ADVERTISEMENT

ಮಣ್ಣಿನ ಶಕ್ತಿವರ್ಧಕಡಯಂಚ, ಸೆಣಬು

ಆತ್ರೇಯ
Published 15 ಜುಲೈ 2019, 19:30 IST
Last Updated 15 ಜುಲೈ 2019, 19:30 IST
ಡಯಂಚ
ಡಯಂಚ   

ಬೆಳಗಾವಿ ಭಾಗದಲ್ಲಿ ಕಬ್ಬು ಬೆಳೆಯುವವರು ಗದ್ದೆಗಳಲ್ಲಿ ಏರು ಮಡಿಗಳನ್ನು ಮಾಡುತ್ತಾರೆ‌‌. ಎರಡು ಏರು ಮಡಿಗಳ ನಡುವೆ ಒಂದು ಸಾಲು ಕಬ್ಬು ನಾಟಿ ಮಾಡುತ್ತಾರೆ. ಹಾಗಾದರೆ ಏರು ಮಡಿಗಳಲ್ಲಿ ಏನು ಮಾಡುತ್ತಾರೆ ಎಂಬುದು ನಿಮ್ಮ ಪ್ರಶ್ನೆ, ಅಲ್ಲವಾ?

ನಿಜ, ಆ ಮಡಿಗಳ ಮೇಲೆ ಎರಡು ಸಾಲು ಡಯಂಚ, ಸೆಣಬಿನಂತಹ ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆಯುತ್ತಾರೆ.
ಈ ಬೆಳೆ ನಾಲ್ಕೈದು ಅಡಿ ಎತ್ತರವಾದ ಮೇಲೆ ಅದನ್ನು ಭೂಮಿಗೆ ಬೆರೆಸುತ್ತಾರೆ. ಇದರಿಂದ ಭೂಮಿ ಸಡಿಲವಾಗುತ್ತದೆ. ಕಬ್ಬಿಗೆ ಬೇಕಾದ ಉತ್ಕೃಷ್ಟ, ಫಲವತ್ತಾದ ಮಣ್ಣು ಲಭ್ಯವಾಗುತ್ತದೆ.

ಡಯಂಚ, ಸೆಣಬು ಏಕೆ?

ADVERTISEMENT

ಭೂ ಫಲವತ್ತತೆ ಹೆಚ್ಚಿಸುವುದಕ್ಕಾಗಿ ಅನೇಕ ರೈತರು ಈ ಹಸಿರೆಲೆ ಗೊಬ್ಬರ ಬೆಳೆಗಳಾಗಿ ಡಯಂಚ, ಸೆಣಬು ಬೆಳೆಗಳನ್ನು ಬೆಳೆಸಿ ಮಣ್ಣಿಗೆ ಸೇರಿಸುತ್ತಿದ್ದಾರೆ.

70 ರ ದಶಕದ ಹಿಂದಿನ ಕೃಷಿ ಪದ್ಧತಿಯಲ್ಲಿ ತೋಟ, ಗದ್ದೆಗಳಲ್ಲಿ ಪ್ರಮುಖ ಬೆಳೆ ಬೆಳೆಯುವ‌ ಮುನ್ನ ದ್ವಿದಳ ಧಾನ್ಯಗಳನ್ನು, ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆಸಿ, ಭೂಮಿಗೆ ಬೆರೆಸುವ ಪದ್ಧತಿ ಇತ್ತು. ವಿಪರೀತ ರಸಗೊಬ್ಬರ ಬಳಕೆ ಆರಂಭವಾದ ಮೇಲೆ, ಡಯಂಚ, ಸೆಣಬು ಬೆಳೆಸುವುದು‌ ನಿಂತು ಹೋಯಿತು. ದಶಕಗಳಿಂದೀಚೆಗೆ ಸಾವಯವ ಕೃಷಿಕರು ಈ ಬೆಳೆಗಳನ್ನು ಬಳಕೆ ಮುಂದುವರೆಸಿದರು.

