ರಾಮನಗರದ ಮಂಚನಬೆಲೆ ಜಲಾಶಯಕ್ಕೆ ಸಮೀಪದಲ್ಲಿರುವ ಹಳ್ಳಿಗಳು ಕಾಕಡ ಹೂವಿನ ಬೆಳೆಗೆ ಹೆಸರುವಾಸಿ. ಅನೇಕ ಕೃಷಿ ಕಾರ್ಮಿಕ ಕುಟುಂಬಗಳು ಈ ಹೂವಿನ ಬೆಳೆಯನ್ನು ಅವಲಂಬಿಸಿವೆ
ಜಲಾಶಯದ ಸಮೀಪದಲ್ಲಿರುವ ಲಿಂಗೇಗೌಡನದೊಡ್ಡಿ ಗ್ರಾಮಕ್ಕೆ ಬೆಳ್ಳಂಬೆಳಿಗ್ಗೆಯೇ ಹೋದರೆ ಅಲ್ಲಿನ ಜಮೀನುಗಳಲ್ಲಿ ಗುಂಪು ಗುಂಪಾಗಿ ಕಾಕಡ ಮೊಗ್ಗು ಬಿಡಿಸುತ್ತಿರುವುದು ಕಾಣುತ್ತದೆ. ಸರಸರನೆ ಮೊಗ್ಗು ಕೀಳುತ್ತಾ ಚೀಲಕ್ಕೆ ತುಂಬಿಕೊಳ್ಳುವ ವೇಗ ನೋಡಿದರೆ, ಈ ಕೆಲಸದಲ್ಲಿ ಇವರಿಗೆ ವರ್ಷಗಳ ಅನುಭವವಿದೆ ಎಂದು ಗೊತ್ತಾಗುತ್ತದೆ. ಮೊಗ್ಗನ್ನು ಬಿಡಿಸಿದವರು ನೇರವಾಗಿ ಹಳ್ಳಿಯಲ್ಲಿ ತೂಕ ಹಾಕುವ ಜಾಗಕ್ಕೆ ಬರುತ್ತಾರೆ. ಅಲ್ಲಿ, ತೂಕ ಹಾಕಿಸಿ, ಪುಸ್ತಕದಲ್ಲಿ ಬರೆಸಿದ ನಂತರವೇ ಮುಂದಿನ ಕೆಲಸಗಳತ್ತ ಅವರ ಗಮನ. ಹೀಗೆ ಕಾಕಡವನ್ನೇ ಹೆಚ್ಚಾಗಿ ಬೆಳೆಯುವ ಲಿಂಗೇಗೌಡನದೊಡ್ಡಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ವರ್ಷದ ಎಂಟೂವರೆ ತಿಂಗಳು ಈ ದೃಶ್ಯ ನಿರಂತರವಾಗಿರುತ್ತದೆ. ಅದಕ್ಕಾಗಿಯೇ ಇವುಗಳನ್ನು ‘ಕಾಕಡ ಗ್ರಾಮ’ಗಳು ಎನ್ನುತ್ತಾರೆ !
ಮೊದಲು ಕಾಕಡ ಕೃಷಿ ತಂದವರು: ಲಿಂಗೇಗೌಡನ
ದೊಡ್ಡಿಯಲ್ಲಿ ಮೊದಲು ಕಾಕಡ ಕೃಷಿಗೆ ನಾಂದಿ ಹಾಡಿದವರು ಸಿದ್ದಪ್ಪ, ದೊಡ್ಡರಂಗಯ್ಯ ಮತ್ತು ಚಿಕ್ಕಮರಿಯಪ್ಪ. 25 ವರ್ಷಗಳ ಹಿಂದೆ ಈ ಹೂವು ಬೆಳೆದು ಮಾರುಕಟ್ಟೆ ಮಾಡುವಲ್ಲಿ ಯಶಸ್ವಿಯಾದರು. ಬೇರೆಯವರಿಗೂ ಬೆಳೆಯುವಂತೆ ಉತ್ತೇಜನ ನೀಡಿದರು. ಮಾತ್ರವಲ್ಲ, ಉಚಿತವಾಗಿ ಸಸಿಗಳನ್ನು ಕೊಟ್ಟು ಪ್ರೋತ್ಸಾಹಿಸಿದರು. ಇದೀಗ ಈ ಹೂವಿನ ಕೃಷಿ ಇಡೀ ಹಳ್ಳಿಗೆ ಹಬ್ಬಿ, ಅಕ್ಕಪಕ್ಕದ ಹಳ್ಳಿಗಳಿಗೂ ವಿಸ್ತರಿಸಿದೆ.
