎಕರೆ ಭೂಮಿಯಲ್ಲಿ ಕುಟುಂಬಕ್ಕೆ ಬೇಕಾಗುವ ಆಹಾರ ಧಾನ್ಯ, ಹಣ್ಣಿನ ಗಿಡಗಳನ್ನು ಅವರು ಬೆಳೆಯುತ್ತಾರೆ. ಹೊಲದಲ್ಲಿ ಬೆಳೆದ ಬೆಳೆಗಳ ಬೀಜಗಳನ್ನೇ ಆಯ್ದು ಸಂಗ್ರಹಿಸಿಟ್ಟು, ಅವುಗಳನ್ನೇ ಬಿತ್ತನೆ ಮಾಡುವುದು ಅವರ ಇನ್ನೊಂದು ವಿಶೇಷ.

ಸಾವಯವ ಕೃಷಿ ಪ್ರಚಾರಕರೂ ಆಗಿರುವ ಅವರು, ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧೆಡೆ ಹೋಗಿ ಉಪನ್ಯಾಸ ನೀಡಿದ್ದಾರೆ. ಅವರ ಕೃಷಿ ಸಾಧನೆ ಪರಿಗಣಿಸಿ 2007ರಲ್ಲಿ ಕೃಷಿ ಇಲಾಖೆಯು ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದೆ. ಕೆಂಗೇರಿ ಮುರಗೋಡ ಮಠದಿಂದ ‘ಕೃಷಿಶ್ರೀ’ ಹಾಗೂ ರಾಜ್ಯ ಸರ್ಕಾರದಿಂದ ‘ಕೃಷಿ ಪಂಡಿತ’ ಪುರಸ್ಕಾರ (2010ರಲ್ಲಿ) ಪಡೆದಿದ್ದಾರೆ. ಸಂಪರ್ಕಕ್ಕೆ: 9886286584.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.