ಈಗ ಅನೇಕ ರೈತರು (ವಾಣಿಜ್ಯ ಬೆಳೆ ಬೆಳೆಯುವ ದೊಡ್ಡ ಹಿಡುವಳಿದಾರರು ಸೇರಿ) ಎಕರೆಗಟ್ಟಲೆ ಸೆಣಬು, ಡಯಂಚ ಬೆಳೆಯುತ್ತಿದ್ದಾರೆ. ರಾಸಾಯನಿಕ ಕೃಷಿ ಮಾಡುವವರೂ ಮೊದಲು ಈ ಬೆಳೆಗಳನ್ನು ಬೆಳೆಸಿ, ಭೂಮಿಗೆ ಬೆರೆಸಿ, ಆ ಮೇಲೆ ಭತ್ತ, ಕಬ್ಬಿನಂತಹ ಬೆಳೆ‌ ಬೆಳೆಯುತ್ತಾರೆ. ಈ ಬಗ್ಗೆ ರಿಯಾಯಿತಿ ಸೌಲಭ್ಯ ಬಯಸುವುದು ಮಾತ್ರ ವಾಡಿಕೆಯಾಗಿದೆ

ಸದ್ಯ ದಾವಣಗೆರೆ, ಹಾವೇರಿ, ಬೆಳಗಾವಿ ಭಾಗದಲ್ಲಿ‌ ಪ್ರಯಾಣ ಮಾಡಿದರೆ, ತೋಟ, ಗದ್ದೆಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಡಯಂಚ, ಸೆಣಬಿನ‌ ತಾಕುಗಳನ್ನು ನೋಡಬಹುದು‌.

ದಾವಣಗೆರೆ ಜಿಲ್ಲೆ ಜಗಳೂರು ಮತ್ತು ಅಕ್ಕಪಕ್ಕದ ತಾಲ್ಲೂಕಿನ ತೆಂಗು ಮತ್ತು‌ ಅಡಿಕೆ ತೋಟಗಳಲ್ಲಿ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ಡಯಂಚ ಬೆಳೆದಿದ್ದಾರೆ.

ಏಪ್ರಿಲ್ - ಮೇ ನಲ್ಲಿ ಪೂರ್ವ ಮುಂಗಾರು ಮಳೆ ಬಿದ್ದ ಕೂಡಲೇ ಡಯಂಚ , ಸೆಣಬು ಬೀಜ ಬಿತ್ತನೆ ಮಾಡಬೇಕು. ಸಾಲು ಬಿತ್ತನೆ ಮಾಡುವುದು ಸೂಕ್ತ. ಇದರಿಂದ ಉಳುಮೆಯೂ ಸುಲಭ ಎನ್ನುತ್ತಾರೆ ನಿವೃತ್ತ ಕೃಷಿ ಜಂಟಿ ನಿರ್ದೇಶಕ ಆರ್. ಜಿ. ಗೊಲ್ಲರ್.

ತೆಂಗು‌ ಮತ್ತು ಅಡಿಕೆ ತೋಟ‌ ಮಾಡಿರುವವರು ಆಗಿಂದಾಗ್ಗೆ ಈ‌ ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆಯಬಹುದು. ತೋಟದಲ್ಲಿ ಸ್ಪ್ರಿಂಕ್ಲರ್ ಅಳವಡಿಸಿಕೊಂಡಿರುವ ರೈತರು ಧಾರಾಳವಾಗಿ ಈ ಬೆಳೆ ಬೆಳೆಯಬಹುದು.

ಇವು 45 ದಿನಗಳ ಬೆಳೆ. ಸೊಂಪಾಗಿ, ಉದ್ದವಾಗಿ ಬೆಳೆದಷ್ಟು ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಮಣ್ಣಿನಲ್ಲಿ ಸೂಕ್ಷಾಣು ಜೀವಿಗಳು ವೃದ್ಧಿಯಾಗುತ್ತವೆ. ಎಲ್ಲದಕ್ಕಿಂತ ಭೂಮಿ ಸಡಿಲವಾಗುತ್ತದೆ. ಪ್ರಮುಖ ಬೆಳಗಳ ಬೇರಿಗೆ ಉಸಿರಾಡಲು ಸುಲಭವಾಗಿ, ಮಳೆ‌ ನೀರು ಇಂಗಲೂ ಸಹಾಯವಾಗುತ್ತದೆ.

‘ರಸಗೊಬ್ಬರ ಬಳಸುವ ಜಮೀನಿನಲ್ಲಿ ಈ ಬೆಳೆಗಳನ್ನು ಬೆಳೆಸುವುದರಿಂದ, ರಾಸಾಯನಿಕ ಗೊಬ್ಬರದಿಂದ ಮಣ್ಣಿನ‌ಮೇಲೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು‌ ಎನ್ನುತ್ತಾರೆ ಗೊಲ್ಲರ್.

ಚಿತ್ರಗಳು: ಆರ್‌.ಜಿ. ಗೊಲ್ಲರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.