ಈಗ ಲಿಂಗೇಗೌಡನದೊಡ್ಡಿ, ಗದಗನದೊಡ್ಡಿ, ಹಾಗಲಹಳ್ಳಿ, ಸಿದ್ಧನದೊಡ್ಡಿ, ಬೊಮ್ಮಸನಹಳ್ಳಿ, ಮಾರೇಗೌಡನ ದೊಡ್ಡಿ, ಅಣ್ಣೆಕೆಂಪಯ್ಯನದೊಡ್ಡಿ, ರಾಂಪುರ, ಕಗ್ಗಲಹಳ್ಳಿ, ಕಟ್‍ಮಾರನದೊಡ್ಡಿ ಕಾಕಡ ಬೆಳೆಯುವ ಗ್ರಾಮಗಳಾಗಿವೆ. ಈ ಹಳ್ಳಿಗಳ ಬಹುತೇಕ ರೈತರ ಆದಾಯದ ಮೂಲ ಕಾಕಡ ಕೃಷಿಯಾಗಿದೆ.
ಚಿಕ್ಕಮರಿಯಪ್ಪ ಅವರು ಈಗಲೂ 10 ಗುಂಟೆಯಲ್ಲಿ ಕಾಕಡ ಕೃಷಿ ಮಾಡುತ್ತಿದ್ದಾರೆ. ಅವರ ಪ್ರಕಾರ ಮಿತವ್ಯಯದಲ್ಲಿ ಈ ಹೂವಿನ ಬೇಸಾಯ ನಡೆಯುತ್ತಿದೆ. ‘ಮರಿಗಿಡ ಬೇಕಾದವರಿಗೆ ಬಿಟ್ಟಿಯಾಗೇ ಕೊಡ್ತೀವಿ. ಹೆಚ್ಚುಕಮ್ಮಿ ಎಲ್ರೂ ಹಸು ಸಾಕ್ಕೊಂಡಿದೀವಿ. ಹಂಗಾಗಿ ನಾಟಿ ಗೊಬ್ಬರಕ್ಕೆ ಕಾಸು ಖರ್ಚು ಮಾಡೋದು ಕಮ್ಮಿ’ ಎನ್ನುತ್ತಾರೆ ಅವರು. ಕೀಟ, ರೋಗ ಬಾಧೆ ಸೋಕದಿರಲು ಬೇವಿನ ಹಿಂಡಿ, ಬೇವಿನೆಣ್ಣೆಯನ್ನು ಸಿಂಪಡಿಸುತ್ತಾರೆ. ಮನೆಮಂದಿಯೆಲ್ಲ ಸೇರಿ ಮೊಗ್ಗು ಬಿಡಿಸುತ್ತಾರೆ. ಅಗತ್ಯ ಬಿದ್ದಾಗ ಕೃಷಿ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಮಂಚನಬೆಲೆ ಜಲಾಶಯ ಹತ್ತಿರದಲ್ಲಿರುವುದರಿಂದ ನೀರಿಗೆ ಬರವಿಲ್ಲ. ಹೂವು ಒಂದೇ ಅಲ್ಲದೆ ಮನೆಗೆ ಬೇಕಾದ ಬೆಳೆಗಳ ಜೊತೆಗೆ ತರಕಾರಿಯನ್ನು ಬೆಳೆಯುವವರಿದ್ದಾರೆ.
ಕಾಕಡ ಬೆಳೆಯುವ ವಿಧಾನ: ಗಿಡದಿಂದ ಗಿಡಕ್ಕೆ ಒಂಬತ್ತು ಅಡಿ ಅಂತರದಲ್ಲಿ ಗುಂಡಿಗಳನ್ನು ತೋಡಬೇಕು. ಪ್ರತಿ ಗುಂಡಿಯ ಆಳ ಎರಡು ಅಡಿ, ಅಗಲ ಮೂರು ಅಡಿ ಇರಬೇಕು. ಸಸಿ ನಾಟಿ ಮಾಡಿದ ಆರು ತಿಂಗಳ ನಂತರ ಸ್ವಲ್ಪ ಕೊಟ್ಟಿಗೆ ಗೊಬ್ಬರ, ಒಂದು ಹಿಡಿ ಬೇವಿನ ಹಿಂಡಿ ಕೊಡಬೇಕು. ನಾಟಿಯಾಗಿ ಒಂದೂವರೆ ವರ್ಷದ ನಂತರ ಹೂಬಿಡಲು ಶುರುವಾಗುತ್ತದೆ. ಮಳೆಗಾಲದಲ್ಲಿ ನೀರಿನ ಅಗತ್ಯ ಇಲ್ಲ. ಚಳಿಗಾಲದಲ್ಲಿ 10 ದಿನಗಳಿಗೆ, ಬೇಸಿಗೆಯಲ್ಲಿ ವಾರಕ್ಕೊಮ್ಮೆ ನೀರು ಬೇಕಾಗುತ್ತದೆ. ಮಳೆಗಾಲದಲ್ಲಿ ಗಿಡಗಳ ಬೆಳವಣಿಗೆಗೆ ತಕ್ಕಂತೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಕೊಡಬೇಕು. ತಿಂಗಳಿಗೆ ಒಂದು ಸಲ ಬೇವಿನ ಎಣ್ಣೆ ಸಿಂಪಡಿಸಬೇಕು.
ಗಿಡ ನೆಟ್ಟು, ಮೂರನೇ ವರ್ಷದಿಂದ ಹೂವು ಬಿಡುವ ಪ್ರಮಾಣ ಹೆಚ್ಚುತ್ತದೆ. ಒಂದು ಗಿಡ 200ಗ್ರಾಂನಿಂದ 300ಗ್ರಾಂವರೆಗೂ ಹೂವು ಕೊಡುತ್ತದೆ. ಒಮ್ಮೊಮ್ಮೆ ಒಂದು ಹಿಡಿಯಷ್ಟು ಕಡಿಮೆ ಹೂವು ಬಿಟ್ಟ ಉದಾಹರಣೆಯಿದೆ. 100 ಕಾಕಡ ಗಿಡಗಳನ್ನು ಹಾಕಿಕೊಂಡಿರುವ ಬೈರಯ್ಯ ಪ್ರಕಾರ ಸಂಕ್ರಾಂತಿಯಲ್ಲಿ ಹೂವು ಹೆಚ್ಚು. ಆಗ ಬೆಲೆಯೂ ಹೆಚ್ಚು. ಗೌರಿಹಬ್ಬದಲ್ಲಿ ಹೂವಿನ ವಹಿವಾಟು ಸುಮಾರಾಗಿರುತ್ತದೆ. ಅತಿ ಹೆಚ್ಚು ದರ ಸಿಗುವುದು ಆಯುಧ ಪೂಜೆಯ ಸಮಯದಲ್ಲಿ. ಆಗ ಹೂವು ಕಡಿಮೆ. ಬೇಡಿಕೆ ಅಧಿಕ. ಒಂದು ಕೆಜಿಗೆ ₹700ವರೆಗೂ ಸಿಗುತ್ತದೆ. ಬೇಡಿಕೆ ಇಲ್ಲದಾಗ ಹೂವಿನ ದರ ಕೆಜಿಗೆ ₹ 30ಕ್ಕೆ ಇಳಿಯುತ್ತದೆ. ‘ತಿಂಗಳಿಗೆ ಅಂದಾಜು ₹ 6ಸಾವಿರ ಆದಾಯಕ್ಕೆ ಮೋಸ ಇಲ್ಲ. ಹೂವಿನ ವ್ಯಾಪಾರದಲ್ಲಿ ₹15 ಸಾವಿರ ಗಳಿಸಿದ್ದೇವೆ. ಕೂಲಿ, ಸಣ್ಣಪುಟ್ಟ ಖರ್ಚು ಬಿಟ್ರೆ ಉಳಿದಿದ್ದೆಲ್ಲ ಕೈಗೆ ಬಂದಂಗೆ’ ಎಂದು ಹೂವಿನ ವಹಿವಾಟನ್ನು ವಿವರಿಸುತ್ತಾರೆ ಬೈರಯ್ಯ.
ನಾಗೇಶ್ ಅವರದ್ದು ಬೇರೆಬೇರೆ ಜಮೀನುಗಳಲ್ಲಿ ಒಟ್ಟು 150 ಗಿಡಗಳಿವೆ. ಅವರು ತಮ್ಮ ಅನುಭವ ಹೀಗೆ ಹಂಚಿಕೊಳ್ಳುತ್ತಾರೆ. ‘ಮೊಗ್ಗು ಕೀಳಲು ಕೃಷಿ ಕಾರ್ಮಿಕರ ಸಮಸ್ಯೆಯಿಲ್ಲ. ಮಾರುಕಟ್ಟೆಗೆ ಬೇಗನೆ ತಲುಪಿಸಬೇಕಾದ್ದರಿಂದ ಹೂವು ಅರಳುವ ಹಿಂದಿನ ದಿನವೇ ಮೊಗ್ಗು ಬಿಡಿಸಬೇಕು. ಸಂಕ್ರಾಂತಿ ಸಮಯದಲ್ಲಿ ಗಿಡಗಳಲ್ಲಿ ಸಾಮಾನ್ಯ ಸಮಯಕ್ಕಿಂತ 25 ಕೆಜಿಯಷ್ಟು ಹೆಚ್ಚು ಹೂವು ಬಿಡುತ್ತದೆ. ಆಗ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಹೂವು ಕೊಯ್ಯುವುದೇ ಕೆಲಸ’ ಎನ್ನುತ್ತಾರೆ ನಾಗೇಶ್.
ಮಾರುಕಟ್ಟೆಗಾಗಿ ಗುಂಪು ರಚನೆ: ಈ ಹೂವಿನ ಕೃಷಿ ಹೆಚ್ಚಿದಂತೆ ಎರಡು ದಶಕಗಳ ಹಿಂದೆ ಲಿಂಗೇಗೌಡನದೊಡ್ಡಿಯ ರೈತರು ಎಲ್ಲ ಮೊಗ್ಗು ಒಟ್ಟಿಗೆ ಸೇರಿಸಿ ಸರದಿ ಪ್ರಕಾರ ಒಬ್ಬೊಬ್ಬರಂತೆ ಮಾರುಕಟ್ಟೆಗೆ ಹೋಗತೊಡಗಿದರು. ಕ್ರಮೇಣ 20ರಿಂದ 25 ರೈತರಿಗೆ ಒಬ್ಬರಂತೆ ಹೂವಿನ ಬೆಳೆಗಾರರ ಗುಂಪುಗಳು ರಚನೆಯಾದವು. ಇದರಿಂದ ಸಮಯ, ಶ್ರಮ, ಖರ್ಚು ಉಳಿಯುತ್ತಿದೆ. ‘ದಿನಾ ನಾವೇ ತಗೊಂಡು ಹೋಗೋ ದುಗಾ (ಕಷ್ಟ) ತಪ್ತು. ದುಡ್ಡಿಗೂ ಮೋಸ ಇಲ್ಲ. ಒಂದರಿಂದ ಐದನೇ ತಾರೀಖಿನೊಳಗೆಲ್ಲ ನಮ್ ಪಾಲಿನ ದುಡ್ಡು ಕಳಿಸಿಕೊಡ್ತಾರೆ’ ಎಂದು ಗುಂಪು ರಚನೆಯಿಂದಾದ ಪ್ರಯೋಜನಗಳನ್ನು ವಿವರಿಸುತ್ತಾರೆ ರೈತರು. ಬೆಳೆಗಾರರು ಸಂಘಟಿತರಾದ್ದರಿಂದ ಒಳ್ಳೆಯ ಬೆಲೆಯೂ ಸಿಗುತ್ತಿದೆ.
ಈಗ ಈ ಹಳ್ಳಿಗಳಲ್ಲಿ ಒಟ್ಟು 20 ಗುಂಪುಗಳಿವೆ. ಲಿಂಗೇಗೌಡನದೊಡ್ಡಿ ಮೂರು ಗುಂಪುಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಇಲ್ಲಿಂದ ಅರ್ಕಾವತಿ ಹೊಳೆ ದಾಟಿದರೆ ಸಿಗುವ ಗದಗನದೊಡ್ಡಿಯಲ್ಲಿ ಎರಡು ಗುಂಪುಗಳಿವೆ. ರಾಮನಗರ ತಾಲ್ಲೂಕಿನ ಇತರ ಕೆಲ ಹಳ್ಳಿಗಳಲ್ಲೂ ಈ ಹೂ ಬೆಳೆಯುತ್ತಿದ್ದಾರಾದರೂ ಅವರು ಮಾರಾಟಕ್ಕೆ ಅನುಸರಿಸುವ ವಿಧಾನ ಬೇರೆ. ಕೆಲವೆಡೆ ನೀರಿನ ಕೊರತೆಯೂ ಇದೆ. ಕಾಕಡ ಹೂವಿನ ಕೃಷಿ ಮತ್ತು ಮಾರಾಟದಲ್ಲಿ ಯಶಸ್ಸು ಕಂಡ ಲಿಂಗೇಗೌಡನದೊಡ್ಡಿ ಮತ್ತು ಸುತ್ತಲಿನ ಹಳ್ಳಿಗಳ ರೈತರು ಪರಸ್ಪರ ಸಹಕಾರಕ್ಕೆ ಉದಾಹರಣೆಯಾಗಿ ನಿಲ್ಲುತ್ತಾರೆ. ಕಾಕಡ ಹೂವಿನ ಕೃಷಿ, ಮಾರುಕಟ್ಟೆ ಕುರಿತ ಹೆಚ್ಚಿನ ಮಾಹಿತಿಗಾಗಿ ನಾಗೇಶ್ 9880294807 ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.